“ಛಾಯಾಗ್ರಾಹಕರು ಇರದ ಚಿತ್ರರಂಗವನ್ನು ಕಲ್ಪಿಸಲು ಸಾಧ್ಯವಿಲ್ಲ. ಸಿನಿಮಾ ಒಂದು ದೃಶ್ಯಕಾವ್ಯವಾಗಬೇಕಾದರೆ ಉತ್ತಮ ಛಾಯಾಗ್ರಾಹಕರು ಇರಲೇಬೇಕು” ಎಂದು ಮಾಜಿ ನಟ, ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಹೇಳಿದರು. ಅವರು ‘ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ 35ನೇ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
“ಸರ್ಕಾರದ ಕಡೆಯಿಂದ ಸಾಧ್ಯವಾಗುವಂಥ ನೆರವನ್ನು ಛಾಯಾಗ್ರಾಹಕರ ಸಂಘಟನೆಗೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ” ಕುಮಾರ್ ಬಂಗಾರಪ್ಪನವರು ಈ ಸಂದರ್ಭದಲ್ಲಿ ಹೇಳಿದರು. “ಸರ್ಕಾರದಿಂದ ನೀಡಲಾಗುವ ಹತ್ತು ಕೋಟಿ ಮೊತ್ತವನ್ನು ಚಿತ್ರರಂಗವು ಸಮರ್ಪಕವಾಗಿ ಬಳಸುವಂತಾದರೆ, ನೀಡಲ್ಪಡುವ ಅನುದಾನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ” ಎಂದು ಈ ಸಂದರ್ಭದಲ್ಲಿ ನಟಿ ಡಾ.ಜಯಮಾಲ ಅವರು ಹೇಳಿದರು.
ಅವರು ಕಣ್ಣು.. ನಾವು ಕಿವಿ..!
“ಛಾಯಾಗ್ರಾಹಕರು ಸಿನಿಮಾದ ಕಣ್ಣುಗಳು. ನಾವು ಸಂಗೀತ ನೀಡುವ ಕಾರಣ ಚಿತ್ರದ ಕಿವಿಗಳು. ಹಾಗಾಗಿ ನಮ್ಮದು ಅವರದು ಕಣ್ಣು ಕಿವಿಗಳ ಸಂಬಂಧ” ಎಂದು ಅದ್ಭುತವಾದ ಉಪಮೆಯೊಂದಿಗೆ ಛಾಯಾಗ್ರಾಹಕರೊಂದಿಗಿನ ಸಂಬಂಧವನ್ನು ವಿವರಿಸಿದವರು ಹಿರಿಯ ಸಂಗೀತ ನಿರ್ದೇಶಕ ರಾಜನ್.
ನಾವಿಬ್ಬರೂ ಎರಡು ಕಣ್ಣುಗಳು!
“ಛಾಯಾಗ್ರಾಹಕರು ಒಂದು ಕಣ್ಣಾದರೆ ಕ್ಯಾಮೆರದಲ್ಲಿ ನೋಡುವ ಮೊದಲೇ ದೃಶ್ಯದ ಕಲ್ಪನೆ ಹೊಂದಿರುವ ನಿರ್ದೇಶಕರು ಚಿತ್ರದ ಮತ್ತೊಂದು ಕಣ್ಣಿದ್ದ ಹಾಗೆ” ಎಂದು ಎರಡು ಸಮಾನ ಅಂಗಗಳ ಪ್ರಾಧಾನ್ಯತೆ ತಮಗಿರುವುದೆಂದು ಹೇಳಿದವರು ಹಿರಿಯ ನಿರ್ದೇಶಕ ಭಗವಾನ್. ಈ ಸಂದರ್ಭದಲ್ಲಿ ಅವರು ತಮ್ಮ ಜೋಡಿ ನಿರ್ದೇಶಕರಾದ ದೊರೈ ಬಗ್ಗೆ ನೆನಪಿಸಿಕೊಳ್ಳುತ್ತಾ, ಅವರು ಒಬ್ಬ ಉತ್ತಮ ಛಾಯಾಗ್ರಾಹಕರಾಗಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟಿ ಉಮಾಶ್ರೀಯವರು, “ಸಿನಿಮಾಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ಕಲಾವಿದರು ಮುಖದಲ್ಲಿ ಎದ್ದು ಕಾಣುವ ಪ್ರಧಾನ ಅಂಗಗಳಿದ್ದ ಹಾಗೆ. ಆದರೆ ದೇಹದೊಳಗೆ ಕಾರ್ಯನಿರ್ವಹಿಸುವ ಹೃದಯದಂಥ ಪ್ರಧಾನ ಅಂಗಾಂಗಗಳು ಹೊರಗಣ್ಣಿಗೆ ಕಾಣುವುದಿಲ್ಲ. ಛಾಯಾಗ್ರಾಹಕರಂಥ ತಂತ್ರಜ್ಞರ ಕೆಲಸ ಅಷ್ಟೇ ಪ್ರಧಾನವಾಗಿರುವುದು ಮಾತ್ರವಲ್ಲ, ಸದಾ ಕ್ಯಾಮೆರಾದ ಹಿಂದೆ ಇರುವ ಕಾರಣ ಹೊರಜಗತ್ತಿಗೆ ಕಾಣುವುದೂ ಇಲ್ಲ. ಆದರೆ ಅವರು ಕ್ಯಾಮೆರಾದ ಹಿಂದೆ ಇದ್ದರೂ ಎಷ್ಟು ದೊಡ್ಡ ಮನಸು ಹೊಂದಿದ್ದಾರೆ ಎಂದು ತಿಳಿಯಲು ಇಂದಿನ ಕಾರ್ಯಕ್ರಮ ಒಂದೇ ಸಾಕ್ಷಿ” ಎಂದರು.
ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರು ಈ ಸಂದರ್ಭದಲ್ಲಿ, ದೃಶ್ಯವೊಂದಕ್ಕೆ ಆ್ಯಕ್ಷನ್ ಹೇಳಿದ್ದು, ಆ ಸನ್ನಿವೇಶದಲ್ಲಿ ಡಾ.ರಾಜ್, ಡಾ.ಅಂಬರೀಷ್ ಮತ್ತು ಡಾ. ವಿಷ್ಣು ಮತ್ತು ಶಂಕರನಾಗ್ ಅವರ ತದ್ರೂಪಿ ಕಲಾವಿದರು ವೇದಿಕೆಗೆ ಬಂದು ಮಿಮಿಕ್ರಿ ಅಭಿನಯ ನೀಡಿದರು! ನೂರು ಮಂದಿ ಛಾಯಾಗ್ರಾಹಕರ ಸಮ್ಮುಖದಲ್ಲಿ 100 ಕ್ಯಾಮೆರದ ಜತೆ ಚಿತ್ರೀಕರಿಸಿದ ಹಾಡಿನ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಯಿತು.
ಹಿರಿಯ ಛಾಯಾಗ್ರಾಹಕರ ಜತೆಗೆ ಸಂಕಲನಕಾರರು, ಚಿತ್ರಮಂದಿರದ ಕೆಲಸಗಾರರ ತನಕ ದಶಕಗಳ ಕಾಲ ಸೇವೆ ಸಲ್ಲಿಸಿದ ಹಲವಾರು ಮಂದಿಯನ್ನು ಸನ್ಮಾನಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿತ್ತು.ಛಾಯಾಗ್ರಾಹಕರನ್ನು ಸನ್ಮಾನಿಸುವ ಜತೆಗೆ ಅವರ ಕುಟುಂಬದ ಮಂದಿಗೂ ಬಾಗಿನ ನೀಡಿದ್ದು ವಿಶೇಷವಾಗಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅವರು ಮಾತನಾಡಿ “ನನಗೆ ಗಂಡಸೊಬ್ಬರು ಬಾಗಿನ ನೀಡಿರುವುದು ಇದೇ ಪ್ರಥಮ” ಎಂದಾಗ ಬಾಗಿನ ನೀಡಿ ಸನ್ಮಾನಿಸಿದ ಜೆಜಿ ಕೃಷ್ಣ ಜೋರಾಗಿ ನಕ್ಕರು.
‘ಬೇಡರ ಕಣ್ಣಪ್ಪ’ ‘ನಾಗರ ಹಾವು’ ಕ್ಯಾಮೆರಾಗಳ ಪ್ರದರ್ಶನ
ಕಾರ್ಯಕ್ರಮದ ಉದ್ಘಾಟನೆಯ ದಾರಿಯಲ್ಲೇ ಅಂದಿನ ಇದುವರೆಗಿನ ವೈವಿಧ್ಯಮಯವಾದ ಕ್ಯಾಮೆರಾಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಅವುಗಳಲ್ಲಿ ಡಾ.ರಾಜ್ ಕುಮಾರ್ ನಟನೆಯ ಪ್ರಥಮ ಚಿತ್ರ ‘ಬೇಡರ ಕಣ್ಣಪ್ಪ’ದಿಂದ ಹಿಡಿದು, ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರವನ್ನು ಶೂಟ್ ಮಾಡಿದ್ದಂಥ ಕ್ಯಾಮೆರಗಳೂ ಸೇರಿದಂತೆ ಸಾಕಷ್ಟು ಛಾಯಾಗ್ರಾಹಕಗಳ ಸಾಲುಗಳಿದ್ದವು.
ಸಮಾರಂಭದಲ್ಲಿ ಮಂಜುಳಾ ಗುರುರಾಜ್ ಅವರ ರಸಮಂಜರಿ, ಮಜಾಟಾಕೀಸ್ ಖ್ಯಾತಿಯ ರೆಮೋ ಗಾಯನ, ಇತರ ನೃತ್ಯ ತಂಡಗಳ ಡ್ಯಾನ್ಸ್ ಮನಸೆಳೆಯುವಂತೆ ಇತ್ತು. ಸಾಧಕರನೇಕರನ್ನು ಸನ್ಮಾನಿಸಲು ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ತೋರುತ್ತಿದ್ದ ಉತ್ಸಾಹ ಅಭಿನಂದನಾರ್ಹವಾಗಿತ್ತು.
ಹಿರಿಯ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್, ಸಿ.ವಿ ಶಿವಶಂಕರ್, ನಟ ಉಮೇಶ್, ಹಿರಿಯ ನಟಿ ಸುಮಿತ್ರಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಮೇಶ್ ಬಣಕಾರ್, ಕರಿಸುಬ್ಬು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಚಾಮುಂಡೇಶ್ವರಿ ಸ್ಟುಡಿಯೋ ಒಡತಿ ಸೇರಿದಂತೆ ಜನಪ್ರಿಯ ನಟಿಯರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಾಯಕ, ನಟ, ನಿರೂಪಕ ಶ್ರೀನಿವಾಸ್ ಮತ್ತು ಶ್ರುತಿ ಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.