ಸರಳ, ಮನೋಜ್ಞ ಚಿತ್ರವೊಂದರ ಕುರಿತು..

ಆಕ್ಟ್ 1978 ಚಿತ್ರವನ್ನು ವೀಕ್ಷಿಸಿದ ಅಶೋಕ್ ಶೆಟ್ಟರ್ ಈ ಬಾರಿ ಸಿನಿಕನ್ನಡದ ಜತೆಗೆ ಚಿತ್ರದ ಕುರಿತಾದ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸದ ಪ್ರಾಧ್ಯಾಪಕರಾದ ಅಶೋಕ ಶೆಟ್ಟರ್ ಅಪರೂಪದಲ್ಲಿ ಮೆಚ್ಚುವ ಸಿನಿಮಾಗಳ ಪಟ್ಟಿಯಲ್ಲಿ ಆಕ್ಟ್ ಕೂಡ ಸ್ಥಾನ ಪಡೆದಿದೆ ಎನ್ನುವುದೇ ಚಿತ್ರಕ್ಕೆ ಫುಲ್ ಮಾರ್ಕ್ಸ್ ಸಿಕ್ಕಂತೆ ಎನ್ನಬಹುದು.

ನಾನು ಈ ಮಧ್ಯೆ ಸಿನಿಮಾಗಳನ್ನು ನೋಡುವುದು ಕಡಿಮೆ. ದೆಹಲಿಯಲ್ಲಿದ್ದ ಐದು ವರ್ಷಗಳಲ್ಲಿ ನಾವು ಕೆಲ ಗೆಳೆಯರು ಬೇರೆ ಬೇರೆ ದೇಶಗಳ ರಾಯಭಾರ ಕಚೇರಿಗಳಿಂದ ಪಾಸ್ ಪಡೆದು ಅವರು ಆಯೋಜಿಸುತ್ತಿದ್ದ ಸಿನಿಮಾ ಪ್ರದರ್ಶನಗಳಿಗೆ ಹೋಗುವ ಹುಚ್ಚು ಬೆಳೆಸಿಕೊಂಡಿದ್ದೆವು. ಆಗ ಫ್ರೆಂಚ್, ಜರ್ಮನ್, ರಶಿಯನ್, ಸ್ಪ್ಯಾನಿಷ್, ಜಪನೀಜ್, ಪೋಲಿಷ್ ಮತ್ತು ಇತರ ಸ್ಲಾವಿಕ್ ಭಾಷೆಗಳ ನೂರಾರು ಸಿನಿಮಾಗಳನ್ನು ನೋಡಿದ್ದುಂಟು. ಅದನ್ನು ಬಿಟ್ಟರೆ ಧಾರವಾಡದ ಚಿತ್ರಾ ಫಿಲ್ಮ್ ಸೊಸೈಟಿಯವರು ತೋರಿಸುವ ಸಿನಿಮಾಗಳನ್ನು ನೋಡಿದ್ದೇನೆ. ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿ ಲವ್ ಮಾಕ್ಟೇಲ್ ಮತ್ತು ದಿಯಾ ಕೊನೆಯದಾಗಿ ನೋಡಿದ ಕನ್ನಡ ಸಿನಿಮಾಗಳು. ಟಾಕೀಜ್ ನಲ್ಲಿ ಕುಳಿತು ಟೈಟಾನಿಕ್ ಸಿನಿಮಾ ನೋಡಿದ ನಂತರ ಸುಮಾರು ಹದಿನೈದಿಪ್ಪತ್ತು ವರ್ಷಗಳು ಕಳೆದ ಮೇಲೆ ಗೆಳೆಯ ಟಿ.ಕೆ ದಯಾನಂದ ಚಿತ್ರಕತೆ ಬರೆದಿದ್ದ ‘ಬೆಲ್ ಬಾಟಮ್’ ಸಿನಿಮಾನ ಕಳೆದ ವರ್ಷ ಟಾಕೀಜ್ ಗೆ ಹೋಗಿ ನೋಡಿದ್ದೆ. ಈಗ ಅವನು, ಫೇಸ್ಬುಕ್ ಫ್ರೆಂಡ್ಸ್ ಆದ ಮಂ ಸೋ ರೆ, ಬಿ ಆರ್ ಭಾಸ್ಕರ್ ಪ್ರಸಾದ್, ಬಿ ಸುರೇಶ ಮೊದಲಾದವರೆಲ್ಲ ಭಾಗಿಯಾಗಿರುವ ‘ಆ್ಯಕ್ಟ್ 1978’ ಸಿನಿಮಾ ನೋಡಿ ಬಂದೆ. ಭ್ರಷ್ಟ ವ್ಯವಸ್ಥೆಯೊಂದರಡಿ ಬಸವಳಿದ ಜೀವಗಳೆರಡು ಬೇಸತ್ತು ಕೊನೆಗೆ ಆ ವ್ಯವಸ್ಥೆಗೆ ಬಿಸಿ ಮುಟ್ಟಿಸಲು ವೈಯಕ್ತಿಕ ನೆಲೆಯಲ್ಲಿ “ಭಯೋತ್ಪಾದನೆ” ಯನ್ನು ಒಂದು ವಿಧಾನವಾಗಿ ಆಯ್ಕೆ ಮಾಡಿಕೊಂಡ ವಸ್ತುವಿನ ಸುತ್ತ ಹೆಣೆಯಲಾದ ಕತೆಯಲ್ಲಿ ಸಾಮಾಜಿಕ ಬದುಕಿನ ಮಾನವೀಯ ಹಾಗೂ ಅಮಾನವೀಯ ಮುಖಗಳೆರಡೂ ಅನಾವರಣಗೊಂಡಿವೆ. ಹಿಂದಿಯಲ್ಲಿ ಬಂದಿದ್ದ, ನಾಸೀರುದ್ದೀನ್ ಶಾ ಲೀಡ್ ಪಾತ್ರದಲ್ಲಿದ್ದ, ‘ವೆನ್ಸ್ ಡೇ’ ಸಿನಿಮಾನ ಇದು ನೆನಪಿಸುತ್ತದಾದರೂ ಅವೆರಡಕ್ಕೆ ಹೋಲಿಕೆ ಇಲ್ಲ. ಅದೇನಿದ್ದರೂ ವ್ಯವಸ್ಥೆಗೆ ವೈಯಕ್ತಿಕ ನೆಲೆಯಲ್ಲಿ ಕಠಿಣ ಬಗೆಯಲ್ಲಿ ಪಾಠ ಕಲಿಸುವ ಮಾರ್ಗೋಪಾಯದ ಆಯ್ಕೆಗೆ ಸೀಮಿತವಾಗಿ ಮುಗಿಯುತ್ತದೆ.

Act 1978 ಸಿನಿಮಾದ ಚಿತ್ರೀಕರಣದ ಬಹುಭಾಗ ಸರಕಾರಿ ಕಚೇರಿಯೊಂದರ ಆವರಣ, ಆ ಕಟ್ಟಡದಲ್ಲೊಂದಷ್ಟು ಸಿಬ್ಬಂದಿ ಇರುವ ಒಂದು ಕೋಣೆ, ಮತ್ತು ಗೃಹ ಸಚಿವನ ಆಫೀಸು ಇಷ್ಟರಲ್ಲೇ ಮುಗಿದಿದ್ದರೂ ಏಕತಾನತೆಗೆ ಎಡೆಯಿಲ್ಲದಂತೆ ಒಂದು ದಿನಪೂರ್ತಿ ಘಟಿಸುವ ವಿದ್ಯಮಾನಗಳನ್ನು ನಿರ್ವಹಿಸಿದ ಗಟ್ಟಿ ಬಂಧ ಮತ್ತು ನಟನೆ ಹಾಗೂ ಮಾತಿನ ಚುರುಕುತನದಿಂದಾಗಿ ಆರಂಭದಿಂದ ಅಂತ್ಯದ ವರೆಗೂ ಕೊಂಚವೂ ಬೇಸರವಾಗದ ಹಾಗೆ ಪ್ರೇಕ್ಷಕರನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ. ಆದರ ನಡುವೆಯೇ ನಮ್ಮ ಅಧಿಕಾರಶಾಹಿ, ಮಾಧ್ಯಮ, ರೈತಾಪಿ ಬದುಕಿನ ವಾಸ್ತವಗಳು, ಸರಕಾರಿ ಕಚೇರಿಗಳ ಭ್ರಷ್ಟ ವ್ಯವಸ್ಥೆಯ ಒಳಸುಳಿಗಳು ಅನಾವರಣಗೊಳ್ಳುತ್ತ ಹೋಗುತ್ತವೆ.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಲ್ಲಿ ನಾಯಕಿ ಗೀತಾ ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡ, ಕಚೇರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಬರುವ ಜನರನ್ನು ಸುಲಿವ ಸಿಬ್ಬಂದಿ ಮತ್ತೆಲ್ಲೋ ಮತ್ತೆ ಬೇರೆ ಬಗೆಯ ಭ್ರಷ್ಟ ವ್ಯವಸ್ಥೆಯಲ್ಲಿ ತಾವು ಅದರ victims ಆಗಿರುತ್ತಾರೆನ್ನುವದನ್ನು, ಅವರೂ ಬೃಹದಾಕಾರದ ಭ್ರಷ್ಟ ವ್ಯವಸ್ಥೆಯೊಂದರ ವಿವಿಧ ಸ್ತರದ ಬಲಿಪಶುಗಳೆನ್ನುವದನ್ನು ಈ ಚಿತ್ರ ಬಿಂಬಿಸಿದ್ದು. ಒಂದು ವ್ಯವಸ್ಥೆ ಕೃತಕವಾಗಿ ನಿರ್ಮಿಸಿದ ಪ್ರತಿಷ್ಠೆಯ ಪೊಳ್ಳು ಭ್ರಮೆಗಳಿಗೆ ಮತ್ತು ಪ್ರಲೋಭನೆಗಳಿಗೆ ಒಳಗಾಗುತ್ತ ಹೇಗೆ ಜನ ಮಾನವೀಯ ಸಂವೇದನೆಗಳನ್ನು ಪೆಡಸುಗೊಳಿಸಿಕೊಳ್ಳುತ್ತಾರೆ ಎನ್ನುವದು ಇಲ್ಲಿ ವ್ಯಕ್ತವಾಗಿದೆ.

