‘ಅಯೋಗ್ಯ’ ಎನ್ನುವ ಹೆಸರೇ ಆಕರ್ಷಕ!
ಕನ್ನಡದ ಹಾಡುಗಳುಪರಭಾಷಿಗರನ್ನು ಕೂಡ ಸೆಳೆದ ಉದಾಹರಣೆ ಗಳು ಸಾಕಷ್ಟಿವೆ. ಆದರೆ ಯೂಟ್ಯೂಬ್ ನಲ್ಲಿ ಹತ್ತು ಕೋಟಿಯನ್ನು ಮೀರಿ ವ್ಯೂವ್ಸ್ ಪಡೆದ ಕನ್ನಡದ ಮೊದಲ ಹಾಡು ಎನ್ನುವ ಕ್ರೆಡಿಟ್ ಮಾತ್ರ ‘ಏನಮ್ಮಿ..ಏನಮ್ಮಿ’ಗೆ ಸಲ್ಲುತ್ತದೆ.
ಅಯೋಗ್ಯ ಎನ್ನುವ ಹೆಸರಿನೊಂದಿಗೆ ಬಂದರೂ ಯೋಗ್ಯತೆಯ ಪಟ್ಟಿ ಸೇರಿದ್ದು ಚಿತ್ರದ ಪ್ರಥಮ ವಿಶೇಷ. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಹಲವಾರು ಗುರುತು, ದಾಖಲೆಗಳನ್ನು ಮಾಡಿದ ಕೀರ್ತಿ ಮಹೇಶ್ ಗೌಡರ ಪಾಲಾಯಿತು. ಆ ಲಿಸ್ಟ್ ನಲ್ಲಿ ಸೇರಿದ ಹೊಸ ವಿಚಾರ ‘ಏನಮ್ಮಿ ಏನಮ್ಮಿ ಎನ್ನುವ ಹಾಡು..! ನಿಜವಾಗಿ ನೋಡಿದರೆ, ‘ಏನಮ್ಮಿ’ ಎನ್ನುವ ಹಾಡು ಚಿತ್ರ ಬಿಡುಗಡೆಗೂ ಮುನ್ನವೇ ಜನಪ್ರಿಯವಾಗಿತ್ತು. ಇತ್ತೀಚೆಗೆ ಸಿನಿಮಾಗಳಿಗೆ ಆಮಂತ್ರಣವಾಗಿ ಕಾಣಿಸುವುದು ಟೀಸರ್. ಆದರೆ ಹಿಂದೆ ಎಲ್ಲ ಆಡಿಯೋ ಕ್ಯಾಸೆಟ್ ಮೂಲಕ ಹೊಮ್ಮುವ ಹಾಡುಗಳೇ ಚಿತ್ರದತ್ತ ಜನರನ್ನು ಆಹ್ವಾನಿಸುತ್ತಿತ್ತು. ಏನಮ್ಮಿ ಹಾಡು ಅಯೋಗ್ಯ ಚಿತ್ರದ ವಿಚಾರದಲ್ಲಿ ಆಲ್ಮೋಸ್ಟ್ ಅದೇ ಕೆಲಸವನ್ನೇ ಮಾಡಿದೆ.
