
ಚಿತ್ರ: ಡಿಂಗ
ತಾರಾಗಣ: ಆರ್ವ ಗೌಡ, ಅಭಿಷೇಕ್ ಜೈನ್, ಅನುಷಾ ರಾಡ್ರಿಗಸ್
ನಿರ್ದೇಶನ: ಅಭಿಷೇಕ್ ಜೈನ್
ನಿರ್ಮಾಣ: ಮಧು ದೀಕ್ಷಿತ್
ಐ ಫೋನ್ ನಲ್ಲಿ ಚಿತ್ರೀಕರಿಸಲಾದ ಸಿನಿಮಾ ಎನ್ನುವ ಹೆಮ್ಮೆಯೊಂದಿಗೆ ತೆರೆಕಂಡಿರುವ ಚಿತ್ರವೇ ಡಿಂಗ. ಕಳೆದ ವಾರ ನಾಯಿ ಜತೆಗೆ ಮನುಷ್ಯನ ಭಾವನಾತ್ಮಕ ಸಂಬಂಧದ ಬಗ್ಗೆ ನಾನು ಮತ್ತು ಗುಂಡ ಎನ್ನುವ ಚಿತ್ರ ತೆರೆಕಂಡಿದ್ದರೆ, ಈ ವಾರ ಹೆಚ್ಚು ಕಡಿಮೆ ಅದೇ ಅಂಶವನ್ನೇ ಹೇಳುವಂಥ ಚಿತ್ರ ಡಿಂಗ. ಇಲ್ಲಿ ಡಿಂಗನೆನ್ನುವುದೇ ನಾಯಿಯ ಹೆಸರು.
ಬೆಂಗಳೂರಲ್ಲಿ ಕ್ಯಾನ್ಸರ್ ರೋಗಿಯಾದ ಅನಾಥ ಬಂಟಿಗೆ ಆತ್ಮೀಯವಾಗಿ ಇರುವರೇ ಇಬ್ಬರು. ಒಬ್ಬಾತ ತರುಣ ಎನ್ನುವ ಹೆಸರಿನ ಬಾಲ್ಯದ ಮಿತ್ರ. ಮತ್ತೊಂದು ಡಿಂಗ ಎನ್ನುವ ಸಾಕುನಾಯಿ. ತರುಣ ಎಷ್ಟೇ ಆತ್ಮೀಯನಾದರೂ ವಿದೇಶದಲ್ಲಿ ಇರುವಾತ. ಹಾಗಾಗಿ ತನ್ನ ಸಾವಿನ ಬಳಿಕ ತನ್ನ ಮತ್ತೋರ್ವ ಆತ್ಮೀಯನಾದ ಡಿಂಗನನ್ನು ನೋಡಿಕೊಳ್ಳಲು ಒಬ್ಬ ನಂಬಿಕಸ್ತ ಯಜಮಾನನ ಹುಡುಕಾಟದಲ್ಲಿರುತ್ತಾನೆ ಬಂಟಿ. ಇಂಥ ಹುಡುಕಾಟದ ನಡುವೆಯೇ ತರುಣನನ್ನು ಕೂಡ ಒತ್ತಾಯದಿಂದ ವಿದೇಶದಿಂದ ಬೆಂಗಳೂರಿಗೆ ಕರೆಸುತ್ತಾನೆ. ಇಬ್ಬರೂ ಜತೆಯಾಗಿ ಡಿಂಗನಿಗೊಂದು ಮಾಲೀಕನನ್ನು ಹುಡುಕುವುದು; ಆ ದಾರಿಯಲ್ಲಿನ ಸ್ವಾರಸ್ಯಕರ ಘಟನೆಗಳು ಮತ್ತು ಬಂಟಿಯ ಪ್ರೇಮ ವೈಫಲ್ಯದ ಫ್ಲ್ಯಾಶ್ ಬ್ಯಾಕ್ ಮೊದಲಾದವು ಚಿತ್ರದ ಪ್ರಮುಖ ದೃಶ್ಯಗಳಾಗಿವೆ.
