ಮೇಡಮ್ ಟುಸ್ಸಾಡ್ ನಲ್ಲಿ ಡಾ.ರಾಜ್ ಪ್ರತಿಮೆ ಯಾಕಿಲ್ಲ? ಹರಿಪ್ರಿಯಾ ಪ್ರಶ್ನೆ

ಲಂಡನ್ ನ ಮೇಡಮ್ ಟುಸ್ಸಾಡ್ ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಸಾಧಕರ ತದ್ರೂಪಿ ಮೇಣದ ಪ್ರತಿಮೆಗಳ ಮೂಲಕ ಜನಪ್ರಿಯವಾಗಿರುವ ಮ್ಯೂಸಿಯಂ ಅದು. ಆದರೆ ಜಗತ್ತಿನ ದಾಖಲೆಗಳಲ್ಲಿರುವಂಥ ನಮ್ಮ ಕನ್ನಡಿಗ ಡಾ.ರಾಜ್ ಅವರ ಪ್ರತಿಮೆ ಯಾಕಿಲ್ಲ? ಇಂಥದೊಂದು ಗಂಭೀರ ಪ್ರಶ್ನೆಯನ್ನು ಜನಪ್ರಿಯ ನಟಿ ಹರಿಪ್ರಿಯಾ ಕೇಳಿದ್ದಾರೆ.

ಚಂದನವನ ಕ್ರಿಟಿಕ್ಸ್ ಅಕಾಡೆಮಿಯ ಲೋಗೋ ಲಾಂಚ್ ಮಾಡಿದ ಬಳಿಕ ಮಾತನಾಡುತ್ತಿದ್ದ ಅವರು ಒಂದು ವಿಚಾರ ಇಲ್ಲಿ ಪ್ರಸ್ತಾಪ ಮಾಡಬಹುದೇ ಎಂದು ವಿಚಾರಿಸಿದ ಬಳಿಕ ಈ ವಿಚಾರದ ಬಗ್ಗೆ ಮಾತನಾಡಿದರು. “ನಮ್ಮ ದೇಶದ ಸಿನಿಮಾರಂಗದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಆದರೆ ನಮ್ಮ ದೇಶದ ಚಿತ್ರರಂಗ ಎನ್ನುವ ವಿಚಾರಕ್ಕೆ ಬಂದಾಗ ಮಾತ್ರ ಹೊರದೇಶದವರು ಬಾಲಿವುಡ್ ಸಿನಿಮಾಗಳನ್ನಷ್ಟೇ ಗುರುತಿಸುವಂತಾಗಿದೆ. ಆದರೆ ನಮ್ಮ ಕನ್ನಡದಲ್ಲಿ ಡಾ.ರಾಜ್ ಕುಮಾರ್ ರಂಥ ಮೇರು ಪ್ರತಿಭೆ ದೇಶದಲ್ಲೇ ಸಾಟಿ ಇರದಂಥ ಸಾಧನೆ ಮಾಡಿದವರು. ಅವರನ್ನು ಸೇರಿಸಿದಂತೆ ಯಾವ ಕನ್ನಡದ ಕಲಾವಿದರಿಗೂ ಅಲ್ಲಿ ಸ್ಥಾನ ನೀಡಿಲ್ಲ. ಅವರ ಗಮನಕ್ಕೆ ನಮ್ಮ ಸಾಧಕರ ಸಾಧನೆಗಳು ಕಾಣುವಂತಾಗಬೇಕು ಆ ನಿಟ್ಟಿನಲ್ಲಿ ನನ್ನಿಂದ ಏನು ಸಹಾಯ ಬೇಕಾದರೂ ಮಾಡಲು ನಾನು ಸಿದ್ಧಳಿದ್ದೇನೆ ಎಂದು ಹರಿಪ್ರಿಯಾ ಹೇಳಿದರು.

ಹರಿಪ್ರಿಯಾ ಅವರ ಮಾತುಗಳಲ್ಲಿ ಸತ್ಯವಿದೆ. ಯಾಕೆಂದರೆ ಡಾ.ರಾಜ್ ಕುಮಾರ್ ಕನ್ನಡಕ್ಕೊಬ್ಬರೇ ಎಂದು ನಾವು ಹೇಳುತ್ತೇವೆ. ಆದರೆ ಅವರು ದೇಶಕ್ಕೊಬ್ಬರೇ ಕಲಾವಿದ ಎನ್ನುವುದನ್ನು ನಮ್ಮ ದೇಶದಲ್ಲಿ ಅವರಿಗಷ್ಟೇ ನೀಡಲಾಗಿರುವ ಯು ಎಸ್ ನ ‘ಕೆಂಟಕಿ ಕರ್ನಲ್ ಅವಾರ್ಡ್’ ತಿಳಿಸುತ್ತದೆ.

ಪ್ರಚಾರ ಬಯಸದ ರಾಜ್ ಕುಮಾರ್

ಡಾ.ರಾಜ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಪರಭಾಷಾ ಸಿನಿಮಾಗಳಲ್ಲಿ ನಟಿಸದವರು. ಅವರ ಪ್ರಥಮ ಚಿತ್ರ ‘ಬೇಡರ ಕಣ್ಣಪ್ಪ’ ಸಿನಿಮಾದ ತೆಲುಗು ರಿಮೇಕ್ ಒಂದನ್ನು ಹೊರತು ಪಡಿಸಿ, ಅವರು ಯಾವುದೇ ಪರಭಾಷಾ ಸಿನಿಮಾಗಳಲ್ಲಿ ನಟಿಸಿಲ್ಲ. ಖುದ್ದು ಅಮಿತಾಬ್ ಬಚ್ಚನ್ ಬಂದು ಕೇಳಿಕೊಂಡರೂ ಅವರು ನಟಿಸಿಲ್ಲ. ಅದಕ್ಕೆ ಕಾರಣ ಕನ್ನಡದ ಅಭಿಮಾನಿಗಳ ನಂಬಿಕೆ, ಒತ್ತಡವೇ ಹೊರತು ಬೇರೆ ಏನೂ ಅಲ್ಲ! ಬಹುಶಃ ಅದು ಅವರು ಅಭಿಮಾನಿಗಳಿಗೆ ನೀಡುತ್ತಿದ್ದಂಥ ಹೃದಯಪೂರ್ವಕ ಸ್ಥಾನ.

