ಸಿನಿ ವಿಮರ್ಶೆ: ಶ್ರೀ ಭರತ ಬಾಹುಬಲಿ, ನೋಡಿ ಮನಸಾರೆ ನಲಿ

ಸಾಮಾನ್ಯವಾಗಿ ಸ್ಟಾರ್ ಚಿತ್ರಗಳಿಗೆ ಮಂಜು ಮಾಂಡವ್ಯ ಅವರ ಸಂಭಾಷಣೆಯೇ ಶಕ್ತಿಯಾಗುತ್ತಿತ್ತು. ಆದರೆ ಇಲ್ಲಿ ಸಂಭಾಷಣೆ ಮತ್ತು ಸಂದರ್ಭದ ಮೂಲಕವೇ ನಾಯಕನಾಗುವ ಹೊಸ ಪ್ರಯತ್ನವನ್ನು ಸ್ವತಃ ಮಂಜು ಮಾಂಡವ್ಯ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಮುಕ್ಕಾಲು ಪಾಲು ಗೆದ್ದಿದ್ದಾರೆ.

ಅವರಿಬ್ಬರು ಆಪ್ತ ಮಿತ್ರರು. ಹೆಸರು ಭರತ ಮತ್ತು ಬಾಹುಬಲಿ. ಶ್ರವಣ ಬೆಳಗೊಳದ ಆಸುಪಾಸಿನ ಹಳ್ಳಿಯವರು. ಪಕ್ಕಾ ಹಳ್ಳಿಯ ಪೋಲಿ ಹೈದರಂತೆ ಗದ್ದೆ ಮಧ್ಯೆ ಇಸ್ಪೀಟಾಡುವುದೇ ಜೀವನ ಎಂದುಕೊಂಡವರು. ಹಾಗೆ ಒಂದು ಕಿತಾಪತಿಯಲ್ಲಿ ಸಿಲುಕಿಕೊಂಡು ಅವರಿಬ್ಬರು ಜೈಲು ಸೇರುತ್ತಾರೆ.

ಇದೇ ವೇಳೆ ಶ್ರೀ ಎನ್ನುವ ಭಾರತೀಯ ಸಂಜಾತ ಯುವತಿಯೋರ್ವಳು ವಿದೇಶದಿಂದ ಶ್ರವಣಬೆಳಗೊಳಕ್ಕೆ ಬರುತ್ತಾಳೆ. ಭರತ ಬಾಹುಬಲಿಯ ಪುರಾಣದ ಬಗ್ಗೆ ಅರಿಯುವ ಉತ್ಸಾಹದಲ್ಲಿ ಇರುವ ಆಕೆಗೆ ಗೈಡು ಮಿಸ್ ಗೈಡ್ ಆಗಿ ಇವರಿಬ್ಬರ ಕತೆಯನ್ನು ಹೇಳುತ್ತಾನೆ. ಅವರ ಬಗ್ಗೆ ತಿಳಿದ ಮೇಲೆ ಆಕೆ ಅವರನ್ನು ಜೈಲಿನಿಂದ ಬಿಡಿಸಲು ಮುಂದಾಗುತ್ತಾಳೆ. ಸೆರೆಯಿಂದ ಹೊರಬರುವ ಭರತ ಬಾಹುಬಲಿಯಲ್ಲಿ ಆಕೆ ಕೇಳುವ ಸಹಾಯ ಏನು? ಅದನ್ನು ಅವರಿಂದ ಈಡೇರಿಸಲು ಸಾಧ್ಯವಾಗುತ್ತದೆಯಾ ಎನ್ನುವುದೇ ಚಿತ್ರದ ಕತೆ. ಸಣ್ಣ ಮಟ್ಟಿನ ಕುತೂಹಲದ ಜತೆಯಲ್ಲೇ ಸಾಗುವ ಕತೆಗೆ ಹಾಸ್ಯಮಯ ಸಂಭಾಷಣೆಯೇ ಪ್ರಮುಖ ಊರುಗೋಲಾಗಿದೆ. ಹಾಗಾಗಿ ಸವೆದ ದಾರಿಯ ಅರಿವಾಗದಂತೆ ಪ್ರೇಕ್ಷಕರು ಸಂಭ್ರಮಿಸುತ್ತಾರೆ.

ಪುರಾಣದಲ್ಲಿ ಭರತನ ಪಾತ್ರಕ್ಕೆ ಪ್ರಾಮುಖ್ಯತೆ ಸಿಗಲು ಬಾಹುಬಲಿಯ ತ್ಯಾಗ ಕಾರಣವಾದರೆ, ಇಲ್ಲಿ ಬಾಹುಬಲಿಯ ಹಾಸ್ಯ ಭರತನಿಗೆ ಸಾಥ್ ನೀಡಿದೆ. ಯಾಕೆಂದರೆ ಚಿತ್ರದಲ್ಲಿ ಭರತನ ಪಾತ್ರದಲ್ಲಿರುವ ಮಂಜು ಮಾಂಡವ್ಯ ಅವರಿಗೆ ಬಾಹುಬಲಿಯಾಗಿ ಚಿಕ್ಕಣ್ಣ ಉತ್ತಮ ಸಾಥ್ ನೀಡಿದ್ದಾರೆ. ಹಾಗಂತ ಕತೆಯಲ್ಲಿ ಹಾಸ್ಯ ಮಾತ್ರವಲ್ಲದೆ, ಭಾವನಾತ್ಮಕ ಸನ್ನಿವೇಶಗಳು ಮತ್ತು ಹಿರಿಯರನ್ನು, ಪೋಷಕರನ್ನು ಗೌರವಿಸಲೇಬೇಕು ಎನ್ನುವಂಥ ನೀತಿ ಮಾತುಗಳು ಹದವಾಗಿ ಮೇಳೈಸಿವೆ. ಭರತನಾಗಿ ಮಂಜು ಮಾಂಡವ್ಯ ಚಿತ್ರಕ್ಕೆ ನಾಯಕನಾದರೂ ತಮ್ಮ ಪಾತ್ರದ ವ್ಯಾಪ್ತಿಯನ್ನು ಅರಿತುಕೊಂಡು ಅಭಿನಯಿಸಿರುವುದು ಮಾತ್ರವಲ್ಲ, ತಮ್ಮ ಇಮೇಜ್ ಬಗ್ಗೆ ತಿಳಿದೇ ಪಾತ್ರವನ್ನು ಸೃಷ್ಟಿಸಿರುವುದಕ್ಕೆ ಅಭಿನಂದನಾರ್ಹರು. ಮನೆಯೊಳಗಿನ ದೃಶ್ಯದಲ್ಲಿ ಅದರಲ್ಲೂ ತಂದೆ ಪಾತ್ರಧಾರಿ ಶ್ರೀನಿವಾಸ ಮೂರ್ತಿಯವರ ಜತೆಗಿನ ಕಾಂಬೀನೇಶನ್ ದೃಶ್ಯಗಳು ಆಕರ್ಷಕವಾಗಿ ಮೂಡಿ ಬಂದಿವೆ.

ಬಾಹುಬಲಿಯಾಗಿ ಚಿಕ್ಕಣ್ಣ ಎಂದಿನಂತೆ ಹಾಸ್ಯದ ಹುಲಿ. ಎರಡೇ ದೃಶ್ಯದಲ್ಲಿ ಬಂದರೂ ಅಚ್ಯುತ್ ಕುಮಾರ್ ಅವರ ಪಾತ್ರವೂ ನೆನಪಲ್ಲಿ ಉಳಿಯುತ್ತದೆ. ಹಿರಿಯ‌ ನಟಿ ಭವ್ಯಾ ಸೇರಿದಂತೆ ಒಂದಷ್ಟು ಮಂದಿ ಕಲಾವಿದರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚರಿಯ ಜೊತೆಗೆ ಚಿತ್ರಕ್ಕೆ ಲವಲವಿಕೆಯನ್ನು ತುಂಬಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡಿನ ಮೂಲಕ ಮನಸೂರೆಗೊಳ್ಳುವ ಮಣಿಕಾಂತ್ ಕದ್ರಿಯವರು ಪೊಲೀಸ್ ಪಾತ್ರದ ಮೂಲಕ ನಟನಾ ಕ್ಷೇತ್ರಕ್ಕೂ ಕಾಲಿಟ್ಟಿರುವುದು ವಿಶೇಷ.

ಮಧ್ಯಂತರದ ಬಳಿಕದ ಒಂದೆರಡು ದೃಶ್ಯಗಳನ್ನು ಕತ್ತರಿಸಿದರೆ ಪ್ರೇಕ್ಷಕರಿಗೆ ಥಿಯೇಟರ್ ನಲ್ಲಿ ಕುಳಿತುಕೊಳ್ಳಬಹುದಾದ ಕಾಲಾವಧಿ ಕಡಿಮೆಯಾಗಬಹುದು. ಆದರೆ ಕುಟುಂಬ ಸಮೇತ ಬಂದು ವೀಕ್ಷಿಸಿ ಮನರಂಜನೆ ಪಡೆದು ಸಾವಕಾಶವಾಗಿ ಹಿಂದಿರುಗಲು ಬಯಸುವವರಿಗೆ ಚಿತ್ರ ರಸದೌತಣವಾಗುವುದರಲ್ಲಿ ಸಂದೇಹವಿಲ್ಲ.

Recommended For You

Leave a Reply

error: Content is protected !!
%d bloggers like this: