
12ನೇ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಪ್ರಥಮ ದಿನದ ಸಂಭ್ರಮೋತ್ಸವ ಇಂದು ನೆರವೇರಿತು.
ಬೆಳಿಗ್ಗೆ ಆವರಣ ಭಣ ಭಣ..!
ಫೆಸ್ಟಿವಲ್ ಪ್ರಮುಖವಾಗಿ ಜರಗುತ್ತಿರುವ ಒರಾಯನ್ ಮಾಲ್ ನಲ್ಲಿ ಬೆಳಿಗ್ಗೆ ಸಿನಿ ಪ್ರೇಮಿಗಳ ಕೊರತೆ ಎದ್ದು ಕಾಣುತ್ತಿತ್ತು. ಈ ಹಿಂದಿನ ಚಿತ್ರೋತ್ಸವಗಳಲ್ಲೆಲ್ಲ ಮೊದಲ ದಿನ ಮತ್ತು ರಜಾದಿನಗಳ ಪ್ರದರ್ಶನಕ್ಕೆ ಪ್ರತಿಶೋಗಳಿಗೂ ಹೌಸ್ ಫುಲ್ ಆಗುವಷ್ಟು ಮಂದಿ ಹಾಜರಿರುತ್ತಿದ್ದರು. ಬಹುಶಃ ವಾರದ ಮಧ್ಯದ ದಿನ ಎನ್ನುವ ಕಾರಣದಿಂದಲೋ, ಈ ಹಿಂದಿಗಿಂತ ಹೆಚ್ಚಿನ ಇನ್ನೂ ಎರಡು ಕಡೆಗಳಲ್ಲಿ ಚಿತ್ರ ಪ್ರದರ್ಶನದ ಅವಕಾಶ ಮಾಡಿರುವುದಕ್ಕೋ ಗೊತ್ತಿಲ್ಲ; ಜನರ ಕೊರತೆಯಂತೂ ಎದ್ದು ಕಾಣುತ್ತಿತ್ತು. ಬಂದಿದ್ದ ಹಲವಾರು ಮಂದಿಗೆ ಸರಿಯಾದ ಸಮಯದಲ್ಲಿ ಪಾಸ್ ಗಳು ದೊರಕದೆ ಟಿಕೆಟ್ ಕೌಂಟರ್ ಬಳಿಯ ಸಾಲು ದೊಡ್ಡದಾಗಿತ್ತು. ಅಂದುಕೊಂಡ ಸಿನಿಮಾ ನೋಡಲಾಗದ ಅವರ ಆಕ್ರೋಶವೂ ಕಾಣತೊಡಗಿತ್ತು.
ಮಧ್ಯಾಹ್ನದ ಹೊತ್ತಿಗೆ ಮರುಜೀವ
ಸಮಯ ಮಧ್ಯಾಹ್ನವಾಗುತ್ತಿದ್ದ ಹಾಗೆ ಹೊಸ ಕಳೆ ಸೃಷ್ಟಿಯಾಯಿತು. ಸಾಮಾನ್ಯ ಸಿನಿರಸಿಕರಷ್ಟೇ ಅಲ್ಲ, ಚಿತ್ರರಂಗ ಸೇರಿದಂತೆ ಸಮಾಜದ ಮತ್ತಿತರ ವಿಭಾಗದ ಗಣ್ಯರು ಕೂಡ ಬರಲಾರಂಭಿಸಿದರು. ಥಿಯೇಟರ್ ಹೊರಗಿನ ವಾತಾವರಣ ಕಳೆಗಟ್ಟಿತು. ಪಿವಿಆರ್ ಪ್ರವೇಶ ದ್ವಾರದ ಬಳಿಯಿರಿಸಿದ ದೀಪ ಬೆಳಗುವ ಮೂಲಕ ಒರಾಯನ್ ಮಾಲ್ ಒಳಗಿನ ಚಲನಚಿತ್ರೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ವಿದ್ಯಾಶಂಕರ್ , ನಿರ್ದೇಶಕ ಲಿಂಗದೇವರು ಮೊದಲಾದವರು ಈ ಸಂದರ್ಭದಲ್ಲಿ ಕೈ ಜೋಡಿಸಿದರು. ಇದೇ ವೇಳೆ ಖ್ಯಾತ ಸಾಹಿತಿ ದೊಡ್ಡರಂಗೇಗೌಡ ಅವರು ಹಿಂದಿನ ದಿನ ಕಂಠೀರವ ಸ್ಟೇಡಿಯಂನಲ್ಲಿ ಚಲನಚಿತ್ರೋತ್ಸವ ಉದ್ಘಾಟನೆಯ ವರದಿ ಇದ್ದಂಥ ‘ಬೆಳ್ಳಿರೇಖೆ’ ಚಲನಚಿತ್ರೋತ್ಸವದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಪ್ರಥಮ ದಿನದ ಸಿನಿಮಾ ವಿಶೇಷಗಳಾಗಿ ಆಂಗ್ಲಚಿತ್ರ ‘ಬೈಟ್’ ಇತ್ತು. ಕಾರ್ಪಸ್ ಕ್ರಿಸ್ಟಿ, ವೆರ್ಡಿಕ್ಟ್, ‘ಲೀವಿಂಗ್ ಅಫಘಾನಿಸ್ತಾನ್’ ಮೊದಲಾದ ಜನಪ್ರಿಯ ಚಿತ್ರಗಳು ಪ್ರದರ್ಶನಗೊಂಡವು. ಆದರೆ ಸರದಿ ನಿಂತವರಿಗೇನೇ ಸೀಟು ಸಿಗದಂಥ ಸಂದರ್ಭವನ್ನು ಸೃಷ್ಟಿಸಿದ್ದು ಮಾತ್ರ ‘ಸಿನೆಮಾ ಡಾಂಕಿ’ ಎನ್ನುವ ಚಿತ್ರ. ಚಲನಚಿತ್ರೋತ್ಸವದ ಉದ್ಘಾಟನೆಯ ವೇಳೆ ಪ್ರದರ್ಶಿಸಲ್ಪಟ್ಟಿದ್ದ ಈ ಸಿನಿಮಾ ಗುರುವಾರ ಮತ್ತೆ ಪ್ರದರ್ಶನವಾದಾಗಲೂ ಅದೇ ಜನಜಂಗುಳಿ ಇತ್ತು.
ಕಾಳಿದಾಸನ ಕರಾಮತ್ತು

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವೇ ಆದರೂ ಕನ್ನಡ ಚಿತ್ರಗಳಿಗೆ ಕೂಡ ಇಲ್ಲಿ ಪ್ರೇಕ್ಷಕರು ಇದ್ದೇ ಇರುತ್ತಾರೆ. ಹಾಗಾಗಿ ಕವಿರಾಜ್ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾಗೂ ತುಂಬ ಮಂದಿ ಪ್ರೇಕ್ಷಕರು ಉತ್ಸಾಹದಿಂದ ಬಂದಿದ್ದರು. ಚಿತ್ರದಲ್ಲಿ ಜಗ್ಗೇಶ್ ಅಭಿನಯಕ್ಕೆ, ಇಂದಿನ ಶಾಲೆಗಳ ಮಕ್ಕಳ, ಪೋಷಕರ ಪರಿಸ್ಥಿತಿಯ ಅನಾವರಣಕ್ಕೆ ವಿಶೇಷ ಪ್ರಶಂಸೆ ವ್ಯಕ್ತವಾಗಿತ್ತು.
