
ಸಾಮಾನ್ಯವಾಗಿ ಮಗು ಮತ್ತು ಆಯುಧದ ವಿಚಾರ ಬಂದಾಗ ಎರಡಕ್ಕೂ ಎರಡು ಧ್ರುವಗಳು. ಆದರೆ ಕೊಡಗಿನ ಮಂದಿಗೆ ಹಾಗಲ್ಲ. ತಾಯಿಗೆ ಗಂಡು ಮಗು, ಗಂಡಿಗೆ ಆಯುಧ ಬಳಸುವ ಗುಂಡಿಗೆ ಇವೇ ಭೂಷಣ! ಇದು ಬರೀ ಭಾಷಣವಲ್ಲ. ಈ ಕ್ಷಣ ಕೂಡ ಅಂಥ ಆಚರಣೆ ಇದೆ ಎನ್ನುವುದಕ್ಕೆ ಇತ್ತೀಗಷ್ಟೇ ನಟಿ ಶ್ವೇತಾ ಚೆಂಗಪ್ಪ ಅವರು ತಮ್ಮ ತಿಂಗಳುಗಳ ಪುಟ್ಟ ಮಗುವಿನ ಕೊಡಗಿನ ಯೋಧನ ಉಡುಗೆ ತೊಡಿಸಿ ತೋರಿಸಿದ್ದೇ ಸಾಕ್ಷಿ! ಹೌದು, ಶ್ವೇತಾ ತಾವು ಚೊಚ್ಚಲ ಮಗುವಿನ ಫೊಟೊ ಹೊರಗೆ ತೋರಿಸಲು ಒಂದು ಒಳ್ಳೆಯ ದಿನಕ್ಕಾಗಿ ಕಾದಿದ್ದರು. ಅದು ಜನವರಿ 26. ನಮಗೆಲ್ಲ ಗಣರಾಜ್ಯೋತ್ಸವದ ಸಂಭ್ರಮವಾದರೆ, ಶ್ವೇತಾಗೆ ಆ ದಿನದ ಬಗ್ಗೆ ಇನ್ನೂ ಒಂದು ವಿಶೇಷ ಸೆಂಟಿಮೆಂಟ್ ಇದೆ! ಅದೇನು ಎಂದರೆ ಸರಿಯಾಗಿ ಅಂದಿಗೆ 15ವರ್ಷಗಳ ಹಿಂದೆ ಶ್ವೇತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಅದೇ ದಿನದಂದು ತಮ್ಮ ಪುತ್ರ ಜಿಯಾನ್ ಅಯ್ಯಪ್ಪನನ್ನು ಪರಿಚಯಿಸಿದ್ದಾರೆ. ಅದು ಕೂಡ ತಾವು ಒಬ್ಬ ಕಲಾವಿದೆಯಾಗಿ ಆತನನ್ನು ಒಬ್ಬ ಕಲಾವಿದನಂತೆ ತೋರಿಸಿಲ್ಲ! ಬದಲಿಗೆ ತಮ್ಮ ನಾಡಿನ ಹೆಸರಾದ ಯೋಧನ ಉಡುಗೆಯನ್ನು ತೊಡಿಸಿದ್ದಾರೆ. ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆಗಳು ಲಭಿಸಿವೆ. ನಿನ್ನೆಯಷ್ಟೇ ಜನ್ಮದಿನಾಚರಣೆ ಮಾಡಿಕೊಂಡ ಅವರು ಮಗುವಿನ ಕುರಿತಾದ ವಿಶೇಷ ಪ್ರಶ್ನೆಗಳಿಗೆ ಸಿನಿಕನ್ನಡ ಡಾಟ್ ಕಾಮ್ ನ ವಿಶೇಷ ಪ್ರಶ್ನೆಗಳಿಗೆ ನೀಡಿರುವ ಸ್ವಾರಸ್ಯಕರ ಉತ್ತರಗಳು ಇಲ್ಲಿವೆ.

ಜಿಯಾನ್ ವಿಶೇಷತೆಗಳೇನು?
ಜಿಯಾನ್ ಎಂದರೆ ಎಂದೆಂದಿಗೂ ಖುಷಿಯಾಗಿರುವ, ಹೃದಯಕ್ಕೆ ಹತ್ತಿರವಾದ ಎನ್ನುವ ಅರ್ಥವಿದೆ. ಮಗು ಸಂಜೆ ಆರಕ್ಕೆಲ್ಲ ಮಲಗುತ್ತಾನೆ. ಆಮೇಲೆ ರಾತ್ರಿ ಹತ್ತಕ್ಕೆ ಎದ್ದು ಬೆಳಗಿನ ತನಕ ಎಚ್ಚರವಾಗುತ್ತಾ ಇರುತ್ತಾನೆ. ಹೆಸರಿನ ಜತಗೆ `ಅಯ್ಯಪ್ಪ’ ಎನ್ನುವ ಕೊಡವ ಸರ್ ನೇಮ್ ಅನ್ನು ನಾವಿಬ್ಬರೂ ಸೇರಿ ಆಯ್ಕೆ ಮಾಡಿದ್ದೇವೆ. ಆದರೆ ಇದು ತಿಳಿದಿರದ ಕೆಲವರು ಈಗ ನನ್ನ ಗಂಡನ ಹೆಸರು ಕಿರಣ್ ಅಪ್ಪಚ್ಚು ಎನ್ನುವುದನ್ನು ಬಿಟ್ಟು ಕಿರಣ್ ಅಯ್ಯಪ್ಪ ಇರಬೇಕು ಎಂದು ಅವರವರೇ ಅಂದುಕೊಂಡು ಬಿಟ್ಟಿದ್ದಾರೆ!
ನಿಮ್ಮ ಜನ್ಮದಿನದ ವಿಶೇಷಗಳೇನಿತ್ತು?

ಈ ಬಾರಿ ನನ್ನ ಜನ್ಮದಿನದ ತಾರೀಕು ನನಗೆ ವಿಶೇಷ. ಯಾಕೆಂದರೆ ನನ್ನ ಮಗ ಕೂಡ ಒಂಬತ್ತನೇ ತಾರಿಕಿನಲ್ಲೇ ಜನಿಸಿದ್ದಾನೆ. ಆತನದು ಸಪ್ಟೆಂಬರ್ ಒಂಬತ್ತಾದರೆ, ನನ್ನದು ಫೆಬ್ರವರಿ ಒಂಬತ್ತು. ಹಾಗಾಗಿ ಅದು ಆತನ ಐದನೇ ತಿಂಗಳ ಜನ್ಮದಿನ ಆಗಿರುತ್ತದೆ. ನನ್ನ ಜನ್ಮದಿನವನ್ನು ಯಾವ ವರ್ಷವೂ ನಾನು ದೊಡ್ಡದಾಗಿ ಪಾರ್ಟಿ ಮಾಡಿ ಆಚರಿಸಿಲ್ಲ. ಯಾವುದಾದರೂ ಅನಾಥಾಶ್ರಮಕ್ಕೆ ಹೋಗಿ ಕಳೆದಾಗಲೂ ಅದಕ್ಕೆ ನಾನು ಪ್ರಚಾರ ಕೊಟ್ಟಿಲ್ಲ. ಹೆಚ್ಚಾಗಿ ನನ್ನ ಜನ್ಮದಿನದಂದು ಪೂರ್ತಿ ಮನೆಯವರೊಂದಿಗೆ ಕಳೆದೇ ನನಗೆ ಅಭ್ಯಾಸ. ಬೆಂಗಳೂರಲ್ಲಿ ಸಾಮಾನ್ಯವಾಗಿ ನಾನು ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿರುತ್ತೇನೆ. ಉಳಿದಂತೆ ಬಾಬ ಮಂದಿರ ಎಲ್ಲೇ ಕಂಡರೂ ಕೈ ಮುಗಿಯುತ್ತೇನೆ.
ಮಗುವಿಗಾಗಿ ನೀವು ಹಾಡುವ ಜೋಗುಳ ಯಾವುದು?
ನಾನು ಮುದ್ದು ಮಾಡುತ್ತೇನೆ ಹೊರತು ಜೋಗುಳ ಗೀತೆ ಹಾಡುವುದಿಲ್ಲ. ಈಗ ಬೆಂಗಳೂರಲ್ಲಿ ಇದ್ದೀನಿ. ಮಗು ಪುಟ್ಟದಾಗಿರುವ ಕಾರಣ ನನ್ನ ತಾಯಿ ಕೂಡ ಜತೆಗಿದ್ದಾರೆ. ಬೆಳಿಗ್ಗೆಯಂತೂ ನನ್ನ ತಾಯಿಯೇ ಮ್ಯಾನೇಜ್ ಮಾಡುತ್ತಾರೆ. ಆದರೆ ಇತ್ತೀಚೆಗೆ ನನಗೆ ಇಷ್ಟವಾದ ಹಾಡೊಂದನ್ನು ಮಗುವಿಗೆ ಕೇಳಿಸುತ್ತೇನೆ. ಅದು `ಬಿಗ್ ಬಾಸ್’ನಲ್ಲಿ ವಾಸುಕಿ ವೈಭವ್ ರಚಿಸಿದಂಥ ಗೀತೆ. ಕಿಚ್ಚ ಸುದೀಪ್ ಕಂಠದಲ್ಲಿ ಯೂಟ್ಯೂಬ್ ನಲ್ಲಿರುವ ಆ ಹಾಡನ್ನು ಕೇಳಿ ಕೇಳಿ ಇದೀಗ ಮಗುವಿಗೂ ಅಭ್ಯಾಸವಾಗಿದೆ. ಮನಸಿಂದ ಯಾರೂನು ಕೆಟ್ಟೋರಲ್ಲ.. ಎನ್ನುವ ಹಾಡು ಕೇಳುತ್ತಲೇ ಅಳು ನಿಲ್ಲಿಸಿ ಹಾಗೆಯೇ ನಿದ್ದೆಗೆ ಜಾರುತ್ತದೆ. ಅರ್ಥದಲ್ಲಿಯೂ, ರಾಗದಲ್ಲಿಯೂ, ಭಾವದಲ್ಲಿಯೂ ಮಗುವಿಗೆ ಅದೇ ಪರ್ಫೆಕ್ಟ್ ಜೋಗುಳ ಎಂದು ನನ್ನ ಅನಿಸಿಕೆ.

ಈ ಬಾರಿಯ `ಬಿಗ್ ಬಾಸ್’ ಫಲಿತಾಂಶದ ಬಗ್ಗೆ ಏನು ಹೇಳುತ್ತೀರಿ?
ನಾನು ಸಾಮಾನ್ಯವಾಗಿ ಹಿಂದಿ ಬಿಗ್ ಬಾಸ್ ನೋಡುತ್ತೇನೆ. ಅದರ ಲೆವೆಲ್ಲೇ ಬೇರೆ. ಅಲ್ಲಿ ಹೊಡೆದಾಟಗಳು ತುಂಬ ಜೋರಾಗಿರುತ್ತವೆ. ಆದರೆ ನನಗೆ ಈ ಬಾರಿಯ ಕನ್ನಡ ಬಿಗ್ ಬಾಸ್ ತುಂಬ ಇಷ್ಟವಾಗಿತ್ತು. ಅದಕ್ಕೆ ಕಾರಣ, ಪ್ರತಿಯೊಬ್ಬರಿಗೂ ತಮ್ಮ ತಮ್ಮ ವೈಯಕ್ತಿಕ ಪ್ರತಿಭೆಯನ್ನು ಪ್ರಕಟಪಡಿಸುವ ಅವಕಾಶ ಸಿಗುತ್ತಿತ್ತು. ನಾನು ಬಿಗ್ ಬಾಸ್ ಭಾಗವಾಗಿದ್ದಾಗ ಅದು ಗ್ರೂಪ್ ನಲ್ಲಿ ಆಡಬೇಕಿತ್ತು. ಆಗ ನಮ್ಮ ಪರ್ಸನಲ್ ಕೆಪಾಸಿಟಿ ಹೊರಗಡೆ ಗೊತ್ತಾಗುತ್ತಿರಲಿಲ್ಲ. ಹರೀಶ್ ರಾಜ್ ಕೂಡ ಇಷ್ಟವಾಗಿದ್ದರು. ಕುರಿ ಪ್ರತಾಪ್ ಅವರೊಂದಿಗೆ ನಾನು ಮಜಾಟಾಕೀಸ್ ನಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಹಾಗಾಗಿಯೇ ನಾನು ಕುರಿ ಪ್ರತಾಪ್ ಅವರ ಪರವಾಗಿರುವುದಾಗಿ ಸೋಶಿಯಲ್ ಮೀಡಿಯಾದ ಮೂಲಕ ಹೇಳಿಕೊಂಡಿದ್ದೆ. ಇದೀಗ ಶೈನ್ ಶೆಟ್ಟಿಯವರು ವಿಜೇತರಾಗಿದ್ದಾರೆ. ಒಬ್ಬ ಕಲಾವಿದನಾಗಿದ್ದು ಕಷ್ಟ ಬಂದಾಗ ಕಂಗೆಡದೆ ಫುಡ್ ಟ್ರಕ್ ಶುರು ಮಾಡಿದಂಥ ಅವರ ಲೈಫ್ ಸ್ಟೈಲ್ ಆಗಲಿ, ಬಿಗ್ ಬಾಸ್ ಮನೆಯೊಳಗಿನ ಅವರ ಆಕರ್ಷಕವಾದ ವರ್ತನೆಗಳಾಗಲೀ ಅವರನ್ನು ವಿಜೇತರ ಸ್ಥಾನಕ್ಕೆ ಖಂಡಿತವಾಗಿ ಅರ್ಹನನ್ನಾಗಿಸಿತ್ತು ಎಂದೇ ನನ್ನ ಭಾವನೆ.

ನೀವು ಮರಳಿದೊಡನೇ ಮಜಾಟಾಕೀಸ್ ಶುರುವಾದೀತೆ?
ನನ್ನಲ್ಲಿ ಹಲವರು ಈ ಸಂದೇಹ ಕೇಳಿದ್ದಾರೆ. ನಾನು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೂ ಮಜಾಟಾಕೀಸ್ ನಲ್ಲಿದ್ದೆ. ನಾನು ಬಿಟ್ಟಿದ್ದು, ಸೃಜನ್ ಅವರು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಮಜಾಟಾಕೀಸ್ ನಿಂತಿದ್ದು ಎಲ್ಲವೂ ಒಂದೇ ಸಮಯದಲ್ಲಿ ಆಯಿತು. ಬಣ್ಣದ ಲೋಕಕ್ಕೆ ನಾನು ವಾಪಾಸು ಬರುವುದು ಖಚಿತ. ಆದರೆ ಅದು ಇಂಥದೇ ಶೋ ಎಂದು ಈಗಲೇ ಹೇಳಲಾರೆ. ಒಟ್ಟಿನಲ್ಲಿ ‘ಜನ ಗುರುತಿಸಬಹುದಾದಂಥ ದೊಡ್ಡ ಶೋನಲ್ಲಿಯೇ ನಾನು ಕಾಣಿಸಿಕೊಳ್ಳಬೇಕು. ಹಾಗಾಗಿ ನಾನು ಅವಸರದಲ್ಲಿ ಯಾವುದನ್ನು ಕೂಡ ಒಪ್ಪಿಕೊಳ್ಳುವುದಿಲ್ಲ.

ಮತ್ತೆ ಪರದೆ ಮೇಲೆ ಬರಲೆಂದೇ ಫಿಟ್ನೆಸ್ ಮೊರೆ ಹೋಗಿದ್ದೀರ?
ಫಿಟ್ನೆಸ್ ಎಲ್ಲರಿಗೂ ಅಗತ್ಯ. ಅದು ಬಿಟ್ಟು ಸಣಕಲಾಗಿದ್ದರಷ್ಟೇ ಸೌಂದರ್ಯ ಎನ್ನುವ ಅನಿಸಿಕೆ ನನಗಿಲ್ಲ. ಬಹಳಷ್ಟು ಬಾರಿ ಅದು ನಮ್ಮ ಕೈಗಳಲ್ಲೇ ಇರುವುದಿಲ್ಲ. ಹಾಗಾಗಿ ದೇಹ ಪ್ರಕೃತಿಯ ಬಗ್ಗೆ ಯಾರೂ ಕೀಳರಿಮೆ ಬೆಳೆಸಿಕೊಳ್ಳಬೇಕಾಗಿಲ್ಲ. ಅವರವರ ಸಮಸ್ಯೆಗಳು ಅಂತಿಮವಾಗಿ ಅವರದ್ದು ಮಾತ್ರ. ಆದರೆ ಆರೋಗ್ಯಕ್ಕಾಗಿ ಎಷ್ಟು ಫಿಟ್ ಮತ್ತು ಫೈನಾಗಿರಬೇಕೋ ಅಷ್ಟು ಪ್ರಯತ್ನವನ್ನಂತೂ ನಾನು ಮಾಡುತ್ತಿದ್ದೇನೆ. ಇಷ್ಟಕ್ಕೂ ಅದು ಕೂಡ ಕಂಡ ಹಾಗೆ ಅಲ್ಲ! ವ್ಯಾಯಾಮ ಒಮ್ಮೆ ಶುರು ಮಾಡುವುದು ಸುಲಭ ಇರಬಹುದು. ಆದರೆ ಮಧ್ಯದಲ್ಲೊಮ್ಮೆ ನಿಲ್ಲಿಸಿದರೆ ಮತ್ತೆ ಶುರು ಮಾಡುವುದು ಬಹಳ ಕಷ್ಟ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತದೆ. ಹಾಗಾಗಿ ಫಿಟ್ನೆಸ್ ಆಗಿರಬೇಕು ಎಂದುಕೊಳ್ಳುತ್ತೇನೆ. ನಿಜವಾಗಿ ನನಗೆ ಡ್ಯಾನ್ಸ್ ಎಲ್ಲ ಇಷ್ಟ. ಆದರೆ ಸದ್ಯಕ್ಕೆ ಅಷ್ಟು ಎನರ್ಜಿ ಇಲ್ಲ. ಹಾಗಾಗಿ ಯೋಗ ಮಾಡುತ್ತಿದ್ದೇನೆ.



