“ಡಾರ್ಲಿಂಗ್ ಕೃಷ್ಣ ನನಗೆ ಸುನೀಲ್ ಎಂದೇ ಪರಿಚಯ. ಯಾಕೆಂದರೆ ಅವರು ನನ್ನ ‘ಜಾಕಿ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿದ್ದ ದಿನಗಳಿಂದಲೇ ಪರಿಚಯ. ಹಾಡುಗಳನ್ನು ನೋಡಿದೆ. ಚಿನ್ನಿ ಪ್ರಕಾಶ್ ಅವರ ಕೊರಿಯೋಗ್ರಫಿಗೆ ರವಿಚಂದ್ರನ್ ಚಿತ್ರಗಳಿಂದಲೇ ಅಭಿಮಾನಿ. ಇಲ್ಲಿನ ಹಾಡುಗಳು ಕೂಡ ಉತ್ತಮವಾಗಿ ಮೂಡಿ ಬಂದಿವೆ” ಎಂದು ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಚಿತ್ರದ ಆಡಿಯೋ ಮತ್ತು ವಿಡಿಯೋ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
‘ಟ್ರೈನ್ ಮಾತ್ರವೇ ಲೋಕಲ್’ ಎಂದ ಕೃಷ್ಣ!
ಚಿತ್ರದ ಹೆಸರಲ್ಲಿ ಮಾತ್ರ ಲೋಕಲ್ ಇದೆ. ಆದರೆ ಇದು ಹೈ ಕ್ಲಾಸ್ ಲೆವೆಲ್ ಪ್ರೊಡಕ್ಷನ್. ಚಿತ್ರಕ್ಕೆ ಬಾಲಿವುಡ್ ಶೈಲಿ ಕೊರಿಯೋಗ್ರಫಿ ಇದೆ. ನನ್ನದು ಕಾಲೇಜ್ ಹುಡುಗನ ಕ್ಯಾರೆಕ್ಟರ್. ನನಗೆ ಜೋಡಿಯಾಗಿ ಇಬ್ಬರು ನಾಯಕಿಯರಿದ್ದಾರೆ. ಒಬ್ಬರು ಮಂಗಳೂರು ಹುಡುಗಿ ಎಸ್ತರ್ ನರೋನ್ಹ. ಬೇರೆ ಸಿನಿಮಾ ಶೂಟಿಂಗ್ ನಲ್ಲಿರುವ ಕಾರಣ ಅವರು ಬಂದಿಲ್ಲ. ಇನ್ನೊಬ್ಬರು ಮೀನಾಕ್ಷಿ ದೀಕ್ಷಿತ್, ಮುಂಬೈನವರು. ಚಿತ್ರದ ನಿರ್ಮಾಪಕರು ತುಂಬ ಪ್ಯಾಷನೇಟ್ ಆಗಿದ್ದಾರೆ.
ಒಂದೇ ಚಿತ್ರ ಮಾಡಿದರೂ ಲೈಫ್ ಲಾಂಗ್ ನೆನಪಿಸಿಕೊಳ್ಳುವಂತಿರಬೇಕು ಎನ್ನುವುದು ಅವರ ಧ್ಯೇಯ. ಹಾಗೆಯೇ ಮೂಡಿ ಬಂದಿದೆ ಕೂಡ. ಇದು ನನ್ನ ವೃತ್ತಿ ಬದುಕಲ್ಲಿ ಇದು ಬಿಗ್ ಬಜೆಟ್ ಚಿತ್ರ. ಇದರಲ್ಲಿ ಚಿತ್ರೋದ್ಯಮದ 80 ಶೇಕಡದಷ್ಟು ಪೋಷಕ ಕಲಾವಿದರಿದ್ದಾರೆ. ಚಿನ್ನಿ ಪ್ರಕಾಶ್ ಅವರು ಒಂದೇ ಹಾಡನ್ನು 7 ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ” ಹೀಗೆ ವಿಶೇಷಗಳ ಪಟ್ಟಿ ಮಾಡುತ್ತಾ ಹೋದರು ಕೃಷ್ಣ.
