ರವಿತೇಜಾ ನಿರ್ದೇಶನದ ಎರಡನೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ‘ಸಾಗುತ ದೂರ ದೂರ’.
ರಾಗಿಣಿಯಿಂದ ಧ್ವನಿ ಸಾಂದ್ರಿಕೆ ಲೋಕಾರ್ಪಣೆ
ಚಿತ್ರದ ಮೊದಲ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆಗೊಳಿಸಿದ್ದರು. ಇದೀಗ ಎರಡನೇ ಟ್ರೇಲರ್ ಜತೆಗೆ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಜನಪ್ರಿಯ ತಾರೆ ರಾಗಿಣಿ ಬಿಡುಗಡೆಗೊಳಿಸಿದ್ದಾರೆ. “ಕಳೆದ ವರ್ಷ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಗೆದ್ದವುಗಳು ಬೆರಳೆಣಿಕೆಯ ಸಿನಿಮಾಗಳು. ಹಾಗಂತ ಸೋತವುಗಳೆಲ್ಲ ಕೆಟ್ಟ ಸಿನಿಮಾ ಎಂದು ಹೇಳಲಾಗದು. ಒಳ್ಳೆಯ ಕಂಟೆಂಟ್ ಇದ್ದರೂನು ಕೆಲವು ಚಿತ್ರಗಳು ಜನರನ್ನು ತಲುಪುತ್ತಿಲ್ಲ. ಆದರೆ ಈ ಚಿತ್ರದ ಟ್ರೇಲರ್ ನೋಡಿದರೆ ಚೆನ್ನಾಗಿದೆ ಅನಿಸುತ್ತಿದೆ. ಖಂಡಿತವಾಗಿ ಜನ ನೋಡಿ ಪ್ರೋತ್ಸಾಹಿಸುವಂತಾಗಲಿ” ಎಂದು ರಾಗಿಣಿ ಹಾರೈಸಿದರು.
“ನಿರ್ದೇಶಕ ರವಿತೇಜ ಅವರು ನನ್ನಲ್ಲಿ ಕತೆ ಹೇಳುವಾಗ ಇದು ತಾಯಿ ಪ್ರೀತಿಯ ಸಿನಿಮಾ ಎಂದು ಗೊತ್ತಾಯಿತು. ನನಗೆ ಮೊದಲೇ ತಾಯಿ ಸೆಂಟಿಮೆಂಟ್ ಹೆಚ್ಚು. ಹಾಗಾಗಿ ಸಿನಿಮಾ ಮಾಡುವಂತೆ ಪತ್ನಿ ಕೂಡ ಒತ್ತಾಯಿಸಿದಳು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ” ಎಂದರು ನಿರ್ಮಾಪಕ ಅಮಿತ್.
ಇದೇ ಕೊನೆಯ ಪ್ರಯತ್ನ
ನಿರ್ದೇಶಕ ರವಿತೇಜ ಈಗಾಗಲೇ ‘ಜಾತ್ರೆ’ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಅವರ ಮಗ ಆಶಿಕ್ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದೇನೆ. ವೈಯಕ್ತಿಕವಾಗಿಯೂ ಹಲವಾರು ನಷ್ಟ ಅನುಭವಿಸಿದ್ದೇನೆ. ಈಗಾಗಲೇ ಸಿನಿಮಾ ಬಿಟ್ಟು ಊರಿಗೆ ಬಂದು ಹೊಲದ ಕೆಲಸ ಮಾಡುವಂತೆ ಆಹ್ವಾನಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರ ಏನಾದರೂ ಓಡದೇ ಹೋದರೆ, ನಾನು ಚಿತ್ರೋದ್ಯಮ ತೊರೆಯುವುದು ಖಚಿತ” ಎಂದರು.
ಚಿತ್ರ ರವಿತೇಜನನ್ನು ಇಲ್ಲೇ ಉಳಿಸುತ್ತದೆ!
ಬಳಿಕ ಮಾತನಾಡಿದ ಹಿರಿಯ ನಟಿ ಉಷಾ ಭಂಡಾರಿ, “ಈ ಚಿತ್ರದಲ್ಲಿ ನನ್ನ ಶಿಷ್ಯಂದಿರೇ ಏಳು ಜನ ಮಾಡಿದ್ದಾರೆ. ಎಲ್ಲರಿಗೂ ಶುಭವಾಗುತ್ತದೆ. ಚಿತ್ರದ ಮೂಲಕ ನಿರ್ಮಾಪಕರಿಗೆ ಲಾಭ ಮತ್ತು ನಿರ್ದೇಶಕ ರವಿತೇಜನಿಗೆ ಬ್ರೇಕ್ ಸಿಗುತ್ತದೆ ಎಂದುಕೊಂಡಿದ್ದೇನೆ. ಯಾಕೆಂದರೆ ಇದು ತಾಯಿ ಪ್ರೀತಿಯನ್ನಷ್ಟೇ ಕೇಂದ್ರೀಕರಿಸಿರುವ ಚಿತ್ರವಲ್ಲ. ಎಲ್ಲ ಹೆಣ್ಣುಮಕ್ಕಳೊಳಗಿನ ಪ್ರೀತಿ ಕೂಡ ಇಲ್ಲಿದೆ. ಹೆಣ್ಣಿನ ಒಳ್ಳೆಯತನದ ಬಗ್ಗೆ ಹೇಳಿದ ಚಿತ್ರ ಸೋಲದೆಂಬ ಆಶಾವಾದ ನನ್ನದು” ಎಂದರು.
ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಗಳಾಗಿ ದೀಕ್ಷಿತ್, ಮಹೇಶ್, ಅಪೇಕ್ಷಾ ಪುರೋಹಿತ್, ಜಾಹ್ನವಿ ಜ್ಯೋತಿ, ಆರತಿ ಮೊದಲಾದವರು ನಟಿಸಿದ್ದು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಹರಿ ಸಂಸ್ಥೆಯ ವೇಲು ಅವರು ಚಿತ್ರಕ್ಕೆ ಶುಭ ಕೋರಿದರು.