ಮುಸ್ಲಿಂರಿಗೆ ಬಹಿಷ್ಕಾರ ಹಾಕೋದು ಅಮಾನವೀಯ: ಅಜಿತ್ ಹನಮಕ್ಕನವರ್

ಕೊರೊನ ವೈರಸ್ ಹರಡಬಹುದಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಬಳಿಕ ಕನ್ನಡಿಗರ ಬಾಯಲ್ಲಿ ಕೊರೊನ, ಕ್ವರಂಟೈನ್ ಪದಗಳ ಹಾಗೆಯೇ ಹೆಚ್ಚು ಓಡಾಡಿದ ಪದ ಅಜಿತ್ ಹನಮಕ್ಕನವರ್'ಮತ್ತು'ಸುವರ್ಣ ಟಿವಿ’. ಈ ಹೆಸರುಗಳು ನೆಗೆಟಿವ್ ವಿಚಾರದಲ್ಲಿ ಬಳಕೆಯಾದ ಹಾಗೆಯೇ ಅವರ ಅಭಿಮಾನಿಗಳ ಮೂಲಕ ಮೆಚ್ಚುಗೆಯನ್ನು ಕೂಡ ಪಡೆದಿವೆ. ಜನಪರವಾಗಿರುವ ಮಾಧ್ಯಮಗಳ ಬಗ್ಗೆ ಜನರಲ್ಲಿ ಪಾಸಿಟಿವ್ ಅಭಿಪ್ರಾಯ ಇರುವುದು ವಿಶೇಷವಲ್ಲ. ಆದರೆ ನೆಗೆಟಿವ್ ವಿಚಾರಗಳು ಬಂದಾಗ ಅವುಗಳ ಬಗ್ಗೆ ಸಂಬಂಧಪಟ್ಟವರಲ್ಲಿ ನೇರ ಮಾತುಕತೆ ನಡೆಸುವುದು ಕೂಡ ಮಾಧ್ಯಮವೇ ಕಲಿಸಿರುವ ಸಂಗತಿ. ಹಾಗಾಗಿ ಸುವರ್ಣ ನ್ಯೂಸ್ ನ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್ ಸಿನಿಕನ್ನಡ.ಕಾಮ್‌ನ ಇಂದಿನ ಅತಿಥಿ.

ಸಿನಿಕನ್ನಡದಲ್ಲಿ ಇದುವರೆಗೆ ಸಿನಿಮಾ ಸಂಬಂಧಿ ಸುದ್ದಿಗಳನ್ನಷ್ಟೇ ಓದಿರುತ್ತೀರಿ. ಹಾಗಾದರೆ ಅಜಿತ್‌ಗೂ ಸಿನಿಮಾಗೂ ಏನು ಸಂಬಂಧ ಎನ್ನುವ ಪ್ರಶ್ನೆ ನಿಮಗೆ ಮೂಡುವುದು ಸಹಜ. ಅದಕ್ಕೂ ಮೊದಲು ಒಂದು ವಿಷಯ ಹೇಳಬೇಕು. ಅಜಿತ್ ಅವರು ನನಗೆ ಹಲವಾರು ವರ್ಷಗಳಿಂದ ಪರಿಚಯ. ನಿನ್ನೆ ನಾನು ನೋಡಿದ ವಾಟ್ಸ್ಯಾಪ್ ಸಂದೇಶವೊಂದು ಮಾತ್ರ ಅವರೊಂದಿಗೆ ಚರ್ಚಿಸಲೇಬೇಕು ಎನ್ನುವ ಮಟ್ಟಕ್ಕೆ ತಲುಪಿಸಿತು. ಅದು ಕರಾವಳಿಯ ಶಿಕ್ಷಕಿಯರು ತಮ್ಮ ವಾಟ್ಸ್ಯಾಪ್‌ ಗ್ರೂಪ್‌ನಿಂದ ಮುಸಲ್ಮಾನ ಮಹಿಳೆಯರನ್ನು ದೂರವಿರಿಸುವ ಬಗ್ಗೆ ಮಾತನಾಡಿದ್ದು ಅದರಲ್ಲಿ ಸುವರ್ಣ ನ್ಯೂಸ್‌ ನೋಡಿ ಮುಸಲ್ಮಾನರ ಅಸಲಿತನದ ಬಗ್ಗೆ ಅರಿಯಿರಿ ಎಂಬಂಥ ಮಾತುಗಳಿದ್ದವು. ಒಂದು ಸಮೂಹವನ್ನು ಸುಶಿಕ್ಷಿತರಾಗಿಸಬೇಕಾದವರೇ ಇಂಥದೊಂದು ಮುಸಲ್ಮಾನರನ್ನು ಪ್ರತ್ಯೇಕವಾಗಿಸುವ ನಿರ್ಧಾರ ಮಾಡಿರುವುದು ಆತಂಕದ ವಿಷಯ. ಅಜಿತ್ ಜತೆಗಿನ ಮಾತುಗಳಲ್ಲಿ ಇದರ ಬಗ್ಗೆ ಕೂಡ ಪ್ರಸ್ತಾಪಿಸಿದ್ದೇನೆ. ಗಮನಿಸಿ.