ಇದು ಒಂದು ಐ ಫೋನ್ ಸಿನಿಮಾ ಆಗಿದ್ದರೂ, ವಿಚಾರ ಗೊತ್ತಿಲ್ಲದೆ ನೋಡಲು ಕುಳಿತರೆ ಅಂಥದೊಂದು ಸಂದೇಹವೇ ಬಾರದ ರೀತಿಯಲ್ಲಿ ತಾಂತ್ರಿಕವಾಗಿ ಆಕರ್ಷಕ ಎನ್ನುವಂತೆ ಮೂಡಿದೆ. ಅದರ ಕ್ರೆಡಿಟ್ ಸಂಪೂರ್ಣವಾಗಿ ಛಾಯಾಗ್ರಾಹಕರಿಗೆ ಸಲ್ಲುತ್ತದೆ. ಬಂಟಿಯಾಗಿ ನಟಿಸಿರುವ ಆರ್ವನದ್ದು ಚಿತ್ರದಲ್ಲಿ ತಲೆ ನೋವು ಸೃಷ್ಟಿಸುವ ಸ್ವಭಾವ. ಪಾತ್ರಕ್ಕೆ ನ್ಯಾಯ ಸಲ್ಲಿಸುವ ಅವರ ಪ್ರಯತ್ನ ಪ್ರೇಕ್ಷಕರಿಗೂ ತಲೆನೋವು ಸೃಷ್ಟಿಸಿದರೆ ಅಚ್ಚರಿಯಿಲ್ಲ. ಯಾಕೆಂದರೆ ಅಷ್ಟೊಂದು ವಾಸ್ತವ ಶೈಲಿಯಲ್ಲಿ ಅಭಿನಯಿಸಿದ್ದಾರೆ. ಬಂಟಿಯ ಸ್ನೇಹಿತ ತರುಣನಾಗಿ ಸ್ವತಃ ನಿರ್ದೇಶಕ ಅಭಿಷೇಕ್ ಜೈನ್ ಅವರೇ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಕಡೆ ಸ್ನೇಹಿತರಿಬ್ಬರ ಹಾಸ್ಯದ ಗುಣಮಟ್ಟ ಸುಧಾರಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುವುದು ಸಹಜ. ಇನ್ನು ಟೈಟಲ್ ರೋಲ್ ನಿಭಾಯಿಸಿರುವ ಡಿಂಗ ಎನ್ನುವ ನಾಯಿಯನ್ನು ಗಮನಿಸಿದರೆ ಅದಕ್ಕೆ ಹೆಚ್ಚು ಅಭಿನಯಿಸಬೇಕಾದ ಅಥವಾ ಕಸರತ್ತು ತೋರಿಸಬೇಕಾದಂಥ ಸಂದರ್ಭಗಳಿಲ್ಲ. ಮಧ್ಯಂತರದ ಬಳಿಕ ತೆರೆದುಕೊಳ್ಳುವ ಬಂಟಿಯ ಮಾಜಿ ಪ್ರೇಯಸಿಯ ಕತೆ ಚಿತ್ರಕ್ಕೆ ಹೊಸತೊಂದು ಹಾಸ್ಯದ ತಿರುವು ತಂದುಕೊಡುತ್ತದೆ. ಅವರ ಮದುವೆ ತಪ್ಪಲು ಕಾರಣವಾದ ಅಂಶವೆಂದು ಸಿಲ್ಕ್ ಬೋರ್ಡ್ ಟ್ರಾಫಿಕ್ ವಿಚಾರವನ್ನು ಗಂಭೀರವಾಗಿ ಪ್ರಸ್ತುತ ಪಡಿಸಿರುವ ರೀತಿ ಎಂಥವರಿಂದಲೂ ಒಮ್ಮೆ ನಗು ಚಿಮ್ಮಿಸಿದರೆ ಅಚ್ಚರಿಯಿಲ್ಲ. ಬಂಟಿಯ ಪ್ರೇಯಸಿ ಜೆನಿಫರ್ ಪಾತ್ರದಲ್ಲಿ ನಟಿಸಿರುವ ಅನುಷಾ, ಕಲಾವಿದೆಯಾಗಿ ಭರವಸೆ ಮೂಡಿಸುತ್ತಾರೆ.
ಉಳಿದಂತೆ ಪೋಷಕ ಪಾತ್ರಗಳಲ್ಲಿ ಕಾಣಿಸಿರುವ ನಾಗೇಂದ್ರ ಶಾ, ಗಣೇಶ್ ರಾವ್ ಕೇಸರ್ಕರ್, ಹಾಸ್ಯಕ್ಕೆಂದೇ ಸೃಷ್ಟಿಸಲ್ಪಟ್ಟ ಟೀನಾ ಮೀನಾ ಪಾತ್ರಗಳು, ಕರ್ನಲ್ ಮೂಕಚಂಡನಾಗಿ ನಟಿಸಿರುವ ಕಾರ್ತಿಕ್ ಮೊದಲಾದವರು ಕತೆಯ ಏಕತಾನತೆ ಬದಲಿಸಲು ಪೂರಕವೆನಿಸುತ್ತಾರೆ. ಒಟ್ಟಿನಲ್ಲಿ ಗಟ್ಟಿಮನಸಿನೊಂದಿಗೆ ಟೈಮ್ ಪಾಸ್ ಗೆಂದೇ ಸಿನಿಮಾ ನೋಡಬಲ್ಲವರು ಮನರಂಜನೆ ಪಡೆಯಬಹುದಾದ ಚಿತ್ರ ಇದು.