‘ಮೌನಂ’ ಟ್ರೇಲರ್ ಬಿಡುಗಡೆಗೊಳಿಸಿದ ದರ್ಶನ್

ದರ್ಶನ್ ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಕಡಿಮೆ ಮಾಡುವ ನಿರ್ಧಾರ ಮಾಡುತ್ತಿರುವುದಾಗಿ ನಿನ್ನೆ ತಾನೇ ಹೇಳಿದ್ದ ಅವರು ಇವತ್ತು ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಸಿಕ್ಕರು. ಅದಕ್ಕೆ ಕಾರಣವಾಗಿದ್ದು, ‘ಮೌನಂ’ ಎನ್ನುವ ಹೆಸರಿನ ಆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಿರುವ ನಟ ಅವಿನಾಶ್ ಅವರು ಎಂದರೆ ತಪ್ಪೇನಲ್ಲ.

“ನಾನು ಇದುವರೆಗೆ ನಟಿಸಿದ ಚಿತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವಿನಾಶ್ ಸರ್ ಜತೆಗೆ ನಟಿಸಿದ್ದೇನೆ. ಅವರ ಚಿತ್ರಕ್ಕೆ ಖಂಡಿತವಾಗಿ ಒಳ್ಳೆಯದಾಗಬೇಕು” ಎಂದಿದ್ದಾರೆ ದರ್ಶನ್.

ನಾಯಕಿ ಮಯೂರಿ , “ಚಿತ್ರದಲ್ಲಿ ನನ್ನದು ಕಾಲೇಜ್ ಹುಡುಗಿಯ ಪಾತ್ರ. ಕಾಲೇಜ್ ಹುಡುಗಿಯ ವಯೋಸಹಜ ಆಸೆಗಳನ್ನು ತೋರಿಸುವಂಥ ಪಾತ್ರ. ನನ್ನ ಮೊದಲ ಸಿನಿಮಾ ‘ಕೃಷ್ಣಲೀಲ’ದಿಂದಲೂ ನನ್ನ ಇದುವರೆಗಿನ ಪ್ರತಿ ಸಿನಿಮಾಗಳಿಗೂ ದರ್ಶನ್ ಅವರು ಆಗಮಿಸಿ ಶುಭ ಕೋರಿದ್ದಾರೆ. ಅವರು ನನ್ನ ಪಾಲಿಗೆ ಅದೃಷ್ಟ ಎಂದೇ ಹೇಳಬಹುದು. ಹಾಗಾಗಿ ಈ ಚಿತ್ರವೂ ಗೆಲ್ಲುವುದು ಖಚಿತ” ಎಂದು ಭರವಸೆ ವ್ಯಕ್ತಪಡಿಸಿದರು. ನಾಯಕ ಬಾಲಾಜಿ “ನನ್ನದು ಒಬ್ಬ ತಲೆಹರಟೆ ಹುಡುಗನ ಪಾತ್ರ. ಚಿತ್ರದಲ್ಲಿ ಆ್ಯಕ್ಷನ್, ಸಾಂಗ್ಸ್ ಚೆನ್ನಾಗಿ ಮೂಡಿ ಬಂದಿದೆ. ಅವಿನಾಶ್ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ” ಎಂದರು.

