ಇಂದು ದುನಿಯಾ ವಿಜಯ್ ಜನ್ಮದಿನ. ಹಾಗೆ ಹೊಸಕೆರೆ ಹಳ್ಳಿಯ ಅವರ ಮನೆಯ ಮುಂದೆ ಜನಸಾಗರ. ಅಭಿಮಾನಿಗಳ ಜೈಕಾರದ ನಡುವೆ ಮನೆಯ ಒಳಗೆ ಪ್ರವೇಶಿಸಿದ ಮಾಧ್ಯಮದ ಮಂದಿಗೆ ಒಳಗಡೆ ಕಂಡಂಥ ದಂಗು ಬಡಿಸುವ ದೃಶ್ಯ ಇದು.
ಸೌಹಾರ್ದತೆಯ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ಅದು ಸಾರ್ವಜನಿಕ ಭಾಷಣಕ್ಕೆ ಮಾತ್ರ ಮೀಸಲು. ಅದನ್ನು ಖಾಸಗಿ ಜೀವನದೊಳಗೆ ತೋರಿಸಲು ಹಿಂಜರಿಯುವವರೇ ಹೆಚ್ಚು. ಆದರೆ ದುನಿಯಾ ವಿಜಯ್ ಅವರು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೇ ದುನಿಯಾ ಪೂರ್ತಿ ನನ್ನದೇ ಎನ್ನುವ ಭಾವ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಎಲ್ಲ ಧರ್ಮಗಳಲ್ಲಿ ಕೂಡ ಅಪ್ಪಟ ಅಭಿಮಾನಿಗಳಿದ್ದಾರೆ. ಅಂಥ ಅಭಿಮಾನಿಗಳು ಅವರಿಗೆ ಏಸುವಿನ ಚಿತ್ರ, ಅರೆಬಿಕ್ ಭಾಷೆಯಲ್ಲಿರುವ ಅಲ್ಲಾಹನ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವೆಲ್ಲವುಗಳನ್ನು ಅಷ್ಟೇ ಜೋಪಾಗಿಸಿರುವುದು ವಿಜಯ್ ಹೆಗ್ಗಳಿಕೆ. ಯಾಕೆಂದರೆ ಪ್ರತಿಯೊಂದು ಕೊಡುಗೆಗಳನ್ನು ತಮ್ಮ ದೇವರ ಕೋಣೆಯ ದ್ವಾರದಲ್ಲೇ ಇರಿಸಿಕೊಂಡಿದ್ದಾರೆ ವಿಜಯ್. ಅದು ಅವರು ಆಯಾ ನಂಬಿಕೆಗಳಿಗೆ ನೀಡಿರುವ ಮಹತ್ವ ಮಾತ್ರವಲ್ಲ, ಅಭಿಮಾನಿಗಳ ಪ್ರೀತಿಗೆ ನೀಡಿರುವ ಸ್ಥಾನ ಕೂಡ ಹೌದು.