ನಾವೆಲ್ಲ ಕನಕದಾಸರನ್ನು ದಾಸ ಪದಗಳ ಮೂಲಕ ಕೃತಿಕಾರಾಗಿ, ಕಾಗಿನೆಲೆ ಕೇಶವನ ಭಕ್ತನಾಗಿ, ಧರ್ಮ, ಸಮಾಜದ ಶ್ರೇಯೋಭಿಲಾಷಿಯಾಗಿ ಅರಿತಿದ್ದೇವೆ. ಆದರೆ ಪ್ರೇಮಕವಿಯಾಗಿ ತಿಳಿದವರು ಕಡಿಮೆ. ಅದು ಕನಕದಾಸನಾಗುವುದಕ್ಕೂ ಪೂರ್ವಾಶ್ರಮದ ವಿಚಾರ. ಆಗ ಆತ ರಚಿಸಿದ ಪ್ರೇಮಕಾವ್ಯವೇ ಮೋಹನ ತರಂಗಿಣಿ. ಅಂಥ ‘ಮೋಹನ ತರಂಗಿಣಿ’ಯನ್ನು ಆಧಾರವಾಗಿಟ್ಟುಕೊಂಡು ಖ್ಯಾತ ಬರಹಗಾರರಾದ ಬೇಲೂರು ರಘುನಂದನ್ ಅವರು ಅದೇ ಹೆಸರಲ್ಲಿಯೇ ನಾಟಕವೊಂದನ್ನು ರಚಿಸಿದ್ದಾರೆ. ಈ ಕೃತಿಯನ್ನು ಖ್ಯಾತ ರಂಗಭೂಮಿ ಪ್ರತಿಭೆ ಕೃಷ್ಣಮೂರ್ತಿ ಕವತ್ತಾರು ಅವರ ನಿರ್ದೇಶಿಸಿದ್ದಾರೆ. ನಾಟಕದ ಪ್ರಥಮ ಪ್ರದರ್ಶನ ಬೆಂಗಳೂರಿನ ಕೆ.ಎಚ್ ಕಲಾಸೌಧದಲ್ಲಿ ನೆರವೇರಿತು. ಅದರದೊಂದು ಸಣ್ಣ ಪರಾಮರ್ಶೆ ಇಲ್ಲಿದೆ.
ಕತೆಯ ಸಾರಾಂಶ
ನಾಟಕದ ಪರಾಮರ್ಶೆಗೂ ಮೊದಲು `ಮೋಹನ ತರಂಗಿಣಿ’ಯ ಕಥಾಸಾರವೇನು ಎನ್ನುವುದನ್ನು ಇಲ್ಲಿ ಚಿಕ್ಕದಾಗಿ ನೀಡಿದ್ದೇವೆ. ನೀವು ನಾಟಕ ನೋಡುವುದಾದರೂ, ಅಥವಾ ಹೇಗಿತ್ತು ಎಂದು ಅರಿಯುವುದಕ್ಕಾದರೂ ಮೊದಲು ಈ ಸಾರಾಂಶ ಅರಿತುಕೊಂಡಿದ್ದರೆ ಚೆನ್ನಾಗಿರುತ್ತದೆ.
ಕನಕ ತನ್ನ ಪ್ರೇಯಸಿ ವದೂಟಿಗೆ ಪುರಾಣದ ಪ್ರೇಮಕತೆಗಳನ್ನು ಹೇಳುತ್ತಾನೆ. ಆ ಪ್ರಕಾರ ಶ್ರೀಕೃಷ್ಣ ಮತ್ತು ರುಕ್ಮಿಣಿಗೆ ಮಗುವೊಂದು ಜನಿಸುತ್ತದೆ. ಅದರ ಹೆಸರು ಪ್ರದ್ಯುಮ್ನ. ಆದರೆ ರುಕ್ಮಿಣಿಯ ಮಗುವಿನಿಂದ ಸಾವು ಇದೆ ಎನ್ನುವುದನ್ನು ಅರಿತ ಶಂಭರಾಸುರ ಆ ಮಗುವನ್ನು ಕದ್ದು ಹೊಳೆಗೆ ಎಸೆಯುತ್ತಾನೆ. ಇತ್ತಕಡೆ ತಾರಕಾಸುರನ ವಧೆಗಾಗಿ ಶಿವನನ್ನು ಎಚ್ಚರಿಸಬೇಕಿರುತ್ತದೆ. ಆಗ ಕೃಷ್ಣನ ಪುತ್ರ ಎಂದು ಕರೆಸಲ್ಪಡುವ ಕಾಮನ ತಪೋ ನಿರತ ಶಿವನನ್ನು ಹೂಬಾಣದ ಮೂಲಕ ಎಬ್ಬಿಸುತ್ತಾನೆ. ಆಗ ಎಚ್ಚರಗೊಂಡ ಶಿವನು ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಅನಂಗನಾಗಿಸುತ್ತಾನೆ. ಆದರೆ ರತಿ ಮತ್ತೆ ಮನ್ಮಥನನ್ನು ಪಡೆಯಬೇಕೆಂದು ಶೋಕಿಸುತ್ತಿರುತ್ತಾಳೆ. ಆಕೆ ಶಂಭರಾಸುರ ಎನ್ನುವ ರಾಜನ ಅರಮನೆಯ ಅಡುಗೆಯವಳಾಗುತ್ತಾಳೆ.
ಈ ಸಂದರ್ಭದಲ್ಲಿ ಆಕೆಗೆ ಶಂಭರಾಸುರ ಹೊಳೆಗೆ ಎಸೆದ ಮಗು ಮೀನಿನ ಹೊಟ್ಟೆಯಿಂದ ಜೀವಂತವಾಗಿ ಸಿಗುತ್ತದೆ. ತನ್ನ ಪತಿಯೇ ಕಂದನಾಗಿ ಮರಳಿದ್ದಾನೆ ಎನ್ನುವುದನ್ನು ಅಶರೀರವಾಣಿಯಿಂದ ಅರಿತುಕೊಂಡ ರತಿ ಮಗುವನ್ನು ಚೆನ್ನಾಗಿ ಬೆಳೆಸುತ್ತಾಳೆ. ಅದು ಪ್ರದ್ಯುಮ್ನ ಎಂದು ಅರಿಯದ ಶಂಭರಾಸುರ ಆ ಮಗುವಿಗೆ ಸಕಲ ವಿದ್ಯೆಗಳನ್ನು ಧಾರೆಯೆರೆಯುತ್ತಾನೆ. ಮುಂದೆ ಪ್ರದ್ಯುಮ್ನ ಶಂಭರಾಸುರನನ್ನು ಕೊಂದು, ರತಿಯನ್ನು ವಿವಾಹವಾಗಿ ದ್ವಾರಕೆಗೆ ಕೃಷ್ಣ ರುಕ್ಮಿಣಿಯರ ಬಳಿಗೆ ಹೋಗುತ್ತಾನೆ.
ಪ್ರದ್ಯುಮ್ನ ಮತ್ತು ರತಿಗೆ ಅನಿರುದ್ಧ ಎನ್ನುವ ಸುರಸುಂದರ ಪುತ್ರ ಜನಿಸುತ್ತಾನೆ. ಮೂರನೇ ತಲೆಮಾರಿನ ಪ್ರೇಮವಾಗಿ ಅನಿರುದ್ಧ ಮತ್ತು ಆತನ ಪ್ರೇಯಸಿ ಉಷಾಳ ಕತೆ ಇದೆ. ಉಷಾ ಬಲಿಚಕ್ರವರ್ತಿಯ ಮೊಮ್ಮಗಳು. ಆಕೆಯ ತಂದೆ ಬಾಣಾಸುರ. ಉಷಾಳಿಗೆ ಕನಸಿನಲ್ಲಿ ಬರುವ ಅನಿರುದ್ಧನೊಡನೆ ಪ್ರೇಮವಾಗುತ್ತದೆ. ಅವರ ವಿವಾಹವನ್ನು ತಡೆಯಲು ಬಾಣಾಸುರ ಮುಂದಾಗುತ್ತಾನೆ. ಆದರೆ ಶ್ರೀಕೃಷ್ಣನ ಪ್ರವೇಶದೊಂದಿಗೆ ಆ ವಿವಾಹ ನೆರವೇರುತ್ತದೆ.
ರಂಗದ ಮೇಲೆ
ಕನಕನ ನಿರೂಪಣೆಯೊಂದಿಗೆ ನಾಟಕ ಶುರುವಾಗುತ್ತದೆ. ಪ್ರಮುಖವಾಗಿ ಮೂರು ಪ್ರೇಮಜೋಡಿಗಳ ಪ್ರಣಯ ಸಲ್ಲಾಪದೊಂದಿಗೆ ಸಾಗುವ ಕತೆ ಇದು. ಕನಕ ತನ್ನ ಪ್ರೇಯಸಿ ವದೂಟಿಯೊಂದಿಗೆ ಮಾತನಾಡುವ ವೇಳೆ ಪ್ರಸ್ತಾಪವಾಗುವ ಪ್ರೇಮಕತೆಗಳು. ಕೃಷ್ಣ ರುಕ್ಮಿಣಿ, ರತಿ ಮನ್ಮಥ, ಉಷೆ ಅನಿರುದ್ಧರ ಕತೆಯೊಂದಿಗೆ ಆಕರ್ಷಕವಾಗಿ ಸಾಗುವ ನಾಟಕ ಇದು. ಈ ಕತೆಯನ್ನು ಕೊನೆಯ ತನಕ ನಿರೂಪಿಸುವಂಥ ಕನಕ ಮತ್ತು ವದೂಟಿಯ ಜೋಡಿ ನಾಲ್ಕನೇ ಪ್ರೇಮಜೋಡಿಯಾಗಿ ಭಾಸವಾಗುತ್ತಾರೆ.
ಮೋಹನ ತರಂಗಿಣಿ ಗೀತನಾಟಕ ಎಂದು ಹೇಳಲಾಗಿದೆ. ಹಾಗಂತ ಇಲ್ಲಿ ಬರೇ ಹಾಡು ಇರುವಂತೆ ಅಥವಾ ಸಂಭಾಷಣೆಗಿಂತ ಸಂಗೀತವೇ ಹೆಚ್ಚಾದಂತೆ ಭಾಸವಾಗುವುದಿಲ್ಲ. ಎಲ್ಲವೂ ಸಮಾನವಾಗಿ ಹಂಚಿಕೆಯಾದಂತೆ ಗೋಚರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಂಗಸಜ್ಜಿಕೆ ಮತ್ತು ಆರಂಭದಿಂದ ಕೊನೆಯ ತನಕ ವೇದಿಕೆಯಲ್ಲಿ ದೃಶ್ಯಗಳಿಗೆ ತಕ್ಕಂತೆ ಬೆಳಕಿನ ಮೇಲಿನ ಹಿಡಿತವನ್ನು ಪ್ರದರ್ಶಿಸಿದ ರೀತಿ ಅದ್ಭುತವಾಗಿತ್ತು.
ಪಾತ್ರಗಳ ಪರಿಚಯ
ಥಿಯೇಟರ್ ಥೆರಪಿ ಮತ್ತು ಕಾಜಾಣ ತಂಡಗಳ ಸಮ್ಮಿಲನದ ಮೂಲಕ ನಾಟಕ ಪ್ರದರ್ಶನವಾಯಿತು. ಗೀತನಾಟಕವಾದ ಕಾರಣ ಗಾಯಕರಾದ ಮಧುಸೂದನ್, ಪ್ರತಿಮಾ ಭಟ್ ಮತ್ತು ಚಿನ್ಮಯಿ ಚಂದ್ರಶೇಖರ್ ಅವರ ಪಾತ್ರ ಪ್ರಮುಖವಾಗಿದೆ. ಪ್ರತಿಮಾ ಭಟ್ ಅವರ ಕಂಠವಂತೂ ಮನಮೋಹಕ. ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ಅವರು ಸ್ವತಃ ಸಂಗೀತ ಸಂಯೋಜನೆ ಮಾಡಿರುವುದರಿಂದ ವೇದಿಕೆಯ ಮುಂಭಾಗದಲ್ಲೇ ಸಂಗೀತದ ತಂಡದ ಜತೆಗೆ ತಾಳಹಾಕುತ್ತಾ ತಲ್ಲೀನರಾಗಿದ್ದನ್ನು ಕಾಣಬಹುದಿತ್ತು.
