“ನವರತ್ನ ಎನ್ನುವುದು ಚಿತ್ರದ ಹೆಸರು. ಹಾಗಂತ ಚಿತ್ರದಲ್ಲಿ ರತ್ನಗಳ ಪ್ರದರ್ಶನವಿಲ್ಲ. ಆದರೆ ಶೀರ್ಷಿಕೆಗೂ ಕತೆಗೂ ಸಂಬಂಧವಿದೆ. ಹಾಗಾಗಿ ನವರತ್ನ ಎಂದರೆ ಏನು ಎಂದು ಸರಿಯಾಗಿ ಹೇಳಿದವರಿಗೆ ಒಂದು ಗಿಫ್ಟ್ ನೀಡಲಿದ್ದೇವೆ” ಎಂದರು ಪ್ರತಾಪ್ ರಾಜ್. ಅವರು ನವರತ್ನ ಚಿತ್ರದ ನಿರ್ದೇಶಕರೂ ಹೌದು; ನಾಯಕರೂ ಹೌದು. ಫೆಬ್ರವರಿ 14ರಂದು ಸಿನಿಮಾ ತೆರೆಕಾಣಲಿದ್ದು ಚಿತ್ರದ ಬಿಡುಗಡೆ ಪೂರ್ವಭಾವಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡದ ಪ್ರಮುಖರು ಪಾಲ್ಗೊಂಡಿದ್ದರು.
“ಚಿತ್ರದ ಬಹುಪಾಲು ದೃಶ್ಯಗಳು ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ನಮಗೆ ದಟ್ಟವಾದ ಅರಣ್ಯ ಬೇಕಾದ ಕಾರಣ, ಸ್ಥಳೀಯ ಅಭಯಾರಣ್ಯಗಳಲ್ಲಿ ಚಿತ್ರೀಕರಿಸಿಲ್ಲ. ಶೃಂಗೇರಿಯ ‘ಕಿಗ್ಗ’ ಮತ್ತು ಇಂಡೋನೇಷ್ಯದಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಹಲವಾರು ಕೋನಗಳಿಂದ ಮಾಡಿರುವ ಚಿತ್ರ. ಇದು ಫಾರೆಸ್ಟ್ ಜರ್ನಿಯ ಕತೆ. ಇದು ನಾರ್ಮಲ್ ಫಾರೆಸ್ಟ್ ರೀತಿ ಖಂಡಿತವಾಗಿ ಕಾಣಿಸಲ್ಲ. ಶೂಟಿಂಗ್ ವೇಳೆ ಅದೇ ಚಾಲೆಂಜಿಂಗ್ ಆಗಿತ್ತು. ಬೆವರಲ್ಲ, ರಕ್ತವೇ ಸುರಿಸಿ ಮಾಡಿದಂಥ ಚಿತ್ರ. ಯಾಕೆಂದರೆ ಜಿಗಣೆಗಳ ಕಾಟ ಆ ರೀತಿಯಲ್ಲಿತ್ತು.
“ಒಳ್ಳೆಯ ಚಿತ್ರ ಮಾಡಿದ್ದೇವೆ. ನೋಡಿದವರು ಅವರ ಅನಿಸಿಕೆ ಹರಡಿದರೆ ಸಾಕು ಅದು ಚಿತ್ರಕ್ಕೆ ಪ್ರಚಾರ ನೀಡುವ ನಂಬಿಕೆ ಇದೆ. ಯಾಕೆಂದರೆ ಚಿತ್ರ ಎಲ್ಲರಿಗೂ ಇಷ್ಟವಾಗುವ ಬಗ್ಗೆ ಅಷ್ಟು ಭರವಸೆ ಇದೆ” ಎಂದರು ಪ್ರತಾಪ್.
“ಮೈನಸ್ ಸಿಕ್ಸ್ ಡಿಗ್ರಿ ಚಳಿಯಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಅದು ತುಂಬ ಚಾಲೆಂಜಿಂಗ್ ಆಗಿತ್ತು” ಎಂದು ಛಾಯಾಗ್ರಾಹಕ ರಿಜೊ ಪಿ ಜಾನ್ ಹೇಳಿದರು. ಚಿತ್ರಕ್ಕೆ ರಿಜೋ ಪಿ ಜಾನ್ ಜತೆಗೆ ಲಕ್ಷ್ಮೀ ರಾಜ್ ಕೂಡ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು ಪ್ರತಿ ದೃಶ್ಯವನ್ನು ಏಕಕಾಲದಲ್ಲಿ ಎರಡು ಕೋನಗಳಲ್ಲಿ ಚಿತ್ರೀಕರಿಸಲಾಗಿದೆಯಂತೆ.
ಚಿತ್ರದಲ್ಲಿ ಪ್ರತಾಪ್ ರಾಜ್ ಗೆ ಜೋಡಿಯಾಗಿ ನವನಟಿ ಮೋಕ್ಷ ಕುಶಾಲ್ ಅಭಿನಯಿಸಿದ್ದಾರೆ. “ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮೋಕ್ಷ. ಎಮೋಶನಲ್ ಟಚ್ ಇರುವಂಥ ಕ್ಯಾರೆಕ್ಟರ್ ಅದು. ಚಿತ್ರದ ಪ್ರತಿ ಪಾತ್ರಕ್ಕೂ ನವರತ್ನ ಕನೆಕ್ಟ್ ಆಗುತ್ತದೆ. ಹಾಡಲ್ಲಿ ಹಾಟ್ ಆಗಿ ಕ್ಯೂಟಾಗಿ ತೋರಿಸಿದ್ದಾರೆ. ಹಾಗಂತ ವಲ್ಗರ್ ಆಗಿಲ್ಲ” ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಮತ್ತೋರ್ವ ಪ್ರಧಾನ ಪಾತ್ರಧಾರಿ ಅಮಿತ್ ಕೂಡ ಉಪಸ್ಥಿತರಿದ್ದರು. ಚಿತ್ರವನ್ನು ಚಂದ್ರಶೇಖರ್ ಸಿ ಪಿ ನಿರ್ಮಿಸಿದ್ದಾರೆ.