ಅಬ್ಬಾ..! ಮೈ ರೋಮಾಂಚನಗೊಳಿಸುವ ಚಿತ್ರ ಸರ್ದಾರ್ ಉದ್ಧಾಮ್ ಸಿಂಗ್. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಈ ಚಿತ್ರ ಉನ್ನತ ಸ್ಥಾನದಲ್ಲಿರುವ ಸಾಮರ್ಥ್ಯವಿರುವಂಥದ್ದು. ಈ ಸಿನಿಮಾ ನಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗಿ ಅಂತ್ಯದಲ್ಲಿ ಕಣ್ಣಂಚಿನಲ್ಲಿ ನೀರು ಮೂಡುವಂತೆ ಮಾಡುತ್ತದೆ.
ನಮ್ಮ ಕಣ್ಣೆದುರಿಗೇ ಬ್ರಿಟಿಷರು ಭಾರತೀಯರಿಗೆ ಹಿಂಸೆ ನೀಡುತ್ತಿರುವ ಹಾಗೆ, ನಮ್ಮ ಕಣ್ಣೆದುರಿಗೆ ಸರ್ದಾರ್ ಉಧಾಮ್ ಸಿಂಗ್‌ನ್ನು ಗಲ್ಲಿಗೇರಿಸುವ ಹಾಗೆ ಚಿತ್ರವನ್ನು ರೂಪಿಸುವುದರಲ್ಲಿ ನಿರ್ದೇಶಕ ಶೂಜಿತ್ ಸರ್ಕಾರ್ ಯಶಸ್ವಿಯಾಗಿದ್ದಾರೆ. ಚಿತ್ರದ ಯಶಸ್ಸು ಯಾವ ಮಟ್ಟಿಗೆ ಎಂದರೆ ಭಾರತದಿಂದ ಆಸ್ಕರ್‌ಗೆ ಪ್ರವೇಶ ಪಡೆಯುವ ಎರಡು ಚಿತ್ರಗಳಲ್ಲಿ ಸರ್ದಾರ್ ಉಧಾಮ್ ಕೂಡ ಒಂದು.
ಬ್ರಿಟಿಷರು 1919ರಲ್ಲಿ ಜಲಿಯನ್‌ವಾಲಾ ಬಾಗ್ ನಲ್ಲಿ ನಡೆಸಿದ ಮಾರಣಹೋಮದ ಕುರಿತು ಪ್ರತಿಯೊಬ್ಬ ಭಾರತೀಯನೂ ತಿಳಿದಿದ್ದಾನೆ. ರೌಲಟ್ ಆಕ್ಟ್ ವಿರುದ್ಧ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ಭಾರತೀಯರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲು ಮುಂದಾದ ಬ್ರಿಟಿಷ್ ಅಧಿಕಾರಿ ಜನರಲ್ ಡೈಯರ್. ಆದರೆ ಅವನಿಗೆ ಆಜ್ಞೆ ನೀಡಿದ್ದು ಮೈಕಲ್ ಓ’ಡ್ವೈಯರ್. ಉಧಾಮ್‌ಗೆ ಇದರ ಮಾಹಿತಿ ತಲುಪುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ. ವಿಷಯ ತಿಳಿದ ಕೂಡಲೇ ಅಲ್ಲಿಗೆ ಹೋಗಿ ನೋಡಿದರೆ ಅದು ಸ್ಮಶಾನವಾಗಿರುತ್ತದೆ. ಸಾವಿರಾರು ಮಂದಿ ಶವವಾಗಿ ಬಿದ್ದಿರುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು, ಯುವಕರು, ಪ್ರತಿಯೊಬ್ಬರ ರಕ್ತವು ಭೂಮಿಯಲ್ಲಿ ನದಿಯಂತೆ ಹರಿಯುತ್ತಿರುತ್ತದೆ. ಯಾರು ನಮ್ಮವರು, ಯಾರು ಪಕ್ಕದೂರಿನವರು ಎಂದು ಗುರುತು ಸಿಗದಂತೆ ಒಂದು ಶವದ ಮೇಲೆ ಮತ್ತೊಂದು ಶವ ಬಿದ್ದಿರುತ್ತದೆ.
ಸರ್ದಾರ್‌ಗೆ ಆಗ ಸುಮಾರು ಇಪ್ಪತ್ತು ವರ್ಷ. ಅವನಿಗೆ ಸ್ಮಶಾನದಲ್ಲಿ ನಡೆದ ಹಾಗೆ ಭಾಸವಾಗುತ್ತದೆ. ಕೆಲವರು ಇನ್ನೂ ಪ್ರಾಣ ಕಳೆದುಕೊಂಡಿರುವುದಿಲ್ಲ, ಗುಂಡಿನ ನೋವಿನಲ್ಲಿ ರಕ್ತದ ಹೊಳೆಯಲ್ಲಿ ನರಳುತ್ತಿರುತ್ತಾರೆ. ಅದನ್ನು ಗಮನಿಸಿದ ಸರ್ದಾರ್ “ಯಾರಾದರು ಬದುಕಿದ್ದೀರಾ?” ಎಂದು ಕೂಗುತ್ತಾ, ಬದುಕಿರುವವರನ್ನು ಒಂದು ತಳ್ಳುವ ಗಾಡಿಯ ಮೇಲೆ ಹಾಕಿ ಚಿಕಿತ್ಸೆಗೆ ಕರೆದೊಯ್ಯುತ್ತಾನೆ. ಒಬ್ಬೊಬ್ಬರ ನರಳಾಟ, ಸರ್ದಾರ್‌ನ ಒದ್ದಾಟ, ಎಲ್ಲವೂ ಕಣ್ಣಿಗೆ ಕಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ಇಲ್ಲಿಂದ ಸರ್ದಾರ್‌ನ ಕಥೆಯ ಆರಂಭ, ಆದರೆ ಚಿತ್ರದಲ್ಲಿ ಈ ಘಟನೆಯನ್ನು ಅಂತ್ಯದಲ್ಲಿ ತೋರಿಸಿ ಮನಸ್ಸಿನಲ್ಲಿ ಅಚ್ಚು ಮೂಡಿಸಿದ್ದು ಸಿನಿಮಾದ ಶಕ್ತಿ.
ಆನಂತರ, ಸರ್ದಾರ್ ಇಪ್ಪತ್ತೊಂದು ವರ್ಷಗಳ ಕಾಲ, ಸಾವಿರಾರು ಭಾರತೀಯರ ಹತ್ಯೆಗೆ ಕಾರಣವಾದ ಮೈಕಲ್ ಓ’ಡ್ವೈಯರ್ ಹತ್ಯೆ ಮಾಡಿ ಪ್ರತಿಭಟಿಸಬೇಕು ಎಂದು ತಯಾರಿ ನಡೆಸುತ್ತಾನೆ. ಶೇರ್ ಸಿಂಗ್, ಉದೇ ಸಿಂಗ್, ರಾಮ್ ಮೊಹಮ್ಮದ್ ಸಿಂಗ್ ಆಜಾದ್ ಎಂಬ ಹಲವಾರು ಹೆಸರುಗಳಲ್ಲಿ, ಸಾಕಷ್ಟು ಬಾರಿ ಲಂಡನ್‌ಗೆ, ಭಾರೀ ಹಿಮಭರಿತ ಶಿಖರದ ಹಾದಿಯಲ್ಲಿ ರಷ್ಯಾಗೆ ಪ್ರಯಾಣ ಮಾಡಿ ಭಾರತದ ಸ್ವಾತಂತ್ರ್ಯಕ್ಕೆ ತನ್ನಿಂದಾಗುವ ಕ್ರಾಂತಿಯನ್ನು ಮಾಡಬೇಕು ಎಂದು ಒದ್ದಾಡುತ್ತಿರುತ್ತಾನೆ. ಸರ್ದಾರ್‌ನ ಸಂಚು ಮೌನವಾಗಿಯೇ ನಡೆಯುತ್ತದೆ, ಆ ಮೌನದ ತೀವ್ರತೆಯನ್ನು ವಿಕ್ಕಿ ಕೌಶಾಲ್ ತನ್ನ ನಟನೆಯಲ್ಲಿ ರೋಚಕವಾಗಿ ನಿರ್ಮಿಸಿದ್ದಾರೆ. ಹೆಚ್ಚು ಮಾತು, ಸಂಭಾಷಣೆ ಇರದಿದ್ದರೂ ಮೌನದಲ್ಲಿಯೇ ದುಃಖ, ನೋವು, ಕೋಪ ಎಲ್ಲಾ ಭಾವಗಳನ್ನು ಗಟ್ಟಿಯಾಗಿ ರೂಪಿಸಿದ್ದಾರೆ. ತಾನು ಮಾಡಿದ ಸಂಚಿನಂತೆ ಲಂಡನ್ನಿನ ತುಂಬಿದ ಸಭೆಯಲ್ಲಿ ನಿರ್ಭಯವಾಗಿ ತನ್ನ ಪಿಸ್ತೂಲಿನಿಂದ ಆರು ಗುಂಡನ್ನು ಮೈಕಲ್ ದೇಹಕ್ಕಿಳಿಸಿ ಹತ್ಯೆ ಮಾಡಿದ ಬಳಿಕ ಆತನನ್ನು ಬ್ರಿಟಿಷರು ಸೆರೆ ಹಿಡಿಯುತ್ತಾರೆ.
ಬ್ರಿಟಿಷರು ಅವನಿಗೆ ನೀಡುವ ನೋವು, ಚಿತ್ರಹಿಂಸೆ, ಕಾದ ಸೂಜಿಯಲ್ಲಿ ಚುಚ್ಚುವುದು, ಕೈ-ಕಾಲುಗಳನ್ನು ಕಟ್ಟಿ ಹಾಕಿ ಲಾಠಿಯಲ್ಲಿ ಬಾರಿಸುವುದು, ತನ್ನ ಇಚ್ಛೆಯಂತೆ ಉಪವಾಸ ಕೂಡ ಇರಲು ಬಿಡದೆ ಒತ್ತಾಯಪೂರಕ ಬಾಯಿಗೆ ಪೈಪನ್ನು ಹಾಕಿ ಆಹಾರ ತುರುಕುವುದು, ಈ ಎಲ್ಲ ದೃಶ್ಯಗಳನ್ನು ನೋಡುವಾಗ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣೀರನ್ನು ನಾವು ಒರೆಸಿಕೊಳ್ಳುತ್ತಿರುತ್ತೇವೆ.
ಚಿತ್ರದ ಅಂತ್ಯದಲ್ಲಿ ತೋರಿಸುವ ವಿಷಯಗಳನ್ನು ನೋಡಿದಾಗ ಸಂಕಟವಾಗುತ್ತದೆ, ಬ್ರಿಟಿಷರು ಇಲ್ಲಿಯವರೆಗೂ ಜಲಿಯನ್ ವಾಲಾ ಬಾಗ್ ನಲ್ಲಿ ನಡೆದ ಘಟನೆಗೆ ಯಾವುದೇ ರೀತಿಯ ವಿಷಾದ ವ್ಯಕ್ತಪಡಿಸಿಲ್ಲ ಭಾರತಕ್ಕೆ ಕ್ಷಮೆ ಕೇಳಿಲ್ಲ. ಅಮೃತ್ ಸರ್ ನ ಭೂಮಿ, ಬೀಸುವ ಗಾಳಿ ಇಂದಿಗೂ ಆ ದುರಂತದ ಕಥೆ ಹೇಳುತ್ತದೆ, ಅವರ ನರಳಾಟದ ಕೂಗು ಕೇಳುತ್ತದೆ. ಈ ರೀತಿಯ ಮಾಹಿತಿಗಳನ್ನು ನೀಡಿ ಚಿತ್ರ ನೆನಪಿನಲ್ಲಿರಲು ಸಮರ್ಥವಾಗಿದೆ.