ಸಿನಿಮಾರಂಗಕ್ಕೂ ನಿಮಗೂ ಇರುವ ಸಂಬಂಧವೇನು?

ಒಂದೆರಡು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದು ಬಿಟ್ಟರೆ ನಾನು ಕಲಾವಿದನೇನಲ್ಲ. ನನಗೆ ನಟನೆ ಬರುವುದಿಲ್ಲ. ‘ಸವರ್ಣದೀರ್ಘ ಸಂಧಿ' ಚಿತ್ರ ನೋಡಿದವರಿಗೂ ಅದು ಅನಿಸಿರಬಹುದು! ಅದರಲ್ಲಿ ನಾನು ಒಂದು ಪೊಲೀಸ್ ಪಾತ್ರವನ್ನು ಮಾಡಿದ್ದೆ. ಆದರೆ ನಟಿ ಪದ್ಮಜಾ ರಾವ್ ಇದ್ದಾರಲ್ಲ? ಅವರ ಒತ್ತಾಯಕ್ಕಾಗಿ ಮಾಡಿದಂಥ ಪಾತ್ರ. ಅವರು ನಮ್ಮ ಕಚೇರಿಗೆ ಮೂರು ನಾಲ್ಕು ಬಾರಿ ಬಂದಿದ್ದರು. ಫೋನ್ ಕೂಡ ಮಾಡಿದ್ದರು. ನಾನು ಅವರಿಗೆ ಹೇಳಿದ್ದೆ, ನನಗೆ ತುಂಬ ದಿನ ಶೆಡ್ಯೂಲ್ ಹಾಕಬೇಡಿ. ಒಂದು ದಿನ ಮಾತ್ರ ಪಾಲ್ಗೊಳ್ಳಬಹುದು ಎಂದಿದ್ದೆ. ಆದರೆ ಶೂಟಿಂಗ್ ಗೆ ನೀಡಿದ್ದ ದಿನದಂದೇ ಸಿದ್ಧಗಂಗಾ ಶ್ರೀಗಳು ನಿಧನರಾದರು. ಇನ್ನು ಅಲ್ಲೇ ಇರಲು ಸಾಧ್ಯವಾಗುತ್ತಿಲ್ಲ ಎಂದು ನಾನು ಅರ್ಧಕ್ಕೇ ಎದ್ದು ಹೊರಟಿದ್ದೆ. ನನ್ನಿಂದಾಗಿ ಇಡೀ ಶೂಟಿಂಗ್ ನಿಲ್ಲುವಂತಾಗಿತ್ತು. ಅದಲ್ಲದೆ 'ಗ್ರಂಥ’ ಎನ್ನುವ ಚಿತ್ರದಲ್ಲಿಯೂ ಮಾಡಿದ್ದೆ. ಅದು ಏನಾಯಿತು ಗೊತ್ತಿಲ್ಲ. ಸಿನಿಮಾಗಳಿಗಿಂತ ನನಗೆ ಗಜಲ್, ಸಂಗೀತ ಅಂದರೆ ಇಷ್ಟ.

ಕೊರೊನಾ ಕುರಿತಾದ ಸುದ್ದಿಗಳನ್ನು ಪ್ರಕಟಿಸುವಾಗ ವಾಹಿನಿಯಲ್ಲಿ ಮೊಳಗುವ ಭೀಕರವಾದ ಹಿನ್ನೆಲೆ ಸಂಗೀತದ ಅಗತ್ಯವೇನು?