ಕನಕನಾಗಿ ಲಿಂಗರಾಜು, ವದೂಟಿಯ ಜತೆಯಲ್ಲಿ ರತಿ, ಚಿತ್ರಲೇಖೆ ಎನ್ನುವ ಮೂರು ಪಾತ್ರಗಳನ್ನು ನಿಭಾಯಿಸಿದವರು ಶಾಲಿನೀ ರಾಮಕೃಷ್ಣ. ಅವುಗಳಲ್ಲಿ ಚಿತ್ರಲೇಖೆಯ ಪಾತ್ರದಲ್ಲಿ ಹೆಚ್ಚು ಮನಸೆಳೆಯುವ ಅಭಿನಯ ನೀಡಿದ್ದರು. ಶ್ರೀಕೃಷ್ಣನಾಗಿ ಮಾರುತಿ, ರುಕ್ಮಿಣಿಯಾಗಿ ಸುಶೀಲ, ಚಂದ್ರನ ಪಾತ್ರಧಾರಿಯಾಗಿ ಅರುಣ, ಶಂಭರಾಸುರನಾಗಿ ಅಭಿಷೇಕ್, ಬಾಣಾಸುರನ ಪಾತ್ರದಲ್ಲಿ ಸ್ವಾಮಿ ನಾಯ್ಕ, ಅನಿರುದ್ಧನಾಗಿ ಶ್ರೀಪಾಲ್ ನಟಿಸಿದ್ದರು. ನವೀನ್ ಕೃಷಿ ನಟಿಸಿದ ಮನ್ಮಥನ ಪಾತ್ರ ಉತ್ತರ ಕುಮಾರನಂತೆ ಕಾಣುತ್ತಿದ್ದುದು ಸತ್ಯ. ರಂಗದ ಬೆಳಕು ಮಂಜುನಾರಾಯಣ್, ಸಂಗೀತ ಸಂಯೋಜನೆ, ನೃತ್ಯ ವಿನ್ಯಾಸ ನಿರ್ದೇಶನದ ಹೊಣೆ ಕೃಷ್ಣಮೂರ್ತಿ ಕವತ್ತಾರು, ನಾಟಕ ರಚನೆಯ ಜತೆಗೆ ಹಾಡುಗಳ ಸಾಹಿತ್ಯ ಬೇಲೂರು ರಘು ನಂದನ್ ಅವರದಾಗಿತ್ತು.
ನಿರ್ದೇಶಕರು ಚಂದ್ರನ ಪಾತ್ರಧಾರಿಯ ಮೂಲಕ ಮೊದಲ ದೃಶ್ಯದಲ್ಲೇ ರಂಗದ ಮೇಲೆ ಮೂಡಿಸುವ ಮಾಯಾಜಾಲ ಅಭಿನಂದನೀಯ. ಅದರಲ್ಲಿ ಪಾತ್ರಧಾರಿ ಅರುಣ್ ಮತ್ತು ಬೆಳಕಿನ ಸಂಯೋಜಕರ ಸಹಭಾಗಿತ್ವ ಮೆಚ್ಚಬೇಕಾದಂಥದ್ದು. ನೃತ್ಯ ನಿರ್ದೇಶಕರಾಗಿ ಕೃಷ್ಣಮೂರ್ತಿಯವರು ಪುರಾಣದ ಯುದ್ಧದ ಬಗ್ಗೆ ತೋರಿಸುವಾಗ ಗನ್ ಪಾಯಿಂಟ್ ಗಳ ಆಂಗಿಕ ಅಭಿನಯವನ್ನು ತೋರಿಸಿ ತಮ್ಮ ಕ್ರಿಯಾಶೀಲತೆ ಮರೆದಿದ್ದಾರೆ.
ರಘುನಂದನ್ ಅವರು ನಾಟಕವನ್ನು ಗ್ರಾಂಥಿಕವಾಗಿ ಬರೆದಿದ್ದರೂ ಸಹ ಅದನ್ನು ಕೆಲವೊಮ್ಮೆ ಆಧುನಿಕವಾಗಿ ಮಾತನಾಡಿದ್ದಾರೆ. ಅದು ಬದಲಾದರೆ ಉತ್ತಮ. ಕೊನೆಯಲ್ಲಿ ನಾಟಕ ಮತ್ತು ನಮ್ಮ ನಡುವೆ ಸೇತುವೆಯಾಗಿ ಬರುವ ರಘುನಂದನ್ ಅವರ ಪಾತ್ರ ಯುದ್ಧ ಎನ್ನುವುದು ಇಂದಿಗೆ ಕೂಡ ಎಷ್ಟು ಅಪ್ರಸ್ತುತ ಎಂದು ಮನಮುಟ್ಟಿಸುವ ಪ್ರಯತ್ನ ಮಾಡುತ್ತದೆ. ಮುಂದಿನ ಪ್ರದರ್ಶನಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಪ್ರದರ್ಶನದ ಆಕರ್ಷಣೆ ಹೆಚ್ಚಬಹುದು ಎನ್ನುವ ಭರವಸೆ ನಾಟಕ ತಂಡದ್ದಾಗಿದೆ.