ಹಂಗಾಮದ ಎರಡನೇ ಅಲೆ..!!

2003ರಲ್ಲಿ ಪ್ರಿಯದರ್ಶನ್ ಅವರು ನಿರ್ದೇಶಿಸಿದ ಹಂಗಾಮ ಚಿತ್ರವು ಬಹು ಪ್ರಸಿದ್ಧಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗವು ಹಲವಾರು ಸಿನಿಮಾಗಳ ಸರಣಿಗಳನ್ನು ಮಾಡುವ ಅಭ್ಯಾಸ ಮಾಡಿಕೊಂಡಿದೆ. ಅತ್ಯಂತ ಹಾಸ್ಯಮಯವಾದ ಹಂಗಾಮ ಚಿತ್ರದ ಸರಣಿ ಈಗ ಬಿಡುಗಡೆಗೊಂಡಿದೆ. ಒಂದು ಅತ್ಯತ್ತಮ ಹಾಸ್ಯದ ಮಾತುಗಳನ್ನೊಳಗೊಂಡ ಚಿತ್ರಕ್ಕೆ, ಕೇವಲ ಹಾಸ್ಯ ಮಾತ್ರವಲ್ಲ ಅದಕ್ಕೊಂದು ಸರಿಯಾದ ರೀತಿಯಲ್ಲಿ ಕಥೆಯನ್ನು ಜೋಡಿಸಿದರೆ ಮೊಸರನ್ನದ ಜೊತೆ ಉಪ್ಪಿನಕಾಯಿ ಇದ್ದಂತೆ! ಆಸ್ವಾದಿಸಲು ಉತ್ತಮವಾಗಿರುತ್ತದೆ. ಆ ಪ್ರಯತ್ನವನ್ನು ಹಂಗಾಮ 2 ಚಿತ್ರತಂಡವು ಮಾಡಿರುವುದು ಕಾಣಬಹುದು.

ಸಿನಿಮಾದ ಟ್ರೇಲರ್ ನೋಡಿದಾಗ ನಮಗೆ ನಾಯಕನ ಜೀವನದಲ್ಲಿ ಆಗುವ ಗೊಂದಲಗಳು, ಎಡವಟ್ಟುಗಳು ಕಾಣುತ್ತದೆ. ನಾಯಕನ ತಂದೆ ಅವನಿಗೆ ಮದುವೆ ನಿಶ್ಚಯಿಸಿರುತ್ತಾರೆ. ಆದರೆ ಅಚಾನಕ್ ಆಗಿ ಅವನ ಹಳೆಯ ಪ್ರೇಯಸಿ ಒಂದು ಪುಟ್ಟ ಮಗುವಿನೊಂದಿಗೆ ಅವರ ಮನೆಗೆ ಬರುತ್ತಾಳೆ. ಆಕೆಯ ಆಗಮನ ಮನೆಯ ಪ್ರತಿಯೊಬ್ಬರಲ್ಲೂ ಗೊಂದಲ ಮೂಡಿಸುತ್ತದೆ.ಆಶ್ಚರ್ಯ ಚಕಿತರಾಗುತ್ತಾರೆ. ಆದರೆ ನಾಯಕನ ಪ್ರತಿಕ್ರಿಯೆ ಏನು? ಆಕೆಯ ಆಗಮನದ ಉದ್ದೇಶವೇನು ಎನ್ನುವುದಕ್ಕೆ ಚಿತ್ರದಲ್ಲಿ ಅನಿರೀಕ್ಷಿತವಾದ ತಿರುವುಗಳಿದ್ದು ಅವುಗಳನ್ನು ನಿರ್ದೇಶಕರು ಅಂತ್ಯದ ತನಕ ಮನರಂಜನಾತ್ಮಕವಾಗಿ ತೆಗೆದುಕೊಂಡು ಹೋಗಿದ್ದಾರೆ.

