ಅಂತರಾಳ ತೆರೆದ ಅನಂತನಾಗ್

ಹಿರಿಯನಟ ಅನಂತ ನಾಗ್ ಅವರು ಇದುವರೆಗೆ ಹೊರಗೆ ಹೇಳಿರದಂಥ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಅವರು ಹೀಗೆ ಮನಸು ಬಿಚ್ಚಿದ್ದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾರಥ್ಯದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ. ಪತ್ರಕರ್ತ ಮುರಳೀಧರ ಖಜಾನೆಯವರು ಅನಂತ್ ನಾಗ್ ಅವರೊಂದಿಗೆ ನಡೆಸಿದ ಸಂವಾದದಿಂದ ಆಯ್ದ ಒಂದಷ್ಟು ಪ್ರಶ್ನೋತ್ತರಗಳಿಗೆ ‘ಸಿನಿ‌ಕನ್ನಡ’ ನೀಡಿರುವ ಅಕ್ಷರ ರೂಪ ಇದು.

ನೀವು ಬಾಲ್ಯದಿಂದಲೇ ನಟನಾಗಬೇಕು ಎಂದುಕೊಂಡಿದ್ದಿರ?

ಇಲ್ಲ. ನನ್ನ ಬಾಲ್ಯವೆಲ್ಲ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ನಡೆಯಿತು. ಅಲ್ಲಿ ಮಠದಲ್ಲಿದ್ದೆ. ಭಜನೆ, ರಾಮನಾಮ, ಮಠದ ಮಂತ್ರಗಳು, ಭಗವದ್ಗೀತೆ ಸೇರಿದಂತೆ ಸುಮಾರು 75ರಷ್ಟು ಕನ್ನಡ, ಮರಾಠಿ ಭಾಷೆಯ ಭಜನೆಗಳನ್ನು ಕಂಠಪಾಠ ಮಾಡಿಕೊಂಡಿದ್ದೆ. ನನ್ನ ಕಲಿಕೆ ನೋಡಿ ಮುಂಬೈಗೆ ಕಳಿಸುವಂತೆ ಯಾರೋ ತಂದೆಗೆ ಶಿಫಾರಸು ಮಾಡಿದರು. ಅಲ್ಲಿಯ ತನಕ ಯಾವುದೇ ಸಿನಿಮಾ ಕನಸು ಇರಲಿಲ್ಲ.

ಮುಂಬೈನಂಥ ನಗರಕ್ಕೆ ಹೋದಾಗ ಏನನಿಸಿತು?

ಇಲ್ಲಿ ತರಗತಿಯ ಬುದ್ಧಿವಂತ ಐದು ಮಂದಿಯಲ್ಲೊಬ್ಬನಾಗಿದ್ದೆ. ಆದರೆ ಅಲ್ಲಿ ಕೊನೆಯ ಐದು ಮಂದಿಯಲ್ಲೊಬ್ಬನಾದೆ. ಕನ್ನಡ ಮಾಧ್ಯಮದಲ್ಲಿ ಕಲಿತಿದ್ದ ನನಗೆ ಒಮ್ಮೆಲೆ ಅಲ್ಲಿನ ಇಂಗ್ಲಿಷ್ ಮೀಡಿಯಂಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ಎಸ್ ಎಸ್ ಎಲ್ ಸಿಯಲ್ಲಿ ಫೇಲು ಮಾಡಿದರು. ಕಾಲೇಜು ಅಂದಾಗ ಕಲಾವಿಭಾಗ ಆಯ್ಕೆ ಮಾಡಿಕೊಂಡೆ. ಆದರೆ ಅಲ್ಲಿ ಹುಡುಗಿಯರೇ ಹೆಚ್ಚಿದ್ದ ಕಾರಣ, ಸೈನ್ಸ್ ಆಯ್ಕೆ ಮಾಡಿಕೊಂಡೆ. ನನಗೆ ಒಟ್ಟಿನಲ್ಲಿ ಅಲ್ಲಿಂದ ವಾಪಾಸಾದರೆ ಸಾಕು ಎನ್ನುವಂತಾಗಿತ್ತು.

ವೃತ್ತಿ ಬದುಕು ಕೂಡ ಅಲ್ಲಿಂದಲೇ ಶುರುವಾಯಿತ?

