
ಮೂರು ದಶಕಗಳ ವೃತ್ತಿ ಬದುಕಿನಲ್ಲಿ ಶ್ರೇಷ್ಠ ನಟನಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ದೊರಕಿದ್ದು ಇದೇ ಮೊದಲು. ಅದು ಕೂಡ ನಟನೆಗೆ ವಿರಾಮ ಹೇಳಿ 14 ವರ್ಷಗಳ ಬಳಿಕ ಮರಳಿದಾಗ ಸಿಕ್ಕ ಪ್ರಶಸ್ತಿ. ಹಾಗಾಗಿ ಈ ಪ್ರಶಸ್ತಿಯನ್ನು ಖಂಡಿತವಾಗಿ ನಾನು ನನ್ನನ್ನು ಒತ್ತಾಯ ಪೂರ್ವಕವಾಗಿ ನಟನೆಗೆ ಮರಳುವಂತೆ ಮಾಡಿದ ನಿರ್ದೇಶಕರ ಪಾದಕ್ಕೆ ಸಮರ್ಪಿಸುತ್ತೇನೆ ಎಂದರು. ಅವರು ಈ ಮಾತನ್ನು ಹೇಳಿದ್ದು ವಾಣಿಜ್ಯ ಮಂಡಳಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ.
2018ನೇ ವರ್ಷದ ರಾಜ್ಯ ಪ್ರಶಸ್ತಿ ವಿಜೇತರನ್ನು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ನೆರವೇರಿತು. ಸಮಾರಂಭದಲ್ಲಿ ಬಹುತೇಕ ವಿಜೇತರು ಪಾಲ್ಗೊಂಡಿದ್ದರು. ಅದರಲ್ಲಿ ಕೂಡ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಆಡಿದ ಮಾತುಗಳು ಮನಸಿಗೆ ನಾಟುವಂತೆ ಇತ್ತು. ರಾಜ್ಯ ಪ್ರಶಸ್ತಿ ದೊರಕಿರುವುದಕ್ಕೆ ಖುಷಿಯಿದೆ. ಆದರೆ ಅದಕ್ಕಾಗಿ ವಾಣಿಜ್ಯ ಮಂಡಳಿಯಲ್ಲಿ ನಡೆಸುತ್ತಿರುವ ಈ ಸನ್ಮಾನ ಮನೆ ಮಂದಿಯಿಂದ ಸಿಕ್ಕ ಆದರದಂತೆ ಖುಷಿಯಾಗುತ್ತಿದೆ ಎಂದರು ರಾಘಣ್ಣ. ‘ಯಾಕೆಂದರೆ ಅಮ್ಮನಿಗೆ ದಾದ ಸಾಹೇಬ್ ಫಾಲ್ಕೆ ಅವಾರ್ಡ್ ಅಕಾಡೆಮಿ ಅವಾರ್ಡ್ ಬಂದಾಗಲೂ ವಾಣಿಜ್ಯ ಮಂಡಳಿಯಿಂದ ಸನ್ಮಾನ ಏರ್ಪಡಿಸಲಾಗಿತ್ತು. ಆಗ ಅಪ್ಪಾಜಿ ಒಬ್ಬ ವೀಕ್ಷಕನಾಗಿ ಆಗಮಿಸಿ ಅಮ್ಮನಿಗೆ ಪ್ರೋತ್ಸಾಹಿಸಿದ್ದರು’ ಎಂದು ನೆನಪಿಸಿಕೊಂಡರು. ಅಮ್ಮನ ಮನೆ ಎಂಬ ಚಿತ್ರದ ಮೂಲಕ ಮತ್ತೆ ನಟನಾ ಕ್ಷೇತ್ರಕ್ಕೆ ಕರೆತಂದ ನಿರ್ದೇಶಕ ನಿಖಿಲ್ ಮಂಜು ಅವರಿಗೆ ಈ ಪ್ರಶಸ್ತಿಯ ಋಣ ಸಲ್ಲುವುದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೇಷ್ಠ ನಟಿ ಪುರಸ್ಕೃತ ಮೇಘನಾ ರಾಜ್ ಕೂಡ “ಪ್ರಶಸ್ತಿ ದೊರಕಿದೊಡನೆ ನನಗೆ ಬಂದ ಅಭಿನಂದನೆಗಳ ಸುರಿಮಳೆಗೆ ಖುಷಿಯಾಯಿತು. ಈ ಪ್ರಶಸ್ತಿ ನಿರ್ದೇಶಕ ಕಾಂತ ಕನ್ನಳ್ಳಿ ಮತ್ತು ನನ್ನ ತಂದೆ ತಾಯಿಗೆ ಸಮರ್ಪಿಸುತ್ತೇನೆ” ಎಂದರು.
ಡಾ. ರಾಜ್ ಕುಮಾರ್ ಪ್ರಶಸ್ತಿ ವಿಜೇತ ಶ್ರೀನಿವಾಸ ಮೂರ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ ವಿಜೇತ ಬಿ ಎಸ್ ಬಸವರಾಜ್, ಪೋಷಕ ನಟಿ ಪುರಸ್ಕೃತೆ ವೀಣಾ ಸುಂದರ್, ಶ್ರೇಷ್ಠ ಬಾಲನಟಿ ಸಿಂಚನಾ ಹೆಗ್ಡೆ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರದ ನಿರ್ಮಾಪಕ ರಿಷಭ್ ಶೆಟ್ಟಿ ಮೊದಲಾದವರು ಸನ್ಮಾನ ಸ್ವೀಕರಿಸಿದರು. ಸಮಾರಂಭದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಕಾರ್ಯದರ್ಶಿ ಎನ್ ಎಂ ಸುರೇಶ್, ಉಮೇಶ್ ಬಣಕಾರ್, ನಿರ್ದೇಶಕ ನಾಗಣ್ಣ ಕನ್ನಡ ನಿರ್ಮಾಪಕರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
