ಮಾಯದಂಥ ಸಿನಿಮಾ ಬಂತಣ್ಣ..!

Rating: 4 out of 5.

ಚಿತ್ರ: ಕಾಣದಂತೆ ಮಾಯವಾದನು
ತಾರಾಗಣ: ವಿಕಾಸ್, ಸಿಂಧು ಲೋಕನಾಥ್
ನಿರ್ದೇಶಕ: ರಾಜ್ ಪತಿಪಾಟಿ
ನಿರ್ಮಾಣ: ಬ್ಯಾಕ್ ಬೆಂಚರ್ಸ್ ಮೋಶನ್ ಪಿಕ್ಚರ್ಸ್

ನಾವೆಲ್ಲ ಸತ್ತಮೇಲೆ ಏನಾಗುತ್ತೇವೆ? ನಮ್ಮ ಬದುಕು ಏನೇ ಇದ್ದೂ ಅದು ನಾವು ಸಾಯುವ ತನಕ ಮಾತ್ರ ಎಂಬ ನಂಬಿಕೆ ಹಲವರಿಗೆ. ಅಥವಾ ನಮ್ಮ ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಸ್ವರ್ಗಕ್ಕೋ, ನರಕಕ್ಕೋ ಹೋಗಬಹುದು. ಒಂದು ವೇಳೆ ಮೃತನ ಆತ್ಮಕ್ಕೆ ಸಂತೃಪ್ತ ಭಾವ ಇರದಿದ್ದರೆ ಅತೃಪ್ತ ಆತ್ಮವಾಗಿ ಮೋಕ್ಷ ಕಾಣದೆ ಅಲೆದಾಡಬಹುದು ಎನ್ನುವವರಿದ್ದಾರೆ. ಹಾಗೆ ಅಲೆದಾಡುವ ಆತ್ಮವೇ ‘ಕಾಣದಂತೆ ಮಾಯವಾದನು’ ಚಿತ್ರದ ನಾಯಕ!

ಜಯಣ್ಣ ಎನ್ನುವುದು ಒಬ್ಬ ರೌಡಿಯ ಹೆಸರು. ಆತ ಸ್ಲಂಗಳ ಮಂದಿಯನ್ನು ಒಂದೇ ದಿನದಲ್ಲಿ ಜಾಗ ಖಾಲಿ ಮಾಡಿಸಬಲ್ಲ. ಶ್ರೀಮಂತರು ಕೂಡ ಆತನ ಜತೆಗೆ ವ್ಯವಹರಿಸಲು ಭಯ ಪಡುತ್ತಾರೆ. ಅಂಥ ಜಯಣ್ಣನಿಂದ ದುಡ್ಡು ಪಡೆದು ಮನೆಯೊಂದನ್ನು ಖಾಲಿ ಮಾಡಿಸಲು ಹೊರಡುತ್ತಾನೆ ರಮ್ಮಿ. ಆತನೇ ಚಿತ್ರದ ನಾಯಕ. ಆ ಮನೆಯವರ ಸಹಾಯಕ್ಕೆಂಬಂತೆ ಹೋಗುವ ವಕೀಲನಾಗಿ ನಟಿಸುವ ರಮ್ಮಿಗೆ ನಿಜಕ್ಕೂ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸಾಗುತ್ತದೆ. ಅದಕ್ಕೆ ಕಾರಣ, ವಂದನಾ ಎಂಬ ಅವರ ಚಂದದ ಮಗಳು ಮತ್ತು ಆಕೆ ಮಾಡುವ ಸಮಾಜಮುಖಿ ಕೆಲಸ. ವಂದನಾಳನ್ನು ಪ್ರೀತಿಸಿ ಬದಲಾಗಿ ಬಿಡುವ ರಮ್ಮಿಯನ್ನು ಜಯಣ್ಣ ಒಂದೇ ಏಟಿಗೆ ಕೊಂದೇ ಬಿಡುತ್ತಾನೆ! ಆದರೆ ರಮ್ಮಿ ಆತ್ಮವಾಗಿ ಸಂಚಾರ ಶುರು ಮಾಡುತ್ತಾನೆ.

ಆತ್ಮದ ಕತೆಗಳು ಕನ್ನಡಕ್ಕೆ ಹೊಸತೇನೂ ಅಲ್ಲ. ಆದರೆ ಅವೆಲ್ಲಕ್ಕಿಂತ ರಮ್ಮಿಯ ಆತ್ಮ ವಿಭಿನ್ನ ಎನಿಸಲು ಕಾರಣ ಇದೆ. ಯಾಕೆಂದರೆ ಈ ಆತ್ಮಕ್ಕೆ ಎಲ್ಲವೂ ಕಾಣುತ್ತದೆ ಎನ್ನುವುದನ್ನು ಬಿಟ್ಟರೆ, ಯಾರನ್ನೂ ಏನೂ ಮಾಡುವ ಶಕ್ತಿಯಿರುವುದಿಲ್ಲ. ಅಂಥ ಸಂದರ್ಭದಲ್ಲಿ ಜಯಣ್ಣನ ವಿರುದ್ಧ ಹಗೆ ಸಾಧಿಸಲು ಆತ್ಮ ಏನೇನು ಮಾಡುತ್ತದೆ? ಅದರಲ್ಲಿ ಹೇಗೆ ಯಶಸ್ಸು ಕಾಣುತ್ತದೆ ಎನ್ನುವುದೇ ಚಿತ್ರದ ವೈಶಿಷ್ಯಪೂರ್ಣ ಕತೆ.

ರಮ್ಮಿಯ ಆತ್ಮಕ್ಕೆ ಶಕ್ತಿಯಿಲ್ಲ ಎನ್ನುವುದೇ ಪ್ರೇಕ್ಷಕರಿಗೆ ನಾಯಕನ‌ ಪಾತ್ರವನ್ನು ಆಪ್ತವಾಗಿಸಿ ಬಿಡುತ್ತದೆ. ಹಾಗೆ ಆಪ್ತವಾಗುವ ಆತ್ಮವನ್ನು ಅತ್ಯಂತ ಫ್ಯಾಂಟಸಿಯಾಗಿ ತೋರಿಸುವಲ್ಲಿ ನಿರ್ದೇಶಕ ಗೆದ್ದಿದ್ದಾರೆ. ಮತ್ತೆ ಅದಕ್ಕೆ ಸಹಜ ಸಂಭಾಷಣೆಗಳ ಅಲಂಕಾರ ಬೇರೆ! ರಮ್ಮಿ ದೆವ್ವವಾಗಿ ಕಣ್ಮುಂದೆಯೇ ಇದ್ದಾನೆ ಎನ್ನುವುದನ್ನು ಜಯಣ್ಣನಿಗೆ ಒಬ್ಬಾತ ಹೇಳಿದಾಗ ಆತನ ಪ್ರತಿಕ್ರಿಯೆ ಅದಕ್ಕೊಂದು ಉದಾಹರಣೆ. “ಎಲ್ಲಿ ಕೆಲಸ ಮಾಡ್ತಿದ್ದೆ ನೀನು? ರಾಜಮೌಳಿ ಬಳಿಯಲ್ಲ? ಅಥವಾ ರಾಮ್ ಗೋಪಾಲ್ ವರ್ಮ ಬಳಿಯಲ್ಲ? ” ಎಂದು ಕೇಳುತ್ತಾನೆ! ನಿಜ ಹೇಳಬೇಕೆಂದರೆ ನಿರ್ದೇಶಕ ರಾಜ್ ಪತ್ತಿಪಾಟಿ ಅಸಲು ಇವರಿಬ್ಬರ ಶಿಷ್ಯನೇ ಇರಬೇಕು ಎನ್ನುವಷ್ಟು ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ. ಒಂದು ಕಡೆ ತೆಲುಗಿನ ‘ಈಗ’ ಚಿತ್ರವನ್ನು ನೆನಪಿಸಿದರೂ, ಅದರ ಸ್ಪೂರ್ತಿ ಎನ್ನಬಹುದೇ ಹೊರತು, ಸನ್ನಿವೇಶಗಳಲ್ಲಿ ಹೋಲಿಕೆಗಳಿಲ್ಲ.

