ಸಾಮಾನ್ಯವಾಗಿ ಧಾರಾವಾಹಿಗಳು ನಾಯಕಿಯ ಹೆಸರಿನಲ್ಲೇ ಇರುತ್ತವೆ. ಆದರೆ ಇಲ್ಲಿ ಆಕೃತಿ ಎನ್ನುವುದು ನಾಯಕಿಯ ಹೆಸರಲ್ಲ. ಅದೊಂದು ಆಕಾರ! ಹೆಸರೇ ಕುತೂಹಲ ಮೂಡಿಸಬೇಕಾದರೆ, ಕತೆ ಎಷ್ಟೊಂದು ಕೌತುಕವಾಗಿರಬಹುದಲ್ಲವೇ? ಅಂಥದೊಂದು ನಿರೀಕ್ಷೆ ಮೂಡಿಸುವ ಧಾರಾವಾಹಿ ಆಕೃತಿ'ಯು ಇಂದಿನಿಂದ ಕನ್ನಡದ ಜನಪ್ರಿಯ ವಾಹಿನಿ
ಉದಯ’ದಲ್ಲಿ ಪ್ರಸಾರವಾಗಲಿದೆ. ಇನ್ನು ಮುಂದೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ರ ಹೊತ್ತಲ್ಲಿ ಆಕೃತಿಯದೇ ಕಾರುಬಾರು.
ಹೆಸರಿನ ಮೂಲಕ ದೆವ್ವದ ಧಾರಾವಾಹಿ ಎನ್ನುವ ಸೂಚನೆ ಸಿಕ್ಕರು ಕೂಡ ಇದು ಮನೆ ಮಂದಿ ಎಲ್ಲ ಕುಳಿತು ನೋಡಬಹುದಾದ ಕೌಟುಂಬಿಕ ಧಾರಾವಾಹಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಥಾನಾಯಕಿ ದಿವ್ಯಾ ಮಹಾತ್ವಾಕಾಂಕ್ಷಿ ಹೆಣ್ಣು. ಅವಳ ತಂದೆ ಪ್ರಜ್ವಲ್, ತಾಯಿ ಚೈತ್ರಾ ಮತ್ತು ತಮ್ಮ ಸುಜಯ್. ಇವರ ಕುಟುಂಬ ಚಿಕ್ಕದಾಗಿದ್ದು, ಇವರ ಮನೆಯಲ್ಲಿ ಸಂತೋಷ ಮನೆಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆ ಫಾರ್ಮ್ ಹೌಸ್ ಕೊಂಡುಕೊಳ್ಳುತ್ತಾರೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನೆಲೆ ಇದೆ. ಆ ಆಕೃತಿಯಿಂದ ಸಂತೋಷತುಂಬಿದ್ದ ಕುಟುಂಬ ನಾನಾ ವಿಚಿತ್ರ ಘಟನೆಗಳನ್ನು ಎದುರಿಸುತ್ತಾ ಹಲವಾರು ಅನಿರೀಕ್ಷಿತ ತಿರುವುಗಳಿಗೆ ಗುರಿಯಾಗುತ್ತದೆ. ಇದು ಕಾಕತಾಳಿಯ ಅಲ್ಲ. ಇದಕ್ಕೆ ಕಾರಣ ಇದೆ. ಆ ಕಾರಣ ಏನು? ಆ ಆಕೃತಿಯ ಹಿನ್ನಲೆ ಏನು? ಇವರ ಕುಟುಂಬಕ್ಕೂ ಮನೆಗೂ ಏನೂ ಸಂಬಂಧ? ದಿವ್ಯಾ ಅಪಾಯಗಳಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡುತ್ತಾಳೆ ಎನ್ನುವುದೇ ಆಕೃತಿಯ ಕಥಾಹಂದರ.
ಇದೊಂದು ವಿಭಿನ್ನ ಕಥೆಯಾಗಿದ್ದು, ಇಲ್ಲಿಯವರೆಗೆ ಕಿರುತೆರೆಯಲ್ಲಿ ನೋಡಿರದಂತಹ ಚಿತ್ರಕಥೆಯ ಶೈಲಿಯಲ್ಲಿ ಮೂಡಿಬರಲಿದೆ. ಹಾಗಾಗಿ ಇದು ಕಿರುತೆರೆ ಲೋಕಕ್ಕೆ ಹೊಸದಾಗಿದೆ. ಧಾರಾವಾಹಿಯನ್ನು ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಈ ಧಾರಾವಾಹಿಯ ಮೂಲಕ ಹೊಸ ಪರಿಚಯವಾಗಿ ತನ್ವಿರಾವ್, ನೇತ್ರಾವತಿ ಜಾದವ್, ಬಾಬಿ, ನಟಿಸುತ್ತಿದ್ದಾರೆ. ಕಿರುತೆರೆ ನಟ ಪವನ್, ಪ್ರಖ್ಯಾತ್, ತನುಜ, ಇವರುಗಳು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು ಇವರ ಜೊತೆ ಪ್ರಮುಖ ಪಾತ್ರದಲ್ಲಿ ಶ್ರೀಧರ್, ಉಷಾ ಭಂಡಾರಿ ಹೀಗೆ ಹಲವಾರು ಜನಪ್ರಿಯ ತಾರೆಗಳ ಸಮಾಗಮ ಇರಲಿದೆ.
ಖ್ಯಾತ ಸಿನಿಮಾ ನಿರ್ದೇಶಕರಾದ ಕೆ.ಎಂ. ಚೈತನ್ಯ ನಿರ್ಮಾಣ ಮಾಡುತ್ತಿದ್ದು, ಅವರಜತೆಯಾಗಿ ಹರಿದಾಸ್.ಪಿ ಕೆ.ಜಿ.ಎಫ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಮತ್ತು ನಿರ್ದೇಶನ ಎಂ. ಕುಮಾರ್, ಕಥೆ ಮತ್ತು ಚಿತ್ರಕಥೆ ಸಿದ್ಧಾರ್ಥ, ಸಂಭಾಷಣೆ ಮೃಗಶಿರ ಶ್ರೀಕಾಂತ್, ಶೀರ್ಷಿಕೆಗೀತೆ ಗುರುಕಿರಣ್, ಸಾಹಿತ್ಯ ಕವಿರಾಜ್, ಗಾಯಕರಾಗಿ ಅನುರಾಧಾಭಟ್ ಮತ್ತು ಸಂಕಲನದಲ್ಲಿ ಗುರುರಾಜ್ ಬಿ ಕೆ ಹೀಗೆ ಹಲವಾರು ಖ್ಯಾತನಾಮರ ತಂಡವೇ ಈ ಧಾರಾವಾಹಿಯಲ್ಲಿದೆ.