ಜನ ಮೆಚ್ಚಿದ ‘ಅಭ್ಯಂಜನ’
ದಿನೇಶ್ ಬಾಬು ಚಿತ್ರಗಳೆಂದರೆವಜನ ಮೆಚ್ಚುಗೆ ಖಚಿತ ಎನ್ನುವ ಕಾಲವಿತ್ತು. ಆದರೆ ಇತ್ತೀಚೆಗೆ ಸತತ ಸೋಲುಗಳ ಬಳಿಕ ಆ ನಂಬಿಕೆ ಉಳಿದಿಲ್ಲವಾದರೂ ಅವರ ಚಿತ್ರಗಳ ಛಾಯಾಗ್ರಹಣ, ಸಹಜ ನಿರೂಪಣೆಗೆ ಮನಸೋಲದವರಿಲ್ಲ. ಇವೆರಡರ ಜತೆಗೆ ಮನ ಕಲಕುವ ಹಳ್ಳಿ ಸಬ್ಜೆಕ್ಟ್ ಚಿತ್ರ ನೀಡಿದ್ದಾರೆ ದಿನೇಶ್ ಬಾಬಯ, ‘ಅಭ್ಯಂಜನ’ದ ಮೂಲಕ. ‘ತಲೈಕೂತಲ್’ ಎನ್ನುವ ತಮಿಳು ನಾಡಿನ ಸ್ಥಳಿಯ ಆಚರಣೆಯಾದ ದಯಾಮರಣದ ರೀತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅನಾರೋಗ್ಯ ಪೀಡಿತ ವೃದ್ಧನಾಗಿ ನಟಿಸಿರುವ ಕರಿಸುಬ್ಬು ಅವರ ನಟನೆ ಅದ್ಭುತ. ನಮ್ಮಲ್ಲಿ ವೈವಿಧ್ಯಮಯ ಪಾತ್ರಧಾರಿಗಳಿಗೆ ಕೊರತೆಯಿಲ್ಲ; ಆದರೆ ಅವರಿಂದ ನಟನೆ ತೆಗೆಸುವವರಿಗೆ ಕೊರತೆ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹರಿಯ ಪಾತ್ರದಲ್ಲಿ ನಾರಾಯಣ ಸ್ವಾಮಿ ಸೇರಿದಂತೆ ಚಿತ್ರದಲ್ಲಿ ಪ್ರತಿಯೊಬ್ಬರ ನಟನೆಯೂ ಉಲ್ಲೇಖಾರ್ಹ. ಉತ್ಸವಕ್ಕೆ ಬಂದಿದ್ದ ಕರಿಸುಬ್ಬು ಮತ್ತು ಕುಟುಂಬ ಚಿತ್ರ ನೋಡಿ, ಅದಕ್ಕೆ ಪ್ರೇಕ್ಷಕರ ಮೆಚ್ಚುಗೆಯನ್ನು ನೇರವಾಗಿ ಪಡೆದು ಸಂಭ್ರಮಿಸಿತು.

ಪುರಾಣಿಕ್ ಪರಾಮರ್ಶೆ

ಮಧ್ಯಾಹ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಲನಚಿತ್ರೋತ್ಸವದಲ್ಲಿ ಈ ಹಿಂದಿಗಿಂತ ಈ ಬಾರಿ ಅವ್ಯವಸ್ಥೆ ಕಾಡುತ್ತಿದೆ ಎನ್ನುವ ಬಗ್ಗೆ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಗಮನ ಸೆಳೆಯಲಾಯಿತು. ಅದಕ್ಕೆ ಪಾಸ್ ವಿತರಣೆಯಲ್ಲಿ ಡಿಜಿಟೈಸೇಶನ್ ಮಾಡಿರುವುದು ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ಬದಲಾವಣೆ ಒಂದಷ್ಟು ದಿನಗಳಲ್ಲಿ ಸುಧಾರಣೆಯಾಗಲಿದೆ ಎಂದರು. ಇದರ ಜತೆಗೆ ತಾವು ಪಾಸ್ ಗಳ ಮೂಲಕ ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂದಿರುವ ಬಗ್ಗೆ, ತಮಗೆ ಸಿಕ್ಕ ಕಡಿಮೆ ಕಾಲಾವಧಿಯ ಬಗ್ಗೆ ಪುರಾಣಿಕ್ ಅವರು ತಮ್ಮ ಹಳೆಯ ರಾಗವನ್ನು ಹಾಡಿದರು. ಆದರೆ ಅವರ ಪ್ರಕೃತಿ ಸ್ನೇಹಿ ಪಾಸ್ ಗಳು ಹಲವರ ಕೈಗೆ ಪ್ಲಾಸ್ಟಿಕ್ ಕವರ್ ಜತೆಯಲ್ಲೇ ನೀಡಲಾಗಿರುವುದು ಉತ್ಸವದ ಆವರಣದಲ್ಲಿ ಅನಾವರಣವಾಗಿದೆ. ಪೇಪರ್ ಕಾರ್ಡ್ ಪಡೆದವರು ಒಂದೇ ದಿನದಲ್ಲಿ ಅದರ ಗುರುತುಗಳು ಅಳಿಸಿಹೋಗುವಂಥ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಕೂಡ ಸೃಷ್ಟಿಯಾಗಿದೆ.
