ಇಂದು ದೇಶದ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ಇಹಲೋಕ ತ್ಯಜಿಸಿದ ದಿನ. ದೇಶದಾದ್ಯಂತ ಅವರ ಪುಣ್ಯಸ್ಮರಣೆ ಜನಮನದೊಳಗೆ ನಡೆದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ, ಯುವ ಚಿತ್ರ ನಿರ್ದೇಶಕ ಕವಿರಾಜ್ ಅವರು ರಾಜೀವ್ ಗಾಂಧಿಯವರ ಕುರಿತಾದ ತಮ್ಮ ನೆನಪನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಕನ್ನಡದ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ನಾನಿನ್ನು ಆಗ ಪ್ರೈಮರಿ ಶಾಲೆಯಲ್ಲಿದ್ದೆ. ಅದೊಂದು ಬೆಳಿಗ್ಗೆ ಎಚ್ಚರವಾದರು ಹಾಸಿಗೆಯಲ್ಲೇ ಇದ್ದೆ. ರೇಡಿಯೋದಲ್ಲಿ ಬೆಳಗಿನ ವಾರ್ತೆ ಶುರುವಾಯಿತು. ಅದರ ಮೊದಲ ವಾಕ್ಯ ಬದುಕಿನಲ್ಲಿ ಮೊದಲ ಬಾರಿಗೆ ಶಾಕ್ ಆಗುವುದು ಎಂದರೇನು ಎಂಬುದನ್ನು ನಾನು ಅನುಭವಿಸುವಂತೆ ಮಾಡಿತ್ತು. ಒಂದು ಕ್ಷಣ ನಾನು ಕೇಳಿದ್ದು ನಿಜವೋ ? ಕನಸೋ ಎಂಬ ಗೊಂದಲ.
ಆ ಕ್ಷಣ ಮೇಲೆಳಬೇಕೆಂದರೆ ಕೈಕಾಲು ಆಡುತ್ತಿಲ್ಲ, ಕೂಗಿ ಅಪ್ಪನನ್ನು ಕರೆದು ವಿಷಯ ಹೇಳಲು ಹೋದರೆ ಧ್ವನಿ ಹೊರಬರುತ್ತಿಲ್ಲ. ಅಂದು ನನ್ನನ್ನು ಈ ಸ್ಥಿತಿಗೆ ದೂಡಿದ ವಾಕ್ಯವೇ “ನಿನ್ನೆ ರಾತ್ರಿ ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ನಡೆದ ಆತ್ಯಹತ್ಯಾ ಬಾಂಬ್ ಸ್ಫೋಟದಲ್ಲಿ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹತರಾದರೆಂದು ತಿಳಿಸಲು ವಿಷಾದಿಸುತ್ತೇವೆ” .
ಈ ವಾಕ್ಯ ಇವತ್ತು ಹಲವು ಬಾರಿ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ.
ರಾಜೀವ್ ಗಾಂಧಿ ನಮ್ಮ ದೇಶದ ಪ್ರಧಾನಿ ಆಗಿದ್ದವರು, ಇಂದಿರಾಗಾಂಧಿ ಅವರ ಮಗ, ಅತ್ಯಂತ ಸ್ಫುರದ್ರೂಪಿ ಎಂಬ ಅಭಿಮಾನಗಳು ಬಿಟ್ಟರೆ ಆ ವೇಳೆಗೆ ಅವರ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ಕಾಲಕ್ರಮೇಣ ತಾಯಿಯ ಹತ್ಯೆಯ ನಂತರ ವಿಮಾನದ ಪೈಲಟ್ ಕೆಲಸ ಬಿಟ್ಟು ರಾಜಕೀಯ ಪ್ರವೇಶಿಸಿ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದವರು. ಸ್ಯಾಮ್ ಪಿತ್ರೋಡಾ ಅವರ ನೇತೃತ್ವದಲ್ಲಿ ದೇಶದ ಪ್ರತಿಯೊಂದು ಹಳ್ಳಿಗೂ ದೂರವಾಣಿ ಸಂಪರ್ಕ ಕಲ್ಪಿಸುವ ಕ್ರಾಂತಿ ಶುರುವಾಗಿದ್ದು ಈವರ ಕಾಲದಲ್ಲೇ. ಇವರ ಇನ್ನೊಂದು ಮುಖ್ಯ ಸಾಧನೆ ಎಂದರೆ ಭಾರತದಲ್ಲಿ ಸಾಫ್ಟ್ ವೇರ್ ಕ್ರಾಂತಿಗೆ ಅಡಿಪಾಯ ಹಾಕಿದ್ದು.
