ಇಂಡಿಯನ್ ಗಾಗಿ ‘ಜಂಟಲ್ ಮ್ಯಾನ್’ ಕೂಗು

ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ‘ಜಂಟಲ್ ಮ್ಯಾನ್’ ಚಿತ್ರದ ಬಗ್ಗೆ ಎಲ್ಲೆಡೆ ಸುದ್ದಿ ಇದೆ. ಇದೀಗ ಗೊತ್ತಿಲ್ಲದವರನ್ನು ಕರೆದೆಬ್ಬಿಸಲೆಂದೇ ಹಾಡೊಂದು ಬರುತ್ತಿದೆ. ಅದೇ ಎದ್ದೇಳು ಭಾರತೀಯ..’

ಜನವರಿ 26 ನಮ್ಮ ದೇಶದ ಗಣರಾಜ್ಯೋತ್ಸವ. ಈ ಬಾರಿ 71 ನೇ ವರ್ಷದ ಸಂದರ್ಭದಲ್ಲಿ ಇನ್ನೂ ಮಲಗಿರುವ ಭಾರತೀಯರನ್ನು ಎಚ್ಚರಗೊಳಿಸಲು ಎಂಬಂತೆ ಹಾಡೊಂದು ಬಿಡುಗಡೆಯಾಗುತ್ತಿದೆ. ಅಂದಹಾಗೆ ಈ ಗೀತೆಯನ್ನು ಹಾಡಿನ ರೂಪದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಅಂದಹಾಗೆ ಈ ವಿಶಿಷ್ಟ ಗೀತೆಗೆ ಯೋಗರಾಜ್ ಭಟ್ ಅವರ ಸಾಹಿತ್ಯವಿದೆ.

ಯೋಗರಾಜ್ ಭಟ್ಟರ ಪ್ರಕಾರ ಇದು ಅವರು ರಚಿಸಿದ ಮೊದಲ ದೇಶಭಕ್ತಿ ಗೀತೆಯಂತೆ! ಅವರ ಮಾತಿನಲ್ಲೇ ಹೇಳುವುದಾದರೆ “ಸ್ವಾಮಿ ವಿವೇಕಾನಂದರು ನಿದ್ರಿಸುತ್ತಿರುವ ಭಾರತೀಯರನ್ನು ಎಚ್ಚರಗೊಳಿಸಿದರು. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಿರ್ವಹಿಸಿದ ಈ ಪಾತ್ರವನ್ನು ನಾನು ಎಚ್ಚರಗೊಳಿಸಲು ಈ ಹಾಡನ್ನು ರಚಿಸಿದ್ದೇನೆ. ಚಿತ್ರದಲ್ಲಿ ನಾಯಕ ದಿನಕ್ಕೆ 18 ಗಂಟೆಗಳ ಕಾಲ ನಿದ್ರಿಸುತ್ತಾನೆ. ಆ ಪಾತ್ರದ ಸಮಸ್ಯೆಗಳಿಗೆ ಸರಿಹೊಂದುವಂತಹ ಸಾಹಿತ್ಯವನ್ನು ನಾನು ರಚಿಸಬೇಕಾಗಿತ್ತು. ಹಾಗಾಗಿ ವಿವೇಕಾನಂದರ ಹೇಳಿಕೆಯ ಪ್ರೇರಣೆ ಪಡೆದು ಬರೆದಿದ್ದೇನೆ” ಎನ್ನುತ್ತಾರೆ.

ಟಗರು ಚಿತ್ರದ ಜನಪ್ರಿಯ ಗೀತೆ ‘ಟಗರು ಬಂತು ಟಗರು’ ಹಾಡಿನ ನಂತರ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಜಾನಪದ ಗಾಯಕ ಆಂಥೋನಿ ದಾಸನ್, ಈ ಹಾಡನ್ನು ಹಾಡಿದ್ದಾರೆ. “ಆಂಥೋನಿ ದಾಸನ್ ಅವರ ಧ್ವನಿಯು ಅಜನೀಶ್ ಸಂಯೋಜಿಸಿದ ದೇಶಭಕ್ತಿ ಗೀತೆಗೆ ಸೂಕ್ತವಾಗಿರುತ್ತದೆ ಎಂದು ನಾವು ಅವರನ್ನೇ ಆಯ್ಕೆ ಮಾಡಿದೆವು. ಇದು ನಮ್ಮ ಆಲ್ಬಂನ ಅತ್ಯುನ್ನತ ಹಾಡುಗಳಲ್ಲಿ ಒಂದಾಗಿದೆ. ನಾವು ಹಾಡಿನ ಟೀಸರ್ ಅನ್ನು ಗಣರಾಜ್ಯೋತ್ಸವದಂದು ಮತ್ತು ಅದರ ಪೂರ್ಣ ಆವೃತ್ತಿಯನ್ನು ಜನವರಿ 29 ರಂದು ಬಿಡುಗಡೆ ಮಾಡುತ್ತಿದ್ದೇವೆ” ಎಂದು ತಂಡ ತಿಳಿಸಿದೆ. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣ, ಜಡೇಶ್ ಕುಮಾರ್ ನಿರ್ದೇಶನ ಇರುವ ಈ ಚಿತ್ರ ವಿಶಿಷ್ಟವಾದ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಸುತ್ತ ಸುತ್ತುತ್ತದೆ, ಇದನ್ನು ಸ್ಲೀಪಿಂಗ್ ಬ್ಯೂಟಿ ಎಂದು ಕೂಡ ಕರೆಯುತ್ತಾರೆ. ಈ ಚಿತ್ರ ಫೆಬ್ರವರಿ 7 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಬಿಡುಗಡೆಗೆ ತಯಾರಾಗಿದೆ.

Recommended For You

Leave a Reply

error: Content is protected !!
%d bloggers like this: