ಶೇರ್ ಶಾ : ವೀರ ಯೋಧನ ಅಮರ ಕಥನ

ಯೆ ದಿಲ್ ಮಾಂಗೆ ಮೋರ್! ಭಾರತೀಯ ಸೇನೆಯ ಬಗ್ಗೆ, ಯೋಧರ ಬಗ್ಗೆ ಅದೆಷ್ಟೋ ಸಿನಿಮಾಗಳು ಬಂದಿದ್ದರು ನಮ್ಮ ಹೃದಯ ಮತ್ತಷ್ಟು ಸಿನಿಮಾಗಳನ್ನು ನೋಡಲು, ಇತಿಹಾಸದ ಕಥೆಗಳನ್ನು ತಿಳಿಯಲು ಪರಿತಪಿಸುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹೇಳುವ ಹಾಗೆ ಈ ವಿಷಯದಲ್ಲಿ ಯೆ ದಿಲ್ ಮಾಂಗೆ ಮೋರ್!

ಯಾರು ಕ್ಯಾಪ್ಟನ್ ವಿಕ್ರಮ್ ಬಾತ್ರಾ? ಪೆಪ್ಸಿ ಕಂಪೆನಿಯ ಘೋಷ ವಾಕ್ಯವಾದ ಯೆ ದಿಲ್ ಮಾಂಗೆ ಮೋರ್ ಗು ಆತನಿಗು ಏನು ಸಂಬಂಧ?

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಒಬ್ಬ ಧೀರ ಯೋಧನಾಗಿದ್ದ. ಅವನ ಕಥೆ ಅದೆಷ್ಟೋ ಜನರಿಗೆ ಅಪರಿಚಿತ. ಅವನ ಜೀವನದ ಕಥೆಯೆ, ಸಂದೀಪ್ ಶ್ರೀವಾತ್ಸವ್ ಬರೆದಿರುವ ಹಾಗು ವಿಷ್ಣುವರ್ಧನ್ ನಿರ್ದೇಶಿಸಿರುವ ಶೇರ್ ಶಾ ಸಿನಿಮಾ. ಯುದ್ಧಭೂಮಿಯಿಂದಲೇ ಶುರುವಾಗಿ ಯುದ್ಧಭೂಮಿಯಲ್ಲಿಯೆ ಮುಕ್ತಾಯವಾಗುವ ಈ ಸಿನಿಮಾದಲ್ಲಿ ವಿಕ್ರಮ್ ಬಾತ್ರಾ ಜೀವನದ ಅತ್ಯಂತ ಮಹತ್ವವಾದ ಘಟ್ಟವಾದ ಕಾರ್ಗಿಲ್ ಯುದ್ಧದ ಸಂದರ್ಭವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ವಿಕ್ರಮ್ ಬಾತ್ರಾ ಬದುಕಿದ್ದು ಕೇವಲ 25 ವರ್ಷಗಳು ಆದರೆ ಆತನ ಸಾಧನೆ ಅವಿಸ್ಮರಣಿಯ.

ಮಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡ ಸಿದ್ದಾರ್ಥ್ ಮಲ್ಹೋತ್ರ ಒಬ್ಬ ಯೋಧನ ಪಾತ್ರವನ್ನು ಅಷ್ಟೇ ನಿಷ್ಠೆ ಹಾಗು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ವಿಕ್ರಮ್ ಬಾತ್ರಾ ತನ್ನ ಎಳೆಯವಯಸ್ಸಿನಿಂದಲೂ ಸೈನ್ಯಕ್ಕೆ ಸೇರುವ ಆಸೆಯನ್ನು ಹೊತ್ತಿರುತ್ತಾನೆ. ಅದಕ್ಕಾಗಿಯೆ ಕಷ್ಟಪಟ್ಟು ಸೇನೆಯನ್ನು ಸೇರಿ ದೇಶದ ಸೇವೆಯಲ್ಲಿ ನಿಯೋಜಿತನಾಗುತ್ತಾನೆ. ತನ್ನ ತಂಡದಲ್ಲಿ ಅತ್ಯಂತ ಚುರುಕು ಮತಿಯ ಸೈನಿಕ ವಿಕ್ರಮ್ ಆಗಿರುತ್ತಾನೆ. ಅವನ ಸಾಮರ್ಥ್ಯವನ್ನು ನೋಡಿ ಅವನಿಗೆ 1999ರಲ್ಲಿ ನೆಡೆದ ಭಾರತ-ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧದ ಸಮಯದಲ್ಲಿ ತಂಡದ ಮುಂದಾಳತ್ವ ವಹಿಸುವ ಅವಕಾಶ ಸಿಗುತ್ತದೆ. ರಣತಂತ್ರಗಳು-ಪ್ರತಿತಂತ್ರಗಳನ್ನು ಹೂಡುವ ರೀತಿಯನ್ನು ಬಲು ಸೂಕ್ಷ್ಮವಾಗಿ ತೋರಿಸಲಾಗಿದೆ ಈ ಚಿತ್ರದಲ್ಲಿ.

