ಚಿತ್ರ: ಕುರುತಿ
ತಾರಾಗಣ: ಪೃಥ್ವಿರಾಜ್, ಸ್ರಿಂಡ
ನಿರ್ದೇಶನ: ಮನು ವಾರ್ಯರ್
ನಿರ್ಮಾಣ: ಸುಪ್ರಿಯಾ ಮೆನನ್
ಮಲಯಾಳಂನಲ್ಲಿ ಕುರುತಿ ಎಂದರೆ ಬಲಿ ಎಂದು ಅರ್ಥ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಇಂದು ನಮ್ಮ ಸಮಾಜದಲ್ಲಿ ಬಲಿಯಾಗುತ್ತಿರುವವರು ಯಾರು ಮತ್ತು ಯಾಕೆ ಎನ್ನುವ ಕುರಿತಾದ ಅರ್ಥಪೂರ್ಣ ವಿಚಾರಕ್ಕೆ ಕನ್ನಡಿ ಹಿಡಿಯಲಾಗಿದೆ.
ಅದು ಕೇರಳದ ಮಲೆನಾಡಿನ ಭಾಗ. ಅಲ್ಲಿನ ನಿವಾಸಿ ಇಬ್ರಾಹಿಂ ಎಂಬ ಯುವಕ ರಬ್ಬರ್ ಕೆಲಸಗಾರ. ವರ್ಷದ ಹಿಂದೆ ಭೂಕುಸಿತದಲ್ಲಿ ಪತ್ನಿ ಮತ್ತು ಮಗುವನ್ನು ಕಳೆದುಕೊಂಡ ವ್ಯಕ್ತಿ. ಆತನ ಮನೆಯಲ್ಲಿ ಅಸೌಖ್ಯದಲ್ಲಿರುವ ತಂದೆ ಮೂಸ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸದಾ ಮೊಬೈಲಲ್ಲಿ ಬ್ಯುಸಿಯಾಗಿರುವ ತಮ್ಮ ರಸೂಲ್ ಮಾತ್ರ ಇರುತ್ತಾರೆ. ಮನೆಯ ಪೂರ್ತಿ ಜವಾಬ್ದಾರಿ ಇಬ್ರಾಹಿಂನ ಮೇಲೆ ಇರುತ್ತದೆ. ಕೌಟುಂಬಿಕ ಜವಾಬ್ದಾರಿ ಇರುವ ವ್ಯಕ್ತಿಗೆ ಸಮಾಜಿಕ ಜವಾಬ್ದಾರಿ ತನ್ನಿಂದ ತಾನೇ ಮೈಗೂಡಿಕೊಳ್ಳುತ್ತದೆ. ಅದನ್ನು ಸಾಬೀತು ಪಡಿಸುವಂತೆ ಚಿತ್ರದಲ್ಲಿ ಇಬ್ರಾಹಿಂನ ವರ್ತನೆ ಇರುತ್ತದೆ. ಆದರೆ ಆತನ ತಮ್ಮ ಹಾಗಲ್ಲ; ವಾಟ್ಸಾಪ್ ಸಂದೇಶಗಳಲ್ಲಿ ಬರುವ ಕೋಮು ದ್ವೇಷವನ್ನು ಮೈಗೂಡಿಸಿ ಬೆಳೆಯುತ್ತಿರುವವನು. ಆದರೆ ಆ ಮನೆಯಿದ್ದ ವಾತಾವರಣ ಅದಕ್ಕೆ ಪೂರಕವಾಗಿರುವುದಿಲ್ಲ.
ನೆರೆಯಲ್ಲೇ ಇರುವುದು ಹಿಂದೂ ಕುಟುಂಬ. ಅಲ್ಲಿರುವ ಪ್ರೇಮ್ ಮತ್ತು ಆತನ ತಂಗಿ ಸುಮಾ ಕೂಡ ಕಳೆದ ಭೂಕುಸಿತದಲ್ಲಿ ಮನೆಯವರೆಲ್ಲರನ್ನು ಕಳೆದುಕೊಂಡವರು. ಹಾಗಾಗಿ ಆ ಎರಡು ಮನೆಗಳಲ್ಲಿ ಹೆಚ್ಚಿನ ಸೌಹಾರ್ದತೆ ಇರುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ ಹೆಣ್ಣು ದಿಕ್ಕಿಲ್ಲದ ಆ ಮುಸಲ್ಮಾನರ ಮನೆಗೆ ಬಂದು, ಅಡುಗೆ ಮಾಡಿ, ಬಟ್ಟೆ ಒಗೆದು ಹೋಗುವಷ್ಟು ಆತ್ಮೀಯತೆ ಸುಮಾಗಿರುತ್ತದೆ. ಆದರೆ ಅದೊಂದು ರಾತ್ರಿ ಅಲ್ಲಿಗೆ ದಿಢೀರನೆ ಹೊರಗಿನವರ ಪ್ರವೇಶವಾಗುತ್ತದೆ. ಆಗ ನಡೆಯುವ ಘಟನೆ ಆ ಎಲ್ಲ ಸಂಬಂಧಗಳ ಒಳಗಿರುವ ಬೆಂಕಿಯನ್ನು ತೋರಿಸಿಕೊಡುತ್ತದೆ.
ಆರಂಭದಿಂದಲೇ ಚಿತ್ರ ನೋಡಲು ಶುರು ಮಾಡಿದರೂ ಅರ್ಧದಿಂದ ಕತೆ ಶುರುವಾದ ಭಾವ ನಮಗೆ ಮೂಡುತ್ತದೆ. ಅದಕ್ಕೆ ಸಿನಿಮಾದ ನರೇಶನ್ ರೀತಿ ಮುಖ್ಯ ಕಾರಣ. ನಿಧಾನಕ್ಕೆ ಸಹಜ ಸಂಭಾಷಣೆಗಳ ಮೂಲಕವೇ ಆಯಾ ಪಾತ್ರಗಳ ನಡುವಿನ ಸಂಬಂಧಗಳು ಅನಾವರಣವಾಗುತ್ತಾ ಹೋಗುತ್ತವೆ. ಅವೆಲ್ಲವನ್ನು ತಾಳ್ಮೆಯಿಂದ ಅರ್ಥ ಮಾಡಿಕೊಂಡು ಹೊರಟರೆ ಮಧ್ಯದಲ್ಲೊಂದು ಟ್ವಿಸ್ಟ್ ಧುತ್ತನೆ ಎದುರಾಗುತ್ತದೆ. ಒಂದು ರಾತ್ರಿಯ ಘಟನೆಯೇ ಪ್ರಮುಖವಾಗಿರುವ ಕಾರಣ ನಿಜಕ್ಕೂ ಇದು ಛಾಯಾಗ್ರಾಹಕರಿಗೆ ಚಾಲೆಂಜ್ ಅನಿಸಬಹುದಾದ ವಿಚಾರ. ಮಾತ್ರವಲ್ಲ ಅರ್ಧದಷ್ಟು ಕತೆ ಒಂದು ಪುಟ್ಟ ಮನೆಯಲ್ಲೇ ನಡೆದರೂ ಎಲ್ಲಿಯೂ ಅದು ಕೊರತೆಯಾಗದ ಹಾಗೆ ಚಿತ್ರೀಕರಿಸಿರುವ ಛಾಯಾಗ್ರಾಹಕರನ್ನು ಪ್ರಶಂಸಿಸಲೇಬೇಕು. ನಿರ್ದೇಶಕ ಮನು ವಾರ್ಯರ್ ಇಂಥದೊಂದು ಕತೆಯನ್ನು ಚಿತ್ರವಾಗಿಸಿದಾಗಲೇ ಗೆದ್ದಿದ್ದಾರೆ.
ಪೃಥ್ವಿರಾಜ್ ಎನ್ನುವ ನಟನಲ್ಲಿ ವೈವಿಧ್ಯತೆಯನ್ನು ಬಯಸುವವರಿಗೆ ಹೇಳಿ ಮಾಡಿಸಿದ ಪಾತ್ರದೊಡನೆ ಕಾಣಿಸಿಕೊಂಡಿದ್ದಾರೆ. ಆದರೆ ಆತ ನಿರ್ವಹಿಸಿರುವ ಲೈಖ್ ಪಾತ್ರದಲ್ಲೊಂದು ನಾಟಕೀಯತೆ ಎದ್ದು ಕಾಣಿಸುವಂತಿದೆ. ಧರ್ಮದ ಕುರಿತಾದ ಚರ್ಚೆಯ ವೇಳೆ ಎಲ್ಲರ ಮಾತುಗಳಲ್ಲಿಯೂ ಆರಂಭದ ಸಹಜತೆ ಇರುವುದಿಲ್ಲ. ಬಹುಶಃ ಕೋಮು ಅಮಲು ಮೈಗೂಡಿಸಿಕೊಂಡವರು ಸಹಜವಾಗಿರುವುದಿಲ್ಲ ಎಂದು ನಿರ್ದೇಶಕರು ಈ ಮೂಲಕ ಸೂಚಿಸಿರಲೂಬಹುದು. ಎರಡು ಧರ್ಮಗಳ ಎರಡೆರಡು ಮನಸ್ಥಿತಿಗಳನ್ನು ಸೀಮಿತ ಪಾತ್ರಗಳ ಮೂಲಕ ತೋರಿಸಲಾಗಿದೆ. ಅವರೆಲ್ಲ ಸಮಾಜದ ಪ್ರತೀಕಗಳಾಗಿದ್ದಾರೆ.
