ಮದುವೆ ಮಾಡ್ರೀ ಸರಿ ಹೋಗ್ತಾನೆ ಎನ್ನುವುದು ಚಿತ್ರದ ಶೀರ್ಷಿಕೆ. ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳಿವೆ. ಹಾಡುಗಳಲ್ಲೇ ಚಿತ್ರದ ಕತೆ ಹೇಳುವ ಪ್ರಯತ್ನ ಮಾಡಿರುವ ಕಾರಣ ಇಷ್ಟೊಂದು ಹಾಡುಗಳನ್ನು ಬಳಸಬೇಕಾಯಿತು. ಒಮ್ಮೆ ಹಾಡುಗಳನ್ನು ಕೇಳಿದರೆ ಅದು ಹೇಗೆ ವರ್ಕೌಟ್ ಆಗುತ್ತದೆ ಎಂದು ಅರಿವಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗೋಪಿ ಕೆರೂರ್. ಅವರು ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಯ ವೇಳೆ ಮಾತನಾಡುತ್ತಿದ್ದರು.
ಹೊಸ ಮುಖದ ಪ್ರತಿಭೆಗಳು ಚಿತ್ರದಲ್ಲಿ ನಾಯಕ ಮತ್ತು ನಾಯಕಿಯಾಗಿ ನಟಿಸಿದ್ದು, ಶಿವಚಂದ್ರ ಕುಮಾರ್ ಚಿತ್ರದ ನಾಯಕ. ತಮ್ಮದು ಹಳ್ಳಿ ಹುಡುಗನ ಪಾತ್ರ ಎಂದ ಶಿವಚಂದ್ರ ಅವರ ಜೋಡಿಯಾಗಿ ನವ ನಟಿ ಆರಾಧ್ಯ ಕಾಣಿಸಿಕೊಳ್ಳುತ್ತಿದ್ದು ಆಕೆಗೆ ನಗರದಿಂದ ಹಳ್ಳಿಗೆ ಬರುವ ಯುವತಿಯಾಗಿ ಅಭಿನಯಿಸಿರುವುದಾಗಿ ತಿಳಿಸಿದರು.
ರಂಕಲ್ ರಾಟೆ ಚಿತ್ರಕ್ಕೆ ರಾಗ ಸಂಯೋಜಿಸಿದ್ದ ಅವಿನಾಶ್ ಬಾಸುತ್ಕರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸಾರಂಗಿ, ಶಹನಾಯಿ ಮತ್ತು ಉತ್ತರ ಕರ್ನಾಟಕ ಭಾಗದ ವಾದ್ಯಗಳನ್ನು ಬಳಸಿಕೊಂಡಿರುವುದಾಗಿ ತಿಳಿಸಿದರು. ಯಾಕೆಂದರೆ ಇದು ಉತ್ತರ ಕರ್ನಾಟಕದ ಮಂದಿ ಸ್ಥಳೀಯ ಅಂಶಗಳನ್ನು ಇರಿಸಿಕೊಂಡಿರುವ ಚಿತ್ರ. ಹಾಗಾಗಿ ನೇಟಿವಿಟಿಗೆ ಪ್ರಾಧಾನ್ಯತೆ ನೀಡಿದ್ದೇವೆ. ಕೆ.ಕಲ್ಯಾಣ್ ಮತ್ತು ವಿ ನಾಗೇಂದ್ರ ಪ್ರಸಾದ್ ಅವರು ಎರಡು ಹಾಡುಗಳನ್ನು ರಚಿಸಿದ್ದು, ಉಳಿದ ಎಲ್ಲ ಗೀತೆಗಳನ್ನು ಸ್ವತಃ ನಿರ್ದೇಶಕರೇ ರಚಿಸಿದ್ದಾರೆ. ಅಂಕಿತಾ ಕುಂಡು, ಸಂಚಿತ್ ಹೆಗ್ಡೆ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ ಎಂದು ಅವಿನಾಶ್ ತಿಳಿಸಿದರು. ಸಾಮಾನ್ಯವಾಗಿ ಚಿತ್ರೀಕರಣದ ಲೊಕೇಶನ್ ಗೆ ಸಂಗೀತ ನಿರ್ದೇಶಕ ಹೋಗಬೇಕಾದ ಅಗತ್ಯ ಇರುವುದಿಲ್ಲ. ಆದರೆ ಇದು ಕಥೆಯೊಂದಿಗೆ ಸಾಗುವ ಹಾಡುಗಳಾದ ಕಾರಣ ತಾವು ಸ್ವತಃ ಲೊಕೇಶನ್ ಗೆ ಹೋಗಿದ್ದಾಗಿ ಅವರು ಹೇಳಿದರು. ಅಂದಹಾಗೆ ಚಿತ್ರದಲ್ಲಿ ಸಂಗೀತ ಮೇಷ್ಟ್ರ ಪಾತ್ರವಿದ್ದು, ಅದನ್ನು ರಮೇಶ್ ಭಟ್ ತಾವು ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಚಿತ್ರದಲ್ಲಿ ನಾಯಕನ ತಾಯಿಯ ಸ್ನೇಹಿತೆಯಾಗಿ ಜನಪ್ರಿಯ ನಟಿ ಚಿತ್ಕಲಾ ಬೀರಾದಾರ್ ಕಾಣಿಸಿಕೊಳ್ಳಲಿದ್ದು, ತಾಯಿಯಾಗಿ ಅರುಣಾ ಬಾಲರಾಜ್ ಪಾತ್ರವಹಿಸಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ಅವರು ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಇನ್ನಿತರ ಪಾತ್ರಗಳಲ್ಲಿ ನಟಿಸಿರುವ ಕಮಲಾ, ಶಿಲ್ಪಾ ಮೂರ್ತಿ, ಹಿರಿಯ ರಂಗಭೂಮಿ ನಟ, ಜೋಗಿ ಸಿನಿಮಾ ಖ್ಯಾತಿಯ ಗುರುರಾಜ್ ಹೊಸಕೋಟೆ, ಚಕ್ರವರ್ತಿ ದಾವಣಗೆರೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜನಪ್ರಿಯ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ಆಡಿಯೋ ಸಿ.ಡಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.