ಸಿನಿಮಾ ತಾರೆಯರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಲ್ಲರಿಗೂ ತಿಳಿದಿರುವಂಥದ್ದೇ. ರಾಜ್ ಕುಮಾರ್ ಅವರು ಅಭಿಮಾನಿಗಳು ತಮ್ಮನ್ನು ದೇವರಂತೆ ಕಾಣುತ್ತಿದ್ದಾರೆಂದಾಗ ತಾವೇ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎನ್ನತೊಡಗಿದ್ದರು. ಇಲ್ಲಿ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರ ಮೇಲೆ ಜನಗಳಿಗಿರುವ ಕ್ರೇಜ್ ಹೇಗಿದೆ ನೀವೇ ನೋಡಿ.
ಭಾನುವಾರ ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿ ‘ಜೇಮ್ಸ್’ ಚಿತ್ರದ ಮುಹೂರ್ತ ನಡೆದ ಸಮಯ. ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರತಂಡ, ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳ ಕಲರವ. ಇದರ ನಡುವೆ ಪವರ್ ಸ್ಟಾರ್ ಪ್ರವೇಶವಾಗುತ್ತಿದ್ದಂತೆ ಘಟನೆಯೊಂದು ನಡೆಯಿತು. ಆಂಜನೇಯನ ಅರ್ಚಕರು ಅಂಜನೀ ಪುತ್ರನೆಡೆಗೆ ಗಮನ ಹರಿಸಿದರು!
ದೇವರ ಗರ್ಭಗುಡಿಯ ಮುಂದೆ ನಡೆಯುವ ಮಹೂರ್ತ ಸಮಾರಂಭದ ಬಳಿಕ ಎಂದಿನಂತೆ ಇನ್ನೊಂದು ಕಡೆ ಮಾಧ್ಯಮಗೋಷ್ಠಿ ನಡೆಯಿತು. ಬಳಿಕ ಅದೇ ಆಂಜನೇಯನ ಮುಂದೆ ಅಭಿಮಾನಿಗಳ ಕೊಡುಗೆ ಸ್ವೀಕರಿಸಲು ಬಂದ ಪುನೀತ್ ರಾಜ್ ಕುಮಾರ್ ಅವರನ್ನು ಕಂಡು ಜನ ಒಮ್ಮೆಲೆ ಒಳನುಗ್ಗಿದರು. ಅವರೆಲ್ಲರಲ್ಲಿ ಮಾತನಾಡಿದ ಪುನೀತ್, ದೇವರ ಪ್ರಸಾದ ಪಡೆದ ಬಳಿಕ ಎಲ್ಲರ ಜತೆಗೂ ಫೊಟೋಗೆ ಪೋಸು ನೀಡುವುದಾಗಿ ಹೇಳಿದರು. ಕೊಟ್ಟ ಮಾತಿನಂತೆ ಅಪ್ಪು ವಾಪಾಸು ಬಂದಾಗ ಅದುವರೆಗೆ ಸಾಲು ನಿಂತಿದ್ದ ಅಭಿಮಾನಿಗಳು ಮತ್ತೆ ಮುತ್ತಿಗೆ ಹಾಕಿದರು. ಸ್ವತಃ ಅರ್ಚಕರು ಕೂಡ ಪುನೀತ್ ಅವರ ಫೊಟೋ ತೆಗೆಯಲು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.
ಸಾಧ್ಯವಾದಷ್ಟು ಅಭಿಮಾನಿಗಳಿಗೆ ಫೊಟೋಗೆ ಅವಕಾಶ ನೀಡಿದ ಪುನೀತ್, ಪುಟ್ಟಮಕ್ಕಳನ್ನು ಎತ್ತಿಕೊಂಡು ಸಂಯಮದಿಂದ ವರ್ತಿಸಿದ್ದು ನೆರೆದವರಲ್ಲಿ ಇನ್ನಷ್ಟು ಅಭಿಮಾನ ತುಂಬುವಂತೆ ಮಾಡಿರುವುದು ಸತ್ಯ.
1 Comment