ಹಂಸಲೇಖ ಎಂದರೆ ಕನ್ನಡ ಸಿನಿಪ್ರೇಮಿಗಳಿಗೆಲ್ಲ ಇಷ್ಟ. ಯಾಕೆಂದರೆ ಅವರ ಸಂಗೀತದ ಚುಂಬಕ ಶಕ್ತಿಯೇ ಅಂಥದ್ದು. ದಶಕಗಳ ಹಿಂದೆ ಅವರ ಶಿಷ್ಯನಾಗಬೇಕೆಂದು ಪಟ್ಟು ಹಿಡಿದ ಹುಡುಗನೊಬ್ಬ ಇಂದು ಕನ್ನಡದ ಜನಪ್ರಿಯ ನಿರ್ದೇಶಕ. ಆತ ಯಾರು ಅಂತ ನಿಮಗೆ ಶೀರ್ಷಿಕೆ ಮತ್ತು ಫೊಟೋ ಮೂಲಕ ಈಗಾಗಲೇ ತಿಳಿದಿರುತ್ತದೆ. ಆದರೆ ಅದರ ಹಿನ್ನೆಲೆ ಏನು ಎನ್ನುವುದು ನಿಮಗೆ ತಿಳಿದಿರಲಾರದು. ನಿರ್ದೇಶಕ ಹರಿ ಸಂತೋಷ್ ತಮ್ಮ ನಿರ್ದೇಶನದ ‘ಬಿಚ್ಚುಗತ್ತಿ’ ಸಿನಿಮಾದ ಮಾಧ್ಯಮಗೋಷ್ಠಿಯ ವೇಳೆ ಹಂಸಲೇಖ ಅವರೊಂದಿಗಿನ ತಮ್ಮ ಸಂಬಂಧದ ಹಿಂದಿನ ಹಳೆಯ ಆಯಾಮವನ್ನು ತೆರೆದಿಟ್ಟಿದ್ದು ಹೀಗೆ.
ಶಿಷ್ಯತ್ವಕ್ಕಾಗಿ ಮೊದಲ ಭೇಟಿ
“ನಾನು ಚಿಕ್ಕೋನಾಗಿದ್ದಾಗ ಸಂಗೀತದ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದೆ. ಸಂಗೀತ ನಿರ್ದೇಶನವೇ ನನ್ನ ಕನಸಾಗಿತ್ತು. ಅದು ಕೂಡ ಹಂಸಲೇಖ ಅವರ ಬಳಿಯಲ್ಲಿ ಸಂಗೀತ ಕಲಿಯಬೇಕೆಂದು ಹಠ ಹಿಡಿದಿದ್ದೆ. ಹೇಗೋ ಕೊನೆಗೆ ಅವರನ್ನು ಭೇಟಿಯಾದೆ ಕೂಡ.
ಅದು ನನ್ನ ಅವರ ಮೊದಲ ಭೇಟಿ. ಆ ಭೇಟಿಯನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ! ಯಾಕೆಂದರೆ ಅವರ ಮೂಲಕ ಸಂಗೀತ ಶಿಕ್ಷಣ ಪಡೆಯುವುದೇ ನನ್ನ ಗುರಿಯಾಗಿತ್ತು. ಮನೆಯಲ್ಲಿ ತಂದೆಯ ಮುಂದೆ ರಚ್ಚೆ ಹಿಡಿದು ಅದಾಗಲೇ ಒಂದಷ್ಟು ಸಂಗೀತದ ಪರಿಕರಗಳನ್ನು ರಾಶಿ ಹಾಕಿದ್ದೆ. ಆದರೆ ಅವುಗಳನ್ನು ಶಾಸ್ತ್ರೀಯವಾಗಿ ಬಳಸುವ ಮಾದರಿಯೇ ತಿಳಿದಿರಲಿಲ್ಲ. ಅಷ್ಟೇ ಸುಲಭದಲ್ಲಿ ಹಂಸಲೇಖರ ಶಿಷ್ಯತ್ವ ಕೂಡ ದೊರಕುವುದು