ಒಬ್ಬನನ್ನು ಅಯೋಗ್ಯ ಎಂದು ಕರೆದರೆ ಆತ ಬೇಸರ ಮಾಡಿಕೊಳ್ಳಬೇಕು. ಆದರೆ ನಿರ್ದೇಶಕ ಮಹೇಶ್ ವಿಚಾರದಲ್ಲಿ ಹಾಗೆ ಆಗಿಲ್ಲ. ಯೋಗರಾಜ್ ಭಟ್ಟರ ತಂಡದಲ್ಲಿದ್ದಾಗ ಭಟ್ಟರಿಂದ ಅಯೋಗ್ಯ ಎಂದು ಬೈಸಿಕೊಂಡಿದ್ದ ಮಹೇಶ್ ಅದನ್ನೇ ಆಶೀರ್ವಾದ ಎಂದುಕೊಂಡು ತಮ್ಮ ನಿರ್ದೇಶನದ ಪ್ರಥಮ ಚಿತ್ರಕ್ಕೆ ಶೀರ್ಷಿಕೆಯಾಗಿಸಿದರು. ಚಿತ್ರದಲ್ಲಿ ಹೇಗೆ ನೀನಾಸಂ ಸತೀಶ್ ನ ಪಾತ್ರ ಅಯೋಗ್ಯ ಎನಿಸಿಕೊಳ್ಳುತ್ತಾ ಯೋಗ್ಯನಾಗುತ್ತದೆಯೋ ಅದೇ ರೀತಿ ನಿರ್ದೇಶಕನನ್ನು ಕೂಡ ಪ್ರೇಕ್ಷಕರು ಮಾತ್ರವಲ್ಲ ವಿಮರ್ಶಕರು ಕೂಡ ಯೋಗ್ಯನಾಗಿ ಕಂಡರು. ಅದರ ಸಾಕ್ಷಿಯಾಗಿ ಸಿನಿಮಾ ಶತದಿನ ಪೂರೈಸಿತು. ಸೈಮಾದಲ್ಲಿ ಶ್ರೇಷ್ಠ ಚಿತ್ರದ ಚೊಚ್ಚಲ ನಿರ್ದೇಶಕನ ಪ್ರಶಸ್ತಿ ಮಹೇಶ್ ಪಾಲಾದರೆ, ರಚಿತಾರಾಮ್ ಶ್ರೇಷ್ಠ ನಟಿ ಮತ್ತು ಶ್ರೇಷ್ಠ ಸಾಹಿತಿಯಾಗಿ ಚೇತನ್ ಕುಮಾರ್ ಗುರುತಿಸಿಕೊಂಡರು. ಕಳೆದ ವರ್ಷ ಇದೇ ಹೆಸರನ್ನು ತಮಿಳು ಚಿತ್ರವೊಂದಕ್ಕೂ ಇಡಲಾಯಿತು!
ರಿಜೆಕ್ಟಾಗಿದ್ದ ಟ್ಯೂನ್ ಸುಪರ್ ಹಿಟ್ ಆದ ಬಗೆ
ಅಂದಹಾಗೆ ಈ ಏನಮ್ಮಿ ಟ್ಯೂನ್ ಅಯೋಗ್ಯ ಟೀಮ್ ಗಾಗಿ ತಯಾರಾಗಿದ್ದಲ್ಲ. ಯಾವುದೋ ದೊಡ್ಡ ಸ್ಟಾರ್ ಚಿತ್ರಕ್ಕೆಂದು ಅರ್ಜುನ್ ಜನ್ಯ ಕಂಪೋಸ್ ಮಾಡಿ ಜಸ್ಟ್ ಪ್ರಾಥಮಿಕ ಹಂತದಲ್ಲಿದ್ದ ಟ್ಯೂನ್ ಅದು. ಆದರೆ ಅದನ್ನು ಆ ಚಿತ್ರತಂಡ ಬೇಡವೆಂದು ನಿರಾಕರಿಸಿತ್ತು! ಆದರೆ ಮಹೇಶ್ ಗೌಡ ಅವರು ಅರ್ಜುನ್ ಜನ್ಯರಲ್ಲಿ ಕತೆ ಹೇಳಿ ಕಂಪೋಸಿಂಗ್ ಗೆ ಕುಳಿತಾಗ ಅವರು ಈ ಟ್ಯೂನ್ ಒಮ್ಮೆ ಕೇಳಿ ನೋಡ್ತೀರಾ ಎಂದು ಹೇಳಿ ಅದರ ಹಿನ್ನೆಲೆ ಬಗ್ಗೆಯೂ ತಿಳಿಸಿದರಂತೆ. ಆದರೆ ಬೇರೆಯವರು ನಿರಾಕರಿಸಿದ್ದ ಟ್ಯೂನ್ ಎನ್ನುವ ಕಾರಣಕ್ಕೆ ತಮಗೆ ಇಷ್ಟವಾದ ಆ ರಾಗವನ್ನು ಬೇಡ ಎನ್ನುವ ಗುಣ ಮಹೇಶ್ ಅವರದ್ದಾಗಿರಲಿಲ್ಲ. ಎರಡು ದಿನ ಪದೇ ಪದೆ ಟ್ಯೂನ್ ಆಲಿಸಿದ ಮೇಲೆ ಅದನ್ನೇ ಫೈನಲ್ ಮಾಡಿದರು ಮಹೇಶ್. ಅವರ ಮಿತ್ರ ನಿರ್ದೇಶಕ ಚೇತನ್ ಕುಮಾರ್ ಅದಕ್ಕೆ ಇಂದು ನಾವೆಲ್ಲ ಕೇಳಿ ಮೆಚ್ಚಿರುವ ಈ ಸಾಹಿತ್ಯವನ್ನು ಮೂರೇ ದಿನದೊಳಗೆ ಬರೆದು ಕೊಟ್ಟರು. ಎಲ್ಲಕ್ಕಿಂತ ವಿಶೇಷ ಏನೆಂದರೆ ಮೋಹನ್ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಒಂದೇ ದಿನದಲ್ಲಿ ಹಾಡಿನ ಚಿತ್ರೀಕರಣ ಮಾಡಿ ಮುಗಿಸಲಾಗಿತ್ತು! ಅದರಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ನೀಡಿದ ಅಭಿನಯ ಮತ್ತು ಪ್ರೀತಮ್ ತೆಗ್ಗಿನ ಮನೆ ನಿರ್ವಹಿಸಿದ ಛಾಯಾಗ್ರಹಣ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಒಟ್ಟು ಚಿತ್ರದಂತೆ ಹಾಡು ಕೂಡ ಸಿಂಪಲ್ ಆಗಿ ಮೂಡಿಬಂದಿತ್ತು.