ಕಾರ್ಗಿಲ್ ಪರ್ವತದ ಒಂದು ಶಿಖರವನ್ನು ಪಾಕಿಸ್ತಾನಿಗಳಿಂದ ಮುಕ್ತಿಗೊಳಿಸಲು ಹೊರಟ ತಂಡದ ಮುಂದಾಳು ವಿಕ್ರಮ್ ಆಗಿರುತ್ತಾನೆ. ಅವನಿಗೆ “ಗೆದ್ದ ಮೇಲೆ ಏನೆಂದು ಸೂಚನೆ ನೀಡುವೆ?” ಎಂದು ಅವನ ಮೇಲಧಿಕಾರಿ ಕೇಳಿದಾಗ ವಿಕ್ರಮ್ ಹೇಳಿದ ಉತ್ತರ “ಯೆ ದಿಲ್ ಮಾಂಗೆ ಮೋರ್”. ಏನು ಅದರ ಅರ್ಥ ಎಂದರೆ ಅವನು ಕೇವಲ ಒಂದು ಶಿಖರವನ್ನು ಸ್ವತಂತ್ರಗೊಳಿಸಿ ಸುಮ್ಮನಾಗುವುದಿಲ್ಲ ಇನ್ನೂ ಮುಂದಿನ ಶಿಖರಗಳನ್ನೂ ಪಾಕಿಸ್ತಾನಿಗಳಿಂದ ಮುಕ್ತಿಗೊಳಿಸಬೇಕು ಎಂದು ಹೇಳುತ್ತಾನೆ. ಅದೇ ಸಮಯದಲ್ಲಿ ಅವನ ಮೇಲಧಿಕಾರಿ ವಿಕ್ರಮ್ ಬಾತ್ರಾನಿಗೆ ನೀಡಿದ ಕೋಡ್ ನೇಮ್ “ಶೇರ್ ಶಾ! ರಾಜಸಿಂಹದಂತಿದ್ದ ವಿಕ್ರಮ್ ಗೆ ಅದು ಅನ್ವರ್ಥ.