ಕನ್ನಡದಲ್ಲಿ “ಹಳೆ ಬೇರು, ಹೊಸ ಚಿಗುರು, ಸೇರಿರಲು ಬಲು ಸೊಬಗು” ಎಂಬ ಜನಪ್ರಿಯ ಮಾತಿದೆ. ಆ ಮಾತು ನಿಜ ಮಾಡುವಂತೆ ಈ ಚಿತ್ರತಂಡದ ತಾರಾಗಣವನ್ನು ರೂಪಿಸಲಾಗಿದೆ. ಪರೇಶ್ ರಾವಲ್, ಅಶುತೋಶ್ ರಾಣ, ಶಿಲ್ಪಾ ಶೆಟ್ಟಿ, ರಾಜ್ಪಾಲ್ ಯಾದವ್ ಅಂತಹ ಹಿರಿಯ ಕಲಾವಿದರ ಜತೆಯಲ್ಲಿ ನೂತನ ಕಲಾವಿದರಾದ ಮೀಝಾನ್ ಜಾಫ್ರಿ, ಪ್ರಣಿತಾ ಸುಭಾಷ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿರುವುದು ಗಮನಿಸುವ ಸಂಗತಿ. ಇಡೀ ಚಿತ್ರದಲ್ಲಿ ಯಾವುದೇ ರೀತಿಯ ಅಸಭ್ಯ ಹಾಸ್ಯದ ಗುರುತುಗಳು ಕಾಣುವುದಿಲ್ಲ. ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದಂತಹ ಚಿತ್ರಣ ಹಾಗು ಕೇಳಬಹುದಾದಂತಹ ಸರಳವಾದ, ಸ್ವಚ್ಛವಾದ, ಹಾಸ್ಯಭರಿತ ಸಂಭಾಷಣೆಯನ್ನು ಅನೂಪ್ ಗೋಸ್ವಾಮಿ ಮತ್ತು ಮನೀಷ್ ಕೋರ್ಡೆಯವರು ಬರೆದಿದ್ದಾರೆ.

ನಿರ್ದೇಶಕ ಪ್ರಿಯದರ್ಶನ್ 1994ರಲ್ಲಿ ಮಲಯಾಳಂನಲ್ಲಿ ತಾವೇ ನಿರ್ದೇಶಿಸಿದ್ದ ‘ಮಿನ್ನಾರಂ’ ಚಿತ್ರದ ರಿಮೇಕ್ ಆಗಿ ಈ‌ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಚಿತ್ರದಲ್ಲಿ ತಮ್ಮ ಹಾಸ್ಯಭರಿತ ನಟನೆಯಿಂದ ಮಿಂಚಿದ ರಾಜ್ ಪಾಲ್ ಯಾದವ್, ಪರೇಶ್ ರಾವಲ್ ಅವರನ್ನು ನೋಡುವುದೆ ಕಣ್ಣಿಗೆ ಔತಣದಂತೆ. ಅವರ ಮನೆಯ ಮಕ್ಕಳು ಮಾಡುವ ಕಿತಾಪತಿಗಳು ಕೂಡ ಚಿತ್ರದಲ್ಲಿ ಮುಖ್ಯ ಅಂಶವಾಗಿ ಕಂಡುಬರುತ್ತದೆ. ಹಂಗಾಮ 2 ಸಿನಿಮಾ ಶುರುವಾದಾಗಿನಿಂದ ಅಂತ್ಯದ ವರೆಗೂ ಚಿತ್ರದಲ್ಲಿರುವ ಕುತೂಹಲವನ್ನು ಕಾಪಾಡಿಕೊಂಡಿದೆ. ಸರಿಯಾದ ಸಮಯಕ್ಕೆ ಅನಿರೀಕ್ಷಿತ ತಿರುವುಗಳನ್ನು ನೀಡಿರುವ ಈ ಸಿನಿಮಾ ಕೌಟುಂಬಿಕ ಹಾಸ್ಯ ಚಿತ್ರವಾಗಿದೆ.

Recommended For You

Leave a Reply

error: Content is protected !!
%d bloggers like this: