ಪ್ರೇಕ್ಷಕನ ನಿಷ್ಠೆ ಸಿನಿಮಾಗಿರಲಿ.. ಸ್ಟಾರ್ ಗಿರಿಗಲ್ಲ
“ನಾನು ಮತ್ತು ಗುಂಡ” ವಿದೇಶಿ ಚಿತ್ರ ಹಚಿ- ಎ ಡಾಗ್ಸ್ ಟೇಲ್ ಚಿತ್ರದ ರೀಮೇಕು. ಮೊನ್ನೆ ಬಿಡುಗಡೆಯಾಗಿರುವ ‘ಡಿಂಗ’ ಕೂಡ ಅದೇ ಚಿತ್ರದ ಸ್ಫೂರ್ತಿಯಲ್ಲಾದ ಚಿತ್ರ. ಕನ್ನಡದಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಒಂದೇ ಚಿತ್ರವನ್ನು ಕತೆಯನ್ನು ಎತ್ತಿಕೊಂಡು ತಮ್ಮ ತಮ್ಮ ಶೈಲಿಯಲ್ಲಿ ಚಿತ್ರಕಥೆ ಮಾಡಿದ ಹಲವು ಉದಾಹರಣೆ ಇದೆ. ಕೆಲವರು ಅಫಿಷಿಯಲ್ ರೀಮೇಕ್ ಅಂತ ಮಾಡಿದರೆ ಇನ್ನು ಕೆಲವರು ತಮ್ಮದೇ ಕಥೆ ಅಂತ ಹೇಳಿಕೊಂಡು ಆಮೇಲೆ ಬೆತ್ತಲಾಗುತ್ತಾರೆ.
ಹಿಂದೆ ಕೂಡ ಹೀಗೆ ಆಗಿತ್ತು
ಕನ್ನಡದಲ್ಲಿ ‘ಸಿಂಹಾದ್ರಿಯ ಸಿಂಹ’ ಮತ್ತು ‘ಪಾಳೇಗಾರ’ ಎರಡೂ ತಮಿಳಿನ ‘ನಾಟ್ಟಾಮೈ’ ಚಿತ್ರದ ರೀಮೇಕ್ ಗಳೇ. ಒಂದು ಅಫಿಷಿಯಲ್ ಇನ್ನೊಂದು ಅನ್ ಅಫಿಶಿಯಲ್. ‘ಸಕಲಕಲಾವಲ್ಲಭ’ ಅನ್ನೋ ಶಶಿಕುಮಾರ್ ಚಿತ್ರವೂ ‘ನಂ.73 ಶಾಂತಿನಿವಾಸ’ ಎಂಬ ಸುದೀಪ್ ಚಿತ್ರವೂ ಡಿಟ್ಟೋ ಡಿಟ್ಟೋ. ಎರಡೂ ‘ಬಾವರ್ಚಿ’ ಚಿತ್ರದ ರೀಮೇಕುಗಳು. ಜಗ್ಗೇಶ್ ರ ‘ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಹಾಗೂ ಪ್ರೇಮಾ ಅಭಿನಯದ ‘ಆನಂದನಿಲಯ’ ಮಲಯಾಳಮ್ಮಿನ ಒಂದೇ ಚಿತ್ರದ ಸರಕು. ಹಿಂದಿಯಲ್ಲಿ ಯೇ ತೇರಾ ಘರ್ ಯೇ ಮೇರಾ ಘರ್ ಅಂತೇನೋ ಬಂದಿತ್ತು. ದಾಸವಾಳ, ಕೌನ್ ಬನೇಗಾ ಕೋಟ್ಯಾಧಿಪತಿ, ಡೈರೆಕ್ಟರ್ ಸ್ಪೆಷಲ್ ಈ ಮೂರೂ ಒಂದೇ ಚಿತ್ರದ ನಕಲುಗಳು. ಎಲ್ಲರೂ ತಾವೇ ಕೂತು ಸೃಷ್ಟಿಸಿದ ಕಥೆ ಎಂಬಂತೆ ಮಾಡಿದರು! ಇಂಥದ್ದು ಕನಿಷ್ಠ ಅಂದ್ರೂ ನೂರಕ್ಕೂ ಹೆಚ್ಚು ನಿದರ್ಶನಗಳು ಸಿಗಬಹುದೇನೋ.
