ಕನ್ನಡ ಧಾರಾವಾಹಿ ಲೋಕದಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ `ಜೊತೆ ಜೊತೆಯಲಿ.’ ಕತೆ, ನಿರ್ದೇಶನ, ನಾಯಕನಾಗಿ ನಟಿಸಿರುವ ಅನಿರುದ್ಧ ಜಟ್ಕರ್ ಅವರ ಚಾರ್ಮಿಂಗ್ ಎಲ್ಲವೂ ಸೇರಿ ತಂಡಕ್ಕೆ ಅಂಥದೊಂದು ಯಶಸ್ಸು ದೊರಕಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡ ಬಳಿಕ ತಮ್ಮ ಎರಡನೇ ಇನ್ನಿಂಗ್ಸ್ ಎನ್ನುವಂತೆ ಅನಿರುದ್ಧ್ ಕಿರುತೆರೆಯನ್ನು ಆಯ್ಕೆ ಮಾಡಿಕೊಂಡಾಗ ಅಭಿಮಾನಿಗಳಿಗೆ ಆತಂಕವಾಗಿತ್ತು. ಆದರೆ ಇಂದು ಅವರ ಆಯ್ಕೆ ನೂರು ಶತಮಾನ ಸರಿಯಾಗಿದೆ ಎನ್ನುವಂಥ ಗೆಲುವು ಧಾರಾವಾಹಿಗೆ ಲಭಿಸಿದೆ. ಲಾಕ್ಡೌನ್ ದಿನಗಳಲ್ಲಿ ಕೂಡ ಜೊತೆ ಜೊತೆಯಲಿ ಧಾರಾವಾಹಿಯನ್ನು ನೆನಪಿಸುತ್ತಿದ್ದ ಮಂದಿಗೆ ಇಂದಿನಿಂದ ಮತ್ತೆ ಆ ಸಂಭ್ರಮ ಮರಳಲಿದೆ. ಇಂದು ಜೂನ್ 1ರಿಂದ ರಾತ್ರಿ 8.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಹೊಸ ಸಂಚಿಕೆಯ ಚಿತ್ರೀಕರಣದ ಅನುಭವಗಳ ಬಗ್ಗೆ ನಾಯಕ ಅನಿರುದ್ಧ ಜಟ್ಕರ್ ಅವರು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಂಥ ಮಾತುಗಳು ಇವು.
`ಜೊತೆ ಜೊತೆಯಲಿ’ ಚಿತ್ರೀಕರಣ ಮತ್ತೆ ಶುರುವಾದಾಗ ನಿಮಗೆ ಅನಿಸಿದ್ದೇನು?
ನಿಜ ಹೇಳಬೇಕೆಂದರೆ ನನಗೆ ಎಷ್ಟು ಖುಷಿಯಾಯಿತೋ ಅಷ್ಟೇ ಆತಂಕ ಕೂಡ ಆಗಿತ್ತು. ಖುಷಿಗೆ ಕಾರಣ ಹೇಳಬೇಕಿಲ್ಲವಲ್ಲ? ಎರಡು ತಿಂಗಳು ಕಳೆದ ಮೇಲೆ ಧಾರಾವಾಹಿ ತಂಡದ ಎಲ್ಲರನ್ನು ಮುಖಾಮುಖಿ ಭೇಟಿಯಾಗುತ್ತಿದ್ದೇನೆ. ಆ ಖುಷಿ ಇದೆ. ಮಾತ್ರವಲ್ಲ, ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಪ್ರತಿದಿನ ಒಂದಲ್ಲ ಒಂದು ಪ್ರತಿಕ್ರಿಯೆಗಳು ಬರುತ್ತಿದ್ದವು. ಅವರೆಲ್ಲ ಮೆಚ್ಚುಗೆಯನ್ನಷ್ಟೇ ಸೂಚಿಸುತ್ತಿದ್ದರು. ಅದು ನನಗೆ ಮುಂದಿನ ನಟನೆಗೆ ತುಂಬ ಉತ್ಸಾಹ ತುಂಬುತ್ತಿತ್ತು. ಹಾಗೆ ಜನರ ಆಶೀರ್ವಾದ ಪಡೆಯುವ ಸಂದರ್ಭ ಮತ್ತೆ ಬಂದಿತೆನ್ನುವ ಕಾರಣಕ್ಕೆ ಖುಷಿಯಾಗಿತ್ತು. ಆದರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಚಿತ್ರೀಕರಣ ಹೇಗೆ ಎನ್ನುವ ಕಾರಣಕ್ಕೆ ಆತಂಕವಾಗಿತ್ತು. ಆದರೆ ಚಿತ್ರೀಕರಣದ ಸ್ಥಳಕ್ಕೆ ಬರುತ್ತಿದ್ದ ಹಾಗೆ ನನ್ನ ಆತಂಕವೆಲ್ಲ ದೂರವಾಯಿತು.
