‘ಕೋಟಿ’ ಮಾತನಾಡುವ ಟ್ರೈಲರ್

ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.
ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ ನಿಜಕ್ಕೂ ಕೋಟಿಗೊಬ್ಬ ಎನ್ನುವುದೇ ಈ ಪಾತ್ರ. ಹಾಗಿದ್ದರೂ ಜನಸಾಮಾನ್ಯರಿಗೆಲ್ಲ ಈ ತಮ್ಮ ನಡುವಿನ ಅಸಾಮಾನ್ಯ ಇಷ್ಟವಾಗಬಲ್ಲ. ಇಂಥ ಅಪರೂಪದ ಕೋಟಿಗಾಗಿ ಈ ಚಿತ್ರ ನೋಡಬೇಕು ಎನ್ನುತ್ತಾರೆ ಧನಂಜಯ್.

‘ಒಂದು ಕತೆ ನನ್ನನ್ನು ಕಾಡತೊಡಗಿದರೆ ನಾನು ಆ ಕತೆಯನ್ನು ಚಿತ್ರ ಮಾಡಲು ಸಿದ್ಧನಾಗುತ್ತೇನೆ. ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರು ಹೇಳಿದ ಕತೆಯೂ ಅಷ್ಟೇ. ಕೋಟಿಯ ಪಾತ್ರ ನನ್ನನ್ನು ವಾರಗಟ್ಟಲೆ ಕಾಡಿದೆ. ಹೀಗಾಗಿಯೇ ಚಿತ್ರ ಮಾಡಲು ಒಪ್ಪಿಕೊಂಡೆ. ಕೋಟಿಯ ಬದುಕಿನ ಒಂದೊಂದು ವಿಚಾರ ಹೊರಬಂದಂತೆ ಮಧ್ಯಮವರ್ಗದ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ.’ ಎನ್ನುವುದು ನಟ ರಾಕ್ಷಸ ಧನಂಜಯ್ ಮಾತು. ಪರಮೇಶ್ವರ ಗುಂಡ್ಕಲ್ ಅವರಿಗೆ ಇದು ಮೊದಲ ಸಿನಿಮಾ. ಆದರೆ ಪ್ರಥಮ ಚಿತ್ರದಲ್ಲೇ ಒಂದು ಒಳ್ಳೆಯ ಸಿನಿಮಾ ನೀಡಬೇಕೆನ್ನುವ ಅವರ ಹಪಹಪಿ ಮಾತುಗಳಲ್ಲಿ ಮಾತ್ರವಲ್ಲ, ಟ್ರೈಲರ್​ನಲ್ಲೂ ಎದ್ದು ಕಾಣುತ್ತಿತ್ತು. ಇದು ಕೋಟಿ ಎನ್ನುವ ಸಜ್ಜನ ವ್ಯಕ್ತಿಯ ಕತೆ ಎಂದು ಹೇಳುತ್ತಲೇ ಕೈಲಿ ಕೋವಿ ಹಿಡಿದು ಗಂಡು ಹಾರಿಸುವ ನಾಯಕನನ್ನು ತೋರಿಸಿದ್ದಾರೆ. ಹಾಗಿದ್ದರೆ ಪರಮ್ ಹೇಳುವ ಸಜ್ಜನ ಎನ್ನುವ ಮಾತು ಯಾವ ರೀತಿಯಲ್ಲಿ ಸತ್ಯ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

ದೇವು ಸಾಹುಕಾರನ ಪಾತ್ರದಲ್ಲಿ ರಮೇಶ್ ಇಂದಿರ ನಟಿಸಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ ಮತ್ತೊಂದು ‘ಉತ್ತಮ’ ಖಳಪಾತ್ರವನ್ನು ನಿರೀಕ್ಷಿಸುವಂತಾಗಿದೆ. ಪರಮ್ ನಿರ್ದೇಶಕ ಮಾತ್ರವಲ್ಲ, ಕತೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಹೀಗಾಗಿ ನಿರ್ದೇಶಕರಲ್ಲಿ ಒಬ್ಬ ಖಳ ಇಲ್ಲವಾಗಿದ್ದರೆ ಇಂಥ ಪಾತ್ರ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ ರಮೇಶ್ ಇಂದಿರಾ. ನಾಯಕಿ ಮೋಕ್ಷ ಕುಶಾಲ್ ಒಳಗಿನ ಪ್ರತಿಭೆಯನ್ನು ಚಿತ್ರ ಒರೆಗೆ ಹಚ್ಚಿರುವ ನಿರೀಕ್ಷೆ ಇದೆ.