ಒಂದು ನಿಗೂಢತೆ ಚಿತ್ರದುದ್ದಕ್ಕೂ ಕಾದುಕೊಂಡು ಸಾಗಿದೆ. ಡಾರ್ಕ್ ಥೀಮ್ ಅಲ್ಲಿ ನಿರೂಪಿಸಿದ ರಿತೇಶ್ ಷಾ ಮತ್ತು ಶುಭೇಂದು ಭಟ್ಟಾಚಾರ್ಯರ ಚಿತ್ರಕಥೆ ಹಾಗು ಅದಕ್ಕೆ ಸರಿಯಾಗಿ ಕ್ಯಾಮೆರಾ ಹಿಂದೆ ಅವಿಕ್ ಮುಖೊಪಾಧ್ಯಾಯ ಅವರು ಅದ್ಭುತ ಕಾರ್ಯನಿರ್ವಹಣೆ ಇದೆ. ಚಿತ್ರದಲ್ಲಿ ಮತ್ತೊಂದು ಪಾತ್ರ ನೆನಪಿನಲ್ಲಿರುತ್ತದೆ, ಅದು ಭಗತ್ ಸಿಂಗ್. ಆ ಪಾತ್ರವನ್ನು ನಿರ್ವಹಿಸಿದ ಅಮೋಲ್ ಪರಶರ್ ಕೂಡ ತನ್ನ ಪಾತ್ರಕ್ಕೆ ನ್ಯಾಯವನ್ನು ಒದಗಿಸುವಂತೆ ಅಭಿನಯಿಸಿದ್ದಾರೆ. ಚಿತ್ರವನ್ನು ನೋಡುವಾಗ ಶುರುವಿನಿಂದ ಮಧ್ಯ ಭಾಗದವರೆಗೆ ಏನಾಗುತ್ತಿದೆ ಎಂದು ಅರಿವಿಗೆ ಬಾರದಂತೆ ಆಗಬಹುದು ಆದರೆ ಪೂರ್ತಿ ನೋಡಿದಾಗ ಪ್ರತಿಯೊಂದು ಸನ್ನಿವೇಶಗಳ ನಡುವೆ ಇರುವ ಕೊಂಡಿ ಅರ್ಥವಾಗುತ್ತದೆ.
ಚಿತ್ರವನ್ನು ನೋಡಿ ಮುಗಿಸಿದ ಮೇಲೂ ಕಿವಿಯಲ್ಲಿ ಉಧಾಮ್ ಸಿಂಗ್‌ನ ಕೂಗು ಮತ್ತೆ ಮತ್ತೆ ಕೇಳುತ್ತದೆ, “ಐ ಫೀಲ್ ನೊ ಪೇನ್” “ಡೋಂಟ್ ಆಸ್ಕ್ ಕ್ವೆಶ್ಚನ್ಸ್, ಶೂಟ್ ಮಿ” “ಟೆಲ್ ದ ಪೀಪಲ್ ದಾಟ್ ಐ ಆಮ್ ಅ ರೆವಲ್ಯೂಷನರಿ” ಎಂಬ ಅವನ ಮಾತುಗಳು ಮನಸ್ಸನಲ್ಲಿ ಗಟ್ಟಿಯಾಗಿ ಉಳಿಯುತ್ತದೆ. ಅವನನ್ನು ಗಲ್ಲಿಗೇರಿಸುವ ದೃಶ್ಯ ಕಣ್ಣು ಮುಚ್ಚಿದರೂ ಪದೇ ಪದೆ ಕಾಡುತ್ತದೆ.