ಚಿತ್ರಮಂದಿರದಿಂದ ನಿರ್ಗಮಿಸುವಾಗ ಈ ಹಿಂದಿನಂತೆ ದಿವ್ಯಾಂಗರು ಮತ್ತು ವೃದ್ಧರಿಗೆ ಮುಂಭಾಗದಿಂದಲೇ ತೆರಳಬಹುದಾದ ವಿಶೇಷ ಅವಕಾಶವನ್ನು ನಿರಾಕರಿಸುವ ಮೂಲಕ ಅವರ ಕೋಪಕ್ಕೂ ಆಯೋಜಕರು ಒಳಗಾಗಿದ್ದಾರೆ. ಹಾಗಾಗಿ ಪುರಾಣಿಕ್ ಅವರು ಹೇಳುವ ಕಡಿಮೆ ಕಾಲಾವಧಿಯಿತ್ತು ಎನ್ನುವ ಸಮರ್ಥನೆ ಇಲ್ಲಿಗೆಲ್ಲ ಅನ್ವಯವಾಗುವುದಿಲ್ಲ. ಹಳೆಯ ನಿಯಮಗಳನ್ನು ಬದಲಾಯಿಸುವುದು ಅಕಾಡೆಮಿಗೆ ಸಂಬಂಧಿಸಿರುವ ವಿಚಾರ. ಆದರೆ ಬದಲಾವಣೆಯ ಹೆಸರಲ್ಲಿ ಸಿನಿಮಾ ಪ್ರಿಯರಿಗೆ ಕಷ್ಟ ಎದುರಾದರೆ ಅದಕ್ಕೆ ಹೊಣೆ ಯಾರು? ಅಕಾಡೆಮಿ ಅಧ್ಯಕ್ಷರಿಗೆ ಬೇಕಾದಷ್ಟು ಸಮಯ ಸಿಕ್ಕಿಲ್ಲ ಎನ್ನುವುದು ರಾಜ್ಯ, ಅಂತರರಾಜ್ಯ, ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಬೇಕಾದ ವಿಷಯವಲ್ಲ ತಾನೇ? ಸಣ್ಣ ಪುಟ್ಟ ತೊಂದರೆಗಳ ನಿವಾರಣೆಗೆ ಒಂದು ಫೆಸ್ಟಿವಲನ್ನೇ ಪ್ರಾಯೋಗಿಕಗೊಳಿಸುವ ಬದಲು ಒಂದೇ ದಿನದಲ್ಲಿ ಎಷ್ಟು ಸುಧಾರಣೆ ಮಾಡಬಹುದು ಎನ್ನುವ ಕಡೆಗೆ ಗಮನಹರಿಸಿದರೆ ಉತ್ಸವದ ಮುಂದಿನ ದಿನಗಳತ್ತ ಕೂಡ ಉತ್ಸಾಹದ ಕಣ್ಣು ಹಾಯಿಸಬಹುದು.