ಸಮಾಜದಲ್ಲಿ ಕೊರೋನದ ಬಗ್ಗೆ ಸುದ್ದಿ ಹರಡುವ ಮೊದಲೇ ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು. ಟಿಆರ್‌ಪಿಗೆ ಮಾಡುತ್ತಿದ್ದಿರಿ ಎಂದರು. ಮೆಡಿಕಲ್ ಸ್ಟುಡೆಂಟ್ ಒಬ್ಬ ಭಯಪಡಬೇಕಿಲ್ಲ ಎಂದು ವಿಡಿಯೋ ಮಾಡಿದ. ಹೋಗಲಿ, ಸಾರ್ವಜನಿಕರಾದರೂ ಗಂಭೀರವಾಗಿದ್ದಾರ? ಹಾಗಾಗಿ ವಾರ್ತಾಮಾಧ್ಯಮಗಳಾದರೂ ಅವರಿಗೆ ಗಂಭೀರತೆಯ ಅರಿವು ಮೂಡಿಸಬೇಕಿತ್ತು. ಅಂಥ ಅಂಕಿ ಸಂಖ್ಯೆಗಳನ್ನು ಹೇಳುವಾಗ ಹಿನ್ನೆಲೆಯಲ್ಲಿ ವಯಲಿನ್, ಕೊಳಲು, ಸಿತಾರ್ ಅಥವಾ ತಬಲಾ ಸಂಗೀತ ಹಾಕಲಾಗದು ಅಲ್ಲವೇ? ಇದರ ನಡುವೆ ನ್ಯೂಸ್‌ ನೋಡಿ ಮಾನಸಿಕ ರೋಗ ಆರಂಭವಾಯಿತು ಅಂತೀರಿ. ಯಾರಾದರೂ ನಂಬುತ್ತಾರ? ಕೊರೋನದ ಅಪಾಯದ ಬಗ್ಗೆ ನಾವು ಹೇಳುವುದೇ ಭಯ ಪಡಿಸುವುದು ಅಂತಾದರೆ, ಗುಣವಾದವರನ್ನು ಸಂದರ್ಶಿಸಿ ಪ್ರಸಾರ ಮಾಡುತ್ತೇವಲ್ಲ? ಅದರ ಬಗ್ಗೆ ಯಾಕೆ ಹೇಳುವುದಿಲ್ಲ?

ಸುವರ್ಣ ವಾಹಿನಿಯು ಕೊರೊನಾವನ್ನು ತಬ್ಲಿಘಿಗಳು ಮತ್ತು ಒಂದು ಮುಸ್ಲಿಂ ಸಮುದಾಯದ ಜತೆಗೆ ಹೈಲೈಟ್ ಮಾಡುತ್ತಿದೆಯಲ್ಲ?

ಖಂಡಿತವಾಗಿಯೂ ಇಲ್ಲ. ಮುಸಲ್ಮಾನರು ಪಾತ್ರೆ ನೆಕ್ಕುವ, ಮಾರಾಟಕ್ಕಿರಿಸಿದ ಹಣ್ಣುಗಳಿಗೆ ಎಂಜಲು ಹಚ್ಚುವ ಆ ವಿಡಿಯೋಗಳಿಗೂ ಕೊರೊನಾಗೂ ಯಾವುದೇ ಸಂಬಂಧ ಇಲ್ಲ ಎಂದು ಸುದ್ದಿ ಪ್ರಕಟಿಸಿದ್ದೇ ನಾವು. ಮಾತ್ರವಲ್ಲ, ಜನತೆಯಲ್ಲಿ ಅಂಥ ಸಂದೇಹ ಮೂಡಿಸುವ ವಿಡಿಯೋಗಳು ಸಿಕ್ಕರೆ ನಮಗೆ ಕಳಿಸಿ; ನಾವೇ ಅದರ ಸತ್ಯಾಸತ್ಯತೆ ಬಿಚ್ಚಿಡುವುದಾಗಿ ರಿಕ್ವೆಸ್ಟ್ ಮಾಡಿಕೊಂಡಿದ್ದೆವು. ಒಬ್ಬ ನೋಟುಗಳಿಗೆ ಎಂಜಲು ಹಚ್ಚುವ ವಿಡಿಯೋ ಬಂದಾಗಲೂ ಅದರ ಮಾಹಿತಿ ತಿಳಿಯುವ ತನಕ ಅದನ್ನು ಪ್ರಸಾರ ಮಾಡುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದ್ದೆವು. ಸಾರಾಸಗಟಾಗಿ ಯಾವುದೇ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು ಎನ್ನುವ ನಿಲುವು ನಮ್ಮಲ್ಲಿ ಆರಂಭದಿಂದಲೂ ಇದೆ.

