
ಒಬ್ಬ ನಟನ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಹೊರಬಂದಿರುವ ದಾಖಲೆ ಏನಾದರೂ ಇದ್ದರೆ, ಅದು ಡಾ.ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಆ ದಾಖಲೆಯ ಮಟ್ಟವನ್ನು ಹೆಚ್ಚಿಸುವಂತೆ ರಾಜ್ ಕುಮಾರ್ ಅವರ ಪುಸ್ತಕಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅವುಗಳಿಗೆ ತಾಜಾ ಉದಾಹರಣೆ ಎನ್ನುವಂತೆ ಪತ್ರಕರ್ತ ಕಟ್ಟೆ ಗುರುರಾಜ್ ಅವರು ರಚಿಸಿರುವ ‘ರಾಜ್ ಕುಮಾರ್ ಮತ್ತಷ್ಟು ಮುಖಗಳು’ ಪುಸ್ತಕದ ಬಿಡುಗಡೆಯನ್ನು ರಾಜ್ ಸುಪುತ್ರ, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.

‘ನಾನು ಪುಸ್ತಕ ಬರೆಯುವಷ್ಟು ಸಾಧಿಸಿಲ್ಲ..!’ ಎಂದ ಅಪ್ಪು
‘ಸಾವಣ್ಣ ಪಬ್ಲಿಕೇಶನ್ಸ್’ ಆಧುನಿಕ ಪುಸ್ತಕ ಮಾರುಕಟ್ಟೆಯಲ್ಲಿ ಹೊಸದೊಂದು ಕ್ರಾಂತಿಯನ್ನೇ ಮಾಡುತ್ತಿರುವಂಥ ಸಂಸ್ಥೆ. ಸಂಸ್ಥೆಯ ಮಾಲೀಕರಾದ ಜಮೀಲ್ ಅವರು ಸ್ವತಃ ಸಾಹಿತ್ಯ ಪ್ರೇಮಿ. ಹಾಗಾಗಿಯೇ ಅವರು ಪುನೀತ್ ರಾಜ್ ಕುಮಾರ್ ಅವರು ತಮ್ಮ ಮನೆಯಲ್ಲೇ ಪುಸ್ತಕ ಬಿಡುಗಡೆಗೊಳಿಸಲು ಆಹ್ವಾನಿಸಿದಾಗ, ತಮ್ಮ ಸಂಸ್ಥೆಯ ಒಂದಷ್ಟು ಜನಪ್ರಿಯ ಪುಸ್ತಕಗಳೊಂದಿಗೆ ಹಾಜರಾಗಿದ್ದರು. ಅವುಗಳಲ್ಲಿ ಪತ್ರಕರ್ತ, ಸಾಹಿತಿ ಜೋಗಿಯವರು ಬರೆದಂಥ ‘ನಾನು ಪಾರ್ವತಿ’ ಪುಸ್ತಕವೂ ಇತ್ತು. ರಾಯಚೂರಿನಲ್ಲಿ ಸಾಹಿತ್ಯ ಸಮ್ಮೇಳನವಾದಾಗ ಆ ಪುಸ್ತಕಗಳು ಉತ್ತಮವಾಗಿ ಮಾರಾಟವಾಗಿದೆಯೆಂದು ಜಮೀಲ್ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಪ್ಪು, “ಉತ್ತರ ಕರ್ನಾಟಕದಲ್ಲಿ ಕೂಡ ಅಪ್ಪಾಜಿ ಬಗ್ಗೆ ನಮ್ಮ ತಾಯಿ ಬಗ್ಗೆ ತುಂಬ ಅಭಿಮಾನ ಇರಿಸಿಕೊಂಡವರಿದ್ದಾರೆ” ಎಂದು ನೆನಪಿಸಿಕೊಂಡರು.
ಅದೇ ವೇಳೆ ಜೋಗಿಯವರ ‘ಲೈಫ್ ಈಸ್ ಬ್ಯೂಟಿಫುಲ್’ ಸೀರೀಸ್ ಪುಸ್ತಕ,ಪ್ರಾಣೇಶ್ ರವರ ‘ಪ್ರಾಣೇಶ್ ಪ್ರಪಂಚ’, ಹಾಗೂ ‘ಮೂರ್ಖನ ಮಾತುಗಳು’ ಮತ್ತು ಈ ಬಾರಿ ರಾಜ್ಯ ಪ್ರಶಸ್ತಿಗೆ ಭಾಜನವಾದ ಅಂಬರೀಷ್ ಅವರ ಕುರಿತಾದ ಪುಸ್ತಕಗಳನ್ನು ಪುನೀತ್ ಅವರಿಗೆ ನೀಡಿದರು. ಅದೇ ವೇಳೆ ನೀವು ಕೂಡ ಜೀವನಚರಿತ್ರೆ ಬರೆಯಿರಿ ಎಂದು ಜಮೀಲ್ ಆಹ್ವಾನ ಇತ್ತರು. ಆಗ “ಅಯ್ಯಯ್ಯೋ ನಾನು ಬರೆಯುವಷ್ಟೇನೂ ಸಾಧಿಸಿಲ್ಲ” ಎಂದು ನಕ್ಕು ನುಡಿದರು ಪುನೀತ್.

ಈ ಪುಸ್ತಕದಲ್ಲಿ ಕಟ್ಟೆ ಗುರುರಾಜ್ ಅವರು ರಾಜ್ ಅವರ ವೈಯಕ್ತಿಕ ಸಹಾಯಕನಾಗಿದ್ದಂಥ ಚೆನ್ನ ಅವರಿಂದ ಸಂಗ್ರಹಿಸಿರುವ ಮಾಹಿತಿಗಳಿಗೆ ಅಕ್ಷರರೂಪ ನೀಡಿದ್ದಾರೆ. ‘ಗಂಧದ ಗುಡಿ’ ಸಿನಿಮಾದ ಛಾಯಾಗ್ರಾಹಕ ಮಧುಸೂದನ್ ಅವರು ಕೂಡ ಡಾ.ರಾಜ್ ಅವರ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪುಸ್ತಕಕ್ಕೆ ಯೋಗರಾಜ್ ಭಟ್ ಅವರು ಮುನ್ನುಡಿ ಬರೆದಿದ್ದಾರೆ. 150 ರೂಪಾಯಿ ಮುಖಬೆಲೆಯ ಈ ಪುಸ್ತಕ ಖಂಡಿತವಾಗಿ ಕನ್ನಡಿಗರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ.

