ಐದು ದಿನಗಳ ಹಿಂದೆ ಕನ್ನಡಿಗರ ಪ್ರೀತಿಯ ನಿರೂಪಕ ಸಂಜೀವ ಕುಲಕರ್ಣಿ ನಿಧನರಾದರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರು 49ನೆಯ ವಯಸ್ಸಿನಲ್ಲೇ ಅಕಾಲಮೃತ್ಯುವಿಗೆ ಒಳಗಾದರು. ಆದರೆ ಇಂಥದೊಂದು ಸಾವಿನಿಂದ ಪಾರಾಗಲು ಕಳೆದ ಹದಿನೈದು ವರ್ಷಗಳಿಂದ ಅವರು ಹೋರಾಟ ನಡೆಸಿದ್ದರು. ಆರಂಭದಲ್ಲಿ ಆಪ್ತರಿಂದ ಧನ ಸಹಾಯ ಪಡೆದಿದ್ದ ಅವರ ಕುಟುಂಬಕ್ಕೆ ಕಳೆದ ಒಂದು ತಿಂಗಳಲ್ಲಂತೂ ಸಾರ್ವಜನಿಕರೇ ಹಣ ಸಂಗ್ರಹಿಸಿ ಕಳಿಸಿದ್ದರು. ಇದೀಗ ಅವರೇ ಇಲ್ಲ. ಹಾಗಾಗಿ ಸಂಗ್ರಹಿತವಾದ ಹೆಚ್ಚುವರಿ ಹಣವನ್ನು ಅಗತ್ಯವಿರುವ ಬೇರೆ ಯಾರಿಗಾದರೂ ನೀಡುವ ತೀರ್ಮಾನಕ್ಕೆ ಮುಂದಾಗಿದೆ ಕುಟುಂಬ. ಇದೊಂದು ಅಪರೂಪದಲ್ಲಿ ಅಪರೂಪ ಎನ್ನುವಂಥ ಸಂದರ್ಭ ಆಗಿದ್ದು ಸಂಜೀವ ಕುಲಕರ್ಣಿಯವರ ಪುತ್ರ ಮಾಧ್ಯಮಸೇರಿದಂತೆ ಆತ್ಮೀಯರಲ್ಲಿ ಮಾಡಿಕೊಂಡ ವಿನಂತಿಯ ಭಾವಾರ್ಥವನ್ನು ಅದೇ ಪ್ರಕಾರ ಇಲ್ಲಿ ನೀಡುತ್ತಿದ್ದೇವೆ.
ಸೌರಭ್ ನೀಡಿದ ಸಂದೇಶ
“ನನ್ನ ತಂದೆ, ಸಂಜೀವ್ ಕುಲಕರ್ಣಿ ಕೋಟಿಗೊಬ್ಬ ಮನುಷ್ಯ. ಮನುಷ್ಯರಾಗಿ, ಕಲಾವಿದರಾಗಿ ಕೋಟಿ ಮಂದಿಯ ಹೃದಯವನ್ನು ಗೆದ್ದಿದ್ದರು. ಹಾಗಾಗಿಯೇ ಅವರಿಗೆ ಆರೋಗ್ಯ ಸಮಸ್ಯೆ ಎಂದಾಗ ಲಕ್ಷಾಂತರ ರೂಪಾಯಿಗಳ ಸಂಗ್ರಹವಾಯಿತು.
ಆಸ್ಪತ್ರೆಯಲ್ಲಿ ಪ್ರತಿದಿನ ನಾವು ಜನರ ಅಮೂಲ್ಯವಾದ ಬೆಂಬಲ ಮತ್ತು ಕೊಡುಗೆಗಳ ಬಗ್ಗೆ ಅವರಿಗೆ ಹೇಳುತ್ತಿದ್ದೆವು. ಅಂತಿಮ ನಿಮಿಷದವರೆಗೂ ಅವರು ಜನರ ಪ್ರೀತಿ ಮತ್ತು ಬೆಂಬಲವನ್ನು ಪಡೆದಿರುವುದಕ್ಕೆ ತುಂಬಾ ಕೃತಜ್ಞರಾಗಿದ್ದರು. ಆದರೆ ನನ್ನ ತಂದೆಯ ಮೇಲೆ ಸರ್ವಶಕ್ತನ ಪ್ರೀತಿಯು ಇಲ್ಲಿರುವ ಲಕ್ಷಾಂತರ ಜನರ ಪ್ರೀತಿಗಿಂತ ಹೆಚ್ಚಾಗಿದ್ದಕ್ಕೆ ಇರಬೇಕು, ಅವರು ದೇವರ ಬಳಿಗೆ ಹೊರಟು ಹೋದರು.
ಇದೀಗ ಒಬ್ಬ ಜವಾಬ್ದಾರಿಯುತ, ಹೆಮ್ಮೆಯ ಮಗನಾಗಿ, ನನ್ನ ತಾಯಿಯ ಒಪ್ಪಿಗೆಯೊಂದಿಗೆ ಒಂದು ನೈತಿಕ ಮತ್ತು ನ್ಯಾಯಯುತ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ. ನಮ್ಮ ಕೋರಿಕೆ ಮೇರೆಗೆ ಮಿಲಾಪ್ ವೆಬ್ಸೈಟ್ ಮೂಲಕ 38,95,281 ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. ವಿವಿಧ ಕಡಿತಗಳ ನಂತರ ಅದರಲ್ಲಿ 35,98,611 ರೂಪಾಯಿಗಳಷ್ಟು ಸ್ವೀಕರಿಸಿದ್ದೇವೆ. ನಾರಾಯಣ ಹೃದಯಾಲಯದಲ್ಲಿ ಒಟ್ಟು ಬಿಲ್ ಮೊತ್ತ ರೂ 26,63,425 ಆಗುತ್ತು. ಆದರೆ ಅವರು ರೂಪಾಯಿ 5,53,590 ಮನ್ನಾ ಮಾಡಿದ ಕಾರಣ ನಾವು 21,09,835ರೂಗಳನ್ನು ಮಾತ್ರ ಪಾವತಿಸಿದ್ದೇವೆ. ಇದರಿಂದಾಗಿ ಮಿಲಾಪ್ ನಲ್ಲಿ ಸಂಗ್ರಹವಾದ ಮೊತ್ತದಲ್ಲಿ 14,88,776 ಅನ್ನು ನಮಗೆ ಉಳಿಸುವಂತೆ ಮಾಡಿದೆ.
ನಿಮ್ಮ ದಾನ ಅರ್ಹರನ್ನು ಸೇರುವಂತಾಗಲಿ!
ಹಾಗಾಗಿ ಉಳಿದಿರುವ 14,88,776 ರೂಪಾಯಿಗಳನ್ನು ನಮ್ಮ ಹಾಗೆ ಸಂಕಷ್ಟದಲ್ಲಿರುವ ರೋಗಿಗಳಿಗೆ ನೀಡುವ ಉದ್ದೇಶ ಹೊಂದಿದ್ದೇವೆ. ಹಾಗಾಗಿ ಈ ಹಣಕ್ಕೆ ಅರ್ಹ ರೋಗಿಗಳ ಪತ್ತೆಗಾಗಿ ನಾಡಿನ ಪತ್ರಿಕಾ ಮಾಧ್ಯಮ ಸೇರಿದಂತೆ ನಮ್ಮ ಆಪ್ತರ ಸಹಾಯವನ್ನು ಬಯಸುತ್ತಿದ್ದೇವೆ. ನಮ್ಮ ತಂದೆ ಸಂಜೀವ್ ಕುಲಕರ್ಣಿಯವರ ಅಂತಿಮ ವಿಧಿಯ ಆಚರಣೆಗಳನ್ನು ಮುಗಿಸಿದೊಡನೆ ಆಯ್ಕೆಯಾಗಿರುವ ರೋಗಿಗಳ ಕುಟುಂಬಕ್ಕೆ ಈ ಮೊತ್ತವನ್ನು ಬಳಸಲು ನಾವು ಬದ್ಧರಿದ್ದೇವೆ” ಎಂದು ಸೌರಭ್ ಕುಲಕರ್ಣಿ ಬರೆದುಕೊಂಡಿದ್ದಾರೆ.
ಇದು ನಿಜವಾದ ಆದರ್ಶ
ವಾಸ್ತವದಲ್ಲಿ ಸಂಜೀವ ಕುಲಕರ್ಣಿಯವರ ಕುಟುಂಬ ಈಗ ಸಾಲದಲ್ಲಿದೆ. ಆದರೆ ಈಗ ಸಂಗ್ರಹವಾಗಿರುವ ಮೊತ್ತವನ್ನು ಸಾಲ ಸಂದಾಯಕ್ಕೆ ಬಳಸುವುದು ಸರಿಯಾಗುವುದಿಲ್ಲ. ಯಾಕೆಂದರೆ ಆ ಮೊತ್ತ ಕಳಿಸಿದವರು ಆ ಮೂಲಕ ಸಂಜೀವ ಕುಲಕರ್ಣಿಯವರ ಜೀವ ಉಳಿಯಲೆಂದು ಬಯಸಿದ್ದರು. ಇಂದು ಅವರೇ ಬದುಕಿಲ್ಲದೇ ಇರುವಾಗ ಅವರ ಹೆಸರಲ್ಲಿ ಸಂಗ್ರಹವಾದ ಹಣವನ್ನು ಸಾಲಸಂದಾಯಕ್ಕೆ ಬಳಸಲು ನಮಗೆ ಅರ್ಹತೆ ಇಲ್ಲ. ಅದಕ್ಕೆ ನಮ್ಮ ಸ್ವಾಭಿಮಾನ ಒಪ್ಪುವುದಿಲ್ಲ ಕೂಡ. ಈ ನಿರ್ಧಾರವನ್ನು ನನ್ನ ತಾಯಿಯೊಂದಿಗೆ ಮಾತನಾಡಿಯೇ ತೆಗೆದುಕೊಂಡಿದ್ದೇನೆ. ಮನೆ ಸಾಲಗಳ ಸಂದಾಯಕ್ಕೆ ದುಡಿಯಲು ನಾನು ಪ್ರಾಪ್ತನಿದ್ದೇನೆ ಎಂದು ಪುತ್ರ ಸೌರಭ್ ಕುಲಕರ್ಣಿಯವರು ಸಿನಿಕನ್ನಡದ ಜತೆ ಮಾತನಾಡುತ್ತಾ ಹೇಳಿದರು.
ಸಂಜೀವ್ ಅವರು ಬದುಕಿ ಉಳಿಯದಿದ್ದರೂ ಅವರ ಬದುಕೇ ಆಗಿರುವ ಕುಟುಂಬವು ಆ ಮೊತ್ತವನ್ನು ಬಳಸುವುದನ್ನು ಪ್ರಶ್ನಿಸುವಂಥ ದಾನಿಗಳು ಯಾರೂ ಇರಲಿಕ್ಕಿಲ್ಲ. ಆದರೂ ಸಹ ನೈತಿಕತೆಯ ಜವಾಬ್ದಾರಿ ಹೊತ್ತು ಕುಟುಂಬದ ಮಂದಿ ತೆಗೆದುಕೊಂಡಿರುವ ನಿರ್ಧಾರ ಬಹಳ ಆದರ್ಶವಾಗಿರುವಂಥದ್ದು. ಒಬ್ಬ ವ್ಯಕ್ತಿ ಸಾವಿನ ಬಳಿಕ ಕೂಡ ಆತನ ಕುಟುಂಬದ ವರ್ತನೆಯಿಂದ ಹೇಗೆ ಮಹಾತ್ಮನಂತೆ ಕಾಣಬಲ್ಲ ಎನ್ನುವುದಕ್ಕೆ ಸಂಜೀ ಕುಲಕರ್ಣಿಯವರ ಕುಟುಂಬವೇ ಉದಾಹರಣೆ.