
ಕನ್ನಡ ಚಿತ್ರರಂಗದಲ್ಲಿ ಬರಹಗಾರರು ಗುರುತಿಸಿಕೊಳ್ಳುವುದು ಕಡಿಮೆ. ಅದೇ ರೀತಿ ನಮ್ಮ ಸಿನಿಮಾಗಳಲ್ಲಿ ಕಾದಂಬರಿ ಅಥವಾ ನೇರ ಕತೆಯಾಧಾರಿತ ಚಿತ್ರಗಳಿಗಿಂತ ರಿಮೇಕ್ ಗೆ ಮಹತ್ವ. ಇಂಥ ಸಂದರ್ಭದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವೆಡೆಗೆ ಹೆಜ್ಜೆ ಹಾಕುತ್ತಿರುವವರು ಟಿ.ಕೆ ದಯಾನಂದ್.
ಈಗಾಗಲೇ ಕವಿ, ಕಥೆಗಾರ, ಪತ್ರಕರ್ತ,ಅಂಕಣಕಾರ ಹಾಗೂ ಅನ್ಯಾಯಗಳ ವಿರುದ್ಧದ ಸಾಮಾಜಿಕ ಕಾರ್ಯಕರ್ತನೆಂದು ಗುರುತಿಸಲ್ಪಟ್ಟಿರುವ ದಯಾನಂದ್ ಅವರ ಹೊಸದೊಂದು ಗೆಲವು ಈಗ ಗಾಂಧಿ ನಗರದ ಬಿಸಿ ಬಿಸಿ ಸುದ್ದಿ. ದಯಾನಂದ್ ಐದು ವರ್ಷಗಳ ಹಿಂದೆ ‘ಬೆಂಕಿಪಟ್ಣ’ ಚಿತ್ರವನ್ನು ನಿರ್ದೇಶಿಸಿ ಸಿನಿಮಾರಂಗ ಪ್ರವೇಶಿಸಿದರು. ಚಿತ್ರ ಅಷ್ಟೇನೂ ಆಕರ್ಷಕವಾಗಿರದಿದ್ದರೂ, ಸ್ಥಳೀಯ ಸೊಗಡಿನ ಕತೆಗಾರರಾಗಿ ದಯಾನಂದ್ ಗುರುತಿಸಿಕೊಂಡರು. ಅದು ಸಾಧ್ಯವಾಗಿದ್ದು ‘ಸಿಗ್ನೇಚರ್ ಮಾಸ್ಟರ್ ಕ್ಲಾಸ್’ ಸ್ಪರ್ಧೆಯ ಹೈದರಾಬಾದ್ ಫೈನಲ್’ ನ ಗೆಲುವಿನಿಂದ.

‘ಬೆಲ್ ಬಾಟಂ’ ನೀಡಿತು ಬ್ರೇಕ್
ಕಳೆದ ವರ್ಷದ ಸುಪರ್ ಹಿಟ್ ಚಿತ್ರ ಯಾವುದು ಎಂದರೆ ಕಣ್ಮುಚ್ಚಿ ಹೇಳಬಹುದಾದ ಚಿತ್ರವೇ ‘ಬೆಲ್ ಬಾಟಂ’. ಚಿತ್ರದಲ್ಲಿ ರಿಷಭ್ ಮತ್ತು ಉಳಿದ ಕಲಾವಿದರ ಅಭಿನಯ, ಜಯತೀರ್ಥ ಅವರ ನಿರ್ದೇಶನದ ಜತೆಯಲ್ಲೇ ನೆನಪಿಸುವ ಒಂದು ಪ್ರಮುಖ ಅಂಶ ದಯಾನಂದ ಅವರ ಕತೆ. ಯಾಕೆಂದರೆ ರೆಟ್ರೋ ಫೀಲ್ ಕತೆಯಲ್ಲೇ ಇತ್ತು. ಮಾತ್ರವಲ್ಲ, ಥಿಯೇಟರ್ ಗೆ ಹೋಗುವ ಮೊದಲೇ ಆ ಕಾಲಘಟ್ಟದ ಫೀಲ್ ನೀಡುವಂಥ ಪೋಸ್ಟರ್ ಡಿಸೈನ್ ಮಾಡಿ, ವರ್ಡಿಂಗ್ಸ್ ಕ್ರಿಯೇಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಇದೀಗ ಮತ್ತೆ ಜಯತೀರ್ಥ ಅವರ ‘ಬನಾರಸ್’ ಚಿತ್ರಕ್ಕೆ ಕೂಡ ‘ಸಹ ಬರಹಗಾರ’ರಾಗಿ ಪೆನ್ನು ಹಿಡಿದಿದ್ದಾರೆ ದಯಾ. ಇವೆಲ್ಲದರ ನಡುವೆ ಬಾಲಿವುಡ್ ನಲ್ಲಿ ಕಳೆದ ಮೂರು ವರ್ಷಗಳಿಂದ ಹೆಸರು ಪಡೆಯುತ್ತಿರುವ
‘ಸಿಗ್ನೇಚರ್ ಮಾಸ್ಟರ್ ಕ್ಲಾಸ್’ ಸ್ಪರ್ಧೆಯ ಹೈದರಾಬಾದ್ ಫೈನಲ್ ನಲ್ಲಿ ವಿಜೇತರಾಗಿದ್ದಾರೆ.

ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸ್ಪರ್ಧೆಯ ಬಗ್ಗೆ
ಕಳೆದ ಮೂರು ವರ್ಷಗಳಿಂದ ‘ಸಿಗ್ನೇಚರ್ ಆಫ್ ಬಾಲಿವುಡ್’ ಮೂಲಕ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ದೇಶದ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶವನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ವಿಭಾಗದಲ್ಲಿ ಸ್ಪರ್ಧೆಗಳು ನಡೆದಿವೆ. ಕಿರುಚಿತ್ರ, ಪೋಸ್ಟರ್ ಡಿಸೈನ್ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿವೆ.
ಈ ಬಾರಿಯ ನಾಲ್ಕನೇ ಸೀಸನ್ ಕತೆಗಳಿಗಾಗಿ ಸ್ಪರ್ಧೆ ನಡೆಸಲಾಗಿತ್ತು. ದೇಶದಾದ್ಯಂತ ಸಾವಿರಾರು ಕತೆಗಳು ಸ್ಪರ್ಧೆಯಲ್ಲಿದ್ದವು. ಅವರ ನಿಯಮಗಳಿಗೆ ಅನುಗುಣವಾಗಿ ಕತೆ ಬರೆದು ಹೈದರಾಬಾದ್ ಫಿನಾಲೆಯಲ್ಲಿ ವಿಜೇತರಾದವರು ನಮ್ಮ ಕನ್ನಡಿಗ ದಯಾನಂದ್ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾದರೆ, ಆ ಕತೆಯನ್ನು ಬಾಲಿವುಡ್ ನಲ್ಲಿ ಸಿನಿಮಾ ಮಾಡಲಾಗುತ್ತದೆ. ಸ್ಪರ್ಧೆಗೆ ಮೆಂಟರ್ ಗಳಾಗಿ ಆಯುಷ್ಮಾನ್ ಖುರಾನ, ತಮನ್ನಾ, ರಾಜ್ ಕುಮಾರ್ ರಾವ್ ಮತ್ತು ಖುಬ್ರಾ ಶೇಖ್ ಮೊದಲಾದವರು ಉಪಸ್ಥಿತರಿರುತ್ತಾರೆ.
ಬೆಲ್ ಬಾಟಂ ಈಗಾಗಲೇ ಬಾಲಿವುಡ್ ತನಕ ಗಮನ ಸೆಳೆದಿರುವುದು ಎಲ್ಲರಿಗೂ ಗೊತ್ತು. ಇದೀಗ ಗ್ರ್ಯಾಂಡ್ ಫಿನಾಲೆಯಲ್ಲಿ ಕೂಡ ಗೆದ್ದರೆ ದಯಾನಂದ್ ನೇರವಾಗಿ ಬಾಲಿವುಡ್ ಪ್ರವೇಶಿಸಿಂದಾಗುತ್ತದೆ. ಹಾಗೆಯೇ ಆಗಲಿ ಎಂದು ಹಾರೈಸುತ್ತಾ ಇದುವರೆಗಿನ ಗೆಲವಿಗೆ ಟಿ.ಕೆ ದಯಾರಿಗೆ ಸಿನಿಕನ್ನಡದ ಅಭಿನಂದನೆಗಳು.