ಹಾಡು ಹುಟ್ಟಿದ ಸಮಯವೇ ವಿಜಯ!
ನಿಮಗೆಲ್ಲ ಗೊತ್ತಿರುವ ಹಾಗೆ ಏನಮ್ಮಿ ಏನಮ್ಮಿ ಹಾಡನ್ನು ಪಲಕ್ ಮುಚಲ್ ಜತೆಗೆ ಹಾಡಿರುವ ಗಂಡು ಕಂಠ ವಿಜಯ ಪ್ರಕಾಶ್ ಅವರದ್ದು. ಇನ್ನೇನು ಕನ್ನಡದಲ್ಲಿ ಕುಡಿತದ ಹಾಡುಗಳು ಬಂದರಷ್ಟೇ ವಿಜಯ್ ಪ್ರಕಾಶ್ ಅವರನ್ನು ನೆನಪು ಮಾಡಬೇಕೇನೋ ಎನ್ನುವ ಸಂದರ್ಭದಲ್ಲಿ ಅದ್ಭುತವಾದ ಮೆಲೊಡಿಯೊಂದರ ಮೂಲಕ ಮತ್ತೆ ಗುರುತಿಸಿಕೊಳ್ಳಲು ಅವರಿಗೆ ಸಹಾಯವಾಗಿದ್ದು ಇದೇ ಹಾಡು! ಅವರು ಕೂಡ ಈ ಕಂಪೋಸಿಂಗ್ ಎಷ್ಟು ಮೆಚ್ಚಿಕೊಂಡಿದ್ದರು ಎನ್ನುವುದಕ್ಕೆ ಇಲ್ಲಿ ಒಂದು ಉದಾಹರಣೆ ಇದೆ. ಮುಂಬೈನಲ್ಲಿ ಅವರು ಸ್ವಂತದ್ದೊಂದು ಸ್ಟುಡಿಯೋ ಆರಂಭಿಸಿದಾಗ ಸ್ಟುಡಿಯೋ ಉದ್ಘಾಟನೆ ಬಳಿಕ ಸ್ವತಃ ಹಾಡಿದ ಮೊದಲ ಹಾಡೇ ಇದು. ಅದಕ್ಕೆ ತಕ್ಕಂತೆ ಅವರಿಗೆ ಹಾಡು ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿದ್ದಷ್ಟೇ ಅಲ್ಲದೆ, ಹಾಡು ಇಂದು ಕರ್ನಾಟಕದಲ್ಲೇ ದಾಖಲೆ ಯಶಸ್ಸು ಪಡೆದುಕೊಂಡಿದೆ. ಯಾಕೆಂದರೆ ಯೂಟ್ಯೂಬ್ ನಲ್ಲಿ ಆನಂದ್ ಆಡಿಯೋ ಲಿರಿಕಲ್ ಹಾಡು120 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಅಂದರೆ 10ಕೋಟಿ 20ಲಕ್ಷ ಜನರಿಂದ ವೀಕ್ಷಣೆ ಕನ್ನಡದ ಪ್ರಥಮ ಹಾಡು ಎನ್ನುವುದು ಮಹೇಶ್ ಅವರ ಖುಷಿ.