ರಾಘವೇಂದ್ರ ರಾಜ್ ಕುಮಾರ್ ಅವರನ್ನು ವೇದಿಕೆಗೆ ಸ್ವಾಗತಿಸಲಾಯಿತು. ತಮಗೆ ನೀಡಲಾದ ಹೂಗುಚ್ಛ ನೋಡಿದ ಅವರು ‘ಜೀವ ಹೂವಾಗಿದೆ’ ಎಂದರು. ಅಲ್ಲಿದ್ದ ಎಲ್ಲರ ಮುಖದಲ್ಲೂ ಹೂನಗು ಮೂಡಿತು.
ಕರ್ನಾಟಕದ ಅಗ್ರಗಣ್ಯ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಕಿರುತೆರೆಗೆ ನೀಡುತ್ತಿರುವ ದ್ವಿತೀಯ ಕಾಣಿಕೆಯೇ ‘ಜೀವ ಹೂವಾಗಿದೆ’. ಈಗಾಗಲೇ ‘ಮರಳಿ ಬಂದಳು ಸೀತೆ’ ಧಾರಾವಾಹಿಯ ಮೂಲಕ ಪಡೆದ ಯಶಸ್ಸು ಅವರನ್ನು ಮತ್ತೊಂದು ಧಾರಾವಾಹಿ ಮಾಡಲು ಪ್ರೇರೇಪಿಸಿದೆ ಎನ್ನಬಹುದು.
ಈಗಾಗಲೇ ‘ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯ ಪ್ರೀಮಿಯರ್ ಶೋ ಮಾಡುವ ಮೂಲಕ ಕನ್ನಡ ಕಿರುತೆರೆ ಧಾರಾವಾಹಿಗಳ ಲಾಂಚ್ ಗೆ ಹೊಸ ಸಂಪ್ರದಾಯ ಹಾಕಿರುವ ಸ್ಟಾರ್ ಸುವರ್ಣ ಜೀವ ಹೂವಾಗಿದೆ ಧಾರಾವಾಹಿಯ ಒಂದಷ್ಟು ಸಂಚಿಕೆಗಳನ್ನು ಸಹ ವಿಶೇಷ ಪ್ರದರ್ಶನದ ಮೂಲಕ ತೋರಿಸಿತು.
ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ” ಮೊದಲು ನಾವು ತೋಟದ ಕೆಲಸದವರಾಗಬೇಕು; ಆಗಲೇ ಜೀವ ಹೂವಾಗಲು ಸಾಧ್ಯ” ಎಂದರು. ಈ ಸಂದರ್ಭದಲ್ಲಿ ಧಾರಾವಾಹಿಯ ಶೀರ್ಷಿಕೆ ಗೀತೆ “ಕಾವೇರಿಯೆ ಮನೆ ಮಗಳಾಗಿದೆ..” ಯನ್ನು ಗಾಯಕರು ಹಾಡಿದರು.
ವೇದಿಕೆಯಲ್ಲಿ ರಾಘವೇಂದ್ರ ರಾಜ್ ಕುಮಾರ್, ಅವರ ಪತ್ನಿ ಮಂಗಳಾ ರಾಘರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್, ಸ್ಟಾರ್ ಸುವರ್ಣದ ಬಿಸ್ನೆಸ್ ಹೆಡ್ ಸಾಯಿ ಪ್ರಸಾದ್, ನಿರ್ದೇಶಕ ಸುನೀಲ್ ಕುಮಾರ್ ಜೆ.ಕೆ, ಸಂಚಿಕೆ ನಿರ್ದೇಶಕ ಮಾಲತೇಶ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು. ಧಾರಾವಾಹಿ ಇಂದಿನಿಂದ ಸ್ಟಾರ್ ಸುವರ್ಣದಲ್ಲಿ ಪ್ರದರ್ಶನ ಕಾಣಲಿದೆ.