
ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಇಂದು ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಬಹುಕಾಲದ ಸ್ನೇಹಿತೆ ಮೇಘಾ ಜತೆಗೆ ಸಹಿ ಹಾಕಿ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.
ಮೇಘಾ ಅವರು ಮೂಲತಃ ಉತ್ತರ ಭಾರತದವರಾಗಿದ್ದು, ಇಬ್ಬರೂ ಸಂವಿಧಾನದ ಬಗ್ಗೆ ಅಭಿಮಾನ ಮತ್ತು ಜೀವಪರ ಕಾಳಜಿಯನ್ನು ಹೊಂದಿದವರು. ಸಾಮಾಜಿಕ ಹೋರಾಟದ ಮನಸೇ ಇವರಿಬ್ಬರನ್ನು ಒಂದಾಗಲು ಪ್ರೇರೇಪಿಸಿದೆ ಎನ್ನಲಾಗಿದೆ.
ಶನಿವಾರ ಬೆಳಿಗ್ಗೆ ಸುಮಾರು 11.30ರ ಸುಮಾರಿಗೆ ಬಿಳಿ ಪಂಚೆ ಮತ್ತು ಅಂಗಿ ತೊಟ್ಟು ಅದರ ಮೇಲೆ ಹಸಿರು ಶಾಲು ಹಾಕಿಕೊಂಡು ರೈತನಾಯಕನಂತೆ ಆಗಮಿಸಿದ ಚೇತನ್ ನಿಜವಾದ ಪರಿಸರ ಪ್ರೇಮಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮೇಘಾ ಅವರು ಕಡುಗೆಂಪು ಬಣ್ಣದ ಮೇಲ್ಮೈ ಚಿನ್ನದ ಬಣ್ಣದ ಅಂಚಿನ ಸೀರೆಯಲ್ಲಿ ಚೇತನ್ ಗೆ ಜೋಡಿಯಾಗಿ ಸೇರಿದ್ದರು. ಇಬ್ಬರ ಮನೆಯ ಹಿರಿಯರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಿ ಹಾಕಿ ಶುಭ ಕೋರಿದರು.

