“ಕಳೆದು ಐದು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಐದು ಚಿತ್ರಗಳನ್ನು ಮಾಡಿದ್ದೆ. ಆದರೆ ಲೀಡಾಗಿ ಒಳ್ಳೆಯ ಅವಕಾಶಗಳು ಈಗ ದೊರಕುತ್ತಿವೆ. ನಾಯಕನಾಗಿ ನನಗೆ ಈ ವರ್ಷ ಹೆಚ್ಚು ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಅದರಲ್ಲಿ ಕೂಡ ‘ರೈಮ್ಸ್’ ಚಿತ್ರದಲ್ಲಿನ ಪಾತ್ರ ತುಂಬ ವಿಭಿನ್ನವಾಗಿದೆ” ಎಂದು ಭರವಸೆ ವ್ಯಕ್ತಪಡಿಸಿದರು ಚಿತ್ರದ ನಾಯಕ ಅಜಿತ್ ಜಯರಾಜ್. ಅವರು ಚಿತ್ರದ ಫಸ್ಟ್ ಲುಕ್ ಬಿಡುಗಡೆಯ ಬಳಿಕ ಮಾತನಾಡುತ್ತಿದ್ದರು.
“ಅಜಿತ್ ನಿಜಕ್ಕೂ ಉತ್ತಮ ಕಲಾವಿದ. ದೊಡ್ಡ ಟೇಕ್ ಅನ್ನು ಒಂದೇ ಶಾಟ್ ನಲ್ಲಿ ಒಕೆ ಮಾಡಿದ ರೀತಿ ನೋಡಿ ನನಗೆ ಅಚ್ಚರಿಯಾಗಿತ್ತು” ಎಂದು ಅಜಿತ್ ನಟನೆಯನ್ನು ಹಿರಿಯನಟಿ ಅಭಿನಯ ಪ್ರಶಂಸಿಸಿದರು. ಚಿತ್ರದಲ್ಲಿ ಅವರು ಅಜಯ್ ನ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮದು ಚಿಕ್ಕ ಪಾತ್ರವಾದರೂ ಭಾವನಾತ್ಮಕ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದಾಗಿ ಅವರು ತಿಳಿಸಿದರು. ಅದೇ ವೇಳೆ ಚಿತ್ರತಂಡದವರು ವೈಟ್ ಅಥವಾ ಬ್ಲ್ಯಾಕ್ ಟೀ ಶರ್ಟ್ ಹಾಕಿಕೊಂಡು ಕಾರ್ಪೊರೇಟ್ ಶೈಲಿಯಲ್ಲಿ ನಿರ್ಮಾಣ ನಿರ್ವಹಣೆ ಮಾಡಿದ್ದು ಗಮನಸೆಳೆಯುವಂತಿತ್ತು ಎಂದರು.
ಚಿತ್ರದ ನಾಯಕಿ ಸುಷ್ಮಾ ನಾಯರ್, “ಧಾರಾವಾಹಿಯಲ್ಲಿ ಖಳನಟಿ ಪಾತ್ರ ಮಾಡುತ್ತಿದ್ದೆ. ಆದರೆ ಇಲ್ಲಿ ನನಗೆ ಮುದ್ದಾದ ನಾಯಕಿಯ ಪಾತ್ರ ನೀಡಿದ್ದಾರೆ” ಎಂದರು. ಮಿಮಿಕ್ರಿ ಗೋಪಿ ಮಾತನಾಡಿ, “ಇಲ್ಲಿ ನಾನು ಮಿಮಿಕ್ರಿ ಮಾಡಿಲ್ಲ. ಒಂದು ಒಳ್ಳೆಯ ಕ್ಯಾರೆಕ್ಟರ್ ನೀಡಿದ್ದಾರೆ. ‘ಸಿದ್ಲಿಂಗು’ ಬಳಿಕ ಉತ್ತಮ ಪಾತ್ರ ಪಾತ್ರ ಮಾಡಿದ್ದೇನೆ” ಎಂದರು.
ನವ ನಿರ್ದೇಶಕ ಅಜಿತ್ ಕುಮಾರ್ ಚಿತ್ರದ ಕತೆಯ ಬಗ್ಗೆ ಮಾತನಾಡುತ್ತಾ, “ಬೆಂಗಳೂರು ನಗರದಲ್ಲಿ ಸುಮಾರು ಕೊಲೆಗಳು ಆಗುತ್ತದೆ. ಎ.ಕೆ ಎಂದು ಕರೆಯಲ್ಪಡುವ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಈ ಕೊಲೆಗಳನ್ನು ಭೇದಿಸಲು ನೇಮಕವಾಗುತ್ತಾರೆ. ಇದರ ನಡುವೆ ಕೊಲೆಗಳ ಬಗ್ಗೆ ತನಿಖೆ ವರದಿಗಾಗಿ ಒಂದು ಹೆಸರಾಂತ ಪತ್ರಿಕೆಯು ಕ್ರೈಮ್ ಪತ್ರಕರ್ತೆ ಅವಂತಿಕಾರನ್ನು ನೇಮಕ ಮಾಡುತ್ತದೆ. ಅದೇ ವೇಳೆ ಪ್ರಕರಣವು CBCIDಗೆ ವರ್ಗವಾಗುತ್ತದೆ. ಆದರೂ ಎ.ಕೆಯ ಸಹಭಾಗಿತ್ವದಿಂದ ತನಿಖೆ ಮುಂದುವರೆಯುತ್ತದೆ.
ಮುಂದೆ ಪ್ರಕರಣ ಯಾರ ಮೂಲಕ ಹೇಗೆ ಭೇದಿಸಲ್ಪಡುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾದರೂ, ಚಿತ್ರವು ಮನೆ ಮಂದಿಯೆಲ್ಲ ನೋಡುವ ರೀತಿಯಲ್ಲಿ ಮೂಡಿ ಬಂದಿದೆ” ಎಂದು ಕುತೂಹಲ ಮೂಡಿಸಿದರು.
ನಿರ್ಮಾಪಕರಾದ ರಮೇಶ್ ಆರ್ಯ, ರವಿ ಕುಮಾರ್, ಗಿರೀಶ್ ಮತ್ತು ಗೀತಾ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಶುಭಾ ಪೂಂಜಾ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮೂಲಕ ಚಂದನವನಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡುತ್ತಿರುವ ಭಾಸ್ವತಿ ಗೋಪಾಲ ಕಜೆ ‘ರೈಮ್ಸ್’ ನ ಟೀಸರ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಮುದ್ದುಮೀನಾ ಕಾರ್ಯಕ್ರಮ ನಿರೂಪಿಸಿದರು.