
“ಇದು ಯಾರದೋ ನೈಜ ಕತೆಯಲ್ಲ. ಆದರೆ ನೈಜತೆ ಹೊಂದಿರುವ ಕಾಲ್ಪನಿಕ ಕತೆ. ಚಿತ್ರದಲ್ಲಿ ಬರುವ ಘಟನೆಗಳು ರೌಡಿಸಂ ಮತ್ತು ಪೊಲೀಸ್ ಲೋಕದಲ್ಲಿ ನಡೆದ, ನಡೆಯಬಹುದಾದಂಥ ಘಟನೆಗಳು. ಹಾಗಾಗಿ ನೈಜ ಚಿತ್ರ ಎನ್ನಬಹುದೇ ಹೊರತು ಯಾರದೋ ಜೀವನ ಚರಿತ್ರೆ ಇದು ಅಲ್ಲ” ಎಂದರು ದುನಿಯಾ ವಿಜಯ್. ಅವರು ತಮ್ಮ ಜನ್ಮದಿನದ ಪ್ರಯುಕ್ತ ತಾವು ಪ್ರಥಮ ಬಾರಿ ನಿರ್ದೇಶಿಸಿದ ‘ಸಲಗ’ ಚಿತ್ರದ ಟೀಸರ್ ಬಿಡುಗಡೆಯ ಬಳಿಕ ಮಾತನಾಡುತ್ತಿದ್ದರು.

ಸಿನಿಮಾ ನಿರ್ದೇಶನ ನನ್ನ ಬಹುದಿನಗಳ ಕನಸು. ಇಂದು 46ನೇ ವರ್ಷದ ಜನ್ಮದಿನ. ಈಗ ಕನಸು ನನಸಾಗುವ ಸಮಯ ಬಂದಿದೆ. ಹಾಗಂತ ಇಂದು ಚಿತ್ರ ಪೂರ್ತಿಯಾಗಲು ಅದಕ್ಕೆ ನಾನೊಬ್ಬನೇ ಕಾರಣ ಎನ್ನಲಾಗದು. ಛಾಯಾಗ್ರಾಹಕ ಶಿವಸೇನಾ ಮತ್ತು ನನ್ನ ವಿದ್ಯಾವಂತ ಸಹಾಯಕ ರಘು ಅವರ ಬೆಂಬಲ ಪ್ರಮುಖವಾಗಿರುವಂಥದ್ದು. ಇದು ನಿರ್ದೇಶಕನಾಗಿ ನನಗೆ ಮಾತ್ರವಲ್ಲ, ಕಲಾವಿದರಾಗಿ ಹಲವಾರು ಮಂದಿಗೆ ಜೀವದಾನ ನೀಡುವಂಥ ಚಿತ್ರ. ನನ್ನ ದುನಿಯಾ ಸಿನಿಮಾ ನೋಡಿ, ಸಿನಿಮಾ ಮೇಲೆ ಆಸಕ್ತಿ ಮೂಡಿಸಿಕೊಂಡು ಬಂದ ಈ ಹುಡುಗನನ್ನು ನಾವು ಕೆಂಡ ಎಂದು ಕರೆಯುತ್ತೇವೆ. 15 ವರ್ಷಗಳ ಬಳಿಕ ಈತನಿಗೆ ಅವಕಾಶ ದೊರಕಿದೆ. ಈ ಉದ್ಯಮದಲ್ಲಿ ತಾಳ್ಮೆ ಮುಖ್ಯ. ಹಾಡು ಬರೀತೇನೆ, ಕಾಮಿಡಿ ಮಾಡ್ತೀನಿ ಎಂದು ನನ್ನ ಬಳಿಯೂ ಅವಕಾಶ ಕೇಳಿ ಬರುವವರಿದ್ದಾರೆ. ಆದರೆ ಪದವಿ ತನಕ ಕಲಿತು, ಒಂದಷ್ಟು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿ ಬಂದರೇನೇ ಉತ್ತಮ ಅವಕಾಶ ಸಿಗಲು, ಕಲಾವಿದನಾಗಿ ಬೆಳೆಯಲು ಸಾಧ್ಯ ಎಂದು ವಿಜಯ್ ತಮ್ಮ ಅನುಭವದ ಮಾತು ಹೇಳಿದರು. ಅದೇ ಸಂದರ್ಭದಲ್ಲಿ ಈಗ ರಂಗಭೂಮಿ ಅನುಭವ ಪಡೆದು, ತಯಾರಿಯೊಂದಿಗೆ ಚಿತ್ರರಂಗಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ‘ಸಲಗ’ದಲ್ಲಿ ನನಗೆ ಸಹಾಯಕನಾಗಿರುವ ಅಭಿ ಅಂಥ ಪ್ರತಿಭಾವಂತರ ಪಟ್ಟಿಯಲ್ಲಿ ಸೇರುತ್ತಾರೆ ಎಂದು ಹೇಳಲು ಕೂಡ ಅವರು ಮರೆಯಲಿಲ್ಲ.
ಅಭಿಮಾನಿಗಳು ಇಬ್ಬರಿಂದ ಎತ್ತಲಾಗದಷ್ಟು ದೊಡ್ಡ ಹಾರ ತುರಾಯಿ ಕೇಕ್ ಗಳೊಂದಿಗೆ ಬಂದು ಶುಭ ಕೋರುತ್ತಲೇ ಇದ್ದಾರೆ. ಸಲಗ ಎನ್ನುವ ಹೆಸರಿನಲ್ಲಿನ ಕೇಕ್ ವಿಶೇಷ ಆಕರಗಷಣೆಯಾಗಿತ್ತು. ವಿಜಯ್ ದಂಪತಿ ಸಮೇತ ಕತ್ತರಿಸಿ ಅಭಿಮಾನಿಗಳಿಗೆ ನೀಡಿದರು. ಹೊಸಕೆರೆ ಹಳ್ಳಿಯ ಮನೆಯ ಪಕ್ಕದಲ್ಲೇ ವಿಜಯ್ ಅವರ ಬೃಹದಾಕಾರದ ಕಟೌಟ್ ನಿಲ್ಲಿಸಿ ಅದಕ್ಕೂ ಹೂವಿನ ಹಾರಗಳನ್ನು ಹಾಕಲಾಗಿತ್ತು.