ಸೈನಿಕ, ಸೇನೆಗೆ ಸಂಬಂಧಿಸಿದ ಚಿತ್ರವನ್ನು ರೂಪಿಸಬೇಕಾದರೆ ಅವರ ಮಾತುಗಳಲ್ಲಿ ಭಾವ ತುಂಬಿರಬೇಕಾಗುತ್ತದೆ, ನಟನೆಯಲ್ಲಿ ಅವರ ಧೀರತನ, ತ್ಯಾಗಕ್ಕೆ ಸಿದ್ಧರಿರುವ ಮನೋಭಾವ, ದೇಶಪ್ರೇಮದ ಕಿಚ್ಚು, ಇವೆಲ್ಲವೂ ಮುಖ್ಯ ಅಂಶಗಳಾಗಿರುತ್ತದೆ. ಈ ಚಿತ್ರವು ಇವೆಲ್ಲವನ್ನು ಒಳಗೊಂಡಿರುವ ಚಿತ್ರ. ಉತ್ತಮ ಮಟ್ಟದ ಸಂಭಾಷಣೆ ಹೊಂದಿರುವ ಈ ಚಿತ್ರದ ನಡುನಡುವೆ ಬರುವ ಸ್ಫೂರ್ತಿದಾಯಕ ಮಾತುಗಳಿಂದ ಮೈ-ಮನಗಳನ್ನು ರೋಮಾಂಚನಗೊಳಿಸುತ್ತದೆ. ಹೇಗೆ ಒಬ್ಬಳು ಪ್ರೇಯಸಿ ಸೇನೆಯಲ್ಲಿರುವ ತನ್ನ ಪ್ರಿಯತಮನಿಗಾಗಿ ಕಾಯುತ್ತಾಳೆ, ಅವಳ ಕಷ್ಟಗಳನ್ನು ಸಹ ಭಾವ ತುಂಬಿದ ಮಾತುಗಳಿಂದ ತೋರಿಸಲಾಗಿದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಿಯಾರಾ ಅಡ್ವಾನಿ ಭಾವಪೂರ್ಣವಾದ ನಟನೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಕೆಲವೊಂದು ಗಮನಿಸಲೇಬೇಕಾದ ಸಂಗತಿಗಳಿವೆ. ಯುದ್ಧಭೂಮಿಯಲ್ಲಿ ಸೈನಿಕರು ಹೇಗೆ ಊಟ-ನಿದ್ರೆ ಬಿಟ್ಟು ಕೈಯಲ್ಲಿ ಬಂದೂಕುಗಳನ್ನು ಹಿಡಿದು ದೇಶಕ್ಕಾಗಿ ಹೋರಾಡುತ್ತಾರೆ, ಹಸಿವಾದಾಗ ದ್ರಾಕ್ಷಿ ಗೋಡಂಬಿಯಂತಹ ಡ್ರೈಫ್ರೂಟ್ಸ್ ತಿಂದು ಬದುಕುತ್ತಾರೆ, ನೆತ್ತರು ಹರಿಸುತ್ತಾರೆ, ಎಂಬುದೆಲ್ಲವು ಗಮನಾರ್ಹ.

ಈ ಚಿತ್ರ ನೋಡಿದ ವಿಕ್ರಮ್ ಬಾತ್ರಾ ಕುಟುಂಬದವರು ಭಾವುಕಾರಾದರು, ಕಣ್ಣೀರಿಟ್ಟರು ಎಂದು ಸಿದ್ಧಾರ್ಥ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಈ ಚಿತ್ರವನ್ನು ಯಾರೇ ವೀಕ್ಷಿಸಿದರು ಕಣ್ಣಲ್ಲಿ ನೀರು ಬರುವ ಸಾಧ್ಯತೆಯಿದೆ, ಯಾಕೆಂದರೆ, ಕೊನೆಯಲ್ಲಿ ತೋರಿಸಿರುವ ವಿಕ್ರಮ್ ಬಾತ್ರಾ ಅವರು ಅಂದು ನೀಡಿದ ಸಂದರ್ಶನದ ತುಣುಕು, ಹಾಗು ಅಂದಿನ ನಿಜವಾದ ಘಟನೆಗಳ ತುಣುಕಗಳನ್ನು ತೋರಿಸಲಾಗಿದೆ.

ನೈಜ ಕಥೆಗೆ ಅತ್ಯಂತ ಹತ್ತಿರದಲ್ಲಿ ತೆಗೆದುಕೊಂಡು ಹೋಗಿರುವ ಈ ಸಿನಿಮಾಕ್ಕೆ ಸುಂದರವಾದ ಹಿನ್ನಲೆ ಸಂಗೀತವನ್ನು ಯುವನ್ ಶಂಕರ್ ರಾಜಾ ಅವರು ನೀಡಿದ್ದಾರೆ. ಸಹೋದರ ವಿಶಾಲ್ ಬಾತ್ರಾ ನಿರೂಪಣೆ ಮಾಡುವ ಶೈಲಿಯಲ್ಲಿ ಕಥೆ ಹೇಳುವುದು ಈ ಚಿತ್ರವನ್ನು ಆಕರ್ಷಣೀಯ ವಿಷಯ ಎಂದೆನ್ನಬಹುದು.

ಪ್ರತಿಯೊಬ್ಬ ಭಾರತೀಯನಿಗೆ ಈ ಚಿತ್ರದ ಮೂಲಕ ದೇಶದ ಒಬ್ಬ ಧೀರ ಯೋಧನ ಕಥೆ ಸ್ಫೂರ್ತಿಯಾಗುವುದರಲ್ಲಿ ಸಂದೇಹವಿಲ್ಲ.

Recommended For You

Leave a Reply

error: Content is protected !!
%d bloggers like this: