
ಕೊರೊನಾ ಸೋಂಕು ಯಾರಿಗೆ ಬರಲಾರದು ಎಂದುಕೊಂಡಿದ್ದೆವೋ, ಅವರಿಗೆಲ್ಲ ಬರುತ್ತಿದೆ! ಶೂಟಿಂಗ್ ನಡೆಯದಿದ್ದರೂ ಸಿನಿಮಾ ನಟರಿಗೆ, ಅತಿ ಮುಂಜಾಗ್ರತೆ ವಹಿಸಿದರೂ ರಾಜಕಾರಣಿಗಳಿಗೆ ಮಾತ್ರವಲ್ಲ ಮಾಧ್ಯಮದ ಪ್ರಮುಖರಿಗೂ ಸೋಂಕು ಹರಡಿದೆ. ಅವರಲ್ಲಿ ಬಿಟಿವಿ ನ್ಯೂಸ್‌ನ ಪ್ರಧಾನ ವಾರ್ತಾ ವಾಚಕಿ ರಾಧಾ ಹಿರೇಗೌಡರ್ ಕೂಡ ಒಬ್ಬರು. ಪ್ರಸ್ತುತ ಅವರು ಚಿಕಿತ್ಸೆಯಲ್ಲಿದ್ದಾರೆ. ಕೊರೊನಾ ಕಾಲದಲ್ಲಿ ತಮ್ಮ ವೃತ್ತಿ ಬದುಕು ಎಷ್ಟು ಚಾಲೆಂಜಿಂಗ್ ಆಗಿತ್ತು ಎನ್ನುವುದನ್ನು ರಾಧಾ ಹಿರೇಗೌಡರ್ ಅವರು ಸಿನಿಕನ್ನಡ.ಕಾಮ್ ಜತೆಗೆ ವಿವರಿಸಿದ್ದಾರೆ.
ಕೊರೊನಾ ಸಮಯದ ಕಾರ್ಯನಿರ್ವಹಣೆ ನಿಮಗೆ ಎಷ್ಟು ಚಾಲೆಂಜಿಂಗ್ ಆಗಿತ್ತು?
ಖಂಡಿತವಾಗಿ ತುಂಬ ಚಾಲೆಂಜಿಂಗ್ ಎಂದೇ ಹೇಳಬಹುದು. ಯಾಕೆಂದರೆ ನಮ್ಮದು ಜಾಯಿಂಟ್ ಫ್ಯಾಮಿಲಿ. ಎಲ್ಲರೂ ಒಟ್ಟಿಗೆ ಇರೋದರಿಂದ ಮತ್ತು ಈ ಸಂದರ್ಭದಲ್ಲಿ ಹೊರಗಡೆ ಹೋಗಿ ಕೆಲಸ ಮಾಡುವವಳು ನಾನೊಬ್ಬಳೇ ಆಗಿರುವುದರಿಂದ ಆತಂಕ ಇತ್ತು. ಆದರೆ ಕಚೇರಿಯಲ್ಲಿ ಕೂಡ ತುಂಬ ಎಚ್ಚರಿಕೆ ವಹಿಸುತ್ತೇವೆ. ಆದರೆ ಭಯ ಅಂತೂ ಇದ್ದೇ ಇತ್ತು. ನಾನು ಈಗ ಸೀನಿಯರ್ ಎಡಿಟರ್. ಹಾಗಾಗಿ ವಾಹಿನಿಯಲ್ಲಿ ಸಿಕ್ಕಾಪಟ್ಟೆ ರೆಸ್ಪಾನ್ಸಿಬಿಲಿಟಿ ಇದೆ. ಬಿಟಿವಿಯಲ್ಲಿ ಏನೇ ಬರಲಿ ನಾನು ವಾಹಿನಿಯ ಚೀಫ್ ಅಥವಾ ಮಾಲಕಿಯಲ್ಲದಿದ್ದರೂ ರಾಧಾ ಹಿರೇಗೌಡರ್ ವಾಹಿನಿಯಲ್ಲಿ ಬಂದಿರೋದು ಎಂದೇ ಸುದ್ದಿಯಾಗುತ್ತೆ ಎನ್ನುವುದನ್ನು ನೋಡಿದ್ದೇನೆ! ಹಾಗಾಗಿ ಜವಾಬ್ದಾರಿ ಹೆಚ್ಚಾಗಿಯೇ ಇರುತ್ತದೆ. ಆದುದರಿಂದ ಏನೊ ಕೊರೊನಾ ಹರಡುವಿಕೆ ತುಂಬಾನೇ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಎರಡು ದಿನ ರಜಾ ತೆಗೆದುಕೊಂಡು ಮನೇಲಿರೋಣ ಎಂದು ಸುಮ್ಮನಿರಲು ಸಾಧ್ಯವಿಲ್ಲ. ಯಾಕೆಂದರೆ ನನಗೆಂದೇ ನಿಗದಿಯಾದ ಕಾರ್ಯಕ್ರಮಗಳಿರುತ್ತವೆ. ನನ್ನಿಂದಲೇ ಸುದ್ದಿ ನಿರೀಕ್ಷಿಸುವವರ ಬಳಗ ಇದೆ. ಹಾಗಾಗಿ ವಾಹಿನಿಗೆ ಹೋಗಲೇ ಬೇಕಾಗುತ್ತದೆ. ಚಾಲೆಂಜಿಂಗ್ ವಿಚಾರ ಬಂದರೆ ಬೇರೆಯೂ ಸಾಕಷ್ಟು ಸಂಗತಿಗಳಿವೆ.
ಹಾಗಾದರೆ ನಿಮ್ಮ ವೃತ್ತಿ ಬದುಕಿನ ಪ್ರಮುಖ ಚಾಲೆಂಜಿಂಗ್ ಘಟ್ಟಗಳು ಯಾವುವು?
ಪ್ರತಿದಿನವೂ ಚಾಲೆಂಜೇ. ಕಚೇರಿಯಲ್ಲಿ ಏನೇ ವಾರ್ತಾವಾಚಕಿ ಆಗಿದ್ದರೂ, ಮನೆಗೆ ಬಂದ ಮೇಲೆ ನಾನು ಕೂಡ ಗೃಹಿಣಿ. ಹಾಗಾಗಿ ಮನೆಯ ಸಮಸ್ಯೆಗಳೇನೇ ಇದ್ದರೂ ಅದರಲ್ಲಿಯೂ ಭಾಗಿಯಾಗಿರುತ್ತೇನೆ. ಅಂಥದ್ದರಲ್ಲಿ ಬಹಳಷ್ಟು ಬಾರಿ ಮನೆಗೆ, ಕುಟುಂಬಕ್ಕೆ ಟೈಮ್ ಕೊಡೋಕೆ ಆಗುತ್ತಿಲ್ಲ ಎನ್ನುವುದು ಬೇಸರದ ವಿಚಾರ. ನನ್ನ ಮಗ ಹುಟ್ಟಿದಾಗಿನಿಂದ ನಾನು ಸರಿಯಾಗಿ ಮನೆಯಲ್ಲೇ ಇಲ್ಲ! ಒಂದು ದಿನದ ವೀಕಾಫ್ ಬಿಟ್ಟರೆ ಎಷ್ಟೋ ದಿನ ಸಂಜೆ ಸಮಯ ಹೊರಗಡೆ ವಾತಾವರಣ ಹೇಗಿದೆ ಎನ್ನುವುದೇ ಮರೆತು ಹೋಗಿರುತ್ತದೆ! ಜರ್ನಲಿಸಂ ಜತೆಗೆ ವೈಯಕ್ತಿಕ ಬದುಕನ್ನು ಸರಿದೂಗಿಸುವುದು ಎಷ್ಟು ಕಷ್ಟ ಎಂದು ನಿಮಗೂ ಗೊತ್ತು. ಅದರಲ್ಲಿಯೂ ಹೆಣ್ಣುಮಕ್ಕಳಿಗೆ ತುಂಬ ಕಷ್ಟಗಳಿರುತ್ತವೆ. ಮತ್ತೆ ಮರುದಿನ ಅವೆಲ್ಲವನ್ನು ಮರೆತು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವಾಗ ಚಾಲೆಂಜಿಂಗ್ ಅನಿಸಿ ಬಿಡುತ್ತದೆ. ಉದಾಹರಣೆಗೆ ನನಗಿರುವುದು ಒಬ್ಬನೇ ಮಗ. ಅವನಿಗೆ ಮೈ ಹುಷಾರಿಲ್ಲದೆ ಇದ್ದಾಗ ಕೂಡ ನಾನು ಡ್ಯೂಟಿ ಮಾಡುವ ಸಂದರ್ಭ ಇದೆಯಲ್ಲ.. ಅಂಥದ್ದು ಚಾಲೆಂಜಿಂಗೇ ಎನ್ನಬಹುದು.

ಸಾಮಾಜಿಕ ಜಾಲತಾಣದಲ್ಲಿನ ಟ್ರೋಲ್ಸ್ ನಿಮ್ಮನ್ನು ಕಾಡಿಲ್ಲವೇ?
ಬಹುಶಃ ಟ್ರೋಲ್ ಮಂದಿ ನನ್ನಷ್ಟು ಬೇರೆ ಯಾರನ್ನೂ ಟ್ರೋಲ್ ಮಾಡಿಲ್ಲ ಎಂದೇ ಅನಿಸುತ್ತೆ! ಸೋಶಿಯಲ್ ಮೀಡಿಯಾದಲ್ಲಿ ಒಳ್ಳೇದು ಕೆಟ್ಟದ್ದು ಎರಡೂ ಇವೆ. ನಾನು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟ ಆಗಬೇಕಾಗಿಲ್ಲ. ಪೊಲಿಟಿಕ್ಸ್‌ನಲ್ಲಿ ಎಲ್ಲರಿಗೂ ಅವರವರದೇ ಆದ ಐಟಿ ಸೆಲ್ ಗಳಿವೆ. ಹಾಗಾಗಿ ನಾವು ಇಶ್ಯೂಗಳನ್ನು ಆಧಾರಿಸಿ ವಿಮರ್ಶೆ ಮಾಡಿದರೂ, ಅದಕ್ಕೆ ಆಯಾ ಪಕ್ಷಗಳ ವಿರೋಧ ಇದ್ದೇ ಇರುತ್ತವೆ. ಅವರು ಟ್ರೋಲ್ ಮೂಲಕ ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ. ಖಂಡಿತವಾಗಿ ಆರಂಭದಲ್ಲೆಲ್ಲ ನನಗೆ ಅದು ಮೆಂಟಲಿ ಪ್ರೆಶರ್ ಅನಿಸುತ್ತಿತ್ತು. ಈಗ ಅದನ್ನೆಲ್ಲ ಕೇರ್ ಮಾಡಲ್ಲ. `ಪಬ್ಲಿಕ್ ಟಿವಿ’ಯಲ್ಲಿದ್ದ ದಿನಗಳಲ್ಲಿ ರಂಗನಾಥ್ ಸರ್ ನಾನು ಯಾವುದೇ ಸಾಮಾಜಿಕ ಜಾಲತಾಣಗಳತ್ತ ಗಮನ ಹರಿಸದಂತೆ ಎಚ್ಚರಿಕೆ ವಹಿಸಿದ್ದರು. ಅವರು ಕೂಡ ಫೇಸ್ಬುಕ್ ವಾಟ್ಸ್ಯಾಪ್ ಬಳಸುತ್ತಿರಲಿಲ್ಲ. ಆದರೆ ಆಮೇಲೆ ಅದರಲ್ಲಿ ನನ್ನ ಬಗ್ಗೆ ನಡೆಯುತ್ತಿರುವ ವಿಪರೀತವಾದ ಟೀಕೆಗಳ ಬಗ್ಗೆ ನನಗೆ ಗೊತ್ತಾದಾಗ ತುಂಬ ನೋವಾಯಿತು.
ಆದರೆ ನಿಮ್ಮ ಮತ್ತು ರಂಗನಾಥ್ ಅವರ ಬಗ್ಗೆಯೇ ಟ್ರೋಲ್ ಮಾಡಲಾಗುತ್ತಿದೆಯಲ್ಲ?
ರಂಗನಾಥ್ ಸರ್ ಅವರಿಗೆ ನನ್ನ ತಂದೆಯ ವಯಸ್ಸು. ಅವರು ಮಾಧ್ಯಮ ಕ್ಷೇತ್ರದಲ್ಲಿ ನನಗೆ ಗಾಡ್ ಫಾದರ್ ಇದ್ದಂತೆ. ಅಂಥವರ ಫೊಟೊದ ಜತೆಗೆ ನನ್ನನ್ನು ಸೇರಿಸಿ ರಾಧಾಕೃಷ್ಣ ಎಂದು ಬರೆಯುತ್ತಾರೆ. ಅವರು ತುಂಬ ದೊಡ್ಡ ಜಂಟ್ಲಮನ್ ಎನ್ನುವುದು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಗೊತ್ತು. ಆದರೆ ಹೊಲಸು ಮನಸುಗಳ ಮಂದಿ ಇದ್ದಾರೆ. ನಮ್ಮಲ್ಲಿರುವ ಸೈಬರ್ ರೂಲ್ಸ್ ಇವರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವಲ್ಲಿ ಸೋತಿದೆ. ನಾವು ಮಾಧ್ಯಮದಲ್ಲಿರುವ ಕಾರಣ ಇಂಥವನ್ನು ಎದುರಿಸಬೇಕಾಗುತ್ತದೆ ಎಂದು ಸುಮ್ಮನಾಗಿದ್ದೆ. ಆದರೆ ತೀರ ವೈಯಕ್ತಿಕವಾಗಿ ಏನನ್ನಾದರೂ ಬರೆದಾಗ ತುಂಬಾನೆ ಬೇಸರವಾಗುತ್ತದೆ. ನನ್ನನ್ನು ಬಿಡಿ, ನನ್ನ ಕಾರಣದಿಂದಾಗಿ ಮೈದುನನ ಪತ್ನಿಯ ಬಗ್ಗೆಯೂ ಕೆಟ್ಟದಾಗಿ ಬರೆದಾಗ ಪೊಲೀಸ್ ಕೇಸ್ ಮಾಡಬೇಕಾಯಿತು.