1962ರಲ್ಲಿ ಚೈನಾವಾರ್ ನಡೆದಿತ್ತು. ಮೊದಲೇ ನನಗೆ ಎನ್ ಸಿ ಸಿ, ಎಸಿಸಿ ಸರ್ಟಿಫಿಕೇಟ್ ಇತ್ತು. ದೇಶಾಭಿಮಾನದ ಹುಮ್ಮಸ್ಸು ಇತ್ತು. ಮಿಲಿಟರಿಗೆ ಸೇರಲು ಪ್ರಯತ್ನಿಸಿದ್ದೆ. ಎಡಗಣ್ಣಿನ ಪವರ್ ಕಡಿಮೆ ಎಂದರು. ಅಲ್ಲದೆ ನನ್ನ ವೆಯ್ಟ್ ಕೂಡ ಕಡಿಮೆ ಇತ್ತು. ಹಾಗಾಗಿ ನಿರೀಕ್ಷೆಯ ಕೆಲಸಗಳು ದೊರಕಿರಲಿಲ್ಲ.

ಪುನಃ ಊರಿಗೆ ಮರಳಿ ಬಂದಿದ್ದು ಯಾವಾಗ?

ನನ್ನಿಂದ ಯಾವುದೇ ಕೆಲಸ ಆಗುತ್ತಿಲ್ಲ ಎನ್ನುವುದು ನನ್ನ ತಂದೆಯನ್ನು ಕೂಡ ಕಾಡಿತ್ತು. ಹಾಗಾಗಿ ಅವರು ತುಸು ವ್ಯಂಗ್ಯವಾಗಿಯೇ ಊರಿಗೆ ಕರೆದರು. “ನಿನ್ನ ಅಕ್ಕನ ಮದುವೆ ಇದೆ. ಊರಿಗೆ ಬಂದು ಅದರ ಆಮಂತ್ರಣ ಪತ್ರಿಕೆ ಹಂಚುವ ಕೆಲಸವನ್ನಾದರೂ ಮಾಡು” ಎಂದು ವಾಪಾಸು ಕರೆಸಿಕೊಂಡರು. ಆದರೆ ಇನ್ವಿಟೇಶನ್ ಜತೆಗೆ ಮನೆಮನೆಗೆ ಹೋಗಿ ಆಹ್ವಾನ ನೀಡಿದ ನನಗೇನೇ ಅದು ಹೊಸದೊಂದು ಕ್ಷೇತ್ರದಿಂದ ಆಹ್ವಾನ ತಂದೊದಗಿಸಿತು! ಅದೇ ರಂಗಭೂಮಿ.

ರಂಗಭೂಮಿಯಲ್ಲಿನ ನಿಮ್ಮ ಅನುಭವದ ಬಗ್ಗೆ ಹೇಳಿ

ವಿವಾಹ ಪತ್ರಿಕೆ ಹಂಚುತ್ತಿರುವಾಗ ನನ್ನನ್ನು ಕಂಡವರೊಬ್ಬರು ‘ನೋಡಲು ಚೆನ್ನಾಗಿದ್ದೀಯ, ನಾಟಕಗಳಲ್ಲಿ ಆ್ಯಕ್ಟ್ ಮಾಡುತ್ತೀಯ ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಹಾಗೆ ಕೊಂಕಣಿ ನಾಟಕಗಳ ಮೂಲಕ ನಟನೆಯನ್ನು ಆರಂಭಿಸಿದೆ. ಅಲ್ಲಿಂದ ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕ ಸೇರಿದಂತೆ ಐದು ವರ್ಷಗಳಲ್ಲಿ ಐವತ್ತರಷ್ಟು ವಿವಿಧ ಭಾಷೆಯ ನಾಟಕಗಳಲ್ಲಿ ‌ಅಭಿನಯಿಸಿದೆ. ಬಳಿಕ ವಂಶವೃಕ್ಷ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದೆ.

ರಂಗಭೂಮಿಯಿಂದ ಬಂದರೂ, ನಿಮ್ಮ ನಟನೆ ಹೆಚ್ಚು ನೈಜವಾಗಿರುವುದು ಹೇಗೆ?