ಚಿತ್ರಕ್ಕಿದೆ ಅರ್ಜುನ್ ಜನ್ಯ ಸಂಗೀತ
ಚಿತ್ರದ ನಿರ್ಮಾಪಕ ಸುಬ್ರಾಯ ವಾಲ್ಕೆ ಮಾತನಾಡಿ “ಕತೆಯನ್ನು ನಾನೇ ಬರೆದಿದ್ದೇನೆ. ಇದು ಒಂದು ಕಾಲ್ಪನಿಕ ಊರಿನಿಂದ ಬೆಂಗಳೂರಿಗೆ ಟ್ರೇನ್ ಜರ್ನಿ ಮಾಡುವ ನಡುವೆ ಹುಟ್ಟಿಕೊಳ್ಳುವಂಥ ಕತೆ. ಕಾಲೇಜ್ ಸ್ಟುಡೆಂಟ್ಸ್ ಜತೆಗೆ ಇತರ ಪಾತ್ರಗಳು ಕೂಡ ಇರುತ್ತವೆ. ಚಿತ್ರೋದ್ಯಮದ ಉತ್ತಮ ತಂತ್ರಜ್ಞರನ್ನು ಬಳಸಿದ್ದೇವೆ. ಚಿನ್ನಿ ಪ್ರಕಾಶ್ ಅವರ ಜತೆಗೆ ಹೈದರಾಬಾದ್ ಗಣೇಶ್, ರಾಜು ಸುಂದರಂ ಮೊದಲಾದವರು ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಕಾಯ್ಕಿಣಿಯವರು ಆಕರ್ಷಕ ಡ್ಯೂಯೆಟ್ ಹಾಡು ಬರೆದಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತದ ಜತೆಗೆ ರಿರೆಕಾರ್ಡಿಂಗ್ ಕೂಡ ಮಾಡಿದ್ದಾರೆ.
ಏಳುದಿನಗಳ ಕಾಲ ಟ್ರೇನಲ್ಲಿ ಶೂಟಿಂಗ್ ಮಾಡಿದ್ದೇವೆ. ಅದರಲ್ಲೇ ಒಂದು ಐಟಂ ಸಾಂಗ್ ಇದೆ. ಆ್ಯಕ್ಷನ್ ದೃಶ್ಯಗಳನ್ನು ಕೂಡ ಟ್ರೈನಲ್ಲೇ ಚಿತ್ರೀಕರಿಸಲಾಗಿದೆ. ಆದರೆ ಕಾಮಿಡಿ ದೃಶ್ಯಗಳನ್ನು ರಾಮೋಜಿ ಫಿಲ್ಮ್ ಸಿಟಿಯಯಲ್ಲಿ ಶೂಟ್ ಮಾಡಲಾಯಿತು” ಎಂದರು. ಹಾಡುಗಳು ಆಕಾಶ್ ಆಡಿಯೋ ಮೂಲಕ ಹೊರಬಂದಿದ್ದು, ಆಕಾಶ್ ಆಡಿಯೋ ಸಂಸ್ಥೆಯ ಅಶೋಕ್, ಚಿತ್ರದ ನಾಯಕಿ ಮುಂಬೈ ಬೆಡಗಿ ಮೀನಾಕ್ಷಿ ದೀಕ್ಷಿತ್, ಚಿತ್ರದ ಸಂಕಲನಕಾರ ಸೌಂದರ್ ರಾಜನ್ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.
ಫೆಬ್ರವರಿ ಎರಡನೇ ವಾರ ಚಿತ್ರ ತೆರೆಗೆ
ಸಾಧುಕೋಕಿಲ,ಭಜರಂಗಿ ಲೋಕಿ ಸೇರಿದಂತೆ ಕನ್ನಡದ ಜನಪ್ರಿಯ ಪೋಷಕನಟರ ಸಮಾಗಮವಾಗಿರುವ ಈ ಚಿತ್ರ ಫೆಬ್ರವರಿ ಎರಡನೇ ವಾರ ತೆರೆಗೆ ತರಲು ಯೋಜನೆ ಹಾಕಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ನಿರ್ದೇಶಕರೇ ಬರಲಿಲ್ಲ..!
ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ಚಿತ್ರದ ನಿರ್ದೇಶಕರೇ ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ. ಅದಕ್ಕೆ ಕಾರಣ, ನಿರ್ದೇಶಕ ರುದ್ರಮುನಿಯವರು ನಿರ್ಮಾಪಕ ಸುಬ್ರಾಯ ವಾಲ್ಕೆಯವರೊಂದಿಗೆ ಮುನಿಸಿಕೊಂಡಿದ್ದಾರಂತೆ. ವಾಲ್ಕೆಯವರದ್ದೇ ಆದಂಥ ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ಚಿತ್ರ ಒಂದೆರಡು ವರ್ಷಗಳಷ್ಟು ತಡವಾಗಿ ಬರುತ್ತಿದ್ದು ಕೊನೆಯ ಹಂತದಲ್ಲಿ ರುದ್ರಮುನಿಯವರು ನಿರ್ಮಾಪಕರ ಜತೆಗೆ ಭಿನ್ನಾಪ್ರಾಯ ತೋರಿ ದೂರವಾಗಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಅಸೋಸಿಯೇಟ್ ಡೈರೆಕ್ಟರ್ ಮಾರುತಿಯವರ ಮೂಲಕ ಪೂರ್ಣಗೊಳಿಸಿದ್ದು ಚಿತ್ರದ ಟೈಟಲ್ ಕಾರ್ಡ್ ನಲ್ಲಿ ರುದ್ರಮುನಿಯವರ ಹೆಸರನ್ನೇ ಬಳಸುವುದಾಗಿ ವಾಲ್ಕೆಯವರು ತಿಳಿಸಿದ್ದಾರೆ.