ಆದರೆ ಒಂದು ವಾಟ್ಸ್ಯಾಪ್‌ ಗ್ರೂಪ್‌ನ ಶಿಕ್ಷಕಿಯರೇ ಸುವರ್ಣ ನ್ಯೂಸ್‌ ನೋಡಿ ಮುಸ್ಲಿಮರನ್ನು ದೂರವಿರಿಸಿ ಎನ್ನುವಂಥ ತೀರ್ಮಾನ ತೆಗೆದುಕೊಳ್ಳುತ್ತಿರುವುದಕ್ಕೆ ವಾಹಿನಿ ಕಾರಣವಲ್ಲವೇ?

ಅವರು ಏನು ನೋಡಿ ಹಾಗೆ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಮ್ಮ ವಾಹಿನಿಯಲ್ಲಿ ಮುಸಲ್ಮಾನರನ್ನು ದೂರವಿಡಿ ಎನ್ನುವಂಥ ಕಾರ್ಯಕ್ರಮ ಪ್ರಸಾರವಾಗಿಲ್ಲ. `ಭಾರತ ವರ್ಸಸ್‌ ಅವರು’ ಎನ್ನುವಂಥ ಕಾರ್ಯಕ್ರಮ ಮಾಡಿದೆವು. ಅದರಲ್ಲಿ ನಾವು ಉದ್ದೇಶಿಸುವ ಅವರು ಎಂದರೆ ಕೊರೊನ ವಿರುದ್ಧದ ಹೋರಾಟದಲ್ಲಿ ಭಾರತ ಸೋಲಬೇಕು ಎಂದುಕೊಂಡವರು. ಅದು ತಬ್ಲಿಘಿಗಳಾಗಿರಬಹುದು, ಪಾದರಾಯನ ಪುರದಲ್ಲಿ ಗಲಾಟೆ ಮಾಡಿದವರಿರಬಹುದು ಅಥವಾ ಚಿತ್ತಾಪುರದಲ್ಲಿ ಜಾತ್ರೆ ಮಾಡಿದವರು ಕೂಡ ಅವರೇ, ಇದನ್ನು ಆ ಕಾರ್ಯಕ್ರಮದ ಆರಂಭದಲ್ಲೇ ನಾನು ಸ್ಪಷ್ಟಪಡಿಸಿದ್ದೇನೆ. ಯಾರೋ ಹೇಳುತ್ತಿದ್ದರು, ಕೊರೋನ ಪಾಸಿಟಿವ್ 700 ಇದ್ದಾಗ ಏಳುನೂರರ ಪೈಕಿ ನೂರು ಜನ ಮುಸಲ್ಮಾನರು ಎಂದು ನಾನು ಹೇಳಿದ್ದೇನಂತೆ! ಅಂಥ ಮಾತು ನಾನು ಆಡಿಲ್ಲ. ನಾನು ಆಡಿರದ ಮಾತುಗಳನ್ನು ತಿರುಚಿ ಪ್ರಚಾರ ಮಾಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ನಮ್ಮ ವಾಹಿನಿಯ ಡಿಬೇಟ್‌ಗಳೆಲ್ಲ ಈಗಲೂ ಯೂಟ್ಯೂಬ್‌ನಲ್ಲಿ ಲಭ್ಯ ಇವೆ. ಅವುಗಳನ್ನು ತೋರಿಸಿ ನಮ್ಮಲ್ಲಿ ಏನು ನೆಗೆಟಿವ್ ಆಗಿದೆ ಎಂದು ಯಾರು ಬೇಕಾದರೂ ಕೇಳಲಿ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ.

ಅಷ್ಟೇ ಅಲ್ಲ, ಜನತೆ ಟಿವಿ ನೋಡಿದ ಕಾರಣ ಒಂದು ಸಮುದಾಯಕ್ಕೇನೇ ಊರಿನಿಂದ ಬಹಿಷ್ಕಾರ ಹಾಕುವಂಥ ಕೆಲಸಗಳು ನಡೆಯುತ್ತಿವೆಯಲ್ಲ?

ನಾನು ಮೊನ್ನೆಯ ಡಿಬೇಟಲ್ಲಿಯೂ ಒಂದು ಮಾತು ಹೇಳಿದೆ. ಇದು ತುಂಬ ಸೆನ್ಸಿಟಿವ್ ಸಂಗತಿ . ಮುಸಲ್ಮಾನರು ನಮ್ಮ ಏರಿಯಾಕ್ಕೆ ಬರಬಾರದು ಎಂದು ಹೇಳುವುದು ಅಮಾನವೀಯ. ಆದರೆ ಅಂಥದೊಂದು ಸಂದರ್ಭ ಯಾಕೆ ಬಂತು ಎನ್ನುವುದನ್ನು ಗಮನಿಸಬೇಕು. ತಪ್ಪು ಮಾಡಿದವರ ಬಗ್ಗೆ ತಪ್ಪು ಮಾಡಿದ್ದಾರೆ ಎಂದು ತೋರಿಸುವ ಅವಕಾಶ ಕೂಡ ಮಾಧ್ಯಮಗಳಿಗೆ ಇಲ್ಲವೇ? ನನಗೆ ಈ ಜಾತ್ಯಾತೀತೆಯ ಡೆಫಿನಿಶನ್ ಬಗ್ಗೆ ಅಸಮಾಧಾನ ಇದೆ. ಜಾತ್ಯಾತೀತತೆ ಎಂದರೆ ಓಲೈಕೆ ಮಾಡುವುದಲ್ಲ. ದೇವನೊಬ್ಬ ನಾಮ ಹಲವು ಎನ್ನುವುದಕ್ಕಿಂತ ದೊಡ್ಡ ಜಾತ್ಯಾತೀತತೆ ಇಲ್ಲ. ರಾವಣ ಬ್ರಾಹ್ಮಣ ಆದರೂ ಮಾಡಿದ್ದು ತಪ್ಪು. ರಾಮ ಕ್ಷತ್ರಿಯನಾದರೂ ಮಾಡಿದ್ದು ಸರಿ. ದ್ರೋಣಾಚಾರ್ಯ ಬ್ರಾಹ್ಮಣನಾದರೂ ಗೊಲ್ಲನ ಕೈಯ್ಯಲ್ಲಿ ಸತ್ತಿದ್ದೇ ಸರಿ. ಹೀಗೆ ಜಾತಿ ಮೀರಿದ ಸರಿ ತಪ್ಪು ಅರಿತವರು ನಾವು. ಚಿತ್ತಾಪುರದಲ್ಲಿ ಜಾತ್ರೆ ನಡೆದಾಗ ಜಾತ್ರೆ ಯಾವ ಸ್ಟೇಷನಲ್ಲಿ ನಡೆಯಿತೋ ಆ ಪೊಲೀಸ್ ಸ್ಟೇಷನ್ ಲಿಮಿಟ್ ನ ಸಬ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಆಗಬೇಕು, ಆ ದೇವಸ್ಥಾನದ ಟ್ರಸ್ಟ್‌ ಮೇಲೆ ಕೇಸ್‌ ಹಾಕಿ ಅರೆಸ್ಟ್‌ ಮಾಡಬೇಕು ಎಂದು ಕ್ಯಾಂಪೇನ್ ಶುರುಮಾಡಿದ್ದೇ ಸುವರ್ಣ ನ್ಯೂಸ್. ಇನ್ಸ್ಪೆಕ್ಟರ್‌ ಸಸ್ಪೆಂಡ್ ಆದಾಗ ಮತ್ತು 13 ಜನ ಟ್ರಸ್ಟಿಗಳ ಮೇಲೆ ಕೇಸ್ ಆಗಿ ಅವರು ಅರೆಸ್ಟ್ ಆದಾಗ `ಸುವರ್ಣ ನ್ಯೂಸ್‌ ಇಂಪ್ಯಾಕ್ಟ್’ ಅಂತ ಕಾರ್ಯಕ್ರಮ ಮಾಡಿದ್ದೇವೆ. ಎರಡಕ್ಕು ನಾನೇ ಆಂಕರ್.

