ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್
ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ: ವೈ ಎನ್ ಶಂಕರೇಗೌಡ ಮತ್ತು ಇತರರು
ಇದು ಎರಡು ದೇಶವಾಸಿಗಳ ನಡುವಿನ ಸಂಬಂಧದ ಕತೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಕಾಣಿಸುವ ಎರಡು ಪಂಥಗಳು ಎಡ ಮತ್ತು ಬಲ!
ಹಾಗಾಗಿ ಚಿತ್ರದ ಪ್ರಥಮ ದೃಶ್ಯದಿಂದಲೇ ಗಾಂಧೀಜಿ, ನೆಹರು ಫೊಟೋಗಳು, ಸುಮಲತಾ ಅವರ ಕನ್ನಡಾಭಿಮಾನದ ಹಾಡು, ಹಾಡಲ್ಲಿ ಕಾಣಿಸುವ ಗಿರೀಶ್ ಕಾರ್ನಾಡು, ಅನಂತಮೂರ್ತಿ ಮೊದಲಾದ ಸ್ಪೂರ್ತಿಗಳನ್ನು ಕಂಡು ಇದೊಂದು ಎಡಪಂಥೀಯರ ಚಿತ್ರ ಎಂಬ ಸಂದೇಹ ಬರಬಹುದೇನೋ. ಆದರೆ ಚಿತ್ರದ ಕೊನೆಯಲ್ಲಿ ಮಾತ್ರ, ಬ್ಲೂ ಡೈಮಂಡನ್ನು ಶಿವನ ಮೂರನೇ ಕಣ್ಣಾದ ನೀಲಮಣಿ ಎನ್ನುವುದು, ಆ ಮಣಿಯನ್ನು ಬ್ರಿಟಿಷರು ಅರ್ಚಕನನ್ನು ಬೆದರಿಸಿ ಅಪಹರಿಸಿದ್ದಾರೆಂದು ಹೇಳುವುದು ಮತ್ತು ಅದಕ್ಕಾಗಿ ಬ್ರಿಟನ್ ಇಂದು ಕ್ಷಮೆ ಕೇಳಿ ವಜ್ರವನ್ನು ಮರಳಿಸುವಂತೆ ಮಾಡುವ ದೃಶ್ಯಗಳು
ಭಾರತೀಯ ಹಿಂದುತ್ವವನ್ನು ಎಚ್ಚರಿಸುವ ಬಲಪಂಥೀಯ ಪ್ರಯತ್ನಗಳಂತೆ ಗೋಚರಿಸುತ್ತದೆ. ಅವೆಲ್ಲವನ್ನು ಬದಿಗಿಟ್ಟು ನೋಡುವವರಿಗೆ ಇದೊಂದು ದೇಶಪ್ರೇಮದ ಚಿತ್ರವಾಗಿ ಕಂಡರೆ ಅಚ್ಚರಿ ಇಲ್ಲ.
ಚಿತ್ರದಲ್ಲಿ ನಾಯಕನ ಹೆಸರು ಕನಿಷ್ಕ. ಲಂಡನ್ ನಲ್ಲಿರುವ ಕನ್ನಡಿಗ. ವಿಡಿಯೋ ಬ್ಲಾಗರ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದಾತ. ವಿದೇಶದಲ್ಲಿದ್ದರೂ ಆತನ ಕನ್ನಡದ ಅಭಿಮಾನಕ್ಕೆ ಅಲ್ಲೇ ಇರುವ ತಂದೆ ತಾಯಿಗಳೇ ಕಾರಣ. ಕನಿಷ್ಕನಾಗಿ ವಸಿಷ್ಠ ಸಿಂಹ ಪ್ರಥಮ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿದ್ದಾರೆ. ಖಳನಟನಾಗಿದ್ದಾಗಲೇ ಅಭಿಮಾನಿಗಳನ್ನು ಸಂಪಾದಿಸಿದ್ದ ವಸಿಷ್ಠ ಸಿಂಹ ಇದೀಗ ನಾಯಕನಾಗಿ ಆ ಬಳಗವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ನಾಯಕಿಯೆಡಗಿನ ಅವರ ಪ್ರೀತಿ, ತಂದೆತಾಯಿ ಮತ್ತು ತಾಯ್ನಾಡಿಗೆ ಅವರು ತೋರುವ ಒಲವು ಪಾತ್ರಕ್ಕೆ ಹಿರಿಮೆ ತಂದುಕೊಟ್ಟಿದೆ. ಕನಿಷ್ಕನ ಕನ್ನಡಾಭಿಮಾನಕ್ಕೆ ಕಾರಣವಾಗುವ ತಂದೆತಾಯಿಯಾಗಿ ಸುಮಲತಾ ಮತ್ತು ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಕನಿಷ್ಕ ಕರ್ನಾಟಕಕ್ಕೆ ಬಂದಾಗ ಆತನ ಗೈಡಂತೆ ಜತೆಯಾಗಿ ಬಳಿಕ ಕೈ ಹಿಡಿಯುವ ತನಕ ಮುಂದುವರಿವ ಮೇದಿನಿಯ ಪಾತ್ರದಲ್ಲಿ ಮಾನ್ವಿತಾ ಹರೀಶ್ ಅಭಿನಯಿಸಿದ್ದಾರೆ. ಭಾವ ತೀವ್ರತೆಯನ್ನು ತೋರಿಸುವಲ್ಲಿ ಮನಗೆಲ್ಲುವ ಮಾನ್ವಿತಾ ಇಲ್ಲಿಯೂ ಅದೇ ಸಫಲತೆ ಸಾಧಿಸಿದ್ದಾರೆ.
ಜೆಮೋಲಜಿ ಪಾತ್ರದಲ್ಲಿ ಕಾಣಿಸಿರುವ ಅನಂತನಾಗ್ ಚಿತ್ರದ ಮತ್ತೋರ್ವ ಪ್ರಮುಖ ಪಾತ್ರಧಾರಿ. ಮೇದಿನಿಯ ತಾತನಾಗಿ ನಟಿಸಿರುವ ಅವರು ನಾಯಕ ಮತ್ತು ನಾಯಕಿಯ ಬಾಳಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾರೆ! ಉಳಿದಂತೆ ಸಾಧು ಕೋಕಿಲ, ಶಿವಮಣಿ ಮೊದಲಾದವರು ಡೈಮಂಡ್ ಸ್ಮಗ್ಲರ್ ಪಾತ್ರದಲ್ಲಿದ್ದಾರೆ. ವಸಿಷ್ಠ ಆ್ಯಕ್ಷನ್ ದೃಶ್ಯಗಳಲ್ಲಿ ಮಾಡಿದ ಮೋಡಿಯನ್ನು ಹಾಡುಗಳಲ್ಲಿ ಮಾಡಿಲ್ಲ. ಆದರೆ ಅರ್ಜುನ್ ಜನ್ಯ ಸಂಗೀತದಲ್ಲಿ ಈ ಹಿಂದಿಗಿಂತ ಹೊಸತಾದ ಹಾಡುಗಳನ್ನು ಆಲಿಸಬಹುದು.
ಮುಖ್ಯವಾಗಿ ಚಿತ್ರದಲ್ಲೊಂದು ಕಡೆ ಹೇಳುವಂತೆ ‘ಅಮೂಲ್ಯವಾಗಿದ್ದನ್ನು ಪಡೆಯಲು ಆಳಕ್ಕಿಳಿಯಬೇಕು’. ಚಿತ್ರದ ಮೇಲ್ನೋಟದಲ್ಲಿ ದಕ್ಕುವುದನ್ನೇ ಸಂದೇಶ ಎಂದುಕೊಳ್ಳದೇ, ಗುಣಮಟ್ಟದ ಚಿತ್ರವೊಂದನ್ನು ನೋಡುವ ಕಾತುರತೆ ಇರುವವರು ನೋಡಬಹುದಾದ ಚಿತ್ರ ಇದು.