
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರೂಪಕ, ಕಿರುತೆರೆ ಪ್ರತಿಭೆ ಸಂಜೀವ ಕುಲಕರ್ಣಿ (49)ನಿಧನರಾಗಿದ್ದಾರೆ.
ಕಿರುತೆರೆ ಮತ್ತು ವೇದಿಕೆಯ ನಿರೂಪಣಾ ಕ್ಷೇತ್ರಕ್ಕೆ ಮೆರುಗು ತಂದುಕೊಟ್ಟವರು ಸಂಜೀವ ಕುಲಕರ್ಣಿ. ತೊಂಬತ್ತರ ದಶಕದಲ್ಲಿ ಉದಯ ಟಿ.ವಿಯಲ್ಲಿ ಪ್ರಸಾರವಾದಂಥ ಹಲವಾರು ಕಾರ್ಯಕ್ರಮಗಳಿಂದ ಮನಸೆಳೆದ ಅವರು ಈ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಡಿಮ್ಯಾಂಡಪ್ಪೋ ಡಿಮ್ಯಾಂಡು’ ಕಾರ್ಯಕ್ರಮದ ಸಾವಿರ ಸಂಚಿಕೆಗಳಿಗೆ ನಿರೂಪಕರಾಗಿದ್ದರು! ಇದುವರೆಗೆ 3,000ದಷ್ಟು ಸ್ಟೇಜ್ ಶೋಗಳಿಗೆ ನಿರೂಪಣೆಯ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ನಟನಾ ಕ್ಷೇತ್ರದಲ್ಲಿಯೂ ಗಮನ ಸೆಳೆದಿದ್ದರು. ನಿಗೂಢ ರಾತ್ರಿ, ನಾಗಿಣಿ, ರಾಜಾರಾಣಿ ಏಟು ಎದಿರೇಟು ಧಾರಾವಾಹಿಗಳಲ್ಲಿ ಅಭಿನಯಿಸಿರುವುದು ವಿಶೇಷ. ಅವರ ಪುತ್ರ ಸೌರಭ್ ಕುಲಕರ್ಣಿಯವರು ‘ಪಾಪಾ ಪಾಂಡು ಧಾರಾವಾಹಿಯಲ್ಲಿ ಶ್ರೀಹರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಳೆದ 15 ವರ್ಷಗಳಿಂದ ಕಾರ್ಡಿಯೋಮಪತಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕೆಲವು ತಿಂಗಳುಗಳಿಂದ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯಾಗಿದ್ದು ಡಾಕ್ಟರ್ ಹಾರ್ಟ್ ಟ್ರಾನ್ಸ್ ಪ್ಲಾಂಟ್ ಗೆ ಸೂಚಿಸಿದ್ದರು. ಚಿಕಿತ್ಸೆಗೆ 45 ಲಕ್ಷದಷ್ಟು ಹಣದ ಅಗತ್ಯವಿದ್ದು , ಹಣ ಸಂಗ್ರಹಣಾ ಕಾರ್ಯನಡೆಯುತ್ತಿತ್ತು. ಆದರೆ ನಿನ್ನೆ ಅನಿರೀಕ್ಷಿತವಾಗಿ ಬ್ರೈನ್ ಹ್ಯಾಮರೇಜ್ ಆಗಯವ ಮೂಲಕ ಈ ದುರ್ಘಟನೆ ಸಂಭವಿಸಿದೆ ಎಂದು ಅವರ ಪುತ್ರ ಸೌರಭ್ ಕುಲಕರ್ಣಿ ‘ಸಿನಿಕನ್ನಡ’ಕ್ಕೆ ತಿಳಿಸಿದ್ದಾರೆ.
ಬೆಂಗಳೂರಿನ ನಾರಾಯಣ ಹೃದಯ ವಿಜ್ಞಾನ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿ ಅವರು ದಾಖಲಾಗಿದ್ದರು. ಇಂದು ಭಾನುವಾರ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ಸ್ಮಶಾನದಲ್ಲಿ ಬೆಳಿಗ್ಗೆ 9ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
