ಅನಂತನಾಗ್ ನಾಯಕರಾಗಿ ನಟಿಸಿದ ‘ಉದ್ಭವ’ ಚಿತ್ರದ ಎರಡನೇ ಭಾಗ ಈ ವಾರ ತೆರೆಗೆ ಬರುತ್ತಿದೆ. ಮೂಲ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಈ ಎರಡನೇ ಭಾಗವಾದ ‘ಮತ್ತೆ ಉದ್ಭವ ‘ ಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ. ಪ್ರೀಮಿಯರ್ ಪ್ರದರ್ಶನ ಬುಧವಾರ ಸಂಜೆ ಕಲಾವಿದರ ಭವನದಲ್ಲಿ ನೆರವೇರಿತು.
ಚಿತ್ರೋದ್ಯಮದ ದಂಡು ಹಾಜರು
ಚಿತ್ರತಂಡದ ಪ್ರಮುಖ ಕಲಾವಿದರಾದ ನಾಯಕ ಪ್ರಮೋದ್, ನಾಯಕಿ ಮಿಲನಾ ನಾಗರಾಜ್, ಪೋಷಕ ಪಾತ್ರಗಳಲ್ಲಿ ನಟಿಸಿದ ಸುಧಾ ಬೆಳವಾಡಿ, ಶುಭಾ ಗೌಡ, ಪಿ.ಡಿ ಸತೀಶ್, ಶಶಿ ಪ್ರಸಾದ್, ನಟನೆ ಜತೆಗೆ ಸಂಭಾಷಣೆ ರಚಿಸಿರುವ ಮೋಹನ್, ಸಂಗೀತ ನಿರ್ದೇಶಕ ವಿ ಮನೋಹರ್ ಮತ್ತು ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಮೊದಲಾದವರು ಹಾಜರಿದ್ದರು. ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆಯನ್ನು ಇತ್ತೀಚೆಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಖ್ಯಾತ ನಿರ್ಮಾಪಕ ಕೆ. ಮಂಜು, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು, ರಮೇಶ್ ಇಂದಿರಾ, ನಟರಾದ ಸುಂದರ್, ವೀಣಾ, ಗೀತ ರಚನೆಕಾರ, ನಿರ್ದೇಶಕ ಕವಿರಾಜ್, ನಟ ದತ್ತಣ್ಣ ಸೇರಿದಂತೆ ಕಿರುತೆರೆಯ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಮತ್ತು ನಟ ರಾಕೇಶ್ ಮಯ್ಯ ಸೇರಿದಂತೆ ಟಿಎನ್ನೆಸ್ ಅವರ ಧಾರಾವಾಹಿಗಳ ಜನಪ್ರಿಯ ಕಲಾವಿದರ ದಂಡು ಅಲ್ಲಿತ್ತು.
ವೀಣಾ ಸುಂದರ್ ಅವರನ್ನು ನನ್ನ ಧಾರಾವಾಹಿಯ ಉತ್ತಮ ಕಲಾವಿದೆ ಮಾತ್ರವಲ್ಲ, ಒಳ್ಳೆಯ ಸ್ನೇಹಿತೆ ಕೂಡ ಎಂದು ಟಿ.ಎನ್.ಸೀತಾರಾಮ್ ಅವರು ನೆನಪಿಸಿಕೊಂಡಾಗ ಪ್ರತಿಕ್ರಿಯಿಸಿದ ವೀಣಾ, “ಈ ಮಾತು ನನಗೆ ಸಿಕ್ಕಂಥ ದೊಡ್ಡ ಅವಾರ್ಡ್ ಆಗಿ ಪರಿಗಣಿಸುತ್ತೇನೆ” ಎಂದರು.
ಚಿತ್ರದ ಮಧ್ಯಂತರದ ವೇಳೆ ನಟಿಯರಾದ ಸ್ವಾತಿ ಮತ್ತು ಗೀತಾ ಭಾರತಿ ಭಟ್ ಅವರೊಂದಿಗೆ ಸೆಲ್ಫೀ ಸಂಭ್ರಮದಲ್ಲಿದ್ದ ರಾಧಿಕಾ ನಾರಾಯಣ್, ವಿತರಕರ ಜತೆಗೆ ಮಾತಿನಲ್ಲಿ ನಿರತರಾಗಿದ್ದ ರವಿ ಚೇತನ್, ಚಂದನ್ ಶಂಕರ್ ಹೀಗೆ ಕಲಾವಿದರ ಸಂಭ್ರಮದ ಮಾತುಕತೆ ನಡೆದಿತ್ತು.
ಸಾಮಾನ್ಯವಾಗಿ ಸಿನಿಮಾ ಪ್ರೀಮಿಯರ್ ಶೋ ನೋಡಿ ಹೊರಗೆ ಬರುವ ವೇಳೆಗೆ ಚಿತ್ರವನ್ನು ಹೊಗಳಬೇಕಾದ ಅನಿವಾರ್ಯತೆ ಕಲಾವಿದರಿಗೆ ಬಂದು ಬಿಟ್ಟಿರುತ್ತದೆ. ಆದರೆ ಕೋಡ್ಲು ರಾಮಕೃಷ್ಣ ಅವರ ‘ಮತ್ತೆ ಉದ್ಭವ’ ವೀಕ್ಷಿಸಿದ ಪ್ರೇಕ್ಷಕರೆಲ್ಲರ ಮುಖ ಭಾವದಲ್ಲಿ ನೈಜ ಹರ್ಷೋತ್ಸಾಹ ಇತ್ತು. ಅದು ಶುಕ್ರವಾರದಿಂದ ಎಲ್ಲ ವರ್ಗದ ಪ್ರೇಕ್ಷಕರಿಗೂ ಹರಡುವ ಮತ್ತು ಅಲ್ಲಿಂದ ನಿರ್ಮಾಪಕರ ಮುಖದಲ್ಲಿ ಕೂಡ ಗೋಚರಿಸುವಂಥ ಸಾಧ್ಯತೆ ದಟ್ಟವಾಗಿದೆ!