ಯುವ ಕಲಾವಿದರು ನಟಿಸಿರುವ ಪ್ರೇಮ ಚಿತ್ರವೊಂದು ಪ್ರೇಮಿಗಳ ದಿನಾಚರಣೆಯ ಆಸುಪಾಸಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. `ನಾನು ನನ್ ಜಾನು’ ಹೆಸರಿನ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆಯನ್ನು ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿತ್ತು.ನಿರ್ದೇಶಕ ಶ್ರೀಹರಿಯವರ ಪ್ರಕಾರ ಇದು ಯೂತ್
ಫುಲ್ ಸಬ್ಜೆಕ್ಟ್ ಇರುವ ಒಂದು ಕೌಟುಂಬಿಕ ಪ್ರೇಮಕತೆಯಾಗಿದೆ. ಚಿತ್ರ ಸೆನ್ಸಾರ್ ಆಗಿದ್ದು `ಯು ಎ’ ಸರ್ಟಿಫಿಕೇಟ್ ನೀಡಿದ್ದಾರೆ. . ಮಕ್ಕಳಿಂದ ವಯಸ್ಸಾದವರ ತನಕ ಎಂಜಾಯ್ ಮಾಡಿಕೊಂಡು ನೋಡಬಹುದು ಎಂದು ಭರವಸೆ ನೀಡಿದರು. ಮುಂದಿನ ತಿಂಗಳು ಅಂದರೆ ಫೆಬ್ರವರಿ ಮಧ್ಯದಲ್ಲಿ ಚಿತ್ರ ಬಿಡುಗಡೆಗೆ ಯೋಜನೆ ಹಾಕಲಾಗಿದೆ ಎಂದು ನಿರ್ದೇಶಕರು ಹೇಳಿದರು.
ನಿರ್ದೇಶಕ ಶ್ರೀಹರಿ ಈ ಹಿಂದೆ ‘ಮದರಂಗಿ’ ಚಿತ್ರಕ್ಕೆ ಅಸೋಸಿಯೇಟಾಗಿ ಕೆಲಸ ಮಾಡಿದ್ದಾಗಿ ಹೇಳಿದರು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು ಸಹಜವಾಗಿ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿರುವುದಾಗಿ ಹೇಳಿದರು. ನವನಟ ಮನು ನಾಯಕರಾಗಿದ್ದು, ಚಿತ್ರದಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಸೂಕ್ತ ಅವಕಾಶ ದೊರಕಿದೆ ಎನ್ನುವ ಸಂತೃಪ್ತಿ ಅವರಿಗಿದೆ.
ನಾಯಕಿಯಾಗಿ ಕಾಣಿಸಿಕೊಂಡಿರುವ ರೂಪಿಕಾ ಶೆಟ್ಟಿ ಮಾತನಾಡಿ `ಚಿತ್ರದಲ್ಲಿ ನಾಯಕಿಗೆ ನಾಯಕ ಮಾವನ ಮಗ ಆಗಬೇಕು. ಆದರೆ ಅವರಿಬ್ಬರು ಪ್ರೀತಿಸುತ್ತಾರ? ಪ್ರೀತಿಸಿದರೂ ಕುಟುಂಬ ಅವರನ್ನು ಒಂದಾಗಲು ಬಿಡುತ್ತಾ ಎನ್ನುವುದು ಚಿತ್ರ ಮುಂದಿಡುವ ಪ್ರಶ್ನೆ. ಅದಕ್ಕೆ ಉತ್ತರ ತಿಳಿಯಲಿಕ್ಕಾಗಿ ಎಲ್ಲರೂ ಥಿಯೇಟರ್ ಗೆ ಬನ್ನಿ’ ಎಂದರು.
ಚಿತ್ರದ ಹಾಡುಗಳು ತಮಗೆ ಇಷ್ಟವಾಗಿದ್ದು, ಅದರ ಬಿಡುಗಡೆ್ಗೆ ನಾಡಿನ ಹಿರಿಯ ನಿರ್ದೇಶಕರು ಆಗಮಿಸಿರುವುದು ನನ್ನ ಪುಣ್ಯ ಎಂದೇ ಹೇಳಬಹುದು ಎಂದು ರೂಪಿಕಾ ಶೆಟ್ಟಿ ಹೇಳಿದರು. ವಿಜಯ ಪ್ರಕಾಶ್, ಅನುರಾಧ ಭಟ್ ಮೊದಲಾದ ಖ್ಯಾತನಾಮರು ಹಾಡಿರುವ ಗೀತೆಗಳ ಸಿ.ಡಿಯನ್ನು ಹಿರಿಯ ನಿರ್ದೇಶಕ, ಸಾಹಿತಿ ಸಿ.ವಿ ಶಿವಶಂಕರ್ ಮೊದಲಾದವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಕೆಂಪೇಗೌಡ ಎನ್ ಮತ್ತು ಹರೀಶ್ ಪಿ ಸೇರಿಕೊಂಡು ಚಿತ್ರವನ್ನು ನಿರ್ಮಿಸಿದ್ದಾರೆ.