ಜಯಣ್ಣನಾಗಿ ಮೊದಲಾರ್ಧದಲ್ಲಿ ಅಗಲಿ ಹೋಗಿರುವ ನಟ ಉದಯ್ ಅಭಿನಯಿಸಿದ್ದಾರೆ. ವಿಚಿತ್ರ ಎಂದರೆ ತೀರಿ ಹೋಗಿ ವರ್ಷಗಳಾದ ಮೇಲೆ ಅವರನ್ನು ಪರದೆಯ ಮೇಲೆ ನೋಡುವುದು ಒಂದು ಆತ್ಮದ ಸಿನಿಮಾ‌ ನೋಡಲು ಬೇಕಾದ ಪರೋಕ್ಷ ಮನಸ್ಥಿತಿಯನ್ನು ಪ್ರೇಕ್ಷಕರಾದ ನಮ್ಮೊಳಗೆ ಸೃಷ್ಟಿಸುತ್ತದೆ! ಉದಯ್ ಗೆ ಕಂಠ ನೀಡಿರುವ ಭಜರಂಗಿ ಲೋಕಿಯೇ ಮಧ್ಯಂತರದ ಬಳಿಕ ಜಯಣ್ಣನ ಪಾತ್ರದಲ್ಲಿ ಕಾಣಿಸಿದ್ದಾರೆ. ಇಬ್ಬರು ಕೂಡ ಪಾತ್ರದ ಕ್ರೌರ್ಯತೆಗೆ ಕುಂದಿಲ್ಲದ ಹಾಗೆ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ಫೈಟ್ ಸೀನ್ ನಲ್ಲಿ, ಆಯುಧವನ್ನು ಎಸೆಯುವಲ್ಲಿ ಲೋಕಿ ತೋರಿಸಿರುವ ಗ್ರೇಸ್ ಆಕರ್ಷಕ.

ರಮ್ಮಿಯಾಗಿ ನಟ, ನಿರ್ದೇಶಕ ವಿಕಾಸ್ ನಾಯಕನ ಪಾತ್ರದಲ್ಲಿ ಮರಳಿದ್ದಾರೆ. ಆರಂಭ ಕಾಲದ ದರ್ಶನ್ ಅವರನ್ನು ನೆನಪಿಸುವ ವಿಕಾಸ್ ಸ್ವಲ್ಪ ದಪ್ಪಗಿದ್ದರೆ ಚೆನ್ನಾಗಿತ್ತು ಅನಿಸದೇ ಇರದು. ಆದರೆ ನಟನೆ, ಫೈಟು, ಡ್ಯಾನ್ಸು , ರೋಮಾನ್ಸ್ ಕನಸು ಎಲ್ಲೆಡೆಯೂ ಸಮರ್ಪಣಾ ಭಾವದ ನಟನೆ ಅವರ ವಿಶೇಷ. ದ್ವಿತೀಯಾರ್ಧದಲ್ಲಿ ಬಂದರೂ, ನಾಯಕನಷ್ಟೇ ಪ್ರಧಾನ ಪಾತ್ರ ನಿರ್ವಹಿಸಿದ ಕೀರ್ತಿ ಹಾಸ್ಯ ನಟ ಧರ್ಮಣ್ಣ ಅವರಿಗೆ ಸಲ್ಲುತ್ತದೆ. ಅವರ ಪಾತ್ರದ ವಿಶೇಷತೆ ಏನು ಎನ್ನುವುದು ಪರದೆಯಲ್ಲಿ ನೋಡುವುದೇ ಚಂದ. ವಂದನಾ ಪಾತ್ರದಲ್ಲಿ ಸಿಂಧು ಲೋಕನಾಥ್ ತಮ್ಮನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎನ್ನುವಂತೆ ನಟಿಸಿದ್ದಾರೆ.

ಮಾಯಾಂಬರ ಎನ್ನುವ ವಂಚಕ ಸ್ವಾಮೀಜಿ ಪಾತ್ರದಲ್ಲಿ ಪ್ರಸಾದ್ ಜೀವಿಸಿದ್ದಾರೆ! ಇಂದಿನ ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಪಾತ್ರವಾದ ಕಾರಣ ಇದು ಅವರ ವೃತ್ತಿ ಬದುಕಿನಲ್ಲಿ ಜನರಿಂದ ಬಹುಕಾಲ ಸ್ಮರಿಸಲ್ಪಡುವ ನಿರೀಕ್ಷೆ ಇದೆ.
ಅಗಲಿದ ನಟ ವಠಾರ ಮಲ್ಲೇಶ್ ಸೇರಿದಂತೆ, ಅರಸು ಮಹಾರಾಜ್, ಜ್ಯೋತಿ ಪ್ರಕಾಶ್, ಅಚ್ಯುತ್ ಕುಮಾರ್, ಸೀತಾಕೋಟೆ, ವಿನಯಾ ಪ್ರಸಾದ್, ಬಾಬು ಹಿರಣ್ಣಯ್ಯ, ಉಗ್ರಂ ಮಂಜು ಹೀಗೆ ಜನಪ್ರಿಯ ನಟರೆಲ್ಲರೂ ಕೆಲವೇ ದೃಶ್ಯಗಳಲ್ಲಿ ಬಂದರೂ, ಪಾತ್ರವಾಗಿ ಕಾಡುತ್ತಾರೆ. ಭಗೀರ ಎಂಬ ನಾಯಿಯ ಪಾತ್ರವೂ ಸೇರಿದಂತೆ ಪ್ರತಿಯೊಂದು ಕ್ಯಾರೆಕ್ಟರ್ ಗೂ ಪ್ರಾಶಸ್ತ್ಯ ಇರುವುದು ಚಿತ್ರಕತೆಯ ವಿಶೇಷ. ಛಾಯಾಗ್ರಹಣ, ಸಂಗೀತ ಮತ್ತು ಸಂಕಲನಕಾರರನ್ನಂತೂ ಮೆಚ್ಚಲೇಬೇಕು.

ಒಂದು ತೆಲುಗು ಚಿತ್ರದ ಫ್ಯಾಂಟಸಿಯನ್ನು ಎಂಜಾಯ್ ಮಾಡಲು ಹೇಗೆ ಥಿಯೇಟರ್ ಗೆ ನುಗ್ಗುತ್ತೇವೆಯೋ, ಅದೇ ಹುಮ್ಮಸ್ಸಿನಲ್ಲಿ, ಅಷ್ಟೇ ಅತಿಮಾನುಷ ನಿರೀಕ್ಷೆಗಳೊಂದಿಗೆ ಈ ಕನ್ನಡ ಚಿತ್ರ ನೋಡಲು ಹೋದರೆ ನಿಮಗೆ ಯಾವುದೇ ನಿರಾಶೆಯಾಗುವುದಿಲ್ಲ ಎಂಬ ಭರವಸೆ ನಮ್ಮದು. ಅದೇ ವೇಳೆ ಉತ್ತಮ ಸಂದೇಶಕ್ಕೂ ಕೊರತೆ ನೀಡದ ಕಾಣದಂತೆ ಮಾಯವಾದನು ಕುಟುಂಬ ಸಮೇತ ನೋಡಬಹುದಾದ ಸಿನಿಮಾ.

ರೇಟಿಂಗ್: 4

Recommended For You

Leave a Reply

error: Content is protected !!