ಅಲ್ಲಿಯವರೆಗು ಸಾಫ್ಟವೇರ್ ಕ್ಷೇತ್ರ ಒಂದು ಉದ್ಯಮ ಎಂದೇ ಪರಿಗಣಿಸಲಾಗಿರಲಿಲ್ಲ. ಹಾಗಾಗಿ ಸಾಫ್ಟ್ ವೇರ್ ಉದ್ಯಮ ಸ್ಥಾಪನೆಗೆ ಬ್ಯಾಂಕ್ ಲೋನ್ ಕೂಡಾ ಸಿಗುತ್ತಿರಲಿಲ್ಲ. ಸಾಫ್ಟವೇರ್ ಉದ್ಯಮ ಜಗತ್ತಿನ ಭವಿಷ್ಯ ಎಂಬ ದೂರದೃಷ್ಟಿಯಿಂದ ಅದಕ್ಕೆ ಉದ್ಯಮದ ಸ್ವರೂಪ ನೀಡಿ ಕಾನೂನು ತಿದ್ದುಪಡಿ ತಂದು ಉದ್ಯಮ ಸ್ಥಾಪಿಸುವವರಿಗೆ ಧನಸಹಾಯ ಹರಿದು ಬರುವಂತೆ ಮಾಡಿ ಇಂದು ನಾವೆಲ್ಲಾ ಫಲ ಉಣ್ಣುತ್ತಿರುವ ಸಾಫ್ಟ್ ವೇರ್ ತಂತ್ರಜ್ಞಾನ ಕ್ರಾಂತಿಯ ಹರಿಕಾರರಾಗಿ ಆಧುನಿಕ ಭಾರತದ ಶಿಲ್ಪಿ ಎನಿಸಿಕೊಂಡರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ‘ಬ್ಲಾಕ್ ಬೋರ್ಡ್’ ಯೋಜನೆ ಹಾಗೂ ದೂರ ಶಿಕ್ಷಣಕ್ಕಾಗಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ಸ್ಥಾಪಿಸಿದ ಕೀರ್ತಿ ಇವರದು. ಆ ತನಕ ಕೇವಲ ಸೋವಿಯತ್ ರಷ್ಯಾದೊಂದಿಗೆ ಗುರುತಿಸಿಕೊಂಡಿದ್ದ ಭಾರತವನ್ನು ಇಂದು ಚಾಲ್ತಿಯಲ್ಲಿರುವ ಅಮೇರಿಕಾದ ಜೊತೆ ಸಂಬಂಧ ಸುಧಾರಣೆಗೆ ಒತ್ತು ಕೊಟ್ಟ ವಿದೇಶಾಂಗ ನೀತಿಯ ಬದಲಾವಣೆ ಇವರ ಕಾಲದಲ್ಲಾಯಿತು.
ಇವರ ಅಧಿಕಾರ ಅವಧಿಯ ಬೋಫೋರ್ಸ್ ಹಗರಣ ಆ ಕಾಲಕ್ಕೆ ದೇಶದ ಅತ್ಯಂತ ದೊಡ್ಡ ಹಗರಣವೆಂದು ಅಲ್ಲೋಲ ಕಲ್ಲೋಲ ಎಬ್ಬಿಸಿದರು ಮರಣಾನಂತರ 2004 ರಲ್ಲಿ ಸರ್ವೋಚ್ಚ ನ್ಯಾಯಾಲಯ ಇವರ ಮೇಲಿನ ಆರೋಪಗಳೆಲ್ಲ ನಿರಾಧಾರ ಎಂದು ನ್ಯಾಯಾಲಯ ತೀರ್ಪು ನೀಡಿತು. ತಮ್ಮ ಆಡಳಿತಾವಧಿಯಲ್ಲಿ ಪಕ್ಕದ ಪುಟ್ಟ ರಾಷ್ಟ್ರ ಶ್ರೀಲಂಕಾದಲ್ಲಿ ಎಲ್ಟಿಟಿಇ ಉಗ್ರರನ್ನು ನಿಗ್ರಹಿಸಲು ಭಾರತದ ಶಾಂತಿ ಪಾಲನಾ ಪಡೆ ಕಳುಹಿಸಿದ ನಿರ್ಧಾರವೇ ಅವರ ಜೀವಕ್ಕೆ ಮುಳುವಾಯಿತು.
ರಾಜೀವ್ ಗಾಂಧಿ ತಾಯಿ ಇಂದಿರಾಗಾಂಧಿ ಅವರಷ್ಟು ಅಗ್ರೆಸಿವ್ ಅಲ್ಲದಿದ್ದರೂ ನಿಜಕ್ಕೂ ಸಮಚಿತ್ತದ ಸಮರ್ಥ ಪ್ರಧಾನಿಯಾಗಿದ್ದರು. ಅಕಾಲಿಕ ಮರಣ ಹೊಂದದೆ ಹೋದರೆ ಇಂದಿಗೂ ರಾಜಕೀಯದ ಮುಖ್ಯ ಭೂಮಿಕೆಯಲ್ಲಿ ಇರುತ್ತಿದ್ದರು. ಈಗಲೂ ಚೆನ್ನೈ ಇಂದ ಮರಳುವಾಗೆಲ್ಲಾ ಶ್ರೀ ಪೆರಂಬುದೂರಿನ ಅವರ ಸ್ಮಾರಕದೆದುರು ಎದೆಯ ಮೇಲೆ ಕೈ ಇಟ್ಟು ಕಣ್ಮುಚ್ಚಿ ಒಂದು ಕ್ಷಣ ಅವರನ್ನು ನೆನೆದಾಗ ಮನಸು ಭಾರವಾಗುತ್ತದೆ.