ಎನ್ನುವ ನಂಬಿಕೆಯಲ್ಲಿದ್ದೆ. ಆದರೆ ಅವರು ಹೇಳಿದ್ದು ಒಂದೇ ಮಾತು. “ನಿನಗೆ ಸಂಗೀತದಲ್ಲಿರುವ ಆಸಕ್ತಿ ನನಗೆ ಅರ್ಥವಾಗುತ್ತದೆ. ಆದರೆ ನಾನು ಹೇಳಿಕೊಡುವುದು ನಿನಗೆ ಅರ್ಥವಾಗಬೇಕಿದ್ದರೆ ಕನಿಷ್ಠ ಎಸ್ ಎಸ್ ಎಲ್ ಸಿ ತನಕ ಆದರೂ ಕಲಿತುಕೊಂಡು ಬಾ ಎಂದಿದ್ದರು. ನಾನು ಒಮ್ಮೆ ಅರ್ಜೆಂಟಲ್ಲಿ ಟೆನ್ತ್ ಮುಗಿಸೋಣ ಎಂದು ಅಲ್ಲಿಂದ ವಾಪಾಸಾಗಿದ್ದೆ. ಆದರೆ ಎಸ್ ಎಸ್ ಎಲ್ ಸಿ ಮುಗಿಯುವಷ್ಟರಲ್ಲಿ ನನ್ನ ಆಸಕ್ತಿಯೇ ಬದಲಾಗಿತ್ತು!” ಎಂದರು ಸಂತು.
ಮತ್ತೆ ಭೇಟಿಯಾಗಿದ್ದು ನಿರ್ದೇಶಕನಾಗಿ!
ಹಾಗೆ ಹತ್ತನೇ ತರಗತಿ ಮುಗಿಸಿಕೊಂಡು ವಾಪಾಸು ಬರಬೇಕು ಎಂದುಕೊಂಡಿದ್ದ ನಾನು ಹತ್ತನೇ ಸಿನಿಮಾ ನಿರ್ದೇಶನದ ವೇಳೆ ಹಂಸಲೇಖ ಅವರನ್ನು ಭೇಟಿಯಾಗುತ್ತಿದ್ದೇನೆ. ಇಂದು ಬಿಚ್ಚುಗತ್ತಿಯಂಥ ಐತಿಹಾಸಿಕ ಚಿತ್ರವನ್ನು ಮಾಡುತ್ತಿರಬೇಕಾದರೆ ಅದರಲ್ಲಿ ಹಂಸಲೇಖ ಅವರ ಬೆಂಬಲ ದೊಡ್ಡ ಮಟ್ಟದ್ದು ಎಂದರು ಹರಿ ಸಂತೋಷ್.
ಹಂಸ ಮಾತು
“ಬಿಚ್ಚುಗತ್ತಿ ನಾನು ನಿರ್ದೇಶಿಸಬೇಕು ಎಂದುಕೊಂಡಿದ್ದೆ. ಆದರೆ ನನ್ನ ಕಲ್ಪನೆಯ ಚಿತ್ರಕ್ಕೆ ಬಜೆಟ್ ಹೆಚ್ಚುವುದೆಂದಾಗ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದರು. ಸುಮ್ಮನೆ ತಗಾದೆ ಯಾಕೆಂದು ಹರಿಸಂತುವನ್ನು ನಾನೇ ಸಜೆಸ್ಟ್ ಮಾಡಿದೆ. ಯಾಕೆಂದರೆ ಆತನ ನಿರ್ದೇಶನದಲ್ಲಿ ಯಾವ ಚಿತ್ರವೂ ಅರ್ಧಕ್ಕೆ ನಿಂತ ಉದಾಹರಣೆ ಇಲ್ಲ ಎಂದು ಕೇಳಿದ್ದೆ. ಈ ಚಿತ್ರಕ್ಕೆ ನಾನು ನಿರ್ದೇಶಕನಾಗಲೀ, ಸಂಗೀತ ನಿರ್ದೇಶಕನಾಗಲೀ ಅಲ್ಲವಾದರೂ ಮಾರ್ಗದರ್ಶಕನಾಗಿದ್ದೇನೆ “ಎಂದರು ಹಂಸಲೇಖ.