ನಾನು ರಂಗಭೂಮಿಯಲ್ಲಿ ಕೂಡ ನೈಜವಾದ ನಟನೆಯನ್ನೇ ನೀಡುತ್ತಿದ್ದೆ. ಆದರೆ ರಿಹರ್ಸಲ್ ನಲ್ಲಿ ಇಲ್ಲಿನ ಹಿರಿಯ ನಿರ್ದೇಶಕರ ಶೈಲಿಯನ್ನೇ ಅನುಸರಿಸುತ್ತಿದ್ದೆ. ವೇದಿಕೆ ಏರಿದ ಮೇಲೆ ನನ್ನ ಶೈಲಿಯಲ್ಲೇ ಅಭಿನಯಿಸುತ್ತಿದ್ದೆ. ‘ನಾನು ಹೇಳಿದ್ದೇನು, ನೀನು ಮಾಡಿದ್ದೇನು’ ಎಂದು ಮೊದಲು ಅವರು ವಿರೋಧಿಸುತ್ತಿದ್ದರು. ಆದರೆ ಜನ ಮೆಚ್ಚತೊಡಗಿದ ಬಳಿಕ ಮೌನವಾದರು. ಸಿನಿಮಾದಲ್ಲಿ ನಟಿಸುವಾಗ ಅಂಡರ್ ಪ್ಲೇ ಮಾಡಿದರೆ ಬಂಗಾಳಿ ಶೈಲಿ ಬೇಡ ಅನ್ನೋರು. ನಾನು ಅಂಡರ್ ಪ್ಲೇ ಮಾಡುತ್ತಿರಲಿಲ್ಲ. ನೈಜವಾಗಿ ನಟಿಸಿದೆ.

ಬೇರೆ ಭಾಷೆಯ ಸಿನಿಮಾರಂಗಗಳನ್ನು ಕಂಡ ಬಳಿಕ ನಿಮಗೆ ಅನಿಸುವುದೇನು?

ಸಿನಿಮಾರಂಗ ಎನ್ನುವುದಕ್ಕಿಂತ ಅಲ್ಲಿನ ಸಿನಿಮಾ ಪ್ರೇಕ್ಷಕರಲ್ಲೇ ಒಂದು ರೀತಿಯ ವ್ಯತ್ಯಾಸ ಇದೆ. ಮುಂಬೈನಲ್ಲಿರಬೇಕಾದರೆ ಶಾಲೆಗಳಲ್ಲೇ ಸಿನಿಮಾ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದರು! ಶಾಲೆಯಲ್ಲಿ ಇತಿಹಾಸದ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತ್ರ ಮಾತನಾಡುವುದನ್ನು ಕೇಳಿ ಬೆಳೆದ ನನಗೆ ಇದು ಹೊಸದಾಗಿತ್ತು. ಉಳಿದಂತೆ ಎಲ್ಲ ಭಾರತೀಯ ಚಿತ್ರಗಳಲ್ಲಿಯೂ‌‌ ಮನರಂಜನೆಗೆ ಆದ್ಯತೆ ಹೆಚ್ಚು. ಎಲ್ಲವನ್ನೂ ಬದಿಗಿಟ್ಟು ವಿಚಾರವನ್ನಷ್ಟೇ ನೇರವಾಗಿ ಹೇಳುವ ವಿದೇಶೀ ಚಿತ್ರಗಳ ಶೈಲಿ‌ ನಮ್ಮಲ್ಲಿ ಇಲ್ಲ. ನಮ್ಮದು ಒಂದು ಥಾಲಿ ಸಿಸ್ಟಮ್. ಕತೆ ಏನೇ ಇದ್ದರೂ ಅದರಲ್ಲಿ ಹಾಡು, ಫೈಟು ಎಲ್ಲವೂ ಇರಬೇಕು. ಏನೇ ಇದ್ದರೂ ಅಂತಿಮವಾಗಿ ಬೇಕಿರುವುದು ನಟನೆ.

ವಿದೇಶೀ ಸಿನಿಮಾಗಳ ಮಾದರಿಯಲ್ಲಿ ಪ್ರಸ್ತುತ ಕಾಲಘಟ್ಟದ ದೇಶ, ರಾಜಕೀಯ ಸ್ಥಿತಿಗತಿಗಳ ಸಿನಿಮಾ ಬರುತ್ತಿಲ್ಲವೇಕೆ?

