ಜಾಗ್ವಾರ್ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟು ಕನ್ನಡ ಮತ್ತು ತೆಲುಗು ಭಾಷೆಯ ಸಿನಿಮಾ ಪ್ರೇಕ್ಷಕರ ಮನದಲ್ಲಿ ಯುವತಾರೆಯಾಗಿ ಗುರುತಿಸಿಕೊಂಡವರು ನಿಖಿಲ್ ಕುಮಾರ ಸ್ವಾಮಿ. ಮುನಿರತ್ನ ಅವರ ನಿರ್ಮಾಣದ ‘ಕುರುಕ್ಷೇತ್ರ’ ಚಿತ್ರದ ಮೂಲಕ ಅಭಿಮನ್ಯುವಾಗಿ ಗಮನ ಸೆಳೆದ ನಿಖಿಲ್ ಆ್ಯಕ್ಷನ್ ದೃಶ್ಯಗಳು ಸಿನಿರಸಿಕರಿಗೆಲ್ಲ ಇಷ್ಟ. ಬಹುಶಃ ಅದೇ ಕಾರಣದಿಂದಲೇ ಇರಬೇಕು ಸೀತಾರಾಮ ಕಲ್ಯಾಣ ಎನ್ನುವ ಕೌಟುಂಬಿಕ ಚಿತ್ರ ನಿರೀಕ್ಷಿತ ಗೆಲುವು ಕಾಣಲಿಲ್ಲ. ಜತೆಗೆ ಮಂಡ್ಯದ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ನಿಖಿಲ್ ಚಿತ್ರರಂಗದಿಂದ ತುಸು ದೂರವೇ ಇದ್ದರು. ಆದರೆ ಈಗ ಬಂದಿರುವ ಸುದ್ದಿ ಮಾತ್ರ ನಿಖಿಲ್ ಅಭಿಮಾನಿಗಳಿಗೆ ಹರ್ಷೋತ್ಸಾಹ ಮೂಡಿಸಿದೆ. ಜನ್ಮದಿನದಂದೇ ಬರೋಬ್ಬರಿ ನಾಲ್ಕು ಚಿತ್ರಗಳ ಮೂಲಕ ಸಕ್ರಿಯರಾಗುವ ಸುದ್ದಿ ನೀಡಿದ್ದಾರೆ ನಿಖಿಲ್. ಅವುಗಳಲ್ಲಿ ಜನಪ್ರಿಯ ಆಡಿಯೋ ಸಂಸ್ಥೆಯಾದ ‘ಲಹರಿ’ ನಿರ್ಮಾಣದ ಚಿತ್ರವೂ ಒಂದು. ಪ್ರೊಡಕ್ಷನ್ ನಂಬರ್ ಒನ್ ಹೆಸರಲ್ಲಿ ನಿರ್ಮಾಣದ ಸಿನಿಮಾ ಬಗ್ಗೆ ಅಧಿಕೃತ ಸಂಭ್ರಮದ ಸಂದೇಶ ಹೊರಟ ಸಂದರ್ಭದ ಚಿತ್ರಣಗಳು ಇಲ್ಲಿವೆ.
ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರವರ ಸಂಗೀತ ಸಂಯೋಜನೆಯಲ್ಲಿ ‘ಪ್ರೊಡಕ್ಷನ್ ನಂಬರ್ ಒನ್’ ಚಿತ್ರದ ಹಾಡುಗಳು ಮೂಡಿ ಬರಲಿವೆ. ಹಾಡಿನ ಮುದ್ರಣ ಕಾರ್ಯಕ್ಕೆ ನಿಖಿಲ್ ಕುಮಾರ ಸ್ವಾಮಿಯವರ ಜನ್ಮದಿನದಂದೇ ಚಾಲ್ತಿ ನೀಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ವಿಜಯ್ ಕುಮಾರ್ ಕೊಂಡ ನಿರ್ದೇಶಿಸಲಿರುವ ಈ ಹೊಸ ಚಿತ್ರಕ್ಕೆ ಶ್ರೀಶ ಕುದುವಳ್ಳಿಯವರು ಛಾಯಾಗ್ರಾಹಕರು. ಶೇಖರ್ ಅವರ ನೃತ್ಯ ನಿರ್ದೇಶನ, ಪ್ರವೀಣ್ ಪುಡಿಯವರ ಸಂಕಲನ ಇರುತ್ತದೆ. ಚಿತ್ರಕ್ಕೆ ಜನವರಿ 30ರಂದು ಅಧಿಕೃತ ಚಾಲನೆ ದೊರೆಯುವ ಸಾಧ್ಯತೆಗಳಿವೆ.
ಇದರ ಜತೆಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಅವರು ಕಿಸ್ ಬಳಿಕ ನಿಖಿಲ್ ಅವರಿಗಾಗಿ ಪ್ರಾಜೆಕ್ಟ್ ಒಂದರ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.
ಹೆಸರಾಂತ ‘ಲೈಕಾ ಪ್ರೊಡಕ್ಷನ್ಸ್’ ಬ್ಯಾನರ್ ನಿಂದ ಕೂಡ ನಿಖಿಲ್ ಕುಮಾರ್ ಅವರ ಸಿನಿಮಾ ನಿರ್ಮಾಣವಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಇವೆಲ್ಕದರ ನಡುವೆ ಮುನಿರತ್ನ ಅವರೇ ನಿಖಿಲ್ ಗಾಗಿ ಮತ್ತೊಂದು ಚಿತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಸದ್ಯಕ್ಕೆ ಲಹರಿ ವೇಲು ಅವರಂತೂ ಸುದ್ದಿ ಪಕ್ಕ ಮಾಡಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.