ಆದರೆ ಚಕ್ರವರ್ತಿ ಸೂಲಿಬೆಲೆಯಂಥವರನ್ನು ನೀವು ಈ ವಿಚಾರದಲ್ಲಿ ಅಭಿಪ್ರಾಯ ಕೇಳುವ ಪ್ರಸಕ್ತಿ ಏನು?

ಅವರನ್ನು ಮಾತ್ರ ಯಾಕೆ ನೆನಪಿಸಿಕೊಳ್ಳುತ್ತೀರಿ? ನಾವು ಇಬ್ರಾಹಿಂ ಸುತಾರ ಅಂಥವರನ್ನೇ ಕರೆಸಿದ್ದೇವೆ. ಅವರ ಮೂಲಕ ನಮ್ಮ ವಾಹಿನಿ ಭಾವೈಕ್ಯದ ಸಂದೇಶ ನೀಡಿದೆ. ಚಿಕಿತ್ಸೆ ಪಡೆದು ಗುಣಮುಖಗೊಂಡ ಕೊರೊನಾ ರೋಗಿ, ಭಾವೋದ್ರೇಕದಿಂದ ಕಣ್ಣೀರಿಟ್ಟು ಎಚ್ಚರ ವಹಿಸುವಂತೆ ವಿನಂತಿಸುವ ವಿಡಿಯೋ ಪ್ರಸಾರ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸಲೀಂ ಅಹಮದ್, ಬಿಜೆಪಿಯಿಂದ ರಹೀಂ ಉಚ್ಚಿಲ, ಜೆಡಿಎಸ್‌ ನಿಂದ ತನ್ವೀರ್ ಅಹಮದ್ ಹೀಗೆ ಮೂರು ಜನರಿಗೆ ವೇದಿಕೆ ನೀಡಿ ಅವರನ್ನು ಕೊರೊನ ವಾರಿಯರ್ಸ್ ಎಂದು ತೋರಿಸಿದ್ದೇವೆ. ಅವರಿಂದಲೂ ಸಂದೇಶ ಕೊಡಿಸಿದ್ದೇವೆ. ಹೆಚ್ಚೇಕೆ ತಬ್ಲಿಘಿ ರಜಾಕ್ ಖಾನ್‌ ಗೂ ಮಾತನಾಡುವ ಅವಕಾಶ ಕೊಟ್ಟಿದ್ದೇವೆ. ರಹೀಂ ಉಚ್ಚಿಲ ಅವರು ಮಾತನಾಡುತ್ತಾ ತಬ್ಲಿಘಿಯಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆಯದೇ ಅಡಗಿರುವ ಎರಡು ಪರ್ಸೆಂಟ್ ಜನ ಬಂದು ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದಿದ್ದಾರೆ ಅದು ಸಂದೇಶ ಅಲ್ವಾ? ಒಂದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ಪಾಲ್ಗೊಳ್ಳಿಸುವ ಮೂಲಕ ಇದು ಭಾರತದ ಏಕತೆಯ ಹೋರಾಟ ಎನ್ನುವ ಸಂದೇಶ ಬೀರಿದ್ದೇವೆ ಹೊರತು ಬೇರೇನಲ್ಲ.

ಬಿಜೆಪಿಯಲ್ಲಿರುವ ಮುಸಲ್ಮಾನರನ್ನು ಬಿಟ್ಟು ವೈಯಕ್ತಿಕವಾಗಿ ಮುಸಲ್ಮಾನರ ಜತೆಗೆ ನಿಮ್ಮ ಸ್ನೇಹ ಸಂಬಂಧ ಹೇಗಿದೆ?