ಧಾರಾವಾಹಿ ಸೆಟ್ ಗೆ ಬರುತ್ತಿದ್ದಂತೆ ನಿಮ್ಮ ಆತಂಕ ದೂರಾಗಲು ಕಾರಣವೇನು?
ಯಾವ ರೀತಿಯ ಮುಂಜಾಗ್ರತೆ ಇರಬಹುದು ಎನ್ನುವುದಷ್ಟೇ ನನ್ನ ಆತಂಕಕ್ಕೆ ಕಾರಣವಾಗಿದ್ದಂಥ ಅಂಶ. ಆದರೆ ಅಲ್ಲಿಗೆ ಪ್ರವೇಶಿಸುತ್ತಿದ್ದ ಹಾಗೆ ನಡೆದಂಥ ಸ್ಯಾನಿಟೈಸ್ ಸಿಸ್ಟಂ ನನ್ನ ಎಲ್ಲ ಆತಂಕವನ್ನು ದೂರ ಮಾಡಿತ್ತು! ನಮ್ಮನ್ನು ಮಾತ್ರವಲ್ಲ ನಮ್ಮ ಪರ್ಸನಲ್ ಬ್ಯಾಗ್ಸ್ ಅಥವಾ ಕ್ಯಾಮೆರ ಸೇರಿದಂತೆ ಪ್ರತಿಯೊಂದು ಸೆಟ್ ಐಟಮ್ಸ್ ಕೂಡ ಮುಖ್ಯ ದ್ವಾರದಿಂದಲೇ ಸ್ಯಾನಿಟೈಸ್ ಮಾಡಿಯೇ ಒಳಗಡೆ ಬಿಡುತ್ತಿದ್ದರು. ನಾವು ಒಳಗೆ ಪ್ರವೇಶಿಸುವ ಮೊದಲೇ ಸೋಫಾ ಸೇರಿದಂತೆ ಪೂರ್ತಿ ಕೊಠಡಿಯನ್ನು ಕೂಡ ಸ್ಯಾನಿಟೈಸ್ ಮಾಡುತ್ತಾರೆ. ಇದರೊಂದಿಗೆ ನಿತ್ಯ ಮೂರು ಬಾರಿ ಎಲ್ಲರ ಟೆಂಪರೇಚರ್ ಪರೀಕ್ಷೆ ಕೂಡ ನಡೆಯುತ್ತಿರುತ್ತದೆ. ಮಧ್ಯಾಹ್ನ ರೋಗನಿರೋಧಕ ಶಕ್ತಿಯುಳ್ಳ ಕಶಾಯ ನೀಡುತ್ತಾರೆ. ಇಷ್ಟೆಲ್ಲ ಇದ್ದರೂ ಕಲಾವಿದರು ಮಾಸ್ಕ್ ಧರಿಸಲು ಸಾಧ್ಯವಿಲ್ಲವಲ್ಲ? ಆದರೆ ಅದಕ್ಕಾಗಿ ಮಾತಿನ ವೇಳೆ ಅಂತರ ಕಾಯ್ದುಕೊಂಡೇ ಇರುತ್ತೇವೆ. ಮಾತ್ರವಲ್ಲ, ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞರು ಕೂಡ ಮಾಸ್ಕ್ ಧರಿಸಿರುತ್ತಾರೆ. ಜತೆಗೆ ಅದರ ಮೇಲೆ ಒಂದು ಗಾರ್ಡ್ ಕೂಡ ಇರುತ್ತದೆ. ಪ್ರತಿಯೊಂದನ್ನು ಕೂಡ ಪದೇ ಪದೇ ಸ್ಯಾನಿಟೈಸ್ ಮಾಡುತ್ತೇವೆ. ಹಾಗಾಗಿ ನನಗೆ ಈಗ ಮೊದಲಿದ್ದ ಆತಂಕವೇನೂ ಇಲ್ಲ.
ಶೂಟಿಂಗ್ ನಲ್ಲಿ ಪಾಲ್ಗೊಳ್ಳುವಾಗ ನೀವು ಯಾವೆಲ್ಲ ಬದಲಾವಣೆಗಳನ್ನು ಎದುರಿಸಬೇಕಾಗಿದೆ?