ಮೂಸ ಎನ್ನುವ ಮುದುಕನಾಗಿ ಮಾಮುಕೋಯ ಅಪರೂಪದಲ್ಲೊಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಮೂಲತಃ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಅವರು ಈ ವಯಸ್ಸಿನಲ್ಲಿಯೂ ಹೇಗೆ ಸಂದೇಶಗಳನ್ನು ನೀಡಬಲ್ಲ ಗಟ್ಟಿ ಪಾತ್ರವಾಗಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಪುತ್ರ ಇಬ್ರು ಯಾನೇ ಇಬ್ರಾಹಿಂ ಆಗಿ ಭರವಸೆಯ ಯುವನಟ ರೋಶನ್ ಮ್ಯಾಥ್ಯು ನಟನೆಯೂ ಗಮನ ಸೆಳೆಯುತ್ತದೆ. ಸುಮತಿಯಾಗಿ ಸ್ರಿಂಡ ಸೇರಿದಂತೆ ಪ್ರೇಮನಾಗಿ ಮಣಿಕಂಠನ್ ಆರ್ ಆಚಾರಿ ಮೊದಲಾದವರು ಪಾತ್ರಗಳಿಗೆ ಜೀವ ತುಂಬಿದ್ದಾರೆ. `ದೃಶ್ಯಂ’ ಚಿತ್ರದ ಎರಡನೇ ಭಾಗದ ಬಳಿಕ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಎಸ್ ಐ ಸತ್ಯನ್ ಪಾತ್ರದಲ್ಲಿ ನಟಿಸಿರುವ ಮುರಳಿ ಗೋಪಿ ಕೂಡ ಈ ಬಾರಿ ಮತ್ತೊಂದು ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ.
ಸುಮ್ಮನೆ ಎಂದು ಕಾಣುವ ದೃಶ್ಯಗಳು ಸಿಂಬಾಲಿಕ್ ಆಗಿ ಸಾಕಷ್ಟು ಭಾವಗಳನ್ನು ನಮ್ಮೊಡನೆ ಹಂಚಿಕೊಳ್ಳುವಂತಿವೆ. ಸಂಭಾಷಣೆಗಳು ಕೂಡ ಅಷ್ಟೇ ತೀಕ್ಷ್ಣವಾಗಿ, ನೇರವಾಗಿ ಧರ್ಮಗಳ ಬಗ್ಗೆ ಮಾತನಾಡಿವೆ. “ದೇಶದ ಇತಿಹಾಸ ಬದಲಾಯಿಸಿ ಬರೆಯಬೇಕು, ರಕ್ತಕ್ಕೆ ರಕ್ತದಲ್ಲೇ ಉತ್ತರಿಸಬೇಕು, ನನ್ನ ಧರ್ಮದವರಿಗೆ ನಾನು ಏನಾದರೂ ಸಹಾಯ ಮಾಡಲೇಬೇಕಲ್ಲ” ಎನ್ನುವ ಮಾತುಗಳು ಒಂದು ಧರ್ಮದವರದ್ದಾದರೆ, “ನಮಗೂ ಇಲ್ಲಿ ಬದುಕಬೇಕಿದೆ; ಎಷ್ಟೆಂದು ಅನ್ಯಾಯ ಸಹಿಸೋಣ?” ಎನ್ನುವ ಮಾತುಗಳು ಮತ್ತೊಂದು ಧರ್ಮದವರದ್ದಾಗಿರುತ್ತದೆ. ಜನರಿಗೆ ಪರಸ್ಪರ ಹಗೆಗೊಂದು ಕಾರಣ ಬೇಕು! ಅದರದೊಂದು ಕಿಡಿ ಸಾಕು ಸಮಾಜವನ್ನು ಬೆಂಕಿ ಮಾಡಲು. ಸಂಘಟನೆಗಳನ್ನು ನಿಷೇಧಿಸಬಹುದು ಆದರೆ ಆಶಯಗಳನ್ನಲ್ಲ.
ಅಕ್ಷರ ಕಲಿಸದಿದ್ದರೂ ಹಗೆ ಕಲಿಸುವವರಿಗೆ ಕೊರತೆ ಇಲ್ಲ. ಹೊಟ್ಟೆಗೆ ಇರದೆ ಉಪವಾಸ ಇದ್ದರೂ ಹಗೆ ಸಾಧಿಸುವಲ್ಲಿ ಸಂತೃಪ್ತಿ ಇರುತ್ತದೆ! ಅದುವೇ ಇಂಥ ಕೋಮುದ್ವೇಷ ಜ್ವಲಿಸುತ್ತಿರಲು ಕಾರಣವಾಗಿದೆ ಎಂದು ಅರ್ಥಪೂರ್ಣ ವಿಶ್ಲೇಷಣೆ ಕೂಡ ಸಂಭಾಷಣೆಗಳಲ್ಲಿದೆ. ಒಟ್ಟಿನಲ್ಲಿ ವಾಟ್ಸಾಪ್ ನೋಡಿ ಕೋಮು ದ್ವೇಷ ಮೂಡಿಸಿಕೊಂಡವರು ಚಿತ್ರ ನೋಡಿ ಒಂದಷ್ಟು ಅರಿವು ಮೂಡಿಸುವ ಪ್ರಯತ್ನ ನಡೆಸಿದರೆ ಅದು ಚಿತ್ರದ ನಿಜವಾದ ಗೆಲುವು ಎನ್ನಬಹುದು.
ಶಶಿಕರ ಪಾತೂರು