ಚಿತ್ರದ ನಿರ್ದೇಶಕ ರಾಜ್ ಪಂಡಿತ್ ಮಾತನಾಡಿ, “ಇದು ಹೊರಗಿನ ನಿಶ್ಶಬ್ದ ಮಾತ್ರವಲ್ಲ ಒಳಗಿನ ಮೌನವೂ ಹೌದು. ಅದರಾಚೆ ಚಿತ್ರದ ಬಗ್ಗೆ ಥಿಯೇಟರಲ್ಲೇ ನೋಡಿ” ಎಂದರು. “ಅವಿನಾಶ್ ಅವರಿಗೆ ನಾಲ್ಕು ವರ್ಷದ ಹಿಂದೆ ‘ಲೆಸನ್ ಟು ಗಾಡ್’ ಎನ್ನುವ ಒಂದು ಕಿರುಚಿತ್ರದ ಕತೆ ಹೇಳಲು ಹೋಗಿದ್ದೆ. ತಮ್ಮ ಬ್ಯುಸಿ ಟೈಮ್ ನಲ್ಲಿ ಕೂಡ ಅವರು ಕಾಲ್ಷೀಟ್ ಕೊಟ್ಟಿದ್ದು ಮಾತ್ರವಲ್ಲ ಒಂದು ರೂಪಾಯಿ ಸಂಭಾವನೆ ಕೂಡ ತೆಗೆದುಕೊಂಡಿರಲಿಲ್ಲ. ಅವರ ಸ್ನೇಹವೇ ಅವರಿಗಾಗಿಯೇ ಈ ಕತೆ ತಯಾರು ಮಾಡಲು ಪ್ರೇರೇಪಿಸಿತು. ಮಯೂರಿಯವರು ಕೂಡ ಕತೆ ಇಷ್ಟಪಟ್ಟು ಚಿತ್ರದಲ್ಲಿ ಕಡಿಮೆ ಸಂಭಾವನೆಗೆ ನಟಿಸಲು ಒಪ್ಪಿಕೊಂಡರು” ಎಂದು ಪ್ರಶಂಸಿಸಿದರು. ನಿರ್ಮಾಪಕ ಶ್ರೀಹರಿ ಮಾತನಾಡಿ, “ನಾನು ಬಾಲ್ಯದಲ್ಲಿ ತಂದೆತಾಯಿಯ ಮಾತು ಕೇಳುತ್ತಿರಲಿಲ್ಲ. ಅದರೆ ಈಗ ಅದು ಎಷ್ಟು ದೊಡ್ಡ ತಪ್ಪು ಎಂದು ಅರಿವಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ತಂದೆ ಮಗನ ಸೆಂಟಿಮೆಂಟ್ ನನಗೂ ಆಪ್ತವೆನಿಸಿದೆ” ಎಂದರು.
.
‘ಕಾಮಿಡಿ ಕಿಲಾಡಿ’ ರಿಯಾಲಿಟಿ ಶೋ ಖ್ಯಾತಿಯ ನಯನಾ ಮಾತನಾಡಿ “ನಾಯಕಿಯ ಮನೆಹಾಳಿ ಗೆಳತಿಯ ಪಾತ್ರ ನನ್ನದು” ಎಂದು ನಕ್ಕರು. ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಆಟೋ ಚಾಲಕ ಆಕಾಶ್, ಡಿಟಿಎಸ್ ಇಂಜಿನಿಯರ್ ಪಳನಿ‌ ಡಿ ಸೇನಾಪತಿ, ಸಂಗೀತ ನಿರ್ದೇಶಕ ಆರವ್ ರಿಷಿಕ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ಸಮಾರಂಭದಲ್ಲಿ ಅಂಧಗಾಯಕರೊಬ್ಬರು ದರ್ಶನ್ ಅವರ ‘ನಮ ಪ್ರೀತಿಯ ರಾಮು’ ಚಿತ್ರದ ಹಾಡು ಹಾಡಿ, ‘ಯಜಮಾನ’ ಚಿತ್ರದ ಸಂಭಾಷಣೆಗಳನ್ನು ‌ಹೇಳಿದ್ದು ವಿಶೇಷವಾಗಿತ್ತು. ದರ್ಶನ್ ಅವರ ಸಮ್ಮುಖದಲ್ಲಿ ಚಿತ್ರದ ನಿರ್ಮಾಪಕರು ಆ ಅಂಧರ ವಿದ್ಯಾಭ್ಯಾಸದ ಅಗತ್ಯಕ್ಕೆ ಬೇಕಾದ ಸಣ್ಣದೊಂದು ಮೊತ್ತವನ್ನು ಕೊಡುಗೆಯಾಗಿ ನೀಡಿದರು. ನಾಯಕ ಬಾಲಾಜಿ ಮ ನೃತ್ಯ ಕಲಾವಿದರು. ದರ್ಶನ್ ‌ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

Recommended For You

Leave a Reply

error: Content is protected !!