ನಮ್ಮಲ್ಲಿ ಎಂಥದೇ ಸಿನಿಮಾಗಳು ಬಂದರೂ, ಅವು ರಾಜಕೀಯದ ಮೇಲೆ ಪ್ರಭಾವ ಬೀರುತ್ತವೆ ಎನ್ನಲಾಗದು. ರಾಜಕಾರಣಿಗಳು ಅವರ ಪಾಡಲ್ಲೇ ಇರುತ್ತಾರೆ. ಅದರಲ್ಲಿ ಕೂಡ ತೆಲುಗು ಪ್ರೇಕ್ಷಕರಿಗೆ ಹೋಲಿಸಿದರೆ ಕನ್ನಡದಲ್ಲಿ ಸಿನಿಮಾ ಪ್ರೇಕ್ಷಕರೇ ಕಡಿಮೆ. ತೆಲುಗರ ಒಟ್ಟು ಜನಸಂಖ್ಯೆಯ ಮುಕ್ಕಾಲು ಪಾಲು ಮಂದಿ ಕೂಡ ಥಿಯೇಟರ್ ಗೆ ಹೋಗಿ ಚಿತ್ರ ನೋಡಿದರೆ, ನಮ್ಮಲ್ಲಿ ಒಟ್ಟು ಜನಸಂಖ್ಯೆಯ ಕಾಲು ಭಾಗ ಮಾತ್ರ ಸಿನಿಮಾ ಪ್ರೇಕ್ಷಕರಿದ್ದಾರೆ ಎನ್ನುವುದು ಲೆಕ್ಕಾಚಾರಗಳ ಮೂಲಕವೇ ಸಾಬೀತಾದ ಸಂಗತಿ. ನಮ್ಮಲ್ಲಿ‌ ಸಿನಿಮಾಗಿಂತ ಪುಸ್ತಕಗಳ ಓದುಗರು ಹೆಚ್ಚು ಎನ್ನುವುದು ಅಧ್ಯಯನದ ಮೂಲಕವೇ ಸಾಬೀತಾಗಿರುವ ಸಂಗತಿ.

ನಿಮ್ಮ ರಾಜಕೀಯದ ಪ್ರವೇಶ ಮತ್ತು ವಿದಾಯದ ಬಗ್ಗೆ ಹೇಳಿ

ನನ್ನ ತಂದೆ ನಿಜಲಿಂಗಪ್ಪನವರ ಜತೆಗೆ ಕೆಲಸ ಮಾಡಿದ್ದರು. ಜೆ‌.ಪಿ ಮೂವ್ಮೆಂಟ್ ಟೈಮಲ್ಲಿ ನನಗೂ ರಾಜಕೀಯ ಹೋರಾಟದ ಆಸಕ್ತಿ ಬಂತು. ಚುನಾವಣೆ ವೇಳೆ ಜನತಾ ಪಕ್ಷಕ್ಕೆ ಕ್ಯಾಂಪೇನ್ ಮಾಡಿದ್ದನ್ನು ನೋಡಿ ನನಗೆ ಎಂ ಎಲ್ ಸಿ ಸ್ಥಾನ ನೀಡಿದರು.ಮಂತ್ರಿಯೂ ಆದೆ. ಆದರೆ ಮಂತ್ರಿಯಾದ ಮೇಲೆ ನಟಿಸಬಾರದು ಎಂದರು. ಅದನ್ನು ಪಾಲಿಸಿದೆ. ಆದರೆ ಆ ಅವಧಿಯಲ್ಲಿ ನನಗೆ ಕಲಾವಿದನಾಗಿರುವುದೇ ಬೆಟರ್ ಅನಿಸಿತು. ಹಾಗೆ ಚಿತ್ರರಂಗಕ್ಕೆ ಮರಳಿದೆ.

ರಾಜಕೀಯ ಬೇಡ ಅನಿಸಿದ್ದೇಕೆ?

ಎಷ್ಟೇ ಒಳ್ಳೆಯ ಕಾರ್ಯಯೋಜನೆಗಳನ್ನು ಇರಿಸಿಕೊಂಡು ನಾವು ರಾಜಕೀಯ ಕ್ಷೇತ್ರ ಪ್ರವೇಶಿಸಿದರೂ, ಅಂತಿಮದಲ್ಲಿ ವ್ಯವಸ್ಥೆ ನಮ್ಮಿಂದ ಯಾವ ಬದಲಾವಣೆಯನ್ನು ಕೂಡ ನೆರವೇರಲು ಬಿಡುವುದಿಲ್ಲ. ಆದರೂ ನಾನು ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಮಾಡಿದ ಒಂದು ಬದಲಾವಣೆಯ ಬಗ್ಗೆ ಇಲ್ಲಿ ಹೇಳಲೇಬೇಕು. ಅದು ಮೇಖ್ರಿ ಸರ್ಕಲ್ ಫ್ಲೈ ಓವರ್ ಯೋಜನೆ. ಮೂರು ವರ್ಷ ಕಾಲಾವಧಿಯಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ತಯಾರಾಗುವುದಿತ್ತು. ತಮ್ಮ ಮನೆ ಮುಂದಿನ‌ ಟ್ರಾಫಿಕ್ ಜಾಮ್ ಬಗ್ಗೆ ಹೆಗ್ಡೆಯವರು ಯಾವಾಗಲೂ ಹೇಳುತ್ತಿದ್ದರು. ನಾನು ಆದಷ್ಟು ವೇಗದಲ್ಲಿ ಕೆಲಸ ಮುಗಿಸುವ ವಿದೇಶೀ ಸಂಸ್ಥೆಗಳ ಬಗ್ಗೆ ತಿಳಿದಿದ್ದೆ. ಹಾಗೆ ನನ್ನ ಪರಿಚಿತ ಕನ್ಸ್ಟ್ರಕ್ಷನ್ಸ್ ಮೂಲಕ ಆರೇ ತಿಂಗಳಲ್ಲಿ ಆ ಕೆಲಸ ಪೂರ್ಣಗೊಳಿಸಿದೆ! ಫ್ಲೈ ಓವರ್ ಬದಲಾಗಿ ಅಂಡರ್ ಪಾಸ್ ಮೂಲಕ ಆರೇ ತಿಂಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲಾಗಿತ್ತು. ಮತ್ತು ಅದಕ್ಕಾಗಿ ವೆಚ್ಚ ಮಾಡಿದ್ದು 24 ಕೋಟಿ ಮಾತ್ರ!

ಶಂಕರನಾಗ್ ಅವರ ಬಗ್ಗೆ ಪುಸ್ತಕ ಬರೆದ ಹಾಗೆ ನೀವು ಮತ್ತೆ ಬರೆಯಲೇ ಇಲ್ಲ?

ಅದು ಲಂಕೇಶ್ ಅವರ ಒತ್ತಾಯಕ್ಕೆ ಮಣಿದು ಬರೆದಿರುವಂಥದ್ದು. ಶಂಕರ್ ನನಗಿಂತ ಆರು ವರ್ಷ ಚಿಕ್ಕವನು. ನನ್ನ ಬಳಿಕ ಆತನೂ ಮುಂಬೈಗೆ ಬಂದಿದ್ದ. ನಾನು ಪುಟಗಟ್ಟಲೆ ಸಂಭಾಷಣೆ ಕಂಠಪಾಠ ಮಾಡುವುದನ್ನು ನೋಡಿ‌ ಅಚ್ಚರಿ ಪಟ್ಟಿದ್ದ. ನಾನು ಸ್ನೇಹಿತರಾದ ಅಶೋಕ್, ಆನಂದ್ ಜತೆಗೆ ಸೇರಿ ‘ತ್ರಿ ಏಸ್’ ಎಂದು ಗ್ರೂಪ್ ಮಾಡಿಕೊಂಡು ನಾಟಕ ಮಾಡುತ್ತಿದ್ದೆವು. ನಾಟಕಕ್ಕೆ ಬರುವುದಾಗಿ ಹೇಳಿದಾಗ ಮೊದಲು ನಾನು ಒಪ್ಪಿರಲಿಲ್ಲ. ನಾನು ಸಿನಿಮಾಗೆ ಹೋದಾಗ ಆತ ನಾಟಕಕ್ಕೆ ಸೇರಿಕೊಂಡ. ವಿದೇಶದಲ್ಲಿ ಸ್ಟಡಿ ಮಾಡಲು ಆತನಿಗೆ ಆಸಕ್ತಿಯಿತ್ತು. ಸಿನಿಮಾ ಬಗ್ಗೆ ಹೇಳಿದಾಗ ಮೊದಲು ಡೈರೆಕ್ಷನ್ ಮಾಡೋದಾಗಿ ಹೇಳಿದ್ದ.‌ ಮೊದಲು ಒಂದು ಸಿನಿಮಾದಲ್ಲಿ ‌ನಟಿಸು ಆಮೇಲೆ ನಿರ್ದೇಶಿಸು ಅಂದಿದ್ದೆ.‌ ಒಂದರಲ್ಲಿ ಆ್ಯಕ್ಟ್ ಮಾಡಿ ಫಾರಿನ್ ಗೆ ಹೋಗುವುದಾಗಿ ಹೇಳಿದ್ದ. ಒಂದು‌ ಚಿತ್ರ ಮುಗಿಯುವ ಹೊತ್ತಿಗೆ ನಾಲ್ಕೈದು ಸಿನಿಮಾಗಳ ಆಫರ್ ಬಂದಿತ್ತು. ‘ಮಿಂಚಿನ‌ ಓಟ’ದಂಥ ಸಿನಿಮಾಗಳನ್ನು ಜತೆಯಾಗಿ ನಿರ್ಮಿಸಿದ್ದೆವು. ಆತನ‌ ಕನಸುಗಳು ದೊಡ್ಡದಿತ್ತು.‌ ಆದರೆ ಆಯುಷ್ಯ ಮೂವತ್ತೈದರಲ್ಲೇ ಕೊನೆಯಾಯಿತು.

Recommended For You

Leave a Reply

error: Content is protected !!
%d bloggers like this: