
ಚಿರು ಸರ್ಜ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಏಪ್ರಿಲ್ ನ ಮುಹೂರ್ತ ಗುರುವಾರ ಮುಂಜಾನೆ ಧರ್ಮಗಿರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನೆರವೇರಿತು.

ಚಿತ್ರದಲ್ಲಿ ನನ್ನದು ಬೇರೆಯದೇ ರೀತಿಯ ಪೊಲೀಸ್ ಪಾತ್ರ. ಸಾಮಾನ್ಯವಾಗಿ ನಿರೀಕ್ಷಿಸುವಂಥ ಗಂಭೀರತೆಯ ಪೊಲೀಸ್ ಪಾತ್ರಕ್ಕಿಂತ ವ್ಯತ್ಯಸ್ತವಾದ ಪಾತ್ರ ನನ್ನದು. ಇದರಲ್ಲಿ ನಾಲ್ಕು ಹೊಡೆದಾಟದ ದೃಶ್ಯಗಳಿವೆ. ಮಾಸ್ ಪ್ರೇಕ್ಷಕರಿಗೆ ತೃಪ್ತಿ ನೀಡಬಹುದಾದ ಪಾತ್ರ ಇದು ಎಂದು ನಾಯಕ ಚಿರಂಜೀವಿ ಸರ್ಜ ಹೇಳಿದರು.

‘8 ಎಂ. ಎಂ’ ಚಿತ್ರದ ನಿರ್ದೇಶಕ ಸತ್ಯ ರಾಯಲ ಕತೆ, ಚಿತ್ರಕತೆ ಸ್ವತಃ ಬರೆದಿದ್ದು, ವಿದೇಶದಲ್ಲಿ ನಡೆದ ಘಟನೆಯೊಂದರಿಂದ ಪ್ರೇರಿತರಾಗಿ ಕಥಾ ತಂತು ಸೃಷ್ಟಿಯಾಯಿತೆಂದರು. ಕತೆ ಮೊದಲೇ ತಯಾರಾಗಿತ್ತು. ನಿರ್ಮಾಪಕರು “ಚಿರು ಚಿತ್ರಕ್ಕೆ ಎಷ್ಟು ಬಜೆಟ್ ಆದರೂ ಹಾಕುವುದಾಗಿ ಹೇಳಿದರು” ಹಾಗಾಗಿ ನಿರ್ದೇಶನಕ್ಕೆ ಅವಕಾಶ ಸಿಕ್ಕಿತು ಎಂದ ಸತ್ಯ, ‘ಏಪ್ರಿಲ್’ ಎನ್ನುವುದು ರಚಿತಾರಾಮ್ ಅವರು ನಿರ್ವಹಿಸುವ ಪಾತ್ರದ ಹೆಸರು. ರಚಿತಾ ಅವರು ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಮರಳಿದ ಬಳಿಕ ವಿಶ್ರಾಂತಿಯಲ್ಲಿರುವ ಕಾರಣ ಮಾಧ್ಯಮಗೋಷ್ಠಿಗೆ ಹಾಜರಾಗಿಲ್ಲ ಎಂದು ತಿಳಿಸಿದರು.

ಚಿತ್ರಕ್ಕೆ ನಿರ್ದೇಶಕರೊಂದಿಗೆ ಸೇರಿ ಹರೀಶ್ ಅವರು ಸಂಭಾಷಣೆ ಬರೆದಿದ್ದಾರೆ. ತೇಜು ಕ್ರಾಂತಿ ಮತ್ತು ರಾಕೇಶ್ ಪುಟ್ಟಯ್ಯ ವಸ್ತ್ರಾಲಂಕಾರದ ನಿರ್ವಹಣೆ ಮಾಡಿದ್ದಾರೆ. ಸಂದೀಪ್ ಶಿರಸಿ, ರಮೇಶ್ ಎಸ್, ಮನೋಹರ್ ಎಸ್, ರಾಜೇಶ್, ಲೋಕೇಶ್ ಜಿ ಎಸ್ ಮೊದಲಾದವರು ನಿರ್ದೇಶಕರ ತಂಡದಲ್ಲಿದ್ದಾರೆ. ಹರಿಕೃಷ್ಣ ಕ್ರಿಯೇಟಿವ್ ಹೆಡ್ ಸ್ಥಾನದಲ್ಲಿದ್ದಾರೆ. ನಾರಾಯಣ ಬಾಬು ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತದಲ್ಲಿ ಖ್ಯಾತ ನಿರ್ಮಾಪಕ ಕೆ.ಮಂಜು ಅತಿಥಿಯಾಗಿ ಆಗಮಿಸಿದ್ದರು.
