ನಾಡಿನ ಎಲ್ಲಿ ಏನೇ ಸಾಧನೆ ಮಾಡಿದರೂ ಅವರಿಗೆ ಮೊದಲು ನೆನಪಾಗುವ ವ್ಯಕ್ತಿ ಡಾ. ಶಿವರಾಜ್ ಕುಮಾರ್. ಅದಕ್ಕೆ ಅಣ್ಣಾವ್ರ ಮನೆತನದ ಹಿನ್ನೆಲೆ ಮಾತ್ರ ಕಾರಣವಲ್ಲ. ಯಾವ ಹಿನ್ನೆಲೆಗಳನ್ನು ನೋಡದೇ ಪ್ರತಿಭಾವಂತರನ್ನು ಮೆಚ್ಚುವ ಶಿವಣ್ಣನ ಮಗು ಮನಸು ಕೂಡ ಕಾರಣ. ಇದೀಗ ಚದುರಂಗದಲ್ಲಿ ವಲ್ಡ್ ಚಾಂಪಿಯನ್ ಆಗಿರುವ 11ರ ಬಾಲೆ ಶಿವಣ್ಣನನ್ನು ಭೇಟಿಯಾಗಿದ್ದಾರೆ.
ಮೊನ್ನೆ ತಾನೇ ಬಿಗ್ ಬಾಸ್ ಪಟ್ಟ ಗೆದ್ದ ಗಿಲ್ಲಿ ನೇರವಾಗಿ ಮೊದಲು ಬಂದು ಭೇಟಿಯಾಗಿದ್ದೇ ಡಾ. ಶಿವರಾಜ್ ಕುಮಾರ್ ಅವರನ್ನು. ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆಯುವವರು ಒಂದೆಡೆಯಾದರೆ ಶಿವಣ್ಣನ ಬೆಳಗ್ಗಿನ ವಾಕಿಂಗ್ ಸಂದರ್ಭದಲ್ಲೇ ಸಿಕ್ಕು ಮಾತನಾಡಿಸುವವರಿಗೂ ಕೊರತೆ ಇಲ್ಲ. ಗುರುವಾರ ಮುಂಜಾನೆಯ ವಾಕಿಂಗ್ ವೇಳೆ ಭೇಟಿಯಾದ ಚಾರ್ವಿ ಶಿವಣ್ಣನೊಡನೆ ತಮ್ಮ ಸಾಧನೆಯ ಸಂಭ್ರಮ ಹಂಚಿಕೊಂಡಿದ್ದಾರೆ. ಸ್ವತಃ ಚೆಸ್ ಆಟಗಾರರೂ ಆಗಿರುವ ಶಿವರಾಜ್ ಕುಮಾರ್ ಬಾಲಕಿಯ ಸಾಧನೆಗೆ ಖುಷಿಪಟ್ಟು ಶುಭ ಕೋರಿದ್ದಾರೆ.
ಎಂಟನೇ ವರ್ಷ ವಯಸ್ಸಿರುವಾಗಲೇ ಜಾರ್ಜಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿ ಗುರುತಿಸಿಕೊಂಡವರು ಚಾರ್ವಿ ಅನಿಲ್ ಕುಮಾರ್. ತಿಂಗಳ ಹಿಂದೆಯಷ್ಟೇ 2300elo ರೇಟಿಂಗ್ ದಾಟಿದ ವಿಶ್ವದ ಅತಿ ಕಿರಿಯ ಆಟಗಾರ್ತಿ ಎನ್ನುವ ಬಿರುದಿಗೂ ಪಾತ್ರರಾಗಿದ್ದಾರೆ. ಹಾಸನ ಮೂಲದ ಚಾರ್ವಿ ಚೆಸ್ ಗೆ ಹೆಸರಾಗಿರುವ ಚೆನ್ನೈನ ವೇಲಮ್ಮಾಳ್ ಶಾಲೆಗೆ ದಾಖಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪಡೆದ ಪ್ರತಿಭಾವಂತೆ ಚಾರ್ವಿ ಅನಿಲ್ ಕುಮಾರ್.

