ಬಿಗ್ ಬಾಸ್ ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿಜೇತರಾಗಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಿರೀಕ್ಷೆ ಮೂಡಿಸಿಕೊಂಡವರು ವಿಜೇತರಾಗದೇ ಹೋಗುವುದಿದೆ. ಆದರೆ ಈ ಬಾರಿ ಕೂಡ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಮೇಲೆ ನಿರೀಕ್ಷೆ ಇರಿಸಿಕೊಂಡವರು ಕಡಿಮೆ ಏನಲ್ಲ. ಆದರೆ ಶೈನ್ ಶೆಟ್ಟಿ ಮಾತ್ರ ದಿನ ಕಳೆಯುತ್ತಿದ್ದ ಹಾಗೇ ಒಬ್ಬ ಪರಿಪೂರ್ಣ ವ್ಯಕ್ತಿಯಂತೆ ಕಾಣುತ್ತಿದ್ದರು ಅವರು ಗೆಲ್ಲಬೇಕೆಂದು ಬಯಸಿದವರಿಗೆ ಈಗ ಖುಷಿಯಾಗಿದೆ. ಹೀಗೆ ಈ ರಿಯಾಲಿಟಿ ಶೋನ ಎಲ್ಲ ಆಯಾಮಗಳ ಬಗ್ಗೆ ಸಾಮಾನ್ಯ ವೀಕ್ಷಕನಿಗೆ ಆದ ತಳಮಳ ಮತ್ತು ಶೈನ್ ಗೆಲುವಿನ ಸಂಭ್ರಮದ ಕುರಿತಾದ ಅನಿಸಿಕೆಯನ್ನು ನಟ, ಬರಹಗಾರ, ಪತ್ರಕರ್ತ ನವೀನ್ ಸಾಗರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ. ನವೀನ್ ಸಾಗರ್ ಕಂಡಂತೆ ಶೈನ್ ಶೆಟ್ಟಿ ಬಿಹೇವಿಯರ್!
ನಂಬಿಕೆಯ ವಿಚಾರ
ಬಿಗ್ ಬಾಸ್ ಕಾರ್ಯಕ್ರಮವನ್ನ ಮೊದಲಿಂದಲ್ಲೂ ನಾನು ಇಡಿಇಡಿಯಾಗಿ ನೋಡಿದ್ದೇ ಇಲ್ಲ. ಆದರೆ ಪತ್ರಿಕೆಯಲ್ಲಿದ್ದಾಗ ಸುದ್ದಿ ಕಾರಣಕ್ಕಾಗಿ ಯೂಟ್ಯೂಬ್, ವೂಟ್ ನಲ್ಲಿ, ಫಿಲ್ಮಿಬೀಟ್ ಮತ್ತಿತರ ವೆಬ್ ಸೈಟ್ ಗಳಲ್ಲಿ, ಫೇಸ್ ಬುಕ್ ಪೇಜುಗಳಲ್ಲಿ ನೋಡಿ ವಿಷಯ ತಿಳಿದುಕೊಳ್ತಿದ್ದೆ. ಏನೋ ಇಂಟರೆಸ್ಟಿಂಗ್, ಕಾಂಟ್ರೊವರ್ಸಿಯಲ್, ಕ್ಯೂಟ್, ಎಮೋಷನಲ್ ಅನಿಸುವ ವಿಚಾರಗಳಿದ್ದಾಗ ಅದಷ್ಟನ್ನೇ ಫಾಲೋ ಮಾಡಿ ಹೊರಗೆ ಬರುತ್ತಿದ್ದೆ.
ಹುಚ್ಚ ವೆಂಕಟ್ ಬಂದಿದ್ದಾಗ ಮಾತ್ರ ಆ ಆಸಕ್ತಿಕರ ಕ್ಯಾರಕ್ಟರ್ ಹೇಗೆ ಬಿಹೇವ್ ಮಾಡಬಹುದು ಎಂಬ ಕುತೂಹಲಕ್ಕಾಗಿ ಯೂಟ್ಯೂಬ್ ತೆರೆದು ನೋಡಿದ್ದುಂಟು. ಆದರೆ ಪ್ರತಿ ಬಾರಿಯೂ.. ಹೋಗುವ ಹದಿನೈದೂ ಪ್ಲಸ್ ಸ್ಪರ್ಧಿಗಳಲ್ಲಿ ನನ್ನ ಫೇವರಿಟ್ ಅನಿಸುವವರು, ಇವರು ಗೆಲ್ಲಲಿ ಎಂಬ ಆಸೆ ನನ್ನೊಳಗೆ ಮೂಡಿಸಿದವರು ಇದ್ದೇ ಇರುತ್ತಿದ್ದರು. ಕೆಲವೊಮ್ಮೆ ಅವರು ಕೇವಲ ನನ್ನ ಗೆಳೆಯ/ಗೆಳತಿ ಎಂಬ ಕಾರಣಕ್ಕೆ, ಕೆಲವೊಮ್ಮೆ ಅವರ ಪರ್ಸನಲ್/ಫಿನಾನ್ಸಿಯಲ್ ಸ್ಥಿತಿಗತಿಗೆ ಸಹಕಾರಿಯಾಗಲಿ, ಸಂಕಷ್ಟಗಳಿಂದ ಹೊರಬರುವಂತಾಗಲಿ ಎಂಬ ಕಾರಣಕ್ಕೆ, ಕೆಲವೊಮ್ಮೆ ತೆರೆಮೇಲೆ ಅವರ ಮೇಲೆ ಸೃಷ್ಟಿಯಾದ ಅಭಿಮಾನದ ಕಾರಣಕ್ಕೆ, ಕೆಲವೊಮ್ಮೆ ಈತ/ಈಕೆ ಗೆದ್ದರೆ ಅದು ಬಿಗ್ ಬಾಸ್ ಕಾರ್ಯಕ್ರಮದ ಘನತೆ ಹೆಚ್ಚಿಸಬಹುದು ಎಂಬ ಕಾರಣಕ್ಕೆ, ಇನ್ನು ಕೆಲವು ಬಾರಿ ವಿನಾಕಾರಣ!
ನಂಬಿಕೆ ಗೆದ್ದಿತು..!
ಅದೇನು ವಿಧಿವಿಚಿತ್ರವೋ ನಾನು ಗೆಲ್ಲಲೆಂದು ಬಯಸಿದ, ಬಯಸಿ ಅದನ್ನು ಫೇಸ್ ಬುಕ್ ನಲ್ಲಿ ಹೇಳಿಕೊಂಡ ಸ್ಪರ್ಧಿಗಳು ಸದಾ ವಿನ್ನರ್ ಸ್ಥಾನದಿಂದ ವಂಚಿತರಾಗುತ್ತಿದ್ದರು. ಅದರಿಂದ ಬೇಸರ ಅಂತೂ ಖಂಡಿತ ಆಗುತ್ತಿರಲಿಲ್ಲ. ಯಾಕಂದ್ರೆ ನಾನು ಬಿಗ್ ಬಾಸ್ ಕಾರ್ಯಕ್ರಮವನ್ನು ಅಷ್ಟು ಸೀರಿಯಸ್ಸಾಗಿ ತಗೊಂಡಿಲ್ಲ.
ಆದರೆ ಈ ಬಾರಿ ಮಾತ್ರ ಶೈನ್ ಶೆಟ್ಟಿ ಬಿಗ್ ಬಾಸ್ ಗೆ ಬಂದಿದ್ದು ಗೊತ್ತಾದ ಕೂಡಲೇ ನನ್ನ ಈ ಲತ್ತೆ ಹಿಸ್ಟರಿ ಪದೇಪದೆ ನೆನಪಾಯಿತು. ಈ ಬಾರಿ ಶೈನ್ ಶೆಟ್ಟಿ ಗೆಲ್ಲಬೇಕು ಅಂದ್ರೆ ನಾನು ಅಪ್ಪಿತಪ್ಪಿಯೂ ಶೈನ್ ಶೆಟ್ಟಿಯನ್ನು ಹೊಗಳಿ ಒಂದೇ ಒಂದು ಸ್ಟೇಟಸ್ ಹಾಕಬಾರದು, ಆತ ಗೆಲ್ಲಲಿ ಎಂಬ ನನ್ನಾಸೆಯನ್ನು ಎಕ್ಸ್ ಪ್ರೆಸ್ ಮಾಡಬಾರದು ಅಂತ ಕಂಡಿಷನ್ ಹಾಕಿಕೊಂಡೆ. ನಂತರ ಯಥಾಪ್ರಕಾರ ಬಿಗ್ ಬಾಸ್ ನೋಡೋದ್ರಿಂದ ದೂರ ಉಳಿದೆ. ಶೈನ್ ಶೆಟ್ಟಿ ಗೆದ್ದೇ ಬಿಟ್ಟ. ನನ್ನ ವ್ರತ ಫಲಿಸಿತು!!!
ಫ್ರೆಂಡ್ ಆದಾಗ ಗೌರವ ಹೆಚ್ಚಿತು!
ಶೈನ್ ಶೆಟ್ಟಿ ನನ್ನ ಕ್ಲೋಸ್ ಫ್ರೆಂಡ್ ಏನಲ್ಲ. ಎದುರುಬದುರಾದಾಗ ಬಹುವಚನದಲ್ಲಿ ಮಾತಾಡಿಸಿಕೊಳ್ಳುವವರು. ಅದರಿಂದಾಚೆ ಮಾತು ಬಂದಾಗ ನಾನಂತೂ ಏಕವಚನ ಬಳಸುತ್ತೇನೆ. ಅದು ನನ್ನೊಳಗೆ ಆತನ ಬಗ್ಗೆ ಹುಟ್ಟಿರುವ ಆತ್ಮೀಯತೆಯ ಕಾರಣಕ್ಕೆ. ನನಗಿಂತ ತುಂಬ ಚಿಕ್ಕವನು ಅನ್ನೋ ಕಾರಣಕ್ಕೆ. ಪಬ್ಲಿಕ್ ಫಿಗರ್ ಗಳ ಬಗ್ಗೆ ಮಾತಾಡುವಾಗ ಸಿಂಗ್ಯುಲರ್ ಅಲ್ಲಿ ಮಾತಾಡುವುದು ನನ್ನ ಅಭ್ಯಾಸ ಆಗಿರುವುದಕ್ಕೆ. ಹಾಗೆ ಮಾತಾಡುವುದು ಅಗೌರವ ಸೂಚಕ ಅಂತ ನನಗ್ಯಾವತ್ತೂ ಅನಿಸಿಲ್ಲವಾದ ಕಾರಣಕ್ಕೆ! ಅವನೂ ಹಾಗೆ ನನ್ನನ್ನು ಸಿಂಗ್ಯುಲರಲ್ಲಿ ಕರೆದರೂ ನನಗೇನೂ ಬೇಸರವಿಲ್ಲ.
ಆದರೆ ಪರಿಚಯ ಆಗಿ ಫ್ರೆಂಡ್ ಅಂತ ಆದಾಗಿನಿಂದ ಅದೇನೋ ಆತನ ಬಗ್ಗೆ ಆತ್ಮೀಯತೆ, ಗೌರವ ಹೆಚ್ಚಾಯ್ತು. ನಾನು ಮತ್ತು ಶೈನ್ ಒಂದೇ ಚಾನೆಲ್ಲಿನ ಬೇರೆ ಬೇರೆ ಸೀರಿಯಲ್ಲಲ್ಲಿ ನಟಿಸುತ್ತಿರುವಾಗ, ಸ್ಪೆಷಲ್ ಎಪಿಸೋಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡವರು. ಅದೇ ಮೊದಲ ಭೇಟಿ. ಮೀರಾಮಾಧವ ಅನ್ನೋ ಸೀರಿಯಲ್ಲಿನ ಹೀರೋ ಶೈನ್. ನಿಜಕ್ಕೂ ಮಾಧವನಂತೆ ಚೆಂದ ಕಾಣುತ್ತಿದ್ದ. ಈಗಿನಂತೆ ಗಡ್ಡದ ಟ್ರೆಂಡ್ ಇರಲಿಲ್ಲ ಆಗ. ಅದೇನಿದ್ರೂ ನನ್ನಂಥ ವಿಲನ್ ಪಾತ್ರಧಾರಿಗೆ ಸೀಮಿತವಾಗಿತ್ತು. ಅದೇನೋ ಗೊತ್ತಿಲ್ಲ. ಆಗ ನಮ್ಮಿಬ್ಬರ ಮಾತುಕತೆ ಹಾಯ್ ಹಲೋ ಥರದ ಫಾರ್ಮಲ್ ಮಾತುಗಳಿಗೆ ಸೀಮಿತವಾಗಿ ಮುಗಿದೇ ಹೋಗಿತ್ತು. ನಾನು ಈ ಹುಡುಗನಿಗೆ ಸ್ವಲ್ಪ ಆಟಿಟ್ಯೂಡಾ ಅನ್ನೋ ಪೂರ್ವಗ್ರಹಕ್ಕೆ ಕಾರಣವೇ ಇಲ್ಲದೆ ಜಾರಿದ್ದೆ.
ಆ ನಂತರ ಲಕ್ಷ್ಮೀಬಾರಮ್ಮ ಸೀರಿಯಲ್ಲಲ್ಲಿ ರೀಪ್ಲೇಸ್ ಮೆಂಟ್ ಆಗಿ ಬಂದದ್ದು ನೋಡಿದ್ದೆ. ನೂತನ್ ಉಮೇಶ್ ಅವರ ಅಸ್ತಿತ್ತ್ವ ಸಿನಿಮಾದಲ್ಲಿ ನೋಡಿದಾಗ ಇವನು ಹೀರೋ ಮೆಟೀರಿಯಲ್. ಚಿಕ್ಕಪಾತ್ರಗಳಲ್ಲಿ ಕಳೆದು ಹೋಗಬಾರದು ಅಂದ್ಕೊಂಡಿದ್ದೆ. ಒಂದುಮೊಟ್ಟೆಯ ಕಥೆಯಲ್ಲಿ ಒಂದೇ ಒಂದು ಸೀನ್ ನಲ್ಲಿ ಬಂದು ಹೋದಾಗ, ಶೈನ್ ಶೆಟ್ಟಿಗೆ ಆ ತಿದ್ದಿಟ್ಟಂಥ ರೂಪವೇ ಶತ್ರುವಾ? ಹೀರೋ ಆಗೋಕೆ ಅಷ್ಟು ನೀಟಾಗಿ ಇರಬಾರದು ಅನ್ಸತ್ತೆ.. ಫೀಚರ್ ಗಳಲ್ಲಿ ಕೆಲವು ವಕ್ರತೆ ಇದ್ದೋವ್ರೆ ಹೆಚ್ಚು ಕ್ಲಿಕ್ ಆಗೋದಾ ಅಂತೆಲ್ಲ ಯೋಚಿಸಿದ್ದೆ.
ನೀತುವಿಗೆ ತ್ಯಾಂಕ್ಸ್..!
ಆದರೆ ಒಂದು ಸರ್ಪ್ರೈಸ್ ಸಡನ್ ಟ್ರಿಪ್ ಪ್ಲಾನ್ ನಲ್ಲಿ ನಾನು ಶೈನ್ ಶೆಟ್ಟಿ ಜೊತೆಯಾಗಿ ನೂರಾರು ಕಿಲೋಮೀಟರ್ ಪಯಣಿಸೋ ಹಾಗಾಯ್ತು. ಕುಕ್ಕೆಗೆ ಹೊರಟಿದ್ದೆ. ಶೈನ್ ಅವನ ಊರಿಗೆ ಹೊರಟಿದ್ದ. ಗೆಳತಿ ನೀತೂ ಮಂಗಳೂರಿಗೆ ಶೂಟಿಂಗ್ ಅಂತ ಹೊರಟಿದ್ರು. ಮೂವರೂ ಜೊತೆಯಾಗಿ ಪ್ರಯಾಣ ಮಾಡುವಾಗ ಶೈನ್ ಅರ್ಥವಾಗುತ್ತಾ ಹೋದ. ಅವನ ಹಾಸ್ಯಪ್ರಜ್ಞೆ, ಪ್ರತಿಭೆ, ಅವನ ಪರಿಸ್ಥಿತಿ, ಕೆರಿಯರ್ ನ ಏರಿಳಿತ, ಅವನ ಮೆಚುರಿಟಿ, ಅವನ ಎಮೋಷನಲ್ ಮತ್ತು ಕೇರಿಂಗ್ ಸ್ವಭಾವ ಎಲ್ಲವೂ ಒಂದು ಟ್ರಿಪ್ಪಿನಲ್ಲಿ ಬಹುತೇಕ ಅರ್ಥವಾಗಿತ್ತು. ಆ ದಿನವೊಂದು ಘಟಿಸಿದ್ದಕ್ಕೆ ನೀತೂಗೆ ಥ್ಯಾಂಕ್ಸ್ ಹೇಳಬೇಕು. ಥ್ಯಾಂಕ್ಸ್ ನೀತೂ.
ಶೈನ್ ಇನ್ನಷ್ಟು ಶೈನಾಗಲಿ
ಅಲ್ಲಿಂದ ಮುಂದೆ ಅಪರೂಪಕ್ಕೆ ಮೆಸೇಜ್ ವಿನಿಮಯದ ಹೊರತಾಗಿ ಭೇಟಿಯಾಗಿಲ್ಲ. ಫುಡ್ ಟ್ರಕ್ ಮಾಡುವ ವಿಚಾರದಲ್ಲಿ ಹಲವು ಬಾರಿ ಮಾತಾಡಿದ್ದರೂ, ಅದರ ಓಪನಿಂಗ್ ಸೆರಮನಿಗೆ ಹೋಗಲಾಗಲಿಲ್ಲ. ಎಂದಾದರೊಮ್ಮೆ ಹೋಗಿ ವಿಶ್ ಮಾಡಿ, ಏನಾದ್ರೂ ತಿಂಡಿ ತಿಂದು ಬರೋಣ ಅಂದ್ರೂ ಆಗಲಿಲ್ಲ. ಬಿಗ್ ಬಾಸ್ ಗೆ ಹೋಗ್ತಿರೋ ಸುದ್ದಿ ತಿಳಿದಾಗ ಆಲ್ ದ ಬೆಸ್ಟ್ ಹೇಳೋಕೂ ಮೆಸೇಜ್ ಮಾಡಲಿಲ್ಲ.
ಆದರೆ ಶೈನ್ ಗೆಲ್ಲಲಿ, ಆತನಿಗೆ ಗೆಲುವಿನ ಅಗತ್ಯವಿದೆ ಎಂದು ಮನಸ್ಸು ಬೇಡುತ್ತಿತ್ತು. ಒಂದೊಮ್ಮೆ ಗೆಲ್ಲದಿದ್ದರೂ ಓಕೆ… ಬಿಗ್ ಬಾಸ್ ನಲ್ಲಿ ಸಣ್ಣಪುಟ್ಟ ಟೀಕೆಗಳಿಗೆ ಒಳಗಾಗುವ ಸಂದರ್ಭಗಳು ಬರುವುದು ಸಹಜ. ಆದರೆ ಆತ ಇಡೀ ನೂರೂ ಚಿಲ್ರೆದಿನಗಳಲ್ಲಿ ಹೆಸರು-ಇಮೇಜು ಕೆಡಿಸಿಕೊಳ್ಳುವುದು ಬೇಡ. ಘನತೆ ಉಳಿಸಿಕೊಳ್ಳಲಿ. ಪೋಸ್ಟ್ ಬಿಗ್ ಬಾಸ್ ಈಗಿರುವ ಬದುಕು ಇನ್ನೂ ದುಸ್ತರ ಆಗುವುದು ಬೇಡ ಎಂದು ಕೇಳಿಕೊಳ್ಳುತ್ತಿದ್ದೆ. ಈ ಬಾರಿ ನನ್ನ ಹರಕೆ ಫಲಿಸಿದೆ.
ಗೆದ್ದಮೇಲೆ ಹೀಗೆಲ್ಲ ಬರೆಯೋದು ಗೆದ್ದೆತ್ತಿನ ಬಾಲ ಹಿಡಿದಂಗೆ.. ಬಕೆಟ್ ಹಿಡಿದಂಗೆ ಅಂತೆಲ್ಲ ಅನಿಸುತ್ತದೇನೋ ಎಂದು ಇದನ್ನು ಬರೆಯೋಕೂ ಹಿಂಜರಿಯುತ್ತಲೇ ಇದ್ದೆ. ಕುಛ್ ಥೋ ಲೋಗ್ ಕಹೇಂಗೆ .. ಲೋಗೋಂಕಾ ಕಾಮ್ ಹೆ ಕೆಹ್ನಾ ಹಾಡು ನೆನಪಾಯ್ತು. ಬರೆದೇ ಬಿಟ್ಟೆ.
ಮುಗೀತು. ಇನ್ನು ಮತ್ತೆ ಪರ್ಸನಲ್ಲಾಗಿ ಫೋನೋ, ಮೆಸೇಜೋ, ಭೇಟಿನೋ ಮಾಡಿ ವಿಶ್ ಮಾಡ್ಲೇಬೇಕು ಅನ್ನೋದೂ ಇರಲ್ಲ. ಅವನು ಗೆದ್ದ ಖುಷಿ ಅಷ್ಟೇ ಈಗ ನನ್ನದು. ಬಿಗ್ ಬಾಸ್ ಅವನ ಕೆರಿಯರ್ರಿಗೊಂದು ದೊಡ್ಡ ಹೈಜಂಪ್ ಕೊಡಲಿ. ಬದುಕು ಚೆನ್ನಾಗಾಗಲಿ. ಬಿಗ್ ಬಾಸ್ ವಿಕ್ಟರಿಯಲ್ಲಿ ಮೈಮರೆಯುವ ಕ್ಯಾರಕ್ಟರ್ ಅಲ್ಲ ಶೈನ್ ದು ಅಂತ ನನ್ನ ನಂಬಿಕೆ. ಒಂದಷ್ಟು ಸಿನಿಮಾಗಳು ಅವನನ್ನು ಹುಡುಕಿಕೊಂಡು ಬರಲಿ. ಒಳ್ಳೆಯ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಶೈನ್ ಬೆಳೆಯಲಿ. ಒಳ್ಳೆಯ ಚಿತ್ರಗಳನ್ನು ನೋಡುವ ಖುಷಿ ನಮ್ಮದಾಗಲಿ.