ಚಿತ್ರ : 83
ನಿರ್ದೇಶನ: ಕಬೀರ್ ಖಾನ್
ನಿರ್ಮಾಣ: ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದುರಿ, ಸಾಜಿದ್ ನಡಿಯಾದ್ವಾಲಾ, ಮಧು ವರ್ಮ
ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಜೀವ, ಮದನ್ ಲಾಲ್, ಪಂಕಜ್ ತ್ರಿಪಾಠಿ, ಬೊಮನ್ ಇರಾನಿ
1983 ಅಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ನಾನಿನ್ನೂ ಹುಟ್ಟಿರಲಿಲ್ಲ. ಕಬೀರ್ ಖಾನ್ ನಿರ್ದೇಶಿಸಿದ ’83’ ಸಿನಿಮಾ ನೋಡಿದ ಮೇಲೆ ನಾನು ಭಾರತ ಪಂದ್ಯದ ಹೈಲೈಟ್ಸ್ ನೋಡಿದ ಅನುಭವವಾಯಿತು. ಅಷ್ಟು ಅಚ್ಚುಕಟ್ಟಾಗಿ ಮೂಡಿಬಂದಿರುವ ಸಿನಿಮಾ. ಗೊತ್ತಿಲ್ಲದ ಕತೆಯನ್ನು ಹೇಳುತ್ತ, ಪರದೆಯಮೇಲೆ ಚಿತ್ರ ತೋರಿಸುವುದಕ್ಕಿಂತ ಗೊತ್ತಿರುವ ಕಥೆಯನ್ನು ಪರದೆಯ ಮೇಲೆ ತೋರಿಸುವುದು ಅದರಲ್ಲೂ ಒಂದು ವ್ಯಕ್ತಿಯ, ಒಂದು ಮಹತ್ವದ ಘಟನೆಯನ್ನು ಯಥಾವತ್ತಾಗಿ ನೋಡುಗರಿಗೆ ಹಿಡಿಸುವಂತೆ ಮಾಡುವುದು ಕಷ್ಟಕರ. ಆದರೆ ಈ ವಿಷಯದಲ್ಲಿ 83 ಸಿನಿಮಾ ಗೆದ್ದಿದೆ. ಇಲ್ಲಿಯವರೆಗೂ ದೇಶಾಭಿಮಾನದ ಕುರಿತಾದ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿರುವ ಕಬೀರ್ ಖಾನ್ 1983ರ ವಿಶ್ವಕಪ್ ಕಥೆಯನ್ನು ಹೇಳಿರುವ ಚಿತ್ರವೇ 83.
ಭಾರತ ಕ್ರಿಕೇಟ್ ತಂಡದ ಮ್ಯಾನೇಜರ್ ಮಾನ್ ಸಿಂಗ್ ಹಣವಿಲ್ಲದೆ ಭಾರತವನ್ನು ಲಂಡನ್‌ಗೆ ವಿಶ್ವಕಪ್‌ಗೆಂದು ಕರೆದುಕೊಂಡು ಹೋಗಲು ಪರದಾಡುವುದರಿಂದ ಆರಂಭವಾಗಿ, ಭಾರತ ತಂಡಕ್ಕೆ ಹೊಸ ನಾಯಕನಾಗಿ ಕಪಿಲ್ ದೇವ್ ರವರನ್ನು ನೇಮಿಸಿದಾಗ ದೇಶದ ಯಾವುದೋ ಮೂಲೆಯಲ್ಲಿ ಕುಳಿತ ಸಾಮಾನ್ಯ ಜನ ಕೂಡ ಈ ನಿರ್ಧಾರವನ್ನು ವಿರೋಧಿಸುತ್ತಾನೆ. ಭಾರತ 1983ರ ವಿಶ್ವಕಪ್ ಪ್ರವೇಶಿಸುವ ಮೊದಲು ಯಾವುದೇ ಪಂದ್ಯಗಳನ್ನು ಗೆದ್ದಿರಲಿಲ್ಲ. ಈಸ್ಟ್ ಆಫ್ರಿಕಾ ವಿರುದ್ಧ ಮಾತ್ರ ಗೆದ್ದಿತ್ತು.