ಬಾಯಿ ಮಾತಿನ ಭರವಸೆಯಾಗಿದ್ದರೆ ಅವರು ಅತಿಥಿ ಪಾತ್ರಗಳನ್ನೋ, ಇತರ ಪಾತ್ರಗಳನ್ನೋ ನಿರ್ವಹಿಸಿ ಇಲ್ಲಿಗಿಂತ ಸ್ವಲ್ಪ ಹೆಚ್ಚೇ ಸಂಪಾದಿಸಬಹುದಿತ್ತು. ಅವರೇ ಹೇಳಿಕೊಳ್ಳುತ್ತಿದ್ದಂತೆ ಆರಂಭದ ಕಾಲದಲ್ಲಿ ಅವರಿಗೆ ಸಂಪಾದನೆಯ ಅಗತ್ಯ ತುಂಬಾ ಇತ್ತು. ಆದರೂ ದುರಾಸೆಗೆ ಒಳಗಾಗದ ಅವರ ಶಿಸ್ತು ಒಂದೇ ಅಭಿಮಾನಿಗಳ ಪಾಲಿಗೆ ಅವರನ್ನು ದೈವಾಂಶ ಸಂಭೂತರನ್ನಾಗಿಸಿತು! ಅಭಿಮಾನಿಗಳಲ್ಲಿ ದೇವರನ್ನು ಕಂಡ ಅವರು ಅದಕ್ಕಾಗಿ ಮಾಡಿದ ತ್ಯಾಗ ಅಭಿಮಾನಿಗಿಂತ ಒಂದು ಕೈ ಹೆಚ್ಚೇ ಇರಬಹುದು! ಯಾಕೆಂದರೆ ಇದೇ ವ್ಯಕ್ತಿತ್ವದೊಂದಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಬದುಕಿದ್ದರೆ ಬಹುಶಃ ಈಗಾಗಲೇ ಅಲ್ಲಿ ಒಂದಷ್ಟು ದೇವಾಲಯಗಳೇ ಡಾ.ರಾಜ್ ಹೆಸರಲ್ಲಿ ಇರುತ್ತಿದ್ದವು.

ಕನ್ನಡಿಗರು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಸಾಕಷ್ಟು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಪ್ರವಾಸಕ್ಕೆಂದು ಬರುವ ವಿದೇಶೀಯರು ಕೂಡ ಅವುಗಳನ್ನು ಗಮನಿಸಿಯೇ ಬಗ್ಗೆ ಡಾ.ರಾಜ್ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಅಂಥದ್ದರಲ್ಲಿ ಪ್ರವಾಸಿಗರ ಪ್ರಥಮ ಆಕರ್ಷಕ ತಾಣವಾಗಿರುವ ಲಂಡನ್ ನ ಟುಸ್ಸಾಡ್ ನಲ್ಲೇ ರಾಜ್ ಪ್ರತಿಮೆ ಇದ್ದರೆ ಅವರ ಇತಿಹಾಸ ಕೂಡ ವಿದೇಶಿಗರ ಮನದೊಳಗೆ ಶಾಶ್ವತವಾಗಿ ಸೇರಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಮಾಹಿತಿಯ ಕೊರತೆ

ಇತ್ತೀಚೆಗೆ ಪದ್ಮಶ್ರೀಗಳು ಬಾಲಿವುಡ್ ಕಲಾವಿದರಿಗಷ್ಟೇ ಸೀಮಿತವಾಗುತ್ತಿರುವ ಬಗ್ಗೆ ಒಂದಷ್ಟು ಚರ್ಚೆಗಳು ನಡೆದಿದ್ದವು. ನಮ್ಮ ಕನ್ನಡದ ಕಲಾವಿದರ ವೃತ್ತಿ ಬದುಕಿನ ಅನುಭವದಷ್ಟು ಕೂಡ ವಯಸ್ಸು ಹೊಂದಿರದ ನಟರಿಗೆ ಅಲ್ಲಿ ಪದ್ಮ ಶ್ರೀ ಘೋಷಿಸಲಾಗುತ್ತಿದೆ. ಆದರೆ ಟುಸ್ಸಾಡ್ ನ ಆಯ್ಕೆಗಳು ಕೂಡ ಹಾಗೆ ಆಗಲು ಕಾರಣ ರಾಜಕೀಯವಲ್ಲ. ಅವರಿಗೆ ಮಾಹಿತಿಯ ಕೊರತೆ ಇದೆ. ಆ ಕೊರತೆ ನೀಗಿದೊಡನೆ ಅಲ್ಲಿ ಡಾ. ರಾಜ್ ಅವರ ಮೇಣದ ಪ್ರತಿಮೆ ಬರುವುದು ನಿಶ್ಚಯ.

Recommended For You

Leave a Reply

error: Content is protected !!