ಉಪೇಂದ್ರ ಸರ್ ನನ್ನ ಸಲಗ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಅವರು ಪ್ರಜಾಕೀಯದ ಪ್ರಚಾರಕ್ಕೆ ಕರೆದರೆ ನಾನು ಒಪ್ಪಲೇಬೇಕಾಗಿದೆ ಅಂತ ನೀವು ಅಂದುಕೊಂಡರೆ ಅದು ತಪ್ಪು! ಯಾಕೆಂದರೆ ನಾನು ಉಪೇಂದ್ರ ಅವರನ್ನು ಮಾದರಿಯಾಗಿ ಕಾಣುವಂಥವನು. ಅವರಂತೆ ಬದುಕಲು ಸಾಧ್ಯವಾಗದೇ ಹೋಗಬಹುದು. ಆದರೆ ಅವರ ಚಿಂತನೆ ಮತ್ತು ಆದರ್ಶಗಳ ಬಗ್ಗೆ ಅಭಿಮಾನ ಇರಿಸಿಕೊಂಡವನು. ಅದೇ ಕಾರಣದಿಂದಲೇ ನಾನು ಟೀಸರ್ ಅವರೇ ಬಿಡುಗಡೆಗೊಳಿಸಬೇಕು ಎಂದು ಪಟ್ಟು ಹಿಡಿದೆ” ಎಂದರು ದುನಿಯಾ ವಿಜಯ್. ಅವರು ತಮ್ಮ ಜನ್ಮದಿನದ ಪ್ರಯುಕ್ತ ‘ಸಲಗ’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ಉಪೇಂದ್ರ ಅವರ ಯೋಜನೆಗಳ ಅಚ್ಚರಿ ವ್ಯಕ್ತಪಡಿಸುತ್ತಾ ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ಸಮಾಜದಲ್ಲಿ ಹೇಳಿಕೊಂಡಂತೆ ಬದುಕುವುದು ಕಷ್ಟ. ಸಿನಿಮಾದ ಸಂಭಾಷಣೆಯಾದರೆ ಅದನ್ನು ಸಿನಿಮಾಗೆ ಮೀಸಲು ಎನ್ನಬಹುದು. ಆದರೆ ಪ್ರಜಾಕೀಯದ ಬಗ್ಗೆ ಉಪ್ಪಿ ಸರ್ ಹೇಳುವ ಸಂಭಾಷಣೆಗಳು ಕಾರ್ಯಗತಗೊಂಡರೆ ಬಹುದೊಡ್ಡ ಕ್ರಾಂತಿಯೇ ಆದೀತು. ಹಾಗಾಗಿಯೇ ನಾವು ಕೆಲವೊಂದು ಅಂತರಂಗದ ವಿಚಾರಗಳನ್ನು ಮಾತನಾಡಿಕೊಂಡೆವು. ಆಗ ಕೂಡ ಅವರು, “ನಾನು ಪ್ರಜಾಕೀಯದ ವಿಚಾರದಲ್ಲಿ ಎಲ್ಲಿಯೂ ಮಾತಿಗೆ ತಪ್ಪಲು ಸಾಧ್ಯವೇ ಇಲ್ಲ. ಯಾಕೆಂದರೆ ಮೊದಲು ನಾನು ಸರಿಯಾಗಿರಬೇಕು. ನಾನೇ ಸರಿಯಾಗಿಲ್ಲ ಎಂದ ಮೇಲೆ ಯಾರ ಕಡೆಗೂ ಬೆರಳು ತೋರಿಸುವ ಅವಕಾಶ ನನಗೆ ಇರುವುದಿಲ್ಲ” ಎಂದರು. ಅವರಲ್ಲಿನ ಆ ಪ್ರಾಮಾಣಿಕತೆ ನನಗೆ ತುಂಬ ಅಚ್ಚರಿ ಮೂಡಿಸಿತು. ವೈಯಕ್ತಿಕವಾಗಿ ಏನೇನೂ ಲಾಭವಿಲ್ಲದೆ ದೇಶಕ್ಕಾಗಿ ಪ್ರಜಾಕೀಯದ ಯೋಜನೆ ಹಾಕಿಕೊಂಡಿದ್ದಾರೆ ಉಪೇಂದ್ರ. ಅವರನ್ನು ನಾನು ಮುಕ್ತವಾಗಿ ಬೆಂಬಲಿಸುತ್ತೇನೆ. ನನ್ನಂಥವನ ಬೆಂಬಲ ಅವರಿಗೆ ಅಗತ್ಯ ಇಲ್ಲದಿರಬಹುದು. ಯಾಕೆಂದರೆ ಪ್ರಜಾಕೀಯಕ್ಕೆ ಅವರೇ ದೊಡ್ಡ ಐಕಾನ್. ಆದರೂ ನಾನು ಅವರು ಕರೆದರೆ ಯಾವ ಕ್ಷಣ ಕೂಡ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಲು ಸಿದ್ಧ. ಅವರ ಯೋಜನೆ ತುಂಬ ಚೆನ್ನಾಗಿದೆ. ಆದರೆ ಎಲ್ಲ ಒಳ್ಳೆಯ ಕೆಲಸಗಳಂತೆ ಇದಕ್ಕೂ ಮರವಾಗಿ ಬೆಳೆಯಲು ತುಸು ಸಮಯ ತೆಗೆದುಕೊಳ್ಳಬಹುದು” ಎಂದು ಆಶಾಭಾವ ವ್ಯಕ್ತಪಡಿಸಿದರು ದುನಿಯಾ ವಿಜಯ್.
ದುನಿಯಾ ವಿಜಯ್ ಅವರು ಪ್ರಥಮ ಬಾರಿ ನಿರ್ದೇಶಿಸಿರುವ ಚಿತ್ರ ಸಲಗ. ಅದರಲ್ಲಿ ರೌಡಿಸಂ ವಿಚಾರವನ್ನೇ ಪ್ರಧಾನವಾಗಿ ಹೇಳಲಾಗಿದ್ದು ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳ ಅಧ್ಯಾಯಕ್ಕೆ ಓಂಕಾರ ಹಾಕಿದ ಉಪೇಂದ್ರ ಅವರಿಂದಲೇ ಟೀಸರ್ ಬಿಡುಗಡೆ ಮಾಡಲಾಗಿತ್ತು. ಟೀಸರ್ ನೋಡಿ ಮೆಚ್ಚುಗೆ ಸೂಚಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ವಿಜಯ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

