ಕಳೆದ ವರ್ಷ ತೆರೆಕಂಡು ಸುದ್ದಿ ಮಾಡಿದ ಚಿತ್ರ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಟೈಟಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ತಬಲಾ ನಾಣಿಯವರಿಗೆ ಚಿತ್ರವು ಒಂದು ಒಳ್ಳೆಯ ಕಮ್ ಬ್ಯಾಕ್ ನೀಡಿದ್ದರೆ, ಅದೇ ಚಿತ್ರದ ಮೂಲಕ ವೆಲ್ಕಮ್ ಮಾಡಿಸಿಕೊಂಡ ಚಿತ್ರರಂಗಕ್ಕೆ ನಾಯಕಿ ಸಂಜನಾ. ಆ ಹೆಸರಲ್ಲಿ ಈಗಾಗಲೇ ಒಂದಿಬ್ಬರು ನಾಯಕಿಯರಿದ್ದರೂ ಸಹ ಈ ಸಂಜನಾ ತಮ್ಮದೇ ಸ್ಥಾನದೊಂದಿಗೆ ಮೆರೆಯುವುದು ಖಚಿತ. ಪ್ರಸ್ತುತ ಬಿಡುಗಡೆಗೆ ಸಿದ್ದವಾಗಿರುವ ‘ಸಲಗ’ ಅದನ್ನು ಸಾಬೀತು ಪಡಿಸುವುದರಲ್ಲಿ ಸಂದೇಹವಿಲ್ಲ. ತಮ್ಮ ಬಣ್ಣದ ಬದುಕಿನ ಪ್ರಯಾಣದ ಅನುಭವಗಳನ್ನು ಸಂಜನಾ ಅವರು ಸಿನಿಕನ್ನಡದೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.
ಸಲಗ ಚಿತ್ರ ತಂಡದೊಂದಿಗಿನ ಈ ಪಯಣ ಹೇಗಿದೆ?
ಅವಕಾಶ ಸಿಕ್ಕಾಗ ತುಂಬಾನೇ ಖುಷಿಯಾಗಿತ್ತು. ಯಾಕೆಂದರೆ ಅದು ನನಗೆ ಸಿಕ್ಕ ಮೊದಲ ಸ್ಟಾರ್ ಸಿನಿಮಾ. ದೊಡ್ಡ ಪ್ರಾಜೆಕ್ಟ್ ನಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಾಗ ತುಂಬ ಖುಷಿಯಾಯಿತು. ವಿಜಯ್ ಸರ್ ಜತೆಗೆ ಹಲವಾರು ಹಿರಿಯ ಕಲಾವಿದರೊಡನೆ ನಟಿಸುವ ಅವಕಾ ದೊರಕಿತು. ಸರ್ ಜನ್ಮದಿನದ ಸಂಭ್ರಮದಲ್ಲಿ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಮಾಸ್ ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದೀಗ ನೀವು ಸಂಪೂರ್ಣವಾಗಿ ಚಿತ್ರರಂಗದಲ್ಲೇ ಗಮನ ಇರಿಸಿದಂತಿದೆ?
ಹೌದು. ಸಾಫ್ಟ್‌ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದ ನನಗೆ ಅಭಿನಯದ ಬಗ್ಗೆ ಯಾವುದೇ ತರಬೇತಿ ಇರಲಿಲ್ಲ. ಆದರೆ ನಾನು ಭರತನಾಟ್ಯ ಕಲಿತಿರುವ ಕಾರಣ, ಸಹಜವಾಗಿ ಕಲೆಯ ಬಗ್ಗೆ ಆಸಕ್ತಿ ಇತ್ತು. ಆದರೆ ಸಿನಿಮಾ ಆಫರ್ ಬಂದಿದ್ದು ಮಾತ್ರ ತೀರ ಅನಿರೀಕ್ಷಿತ. ‘ಕುಷ್ಕ’ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ‘ಕ್ಷತ್ರಿಯ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸದ್ಯಕ್ಕೆ ಶೆಡ್ಯೂಲ್ ಬ್ರೇಕ್ ನೀಡಲಾಗಿದೆ. ಸದ್ಯಕ್ಕೆ ಅಜಯ್ ರಾವ್ ಅವರ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಅದರಲ್ಲಿ ಪಾಲ್ಗೊಂಡಿದ್ದೇನೆ.
ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳು ದೊರಕುತ್ತಿವೆಯೇ?
ಖಂಡಿತವಾಗಿ. ‘ಸಲಗ’ದಲ್ಲಿ ನನ್ನದು ಬೋಲ್ಡ್ ಆಗಿರುವಂಥ ಮಾಸ್ ಹೀರೋಯಿನ್ ಪಾತ್ರ. ಶೋಕಿವಾಲದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದೇನೆ. ಕ್ಷತ್ರಿಯ ಚಿತ್ರದಲ್ಲಿ ನಾನು ಒಬ್ಬಳು ವಿದ್ಯಾರ್ಥನಿಯ ಕ್ಯಾರೆಕ್ಟರ್ ನಿಭಾಯಿಸುತ್ತಿದ್ದೀನಿ. ಹಾಗಾಗಿ ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರಗಳೇ ಸಿಗುತ್ತಿರೋದು ನೋಡಿ ಸಂತಸವಾಗಿದೆ. ಇವೆಲ್ಲವೂ ನನ್ನನ್ನು ಓರ್ವ ನಟಿಯಾಗಿ ಗುರುತಿಸುವಂತೆ ಮಾಡುವಲ್ಲಿ ಸಹಾಯವಾಗುತ್ತದೆ ಎಂದು ನಂಬಿದ್ದೇನೆ.
ನಿಮ್ಮ ಕನಸುಗಳೇನು?
ನಿಜ ಹೇಳಬೇಕೆಂದರೆ ನನಗೆ ಕನಸಿಗಿಂತ ಹೆಚ್ಚೇ ದೊರಕಿದೆ. ಡಾ. ಶಿವರಾಜ್ ಕುಮಾರ್ ಅವರ ನಿರ್ಮಾಣದ ಪ್ರಥಮ ವೆಬ್ ಸೀರೀಸ್ ನಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದೆ. ಇದೀಗ ವಿಜಯ್ ಅವರು ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ. ಈ ಪ್ರಥಮಗಳು ಚಿತ್ರರಂಗದ ಇತಿಹಾಸದಲ್ಲಿ ಎಂದಿಗು ಪ್ರಥಮವಾಗಿಯೇ ಉಳಿಯಲಿದೆ. ಹೀಗೆ ದಾಖಲಾತ್ಮಕ ಪ್ರಾಜೆಕ್ಟ್ ಗಳಲ್ಲಿ ಅವಕಾಶ ಸಿಕ್ಕ ಹಾಗೆ, ನನ್ನ ಅಭಿನಯ ಕೂಡ ಪ್ರೇಕ್ಷಕರ ಮನದೊಳಗೆ ದಾಖಲಾಗುವ ಅವಕಾಶ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.