ಕಮರ್ಶಿಯಲ್ ಚಿತ್ರಗಳಲ್ಲಿ ಶುರುವಿನಿಂದ ಅಂತ್ಯದ ವರೆಗೆ ಅಗತ್ಯವಿದ್ದೋ ಇಲ್ಲದೆಯೋ ಇದ್ದೇ ಇರುವ ಹಿನ್ನೆಲೆ ಸಂಗೀತ, ಧಾಂ ಧೂಂ ಅಬ್ಬರ, ಹಾಡು, ಕುಣಿತಗಳೇನೂ ಇಲ್ಲದ, ಮತ್ತು ಅವು ಇರಬೇಕಾಗಿತ್ತು ಎಂದು ಅನ್ನಿಸದ ಚಿತ್ರವಿದು. ಹಿತಮಿತ ಹಾಸ್ಯವಿರುವ‌ ಮತ್ತು ಅಗತ್ಯಕ್ಕಿಂತ ಹೆಚ್ಚು ಗಂಭೀರವಾಗದ ಈ ಚಿತ್ರ ಗುಣಮಟ್ಟದ ಛಾಯಾಗ್ರಹಣ, ಒಳ್ಳೆಯ ಅಭಿನಯ ಮತ್ತು ಚುರುಕು ಸಂಭಾಷಣೆಗಳಿಂದಲೂ ಸೆಳೆಯುತ್ತದೆ. ಯಜ್ಞಾ ಶೆಟ್ಟಿ ಸಂಪೂರ್ಣವಾಗಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಸಮಂಜಸವಾಗಿ ಹೇಳಬೇಕೆಂದರೆ ಅವರು ಅಭಿನಯಿಸಿದ್ದಾರೆ ಎನ್ನುವದಕ್ಕಿಂತ ಆ ಪಾತ್ರವೇ ಆಗಿದ್ದಾರೆ. ನಿರ್ದೆಶನವೂ ಎಲ್ಲಿಯೂ ಬಿಗುವು ಕಳೆದುಕೊಂಡಿಲ್ಲ. ಚಿತ್ರತಂಡಕ್ಕೆ ಅಭಿನಂದನೆಗಳು

Recommended For You

Leave a Reply

error: Content is protected !!