ಆ ಘಟನೆಯ ಬಗ್ಗೆ ವಿವರಿಸುತ್ತೀರಾ?
ನನ್ನ ಮೈದುನನ ಪತ್ನಿಯ ಹೆಸರು ಪೂಜಾ ಹಿರೇಗೌಡರ್. ಅವಳು ತುಂಬ ಚಿಕ್ಕ ಹುಡುಗಿ. ಆಕೆಯನ್ನು ಮನೆಯಲ್ಲಿ ಸೊಸೆಯಂತೆ ಅಲ್ಲ, ಮಗಳಂತೆ ನೋಡಿಕೊಳ್ಳುತ್ತೇವೆ. ಆಕೆಗೆ ಇದೇ ತರಹ ಡ್ರೆಸ್ ಹಾಕಬೇಕು ಎನ್ನುವ ನಿರ್ಬಂಧ ವಿಧಿಸಿದವರಲ್ಲ. ಆದರೆ ಒಮ್ಮೆ ಆಕೆಯ ಫೊಟೋ ಹಾಕಿ “ರಾಧಾ ತಂಗಿ ಹೀಗೆ” ಎಂದು ಟ್ರೋಲ್ ಮಾಡಿದ್ದು ಕಂಡಾಗ ತುಂಬಾನೇ ಬೇಜಾರಾಗಿತ್ತು. ಕೊನೆಗೆ ಪೊಲೀಸ್ ಕಂಪ್ಲೇಟ್ ಮಾಡಿದಾಗ ಆತನನ್ನು ಎಳೆದುಕೊಂಡು ಬಂದಿದ್ರು. ಕೆಲವೊಮ್ಮೆ ತುಂಬಾ ಕೀಳು ಮಟ್ಟದ ಭಾಷಾ ಪ್ರಯೋಗಗಳಿರುತ್ತವೆ. ಅದನ್ನು ನೋಡಿದಾಗ ತುಂಬಾ ನೋವಾಗುತ್ತದೆ. ನನಗೆ ಬಿ.ಟಿವಿಯಲ್ಲಿ ಕುಮಾರ್ ಸರ್ ತುಂಬ ಸ್ವಾತಂತ್ರ್ಯ ಕೊಟ್ಟಿರುವುದರಿಂದ ಕೆಲವೊಮ್ಮೆ ನೇರ ಪ್ರಸಾರದ ವೇಳೆಯೇ ಅಂಥ ಕಮೆಂಟ್ಸ್ ಗೆ ಸರಿಯಾದ ಉತ್ತರ ನೀಡಿದ್ದೂ ಇದೆ.
ನಿಮ್ಮ ವಾರ್ತಾವಾಚನದ ಬಗ್ಗೆ ಮನೆಯವರ ಪ್ರತಿಕ್ರಿಯೆ ಹೇಗಿದೆ?
ಮನೆಯಲ್ಲಿ ನನಗಂತೂ ಟಿವಿ ನೋಡುವಷ್ಟು ಸಮಯ ಸಿಗಲ್ಲ. ನಮ್ಮದು ಜಾಯಿಂಟ್ ಫ್ಯಾಮಿಲಿಯಾಗಿರುವ ಕಾರಣ ಎರಡು ಟಿವಿಗಳಿವೆ. ಒಂದು ದೊಡ್ಡವರಿಗೆ ಒಂದು ಮಕ್ಕಳಿಗೆ. ನನ್ನ ಗಂಡನ ಹೆಸರು ನಾರಾಯಣ ಗೌಡ ಹಿರೇಗೌಡ್ರು. ಹಿರೇಗೌಡ್ರು ಎನ್ನುವುದು ಅವರ ಸರ್ ನೇಮ್. ನನ್ನ ಮಗ ಭುವನ್ ಹಿರೇಗೌಡ. ಮನೇಲಿ ಗಂಡ ನ್ಯೂಸ್ ನೋಡ್ತಿರ್ತಾರೆ. ರಾಘವೇಶ್ವರ, ನಿತ್ಯಾನಂದನ ಪ್ರಕರಣ ಆದಾಗ ಪುರುಷತ್ವ, ರೇಪ್ ಮೊದಲಾದ ಬಗ್ಗೆ ನಾನು ನಿರೂಪಕಿಯಾಗಿ ಸೈಂಟಿಫಿಕ್ ಆಗಿ ಮಾತನಾಡಲೇ ಬೇಕಾಗುತ್ತದೆ. ನನ್ನ ಗಂಡ ಸರ್ಕಾರಿ ಕೆಲಸದಲ್ಲಿ ಇರುವವರು. ನಾನು ಹಾಗೆಲ್ಲ ಮಾತನಾಡಿದಂಥ ಸಂದರ್ಭದಲ್ಲಿ ಅವರು “ಏನೇನೋ ಮಾತನಾಡ್ತೀಯ.. ನನಗೆ ಆಫೀಸಲ್ಲಿ ಮರ್ಯಾದೆ ಹೋದಂತೆ ಆಗುತ್ತೆ” ಎಂದಿದ್ದೂ ಇದೆ. ಅವರೇ ನನ್ನ ಬೆಸ್ಟ್ ಕ್ರಿಟಿಕ್. ಅವರೇನಾದರೂ “ನೀನು ಇವತ್ತು ಚೆನ್ನಾಗಿ ಮಾಡಿದ್ದೀಯ” ಎಂದರೆ ಸುಪರ್ ಆಗಿ ಮಾಡಿದ್ದೇನೆ ಎಂದು ಅರ್ಥ! ಯಾಕೆಂದರೆ ಅವರು ಮೆಚ್ಚಿಕೊಳ್ಳುವುದು ತೀರ ಅಪರೂಪ.

ನಿಮಗೆ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಕಾರಣವೇನು?
ನಿಜ ಹೇಳೋದಾದ್ರೆ ಆರಂಭದಲ್ಲಿ ನಾನು ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿರಲೇ ಇಲ್ಲ! ಯಾಕೆಂದರೆ ನಾನು ಜರ್ನಲಿಸಂ ಬ್ಯಾಕ್ ಗ್ರೌಂಡ್ ಇಟ್ಕೊಂಡು ಬಂದವಳಲ್ಲ. ಮಾಡಿದ್ದಂಥ ಕೋರ್ಸ್ ಎಂಪಿ ಎಡ್ (ಮಾಸ್ಟರ್ ಆಫ್ ಫಿಸಿಕಲ್ ಎಜುಕೇಶನ್). ನಾನು ಕೊಕೊ ಪ್ಲೇಯರ್ ಆಗಿದ್ದುಕೊಂಡು ನ್ಯಾಶನಲ್ಸ್ ಎಲ್ಲ ಆಡಿದ್ದೀನಿ. ಮೋಸ್ಟ್ಲಿ ಅದೇ ಫೀಲ್ಡಲ್ಲಿ ಇದ್ದಿದ್ದರೆ ಫಿಸಿಕಲ್ ಡೈರೆಕ್ಟರ್ ಏನಾದರೂ ಆಗುತ್ತಿದ್ದೆನೇನೋ. ಅಥವಾಸ್ಪೋರ್ಟ್ಸ್ ಕೋಟದಲ್ಲಿ ಎಲ್ಲೋ ಬ್ಯಾಂಕಲ್ಲೇನಾದರೂ ಕೆಲಸ ಮಾಡಿಕೊಂಡಿರುತ್ತಿದ್ದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಕ್ಕ ನನ್ನ ಊರು. ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದೆ. ಎಲ್ಲರೂ ಮೀಡಿಯಾದಲ್ಲಿ ಟ್ರೈ ಮಾಡಲು ಹೇಳುತ್ತಿದ್ದರು. ಹಾಗೆ `ಉದಯ ಟಿವಿ’ಗೆ ಬಂದೆ. ಹಾಗಾಗಿ ಸೇರಿಕೊಂಡ ತಕ್ಷಣ ಮೀಡಿಯಾದಲ್ಲಿದ್ದೀನಿ ಎನ್ನುವ ಜೋಶ್ ಏನೂ ನನಗೆ ಇರಲಿಲ್ಲ. ಆದರೆ ಈಗ ಇದೊಂದು ವೃತ್ತಿಯಾಗಿ ಉಳಿದಿಲ್ಲ. ಸಾಮಾಜಿಕ ಜವಾಬ್ದಾರಿ ಎನ್ನುವ ಅರಿವು ಉಂಟಾಗಿದೆ. ಈಗ ಪ್ರತಿಯೊಂದನ್ನು ಜನ ಗಮನಿಸುತ್ತಿರುವುದಾಗಿ ಗೊತ್ತಾಗಿದೆ. ಅದು ನನ್ನ ಮಾತುಗಳನ್ನಷ್ಟೇ ಅಲ್ಲ; ನನ್ನ ಕಾಸ್ಟ್ಯೂಮ್ಸ್, ಹೇರ್ ಸ್ಟೈಲ್ ಎಲ್ಲದರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಬರುವುದನ್ನು ಕಂಡಿದ್ದೇನೆ.
ಈಗ ಸಾಮಾಜಿಕ ಜಾಲತಾಣವನ್ನು ಇಷ್ಟಪಡುತ್ತೀರ?
ಒಳಿತು ಕೆಡುಕು ಎನ್ನುವುದು ಎಲ್ಲದರಲ್ಲೂ ಇರುತ್ತೆ. ಬಳಸುವುದು ನಮ್ಮ ವಿವೇಚನೆ ಬಿಟ್ಟಿದ್ದು. ಪಬ್ಲಿಕ್ ಟಿವಿಯಲ್ಲಿ ಇರುವವರೆಗೆ ನನ್ನನ್ನು ಬಿಜೆಪಿ ಚೇಲ ಎಂದು ಕರೆಯುತ್ತಿದ್ದರು. ಆದರೆ ನನಗೆ ಅಂಥ ಮುಲಾಜೇ ಇಲ್ಲ. ಯಾವಾಗಲೂ ಮಾಧ್ಯಮದವರು ಪ್ರತಿ ಪಕ್ಷವಾಗಿ ಕೆಲಸ ಮಾಡಬೇಕು. ಈಗ ಬಿಜೆಪಿ ಆಡಳಿತದಲ್ಲಿದೆ ಹಾಗಾಗಿ ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸಲೇಬೇಕಾಗುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯನವರ ವಿರುದ್ಧದ ಎಷ್ಟು ಕಾರ್ಯಕ್ರಮಗಳನ್ನು ನಾವು ಮಾಡಿಲ್ಲ? ಅವರೆಲ್ಲ ಅದರ ಬಗ್ಗೆ ತಲೆ ಕೆಡಿಸಿಕೊಂಡಿದ್ದು ನೋಡಿಯೇ ಇಲ್ಲ. ಪೆಯ್ಡ್ ಟ್ರೋಲ್ಗಳು ಮಾತ್ರವಲ್ಲ ಬಿಜೆಪಿ ಪರವಾಗಿರುವ ಇತರರು ಕೂಡ ಯಾಕೋ ತುಂಬ ತಲೆಕೆಡಿಸಿಕೊಳ್ತಾರೆ. ಒಂಚೂರು ವಿಮರ್ಶೆ ಎದುರಿಸುವ ಪರಿಪಾಠವೇ ಅವರಿಗಿಲ್ಲ. ಆದರೆ ಕೆಲವು ಪಕ್ಷಾತೀತವಾದ ಕಮೆಂಟ್ ಗಳಲ್ಲಿ ಅರ್ಥ ಇರುತ್ತೆ. ಉದಾಹರಣೆಗೆ “ಲಾಕ್ಡೌನ್ ಟೈಮಲ್ಲಿ ಎಣ್ಣೆ ಸಿಗುತ್ತಾ ಇಲ್ವಾ” ಎನ್ನುವ ಬಗ್ಗೆ ತಮಾಷೆಯಿಂದ ವಾರ್ತೆಯ ಉದ್ದಕ್ಕೂ ಎಣ್ಣೆ ಎನ್ನುವ ಪದವನ್ನೇ ಬಳಸಿದ್ದೆ. ಅದಕ್ಕೆ ಒಬ್ಬರು “ಮದ್ಯ ಎನ್ನುವ ಪದ ಇರಬೇಕಾದರೆ ಎಣ್ಣೆ ಎನ್ನುವುದು ಎಷ್ಟು ಸರಿ?” ಎಂದು ಕಮೆಂಟ್ ಮಾಡಿದ್ದರು. ಸಾಮಾನ್ಯವಾಗಿ ನಾನು ಫೇಸ್ಬುಕ್ ನಲ್ಲಿ ಯಾರಿಗೂ ರಿಪ್ಲೈ ಮಾಡುವುದಿಲ್ಲ. ಆದರೆ ಅವರಿಗೆ ತಿದ್ದಿಕೊಳ್ಳುವುದಾಗಿ ಕಮೆಂಟ್ ಹಾಕಿದೆ. ಮತ್ತು ಮುಂದಿನ ದಿನಗಳಲ್ಲಿ ತಿದ್ಕೊಂಡೆ ಕೂಡ.
ವೈಯಕ್ತಿಕವಾಗಿ ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆಯೇ?
ಖಂಡಿತವಾಗಿ ಇಲ್ಲ. ವಾಸ್ತವದಲ್ಲಿ ನನಗೆ ರಾಜಕೀಯದ ಕ್ಷೇತ್ರದ ಬಗ್ಗೆಯೇ ಅರಿವಿರಲಿಲ್ಲ. ಆದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಮೈತ್ರಿ ಸರ್ಕಾರ ಉರಳಿದ ದಿನಗಳಲ್ಲಿ ನಾನು ಸುವರ್ಣ ವಾಹಿನಿಯಲ್ಲಿದ್ದೆ. ಆಗ ನಿಜವಾದ ಆಸಕ್ತಿ ಬಂತು. ನಮಗಿಂತ ಸೀನಿಯರ್ ಆಂಕರ್ಸ್ ನೋಡುವಾಗ, ಅವರ ಮಾತುಗಳನ್ನು ಕೇಳುವಾಗ ಆ ಆಸಕ್ತಿ ಹೆಚ್ಚಿತು. ಗಣಿತ ಹೇಗೆ ಹಲವರಿಗೆ ಕಬ್ಬಿಣದ ಕಡಲೆಯೋ ಅದೇ ರೀತಿ ರಾಜಕಾರಣ ಎನ್ನುವುದು ಸಾಮಾನ್ಯ ಪತ್ರಕರ್ತರಿಗೆ ಕಬ್ಬಿಣದ ಕಡಲೆಯೇ. ಆದುದರಿಂದ ಆನಂತರದ ಚುನಾವಣೆ ನಡೆಯುವ ಹೊತ್ತಿಗೆ ನಾನು ರಾಜಕೀಯದ ಬಗ್ಗೆ ಚೆನ್ನಾಗಿ ಅರಿತುಕೊಳ್ಳುವ ಸಂಪೂರ್ಣ ಪ್ರಯತ್ನದಲ್ಲಿ ತೊಡಗಿದ್ದೆ. ಯಾಕೆಂದರೆ ಪೊಲಿಟಿಕಲ್ ರಿಪೋರ್ಟರ್ ಅಥವಾ ಆಂಕರ್ ಗೆ ವಾಹಿನಿಯಲ್ಲಿ ಹೆಚ್ಚಿನ ಸ್ಕೋಪ್ ಇರುವುದನ್ನು ಕೂಡ ನೋಡಿದ್ದೆ. ಅವರನ್ನು ಪ್ರತಿಭಾವಂತರು ಎಂದು ಪರಿಗಣಿಸುವಂಥ ವಾತಾವರಣ ಇದೆ. ಹಾಗಾಗಿ ಚುನಾವಣೆಗೆ ಮೂರು,ನಾಲ್ಕು ತಿಂಗಳುಗಳಿರುವಾಗಲೇ ಪ್ರತಿಯೊಂದು ಕಾನ್ಸ್ಟುಯೆನ್ಸಿ ಹೇಗಿದೆ, ಅಲ್ಲಿ ಜನ ಹೇಗಿದ್ದಾರೆ, ಏನು ಎತ್ತ ಎನ್ನುವ ಬಗ್ಗೆ ಪ್ರತಿಯೊಂದನ್ನು ತಿಳಿದು ರೆಡಿಯಾಗ್ತಿದ್ದೆ. ರಾಜಕೀಯದ ಬಗ್ಗೆ ಏನು ಬೇಸಿಕ್ ಓದಿ ಮರೆತಿದ್ದೇವೋ, ಅದನ್ನು ಮತ್ತೆ ನೆನಪಿಸಿಕೊಳ್ಳಲು ಎಂಟು, ಒಂಬತ್ತು, ಹತ್ತನೇ ತರಗತಿಯ ಸಮಾಜ ಪುಸ್ತಕ ತಂದು ಅಕ್ಷರಶಃ ಅಭ್ಯಾಸ ಮಾಡಿದ್ದೇನೆ. ಪೆನ್ನು ಪೇಪರ್ ಹಿಡ್ಕೊಂಡು ತಯಾರಿ ಮಾಡೋ ರೀತಿ ನೋಡಿ ನಮ್ಮೆಜಮಾನ್ರು “ನಿನ್ತರ ಓದಿದ್ರೆ ನಾನು ಐಎಎಸ್ಸೇ ಪಾಸ್ ಮಾಡ್ತಿದ್ದೆ” ಅಂದಿದ್ದೂ ಇದೆ. ಎಲ್ಲ ವಿಷಯ ಗೊತ್ತಿರೋದಕ್ಕೆ ನಾನೇನು ಎನ್ ಸೈಕ್ಲೋಪಿಡಿಯನೇ?

ಪಬ್ಲಿಕ್ ಟಿವಿಯಿಂದ ಬಿಟಿವಿಗೆ ಬಂದ ಮೇಲೆ ನಿಮ್ಮಲ್ಲಿ ಆಗಿರುವ ಬದಲಾವಣೆಗಳೇನು?
ಪಬ್ಲಿಕ್ ಟಿವಿಯಲ್ಲಿ ರಂಗನಾಥ್ ಸರ್ ಅವರಿಗೆ ನೆರಳಿನ ಹಾಗೆ ಇದ್ದೆ. ಆದರೆ ಬಿಟಿವಿ ವಾಹಿನಿಯ ಮುಖ್ಯಸ್ಥ ಕುಮಾರ್ ಸರ್ ಅವರ ರೀತಿಯೇ ವಿಭಿನ್ನ. ಅವರು ಇಂಡಿಪೆಂಡೆಂಟ್ ಆಗಿ ಒಬ್ಬಳು ಹೆಣ್ಣುಮಗಳು ವಾಹಿನಿಯನ್ನು ಹೇಗೆ ಲೀಡ್ ಮಾಡಬಹುದು ಎನ್ನುವುದನ್ನು ನನ್ನ ಮೂಲಕ ತೋರಿಸಿಕೊಟ್ಟವರು. ಹಾಗೆ ನಂಬಿಕೆ ಇರಿಸುವವರು ಸಿಗುವುದು ಕಷ್ಟ. ಇತ್ತೀಚೆಗೆ ಕೂಡ ಬೇರೆ ಯಾವುದೋ ವಾಹಿನಿಯವರು ಹೇಳಿದ್ದರು, “ಮೇಡಂ ನಿಮ್ಮನ್ನೇ ತಗೋಬೇಕು ಎಂದು ನಮಗೆಲ್ಲ ಆಸೆ ಇತ್ತು. ಆದರೆ, ಹೆಡ್ ಆಫೀಸಲ್ಲಿ ಲೇಡೀಸ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ರೆ ಜನ ಅದನ್ನು ಅಷ್ಟು ಸೀರಿಯಸ್ಸಾಗಿ ತಗೊಳ್ಳಲ್ಲ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು..” ಎಂದು ರಾಗ ಎಳೆದರು. ನನಗೆ ಅವರ ಆ ಮನಸ್ಥಿತಿಯೇ ಇಷ್ಟವಾಗಲಿಲ್ಲ. ಇನ್ನು ಅಂಥವರ ಕೈಕೆಳಗೆ ಕೆಲಸ ಮಾಡಲು ಹೇಗೆ ಸಾಧ್ಯ? ಒಂದು ಪ್ಯಾನೆಲ್‌ಗೆ ಸೀನಿಯರ್ ಎಡಿಟರ್ ಆಗಿ ತೆಗೆದುಕೊಂಡು ಇಂಡಿಪೆಂಡೆಂಟ್ ಆಗಿ ಚಾನ್ಸ್ ಕೊಟ್ಟು, ಒಂದು ವೇದಿಕೆ ಕಲ್ಪಿಸೋಕೆ ನಿಜಕ್ಕೂ ಗಟ್ಸ್ ಬೇಕು. ಗಂಡಸರು ರಾಜಕೀಯ ಮಾತನಾಡಿದಾಗ ಮಾತ್ರ, ಗಂಭೀರತೆ. ಆಗಲೇ ಟಿಆರ್ ಪಿ ಎನ್ನುವುದು ಒಂದು ವಾದ. ಟಿವಿಗಳಿಗೆ ಟಿ ಆರ್ ಪಿ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತು. ಅಂಥ ಸಂದರ್ಭದಲ್ಲಿ ನನಗೆ ಪ್ರತ್ಯೇಕ ಸ್ಥಾನ ತಂದುಕೊಟ್ಟಿದ್ದು ನಮ್ಮ ಕುಮಾರ್ ಸರ್. ಅವರಿಗೆ ಎಷ್ಟು ತ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ.
(ಈ ಸಂದರ್ಶನ ಇನ್ನೊಂದು ಭಾಗದಲ್ಲಿ ಮುಂದುವರಿಯಲಿದೆ. ಅದರಲ್ಲಿ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಜತೆಗೆ ಕೆಲಸ ಮಾಡಿದ ಅಜಿತ್ ಹನಮಕ್ಕನವರ್, ಜಯ ಪ್ರಕಾಶ್ ಶೆಟ್ಟಿ ಮೊದಲಾದರಿಂದ ಹಿಡಿದು ಶಶಿಧರ ಭಟ್, ಎಚ್ಚಾರ್ ರಂಗನಾಥ್, ವಿಶ್ವೇಶ್ವರ ಭಟ್, ರಾಜೀವ ಚಂದ್ರಶೇಖರ್ ಮೊದಲಾದವರ ಬಗ್ಗೆ ಮಾತನಾಡಿದ್ದಾರೆ. ಪಬ್ಲಿಕ್ ಟಿವಿ ಬಿಡಲು ಕಾರಣವಾದ ಅಂಶಗಳ ಬಗ್ಗೆಯೂ ಹೇಳಿದ್ದಾರೆ. ತಪ್ಪದೇ ಓದಿ)