ಬಡವ ರ್ಯಾಸ್ಕಲ್ ಬಳಿಕ ಮತ್ತೊಮ್ಮೆ ಧನಂಜಯ್ ತಾಯಿ ಪಾತ್ರದಲ್ಲಿ ತಾರಾ ನಟಿಸಿದ್ದಾರೆ. ತಮ್ಮ ಮತ್ತು ಧನಂಜಯ್ ಕಾಂಬಿನೇಶನ್ ಬಗ್ಗೆ ಅವರಿಗೂ ಖುಷಿಯಿದೆ. ಮಧ್ಯರಾತ್ರಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ, ಸುರಿಯುವ ಮಳೆಯ ನಡುವೆಯೂ ಸೇರಿದ್ದ ಸುಮಾರು 50ರಷ್ಟು ಸ್ಥಳೀಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕತೆಯೇ ಗೊತ್ತಿಲ್ಲದೆ ಸೇರಿದ ಜನರು, ತಾರಾ ನಟನೆಯ ಒಂದು ದೃಶ್ಯಕ್ಕೇನೇ ಈ ರೀತಿ ಖುಷಿಯಾಗಿದ್ದಾರೆ ಅಂದರೆ, ಅವರ ನಟನೆಯ ಅಗಾಧತೆ ಅರ್ಥವಾಗಬಹುದು ಎನ್ನುತ್ತಾರೆ ಪರಮ್.

ರಂಗಾಯಣ ರಘು, ಸರ್ದಾರ್ ಸತ್ಯ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಯುವ ನಟರಾದ ಪೃಥ್ವಿ ಶಾಮನೂರು ಧನಂಜಯ್ ತಮ್ಮ ನಚ್ಚಿಯ ಪಾತ್ರ ಮಾಡಿದ್ದಾರೆ. ಯುವ ಕಲಾವಿದರಾದ ಆರ್​ಜೆ ಪೃಥ್ವಿ, ನಟಿ ತನುಜಾ ವೆಂಕಟೇಶ್, ಅಭಿಷೇಕ್, ಅಕ್ಷಯ್ ಮೊದಲಾದವರು ನಟಿಸಿರುವ ಈ ಚಿತ್ರದಲ್ಲಿ ಕೆಲವು ಸ್ಪೆಷಲ್ ಅಪಿಯರೆನ್ಸ್​ಗಳನ್ನು ಗುಟ್ಟಾಗಿರಿಸಿದ್ದಾರೆ ನಿರ್ದೇಶಕರು. ‘‘ಒಟ್ಟು ಸಿನಿಮಾ 2.49ನಿಮಿಷ ಕಾಲಾವಧಿಯಲ್ಲಿದೆ. ಸಿಂಕ್ ಸೌಂಡ್ ಸಿನಿಮಾ ಇದು. ಡ್ರಾಮ ಥ್ರಿಲ್ಲರ್ ವಿಭಾಗದಲ್ಲಿ ಹೃದಯ ತಟ್ಟುವಂಥ ಭಾವನಾತ್ಮಕ ಚಿತ್ರ ಮಾಡಿದ್ದೇನೆ ಎನ್ನುವ ನಂಬಿಕೆ ಇದೆ. ಉಳಿದಿದ್ದು ಎಲ್ಲವೂ ಪ್ರೇಕ್ಷಕರ ಕೈಯ್ಯಲ್ಲಿದೆ’’ ಎಂದು ಪರಮ್ ನಿರಾಳರಾಗುತ್ತಾರೆ.

ಜಿಯೋ ಸಂಸ್ಥೆಯ ಮೂಲಕ ಜ್ಯೋತಿ ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜೂನ್ 14ರಂದು 225 ಪರದೆಗಳಲ್ಲಿ ಕೋಟಿ ತೆರೆಗೆ ಬರಲಿದೆ. ಒಂದು ವಾರದ ಬಳಿಕ, 21ರಂದು ಅಮೆರಿಕಾ, ಯುಕೆ, ಮಿಡ್ಲ್ ಈಸ್ಟ್ ಮತ್ತು ಆಸ್ಟ್ರೇಲಿಯಾಗಳಲ್ಲಿ ತೆರೆಗೆ ತರುವ ಯೋಜನೆ ಹಾಕಲಾಗಿದೆ.

Recommended For You

Leave a Reply

error: Content is protected !!