ಮಾನ್ ಸಿಂಗ್ ಅತ್ಯಂತ ದುಃಖದಿಂದ “ಭಾರತಕ್ಕೆ ಸ್ವಾತಂತ್ರ್ಯ ಬಂದು ಮೂವತೈದು ವರುಷಗಳಾಗಿದ್ದರೂ ಇನ್ನೂ ಗೌರವ ಬಂದಿಲ್ಲ” ಎಂದು ಹೇಳುವಾಗ ಆ ಮಾತಿನ ಹಿಂದಿರುವ ವಿಷಾದದ ತೀವ್ರತೆ ಪ್ರೇಕ್ಷಕನಿಗೆ ಮನುಮುಟ್ಟುವಂತದ್ದು. ಭಾರತದಲ್ಲಿ ಅಂದು ಕ್ರಿಕೆಟ್ ಗೆ ಎಷ್ಟು ಪ್ರಾಮುಖ್ಯತೆ ಇತ್ತು, ದುಡ್ಡಿನ ಕೊರತೆ ಎಷ್ಟಿತ್ತು, ಪರಿಸ್ಥಿತಿ ಎಷ್ಟು ಕಷ್ಟವಿತ್ತು ಎಂದು ದುಡ್ಡು ಉಳಿಸಲು ಸ್ವತಃ ತಾನೇ ಬಟ್ಟೆ ಒಗೆಯಲು ಕಲಿತ ಕಪಿಲ್ ದೇವ್, ದುಡ್ಡಿಲ್ಲ ಎಂಬ ಕಾರಣಕ್ಕೆ ನಿಶ್ಚಿತಾರ್ಥ ಮುರಿದ ಬಲ್ವಿಂದರ್ ಸಿಂಗ್ ಸಂಧು ಅವರ ಫಿಯಾನ್ಸೆ, ಹೀಗೆ ಹಲವು ಉದಾಹರಣೆಗಳನ್ನು ಪೋಣಿಸಿ ಚಿತ್ರದಲ್ಲಿ ಅಂದು ಕ್ರಿಕೆಟಿಗೆ ಸಿಕ್ಕ ಪ್ರಾಮುಖ್ಯತೆಯನ್ನು ಅರ್ಥವಾಗುವಂತೆ ರೂಪಿಸಿದ್ದಾರೆ.
ಈ ಚಿತ್ರದ ತಾಕತ್ತು ಎಂದರೆ ಆಯ್ದುಕೊಂಡ ತಾರಾಗಣ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಅವರನ್ನು ಕಂಡಾಗ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸಲು ಪಟ್ಟ ಪರಿಶ್ರಮ ಸಫಲ ಎಂದು ತಿಳಿಯುತ್ತದೆ. ಸತತ ಏಳು ತಿಂಗಳ ಕಾಲ ಅವರು ಕಪಿಲ್ ದೇವ್ ಅವರ ಬೌಲಿಂಗ್ ಶೈಲಿಯನ್ನು ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದರಂತೆ. ಕಪಿಲ್ ಅವರ ಹಾವಭಾವ, ಬ್ಯಾಟಿಂಗ್ ಶೈಲಿ, ಮಾತಿನ ಧಾಟಿ, ರಣ್ವೀರ್ ಅವರು ಥೇಟ್ ಕಪಿಲ್ ಅವರ ಹಾಗೆ ಅಭಿನಯಿಸಿ ಯಾವುದರಲ್ಲಿಯೂ ಕೊರತೆ ಕಾಣದಂತೆ ತೆರೆಯ ಮೇಲೆ ಮೆರೆದಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಹಾದಿಯಲ್ಲಿ ಬಹುದೂರ ಸಾಗುತ್ತಿರುವುದು ಕಂಡುಬರುತ್ತದೆ. ಇದೇ ರೀತಿ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವ, ಸುನಿಲ್ ಗವಾಸ್ಕಾರ್ ಪಾತ್ರದಲ್ಲಿ ತಾಹಿರ್ ಭಸಿನ್, ಮ್ಯಾನೇಜರ್ ಪಿ.ಆರ್.ಮಾನ್ ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ, ಪ್ರತಿಯೊಬ್ಬರನ್ನು ನೋಡುವಾಗ 1983ರ ಕ್ರಿಕೇಟ್ ತಂಡವನ್ನು ಮತ್ತೊಮ್ಮೆ ಕಂಡಂತಾಯಿತು. ಸೂಕ್ತ ತಾರಾಗಣ ಆರಿಸಿದ ಮುಕೇಶ್ ಛಬ್ರಾ, ಮಗ್ದಾ ಅವರು ಅಭಿನಂದಾನರ್ಹ.
ಪ್ರತಿಯೊಂದು ಪಂದ್ಯದ ಪೂರ್ವ ಹಾಗು ಉತ್ತರದ ಭಾಗದಲ್ಲಿ ನಡೆದ ಘಟನೆಯನ್ನು ಸಣ್ಣ ಸಣ್ಣ ವಿವರಗಳಿಗೆ ಒತ್ತು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸಿನ ರಣವೇಗಿ ಬೌಲರ್‌ಗಳನ್ನು ಕಂಡಾಗ ಆಗುವ ಭಯ, ಕುಗ್ಗುವ ಆತ್ಮವಿಶ್ವಾಸ, ಇಂಗ್ಲಿಷ್ ಮಾತಾಡಲು ಬಾರದ ಕ್ಯಾಪ್ಟನ್ನಿನ ಮುಗ್ಧತೆ, ಅಷ್ಟೇ ಅಲ್ಲ ಇಡೀ ತಂಡ, ಇಡೀ ಜಗತ್ತು ಭಾರತ ಒಂದು ಮ್ಯಾಚ್ ಕೂಡ ಗೆಲ್ಲುವುದಿಲ್ಲ ಎಂದು ಹೀಯಾಳಿಸುವಾಗ, ಕಪಿಲ್ ದೇವ್ ಅವರ ಗೆದ್ದೆ ಗೆಲ್ಲುತ್ತೇವೆ ಎಂಬ ನಂಬಿಕೆ ತಂಡದಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಇದ್ದ ಪ್ರೀತಿ, ವಿಶ್ವಾಸ, ಭರವಸೆ, ಹೀಗೆ ಕ್ರಿಕೆಟನ್ನು ಹಲವಾರು ಆಯಾಮಗಳಿಂದ ತೋರಿಸಿ ರೂಪಿಸಿರುವ ಚಿತ್ರ. ಮಧ್ಯೆ ಮಧ್ಯೆ ಬರುವ ಅಂದಿನ ನೈಜ ಚಿತ್ರಣಗಳು ಚಿತ್ರದ ಸ್ವಾರಸ್ಯ ಹೆಚ್ಚಿಸಿದೆ.
ವಿಶ್ವಕಪ್‌ನ ತಯಾರಿ ಹೇಗಿತ್ತು, ಎಂಬುವುದರ ಕುರಿತು ಇನ್ನೂ ಹೆಚ್ಚನ ಮಾಹಿತಿ ನೀಡಿದ್ದರೆ ಚಿತ್ರ ಬೇರೆ ರೀತಿಯಲ್ಲೇ ಸಾಗುತ್ತಿತ್ತು ಅನಿಸುತ್ತದೆ. ಆದರೆ ಈಗಿರುವ ಅಂಶಗಳು ನೋಡುಗನಿಗೆ ಔತಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1983ರಲ್ಲಿ ಗೆದ್ದ ಆನಂದ ಮತ್ತೊಮ್ಮೆ ಅನುಭವಿಸುವ ಹಾಗೆ ಮಾಡುವುದರಲ್ಲಿ, ಚಿತ್ರದ ಅಂತ್ಯದಲ್ಲಿ ನಾವೂ ಕೂಡ ಕುರ್ಚಿಯಿಂದ ಎದ್ದು ಡೋಲಿನ ಶಬ್ದಕ್ಕೆ ಕುಣಿಯುವ ಹಾಗೆ ಮಾಡುತ್ತದೆ. ಅದ್ಭುತ ಚಿತ್ರ ಎನ್ನಬಹುದು.