ಯಾಕ್ರೀ.. (ನಗು). ತುಂಬ ಜನ ಇದ್ದಾರೆ. ಬಿಜೆಪಿಯವರಲ್ಲದೆ ತುಂಬ ಎಜುಕೇಟೆಡ್ ಜನ ಇದ್ದಾರೆ. ರಫೀಕ್ ಅಂತ ನನ್ನ ತುಂಬ ಒಳ್ಳೆಯ ಫ್ರೆಂಡ್‌ ಇದ್ದಾನೆ. ಇಲ್ಲಿ ಹೇಳಬೇಕೋ ಬೇಡವೋ ಗೊತ್ತಿಲ್ಲ. ನನ್ನ ಪತ್ನಿ ಗರ್ಭಿಣಿಯಾಗಿದ್ದ ದಿನಗಳಲ್ಲಿ ರಸೆಲ್ ಮಾರ್ಕೆಟ್‌ನಿಂದ ಡೈಲಿ ಡ್ರೈಫ್ರುಟ್ಸ್ ಕೊಡುತ್ತಿದ್ದ. ಈಗ ಕೊರೊನಾ ಸಂದರ್ಭದಲ್ಲಿ ಆತನಿಗೆ ಪೋನ್ ಮಾಡಿ ಅಲ್ಲಿ ಏನಾದರೂ ಪ್ರಾಬ್ಲಮ್ ಇದೆಯಾ ಎಂದು ನಾನೇ ಕೇಳಿದ್ದೆ. “ನಾನು ಚೆನ್ನಾಗಿದ್ದೀನಿ. ನಾನೇ ನಾಗರಬಾವಿ ಹತ್ತಿರದ 30 ಜನರಿರುವ ವೃದ್ಧಾಶ್ರಮಕ್ಕೆ ಹೋಗಿ ರೇಶನ್ ಕೊಡುತ್ತೇನೆ. ಅಲ್ಲಿಗೆ ನಿಮ್ಮಿಂದ ಸಹಾಯ ಮಾಡೋಕಾದ್ರೆ ಮಾಡಿ” ಅಂತಾನೆ. ಈ ಲೆವೆಲ್ ಸ್ನೇಹಿತರಿದ್ದಾರೆ. ಅಲ್ಲದೆ ತುಂಬ ಜನ ಮೆಸೇಜ್ ಮಾಡುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ನಾನು ‘ಹಿಂದೂ ಮುಸಲ್ಮಾನರು’ ಎಂದು ಗುರುತಿಸುವುದನ್ನೇ ವಿರೋಧಿಸುತ್ತೇನೆ. ಮೊದಲು ಎಲ್ಲರೂ ಮನುಷ್ಯರೇ. ನಿಮಗೇನು ಅನಿಸುತ್ತೆ, ಪಾದರಾಯನ ಪುರದ ಘಟನೆ, ತಬ್ಲಿಘಿಗಳ ವರ್ತನೆಯಿಂದ ಮುಸ್ಲಿಮರಿಗೆಲ್ಲ ಬೇಸರ ಆಗಿಲ್ಲ ಅಂತಾನ? ಅವರೆಲ್ಲರಿಗು ಹೆಸರು ಕೆಡಿಸುವ ವರ್ತನೆ ಮಾಡಿದ ಮುಸಲ್ಮಾನರ ಬಗ್ಗೆ ವಿರೋಧ ಇದೆ. ಬಹಿರಂಗವಾಗಿ ಹೇಳಿಕೊಂಡಿಲ್ಲ ಅಷ್ಟೇ. ನನ್ನ ಕಾರ್ಯಕ್ರಮಗಳನ್ನು ಮೆಚ್ಚಿ ಮೆಸೇಜ್ ಮಾಡುವರಿದ್ದಾರೆ. ತುಂಬ ಜನರಿಗೆ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಾಗುತ್ತಿಲ್ಲ. ಅದಕ್ಕೆ ಕಾರಣ ಹೊರಗಡೆ ಬರುವುದಕ್ಕೆ ಅವರಿಗೆ ಒಂದಷ್ಟು ಅಡೆತಡೆಗಳಿವೆ. ಆ ಅಡೆತಡೆಗಳನ್ನು ಕೆಲವು ಕಮ್ಯುನಿಟಿಗಳು ಸುಲಭವಾಗಿ ದಾಟುತ್ತವೆ. ಇನ್ನು ಕೆಲವಕ್ಕೆ ಮೀರಲು ಕಷ್ಟವಾಗುತ್ತವೆ. ಇದು ಅವರೆಲ್ಲರಿಗೆ ಆತ್ಮಾವಲೋಕನ ಮಾಡುವಂಥ ಸಂದರ್ಭ.