ನನಗೆ ವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ಸೆಟ್ ನಲ್ಲಿ ಹೆಚ್ಚು ಬೆರೆಯುತ್ತಿದ್ದೆ. ಎಲ್ಲರನ್ನು ನನ್ನ ಕುಟುಂಬದಂತೆ ಭಾವಿಸಿ ಪ್ರೀತಿಯಿಂದಲೇ ಇರುತ್ತೇನೆ. ಆತ್ಮೀಯತೆಯಿಂದ ಒಂದು ಹಸ್ತಲಾಘವ ಕೂಡ ನೀಡಲು ಸಾಧ್ಯವಾಗುತ್ತಿಲ್ಲ. ಅದು ಬಿಟ್ಟರೆ ಸ್ವಚ್ಛತೆಯತ ಬಗ್ಗೆ ನನಗೆ ಮೊದಲಿನಿಂದಲೂ ಕಾಳಜಿ ಹೆಚ್ಚು. ನೀವು ನಂಬ್ತೀರೋ ಬಿಡ್ತೀರೊ ಗೊತ್ತಿಲ್ಲ. ನಾನು ಕೊರೊನದ ಬಗ್ಗೆ ಸರ್ಕಾರ ಎಚ್ಚರಿಕೆ ಹೊರಡಿಸುವ ಮೊದಲೇ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿದ್ದೆ! ನಮ್ಮ ತಂಡದ ಹುಡುಗರು ಈಗ ಭೇಟಿಯಾದಾಗ ಅದನ್ನೇ ಹೇಳಿದರು. “ನಮಗೆ ಅದು ಸ್ಯಾನಿಟೈಸರ್ ಬಗ್ಗೆ ಗೊತ್ತೇ ಇರಲಿಲ್ಲ. ಟಿವಿನಲ್ಲಿ ನೋಡಿದ ಮೇಲೆ ಗೊತ್ತಾಯಿತು, ನೀವು ಸ್ಯಾನಿಟೈಸ್ ಮಾಡ್ಕೊಳ್ಳುತ್ತಿದ್ದಿರಿ ಎಂದು” ಎನ್ನುತ್ತಾರೆ! ಇನ್ನು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕತೆಯನ್ನೆಲ್ಲ ಇನ್ ಡೋರ್ ಗೆ ಬೇಕಾದ ಹಾಗೆ ಬದಲಾಯಿಸುತ್ತಿದ್ದೇವೆ. ಹಾಗಂತ ಕತೆಯಲ್ಲಿ ಬದಲಾವಣೆಗಳೇನೂ ಇರುವುದಿಲ್ಲ. ದೃಶ್ಯಗಳು ಒಳಾಂಗಣದಲ್ಲಿ ಚಿತ್ರೀಕರಿಸಲ್ಪಡುತ್ತಿವೆ. ಒಂದು ಬ್ರೇಕ್ ಬಳಿಕ ಇಂದು ಮತ್ತೆ ಹೊಸ ಎಪಿಸೋಡ್ ಆರಂಭವಾಗಲಿದೆ. ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಮತ್ತೆ ನಾನು ನಿರೀಕ್ಷಿಸುತ್ತಿದ್ದೇನೆ.
ಲಾಕ್ಡೌನ್ ಸಮಯವನ್ನು ಯಾವ ರೀತಿಯಲ್ಲಿ ಕಳೆದಿರಿ?
ಎಲ್ಲರಂತೆ ನಾನು ಕೂಡ ಸಿನಿಮಾ, ವೆಬ್ ಸೀರೀಸ್ ನೋಡುತ್ತಿದ್ದೆ. ಇದರ ನಡುವೆ ನಾನು ಆಂಗ್ಲ ಪತ್ರಿಕೆಯೊಂದಕ್ಕೆ ಲೇಖನಗಳನ್ನು ಬರೆಯುತ್ತೇನೆ. ಇದುವರೆಗೆ ಸುಮಾರು 16ರಷ್ಟು ಲೇಖನಗಳು ಪ್ರಕಟವಾಗಿವೆ. ಲಾಕ್ಡೌನ್ ದಿನಗಳಲ್ಲಿ ಕೂಡ ಒಂದಷ್ಟು ಲೇಖನಗಳನ್ನು ಬರೆದಿಟ್ಟುಕೊಂಡೆ. ಒಂದು ಲೇಖನ ಆ ಪತ್ರಿಕೆಯ ಆನ್ಲೈನ್ ಆವೃತ್ತಿಯಲ್ಲಿ ಪ್ರಕಟವೂ ಆಯಿತು. ಉಳಿದವುಗಳು ಪತ್ರಿಕೆ ತನ್ನ ಸಿನಿಮಾ ಪುಟಗಳನ್ನು