ಇವುಗಳಲ್ಲಿ ಪ್ರಚಾರ, ಗಿಮಿಕ್ಕು, ಸ್ಟಾರ್ ಕ್ಯಾಸ್ಟು ಇದ್ದ ಚಿತ್ರವು ಯಾಮಾರಿಸಿ ಓಪನಿಂಗ್ ತಗೊಂಡು ಬಿಡ್ತವೆ. ನಂತರ ಈ ರೀಮೇಕನ್ನು ಒರಿಜಿನಲ್ಲಷ್ಟೇ ಅಥವಾ ಅದಕ್ಕಿಂತ ಚೆನ್ನಾಗಿ ಮಾಡಿದವರು ಗೆಲ್ಲುತ್ತಾರೆ.
‘ಚಾರ್ಲಿ’ ಕೂಡ ಕದ್ದ ಮಾಲೇನ?
ಈಗ ಸದ್ಯದಲ್ಲಿ ತೆರೆಕಾಣಲು ಸಿದ್ಧವಾಗುತ್ತಿರುವ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಚಿತ್ರವೂ ಇದೇ ಹಚಿ- ನಾಯಿ ಕಥೆಯ ರೀಮೇಕ್ ಇರಬಹುದಾ ಎಂಬ ಅನುಮಾನ ಕಾಡಲಾರಂಭಿಸಿದೆ. ರಕ್ಷಿತ್ ಶೆಟ್ಟಿ ಒರಿಜಿನಲ್ ಚಿತ್ರದ ತಲೆ ಮೇಲೆ ಹೊಡೆದಂತೆ ರೀಮೇಕ್/ರಿಮಿಕ್ಸ್ ಮಾಡುವುದನ್ನು ನಾವು ಕಿರಿಕ್ ಪಾರ್ಟಿ, ‘ಉಳಿದವರು ಕಂಡಂತೆ’ ಹಾಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಗಮನಿಸಿದ್ದೇವೆ. ಇಡಿಇಡಿಯಾಗಿ ಯಾವ ಸಿನಿಮಾವನ್ನೂ ರಕ್ಷಿತ್ ಎತ್ತುವುದಿಲ್ಲ. ಆದರೆ ದೃಶ್ಯ, ಪಾತ್ರ, ಸಂಗೀತ, ಮ್ಯಾನರಿಸಮ್ಸ್ ಇನ್ನಿತರ ವಿಚಾರಗಳನ್ನು ಮುಲಾಜಿಲ್ಲದೆ ತಮಗಿಷ್ಟದ, ತಮ್ಮ ಚಿತ್ರಕ್ಕೆ ಸೂಟಾಗುವ, ಚಿತ್ರಗಳಿಂದ ಎತ್ತಿಕೊಂಡು ಬಿಡುತ್ತಾರೆ. ಚಾರ್ಲಿಯು ಕಿರಣ್ ರಾಜ್ ಎಂಬ ಯುವನಿರ್ದೇಶಕನ ಚೊಚ್ಚಲ ಫುಲ್ ಸೈಜ್ ಚಿತ್ರವೇ ಆದರೂ ಅದು ರಕ್ಷಿತ್ ಶೆಟ್ಟಿ ಚಿತ್ರ ಅಂತಲೇ ಕರೆಸಿಕೊಳ್ಳುತ್ತದೆ. ರಕ್ಷಿತ್ ರಿಂದಲೇ ಹೆಚ್ಚಿನ ಕೆಲಸವೂ ನಡೆದಿರುತ್ತದೆ. ಇದೂ ಹಚಿಕೋ ಚಿತ್ರದ ರೀಮೇಕೇ ಆದರೂ ಒಂದು ದೊಡ್ಡ ವರ್ಗದ ಪ್ರೇಕ್ಷಕ ಸಮೂಹ, ಅವನ್ನೆಲ್ಲ ಮಾತಾಡೋದಿಲ್ಲ. ಇತರರಿಗೂ ಮಾತಾಡಲು ಬಿಡುವುದಿಲ್ಲ.
ಇಂಡಸ್ಟ್ರಿ ನೆಕ್ಸ್ಟ್ ಲೆವೆಲ್ ಗೆ ಕರ್ಕೊಂಡ್ ಹೋಗ್ತಿರೋ ಸಿನಿಮಾ, ಅಬ್ಬಾ ಎಂಥಾ ಮೂವೀ.. ಕನ್ನಡ ಇಂಡಸ್ಟ್ರಿ ಕಡೆ ಫಾರಿನವ್ರು ತಿರುಗಿ ನೋಡೋ ಹಾಗ್ ಮಾಡೋ ಸಿನಿಮಾ, ಪಕ್ಕಾ ಆಸ್ಕರ್ ಅವಾರ್ಡ್ ಗೆ ಹೋಗ್ಬೇಕ್, ಹಿಂಗೆಲ್ಲ ಮಾತಾಡಿ ಭರ್ಜರಿ ಓಪನಿಂಗ್ ಕೊಟ್ಟು ಹಿಟ್ ಮಾಡಿಬಿಡ್ತಾರೆ. ಟಿವಿ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗತ್ತೆ. ಅಮೇಜಾನ್ ನೆಟ್ ಫ್ಲಿಕ್ಸ್ ಅವ್ರು ಹಣ ಕೊಟ್ಟು ಕೊಂಡ್ಕೋತಾರೆ. ಇದರ ಬಗ್ಗೆ ವಸ್ತುನಿಷ್ಠವಾಗಿ ಮಾತಾಡುವ ಅವಕಾಶ ಹಾಗೂ ಧೈರ್ಯ ಒಬ್ಬ ರಿಯಲ್ ಪ್ರೇಕ್ಷಕನಿಗೆ ಬರೋದು ಇಷ್ಟೆಲ್ಲ ಆಗಿ ಸಿನಿಮಾ ಸೆಟ್ಲ್ ಆದಮೇಲೆ. ಮೊದಲೇ ಮಾತಾಡಿದ್ರೆ ಕೊಲೆಯೇ. ಇಡೀ ದೇಹದ ಜೀವತೆಗೀದೇ ಹೋದ್ರೂ ಬಾಯಿಯನ್ನಂತೂ ಸಾಯಿಸುತ್ತಾರೆ.
ಕದ್ದರೂ ದೊಡ್ಡವರೇ ಕದಿಯಬೇಕು!
ನಾನು ಮತ್ತು ಗುಂಡ ಥರದ ಚಿತ್ರ ಪ್ರಚಾರದ ಕೊರತೆಯಿಂದ, ಥಿಯೇಟರ್ ಕೊರತೆ ಸಮಸ್ಯೆಯಿಂದ ಬಂದಿದ್ದೂ ಗೊತ್ತಾಗೋದಿಲ್ಲ ಹೋಗಿದ್ದೂ ಗೊತ್ತಾಗೋದಿಲ್ಲ. ನೋಡಿ ಬಂದವರು ಆ ಚಿತ್ರವನ್ನು ರೆಕಮೆಂಡ್ ಮಾಡಿದರೂ ನೂರೆಂಟ್ ಪ್ರಶ್ನೆ ಕೇಳಿ ಸುಮ್ಮನಾಗುತ್ತಾರೆಯೇ ವಿನಾ, ನೋಡುವ ಮನಸ್ಸೇ ಮಾಡೋದಿಲ್ಲ. ಅದೇ ಒಬ್ಬ ಸ್ಟಾರ್ ಚಿತ್ರವನ್ನು ಅಥವಾ ಹೈಪ್ ಇರೋ ಚಿತ್ರವನ್ನು ತುಂಬ ಬ್ಲೈಂಡ್ ಆಗಿ ನೋಡಿ ಬರುತ್ತಾರೆ. ಸಮೂಹ ಸನ್ನಿಗೆ ಒಳಗಾದಂತೆ ಅಥವಾ ಫ್ಯಾನ್ಸ್/ಇನ್ನಿತರ ಶಕ್ತಿಗಳ ಬಯ್ಗುಳಕ್ಕೆ ಹೆದರಿ ಹೊಗಳುತ್ತಾರೆ. ಹೊಗಳದಿದ್ದರೆ ನಮಗೆ ಸಿನಿಮಾ ಟೇಸ್ಟ್ ಇಲ್ಲ, ನೋಡೋಕೆ ಬರಲ್ಲ, ಅಪ್ಡೇಟ್ ಆಗಿಲ್ಲ, ಅರ್ಥ ಆಗಲ್ಲ ಅಂತೆಲ್ಲ ಬ್ರ್ಯಾಂಡ್ ಮಾಡ್ತಾರೆ ಅನ್ನೋ ಭಯ ಕೂಡ ಕಾಡುವಂತೆ ಮಾಡಿಬಿಟ್ಟಿದ್ದಾರೆ ಒಂದು ಸಮೂಹ.
ಇಂಡಸ್ಟ್ರಿ ಅಳಿವು ಉಳಿವು ಈ ಸಿನಿಮಾದ ಮೇಲೆ ನಿಂತಿದೆ. ತಮ್ಮ ಹೊಗಳಿಕೆ ಇನ್ನೊಬ್ಬರ ತೆಗಳಿಕೆ ಮೇಲೆಯೇ ಅವಲಂಬಿತವಾಗಿದೆ ಎಂಬಂಥ ಹುಚ್ಚು ಯೋಚನೆಗಳು! ಸ್ಟಾರ್ ಸಿನಿಮಾಗಳನ್ನು, ದೊಡ್ಡ ಸಿನಿಮಾಗಳನ್ನು ನಾವೇ ಹೋಗಿ ಗೆಲ್ಲಿಸಬೇಕಿಲ್ಲ. ಅವುಗಳ ಬಗ್ಗೆ ಸತ್ಯ ತಿಳ್ಕೊಳೋಷ್ಟು ಟೈಮ್ ಇರತ್ತೆ. ಆದರೆ ಹೊಸಬರ ಪ್ರಚಾರ ಕಮ್ಮಿ ಇರುವ ಒಳ್ಳೆಯ ಚಿತ್ರಗಳಿಗೆ ಅಷ್ಟು ಟೈಮ್ ಇರಲ್ಲ. ಮೊದಲ ದಿನ ಪ್ರೇಕ್ಷಕ ಕಮ್ಮಿ ಇದ್ದ ಅಂದ್ರೆ ಅವತ್ತೇ ಎತ್ತಂಗಡಿ ಆಗತ್ತೆ. ಇಂಥ ಚಿತ್ರಕ್ಕೆ ಪ್ರೇಕ್ಷಕ ಬೆಂಬಲ ನೀಡೋದೇ ಇಲ್ಲ.
ಗುಂಡ ಚೆನ್ನಾಗಿದೆ. ಡಿಂಗ ಚೆನ್ನಾಗಿಲ್ಲ. ಚಾರ್ಲಿ ಇದರದ್ದೇ ರೀಮೇಕೋ ಒರಿಜಿನಲ್ಲೋ ಬಂದಮೇಲೆಯೇ ಗೊತ್ತಾಗೋದು. ಆದರೆ ಪ್ರೇಕ್ಷಕ ಎಷ್ಟು ಕರಪ್ಟ್ ಆಗಿದ್ದಾನೆ, ಸೆಲೆಕ್ಟಿವ್ ಸೋಂಬೇರಿ ಆಗಿದ್ದಾನೆ. ತನ್ನ ಸ್ವಂತ ಮನರಂಜನೆ ವಿಚಾರದಲ್ಲೂ ಕರಪ್ಟ್ ಆಗಿದ್ದಾನೆ, ಬಕೆಟ್ ಆಗಿದ್ದಾನೆ ಅಂತ ಅಚ್ಚರಿ ಆಗುತ್ತದೆ. ಪ್ರೇಕ್ಷಕ ಸಿನಿಮಾವನ್ನು ಮೊದಲು ಪ್ರೇಕ್ಷಕನಾಗಿ ನೋಡಬೇಕು.. ನಂತರ ಕ್ರಿಟಿಕ್ ಆಗಬೇಕು.. ಆನಂತರ ಅದರ ಆಧಾರದ ಮೇಲೆ ಫ್ರೀ ಮಾರ್ಕೆಟಿಂಗ್ ಮಾಡಲಿ ಒಳ್ಳೆಯದು. ಆದರೆ ಇಲ್ಲಿ ಪ್ರೇಕ್ಷಕ ಪ್ರತಿ ಸಿನಿಮಾವನ್ನೂ ಮೊದಲು ನಿರ್ಮಾಪಕನಾಗಿ, ಹೀರೋ ಫ್ರೆಂಡ್ ಆಗಿ, ಮಾರ್ಕೆಟಿಂಗ್ ಪರ್ಸನ್ ಆಗಿ ನೋಡುತ್ತಿದ್ದಾನೆ. ಪ್ರೇಕ್ಷಕನಾಗಿಯೂ ನೋಡ್ತಿಲ್ಲ. ಪ್ರೇಕ್ಷಕನಾಗಿ ನೋಡದವನು ಕ್ರಿಟಿಕ್ ಆಗಲಾದರೂ ಹೇಗೆ ಸಾಧ್ಯ. ಆದರೂ ಎಲ್ಲರಿಗೂ ವಿಮರ್ಶೆ ಬರೆಯೋ ಚಟ. ಅದನ್ನು ತಮ್ಮ ಅನಿಸಿಕೆ ಅಂತಲೂ ಬರೆಯೋದಿಲ್ಲ. ಹೆಚ್ಚು ಸ್ಟಾರ್ ಕೊಟ್ಟು ದೊಡ್ಡ ಸ್ಟಾರ್ ಗಳನ್ನು ಟ್ಯಾಗ್ ಮಾಡೋದು!
ಕೆಟ್ಟ ಚಿತ್ರಗಳು ಗೆಲ್ಲೋದು ಕೆಟ್ಟ ಪ್ರೇಕ್ಷಕನಿಂದ ಮಾತ್ರ. ಒಳ್ಳೆಯ ಚಿತ್ರಗಳೂ ಸೋಲುವುದು ಕೆಟ್ಟ ಪ್ರೇಕ್ಷಕನಿಂದ ಮಾತ್ರ. ಬದಲಾಗಬೇಕಿರೋದು ಪ್ರೇಕ್ಷಕ. ಪ್ರೇಕ್ಷಕ ಪ್ರಾಮಾಣಿಕನಾಗಬೇಕಿದೆ.
(ಇಲ್ಲಿ ಚಾರ್ಲಿ ವಿಚಾರ ಮಾತಾಡಿದ್ದನ್ನು ಅನ್ಯಥಾ ಭಾವಿಸಿ ರಕ್ಷಿತ್ ಶೆಟ್ಟಿ ಮೇಲಿನ ಉರಿಗೆ ಬರೆದ ಬರಹ ಅಂತೆಲ್ಲ ಭಾವಿಸಿದರೆ ನಿಮ್ಮಿಷ್ಟ. ನಾನು ರಕ್ಷಿತ್ ಶೆಟ್ಟಿ ಮೇಲಿನ ಪ್ರೀತಿ ಗೌರವವನ್ನು ಅಂಥ ಕಮೆಂಟಿಗರಿಗೆ ಪ್ರೂವ್ ಮಾಡುವ ಅಗತ್ಯ ಇಲ್ಲ )
ಲೇಖಕರು: ನವೀನ್ ಸಾಗರ್