ನಿಮ್ಮ ಪ್ರಕಾರ ಲಾಕ್ಡೌನ್ ಮುಗಿದ ಬಳಿಕ ಚಿತ್ರರಂಗದ ಪರಿಸ್ಥಿತಿ ಹೇಗಿರಬಹುದು?

ಸಿನಿಮಾ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರಕ್ಕೂ, ಮನುಷ್ಯನಿಗೂ ಕೂಡ ಕಷ್ಟ ಎದುರಿಸಬೇಕಾಗಿ ಬರುತ್ತದೆ. ತುಂಬ ಕಡೆ ನಾನು ಹೇಳಿಕೊಂಡಂತೆ ಇನ್ನು ಮುಂದೆ ಇತಿಹಾಸ ಬರೆಯುವುದಾದರೆ ‘ಕೊರೊನಾಗಿಂತ ಮುಂಚೆ' ಮತ್ತು 'ಕೊರೊನಾದ ನಂತರ’ ಎಂದು ಉಲ್ಲೇಖಿಸಲ್ಪಡುತ್ತದೆ. ಡೆಫಿನಿಶನ್ ಆಫ್ ಸಿನಿಮಾ ವಿಲ್ ಚೇಂಜ್. ಟೂರಿಸಂ ಮತ್ತೆ ಮೇಲೇಳಲು ಮೂರರಿಂದ ಕನಿಷ್ಠ ನಾಲ್ಕು ವರ್ಷಗಳೇ ಬೇಕೇನೋ. ಟೋಟಲಿ ಎಂಟರ್ಟೇನ್ಮೆಂಟ್ ಇಂಡಸ್ಟ್ರಿ ದೊಡ್ಡ ಮಟ್ಟದಲ್ಲಿ ಹೊಡೆತ ತಿನ್ನುವಂತಿದೆ. ಜನ ಹಳ್ಳಿಕಡೆಗೆ ಮುಖ ಮಾಡಲು ಶುರು ಮಾಡುತ್ತಾರೆ. ಕೃಷಿಗೆ ಬೆಲೆ ಬರುತ್ತದೆ. ‘ವರ್ಕ್ ಫ್ರಮ್ ಹೋಮ್' ಟ್ರೆಂಡಾಗುತ್ತದೆ. ಕಾಮಿಡಿ ಶೋಗಳನ್ನೇ ಮೊಬೈಲ್ ಆಪ್ ಗಳಲ್ಲೇ ಜೂಮ್ ನಲ್ಲಿ ಮಾಡುತ್ತಿದ್ದಾರೆ. ಯಶವಂತ ಸರದೇಶಪಾಂಡೆ 'ರಾಶಿಚಕ್ರ’ ನಾಟಕವನ್ನು ಆನ್ಲೈನಲ್ಲಿ ಮಾಡಿದ್ದರು. ಅದು ಅಮೆರಿಕಾದಲ್ಲಿರುವ ಒಂದಷ್ಟು ಕುಟುಂಬಗಳಿಗೆಂದೇ ಮಾಡಿದಂಥ ವಿಶೇಷ ಕಾರ್ಯಕ್ರಮವಾಗಿತ್ತು. ನೆಟ್‌ಫ್ಲಿಕ್ಸ್‌ , ಅಮೆಜಾನ್‌ಗಳಿಗೆ ಎಕ್ಸ್‌ಕ್ಲೂಸಿವ್‌ ಆಗಿ ಸಿನಿಮಾಗಳನ್ನು ರೆಡಿ ಮಾಡಲಾಗುತ್ತಿದೆ. ಸದ್ಯಕ್ಕಂತೂ ಥಿಯೇಟರ್ ಕಲ್ಚರ್ ಹೊಡೆತ ತಿನ್ನುತ್ತದೆ. ಆದರೆ ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಂದ ಸುಧಾರಿಸಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ.

Recommended For You

Leave a Reply

error: Content is protected !!