ಹೆಚ್ಚಿಸಿಕೊಂಡ ಮೇಲೆ ಕಳಿಸುತ್ತೇನೆ. ತಡವಾದರೂ ಓದಬಹುದಾದಂಥ ಸಾರ್ವಕಾಲಿಕ ವಿಚಾರಗಳನ್ನು ಹೊಂದಿರುವ ಲೇಖನಗಳು ಅವು. ಮನೆಯಲ್ಲೇ ನಾನು ಹಾಡಿದ ಹಾಡುಗಳು `ಜೀ’ಯವರ ಫೇಸ್ಬುಕ್ ಪೇಜ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಅಪ್ಲೋಡಾಗಿವೆ. ಇವುಗಳ ಜತೆಗೆ ನಮ್ಮ ತಾಯಿ ಮತ್ತು ಶ್ರೀಮತಿಯವರಿಗೆ ಮನೆಯ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಿದೆ. ನನ್ನ ಮಕ್ಕಳಿಂದನೂ ಕೆಲವೊಂದನ್ನು ಕಲಿತೆ. ಅಂದರೆ ನಾನು ನೋಡಬೇಕಾದ ಸಿನಿಮಾ, ವೆಬ್ ಸೀರೀಸ್‌ಗಳ ಬಗ್ಗೆ ಅವರೇ ನನಗೆ ಸಲಹೆ ನೀಡುತ್ತಿದ್ದರು ಎಂದರೆ ತಪ್ಪಲ್ಲ. ಅವರ ಜತೆ ಸೇರಿ ಟಿಕ್ಟಾಕ್ ಕೂಡ ಮಾಡಿದ್ದೇನೆ!
ಸಿನಿಮಾ ಚಿತ್ರೀಕರಣ ಮತ್ತು ಬಿಡುಗಡೆಯ ಬಗ್ಗೆ ನಿಮ್ಮ ಅನಿಸಿಕೆ ಏನು?
ಸಾಕಷ್ಟು ಮುಂಜಾಗರೂಕತೆ ವಹಿಸಲು ಸಾಧ್ಯ ಎನ್ನುವುದಾದರೆ ಸಿನಿಮಾ ಚಿತ್ರೀಕರಣ ಕೂಡ ಶುರುಮಾಡಬಹುದು. ಆರೋಗ್ಯದ ಭಯ ಎನ್ನುವ ವಿಚಾರಕ್ಕೆ ಬಂದರೆ ಜೀವನದಲ್ಲಿ ಪ್ರತಿಕ್ಷಣವೂ ಸವಾಲೇ. ಜೀವ ಉಳಿಸುವುದು ಮುಖ್ಯವಾದರೂ ಜೊತೆಗೆ ಜೀವನವೂ ನಡೆಯಬೇಕಲ್ಲ? ಬಿಡುಗಡೆಯ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳೇ ಒಟಿಟಿ ಫ್ಲಾಟ್ಫಾರ್ಮಲ್ಲಿ ಬಿಡುಗಡೆಯಾಗುತ್ತಿವೆ. ಅದು ಲಾಭದಾಯಕವಾದರೆ ಅದನ್ನೇ ಮಾಡಬಹುದು. ಆದರೆ “ಥಿಯೇಟರಲ್ಲೇ ನೋಡಲು ಚೆನ್ನ” ಎನ್ನುವ ವರ್ಗ ಎಂದಿಗೂ ಇರುತ್ತದೆ. ಉದಾಹರಣೆಗೆ ಕ್ರಿಕೆಟ್ ಮ್ಯಾಚ್ ಗಳನ್ನು ಸ್ಟೇಡಿಯಂನಲ್ಲಿ ಹೋಗಿ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ನೋಡುವಾಗಲೇ ಸ್ಪಷ್ಟವಾಗಿ ಕಾಣಿಸಲು ಸಾಧ್ಯ. ಆದರೆ ಯಾವಾಗಲೂ ಸ್ಟೇಡಿಯಂ ಕೂಡ ಹೌಸ್ ಫುಲ್ ಇರುತ್ತವೆ. ಯಾಕೆಂದರೆ ಅಲ್ಲಿ ಕುಳಿತುಕೊಂಡು ನೋಡುವ ಮಜಾವೇ ಬೇರೆ. ಸಿನಿಮಾ ಕೂಡ ಹಾಗೆಯೇ. ಬಿಡುಗಡೆಯಾಗುವುದು ಎರಡು ತಿಂಗಳು ತಡವಾದೀತೇನೋ. ಆದರೆ ಜನ ಥಿಯೇಟರ್‌ಗೆ ಹೋಗುವ ಸಂಸ್ಕೃತಿ ಖಂಡಿತವಾಗಿ ಇರುತ್ತದೆ.